One N Only Exclusive Cine Portal

ರಾಜೀವ್ ಗಾಂಧಿ ಹತ್ಯೆಯ ಕಥೆ ಏನಾಯ್ತು ಸ್ವಾಮಿ?

ಒಂದು ಸಾಮಾಜಿಕ ಸಮಸ್ಯೆ ಬಂದಾಗ ಅದಕ್ಕೆ ಮಿಡಿಯೋದು ತಮ್ಮ ಕರ್ತವ್ಯ ಎಂಬ ಕಾಳಜಿ ಸಿನಿಮಾ ಜಗತ್ತಿನಲ್ಲಿ ಅಪರೂಪ. ಆದರೆ ಒಂದು ಘಟನೆ ಸದ್ದು ಮಾಡಿದಾಗ ಕೂತಲ್ಲೇ ಅದನ್ನು ಕಮರ್ಷಿಯಲ್ಲಾಗಿ ಸ್ಕ್ಯಾನು ಮಾಡಿ ಅದರ ಬಗೆಗೊಂದು ಸಿನಿಮಾ ಮಾಡ್ತೇನೆ ಅಂತ ಬಿಟ್ಟಿ ಮೈಲೇಜು ಪಡೆಯೋ ಪಂಟರುಗಳ ಸಂಖ್ಯೆಗೇನೂ ಇಲ್ಲಿ ಕೊರತೆಯಿಲ್ಲ!

ಅಂಥಾ ಪಂಟರುಗಳಲ್ಲೊಬ್ಬರಾದ ನಿರ್ದೇಶಕ ಎಎಂಆರ್ ರಮೇಶ್ ಮತ್ತೆ ಅಖಾಡಕ್ಕಿಳಿದಿದ್ದಾರೆ. ಅವರ ಕೈಲಿ ಸದ್ಯಕ್ಕಿರೋ ಅಸ್ತ್ರ ಇತ್ತೀಚೆಗೆ ಪರಪ್ಪನ ಅಗ್ರಗಾರದ ಅಂದಾದುಂದಿಗಳನ್ನು ಬಯಲಾಗಿಸಿ ಸದ್ದು ಮಾಡಿರೋ ಪೊಲೀಸ್ ಅಧಿಕಾರಿಣಿ ರೂಪಾ ಪ್ರಕರಣ!
ಈ ಹಿಂದೆ ಡಿಐಜಿ ಆಗಿದ್ದ ರೂಪಾ ತಮ್ಮದೇ ಇಲಾಖೆಯ ರಖಮುಗಳನ್ನು ಬಯಲಾಗಿಸೋ ಮೂಲಕ ಸುದ್ದಿಯಾದರಲ್ಲಾ? ಟಿವಿ ವಾಹಿನಿಗಳಲ್ಲಿ ಆ ಸುದ್ದಿಯ ಪ್ರವಾಹ ಇಳಿಮುಖವಾಗೋ ಮುನ್ನವೇ ರಮೇಶ್ ತಾನು ರೂಪಾ ಸ್ಟೋರಿಯಿಟ್ಟುಕೊಂಡು ಒಂದು ಸಿನಿಮಾ ಮಾಡ್ತೀನಿ ಅಂತ ಹೇಳಿಕೊಂಡು ಓಡಾಡಲು ಶುರು ಮಾಡಿದ್ದರು. ಈ ಬಗ್ಗೆ ಒಂದಷ್ಟು ಸುದ್ದಿ ಹರಡುವಂತೆಯೂ ನೋಡಿಕೊಂಡಿದ್ದರು.
ಆದರೆ ರಮೇಶ್ ಅವರ ಈ ಹಿಂದಿನ ವರಾತಗಳನ್ನು ಗಮನಿಸಿದರೆ ಇದೂ ಕೂಡಾ ಬಿಟ್ಟಿ ಪ್ರಚಾರ ಪಡೆಯೋ ಒಂದು ಸ್ಕೀಮಾ ಅಂತೊಂದು ಸಂದೇಹ ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ. ತಾವೊಂದು ಚಿತ್ರ ಮಾಡಿದರೆ ಥರ ಥರದ ಗಿಮಿಕ್ಕುಗಳನ್ನು ಮಾಡಿ ಭಾರೀ ಪ್ರಚಾರ ಪಡೆಯೋದರಲ್ಲಿ ರಮೇಶ್ ನಿಜಕ್ಕೂ ಮಹಾನ್ ಪಾಂಡಿತ್ಯ ಹೊಂದಿರುವವರು. ಅದಕ್ಕೆ ಇದೇ ರಮೇಶ್ ಈ ಹಿಂದೆ ಘೋಷಣೆ ಮಾಡಿದ್ದ ರಾಜೀವ್ ಗಾಂಧಿ ಕೊಲೆಯ ಸುತ್ತಲಿನ ಸತ್ಯ ಕಥೆ ಆಧಾರಿತವಾದ ಆಸ್ಫೋಟ ಚಿತ್ರಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲವೇನೋ
ಇಂಥಾದ್ದೊಂದು ಕಥೆ ಮಾಡಿರೋದಾಗಿ ಕಂಡೋರನ್ನೆಲ್ಲ ನಿಲ್ಲಿಸಿಕೊಂಡು ಹೇಳಿದ್ದ ರಮೇಶ್, ಈ ಕಥೆಯಲ್ಲಿ ಬರೋ ಪೊಲೀಸ್ ಅಧಿಕಾರಿ ಕಾರ್ತಿಕೇಯನ್ ಪಾತ್ರವನ್ನು ದರ್ಶನ್ ನಿಭಾಯಿಸಲಿದ್ದಾರೆ ಎಂದು ಪುಂಗಿದ್ದರು. ಅದು ಸಾಧ್ಯವಾಗಲಿಲ್ಲ. ನಂತರ ವಿಕ್ರಂ, ಕಮಲ್ ಹಾಸನ್ ಹೆಸರು ತಂದರು, ಅದೂ ಆಗಲಿಲ್ಲ. ಆನಂತರ ರಾಣಾ ದಗ್ಗುಬಾಟಿ ಮಾಡಲಿದ್ದಾರೆಂಬ ಮತ್ತೊಂದು ಹುಳವನ್ನೂ ಬಿಟ್ಟಿದ್ದರು. ಆದರೀಗ ಆ ಮ್ಯಾಟರ್ ಕ್ಲೋಸ್ ಮಾಡಿರೋ ರಮೇಶ್ ರೂಪಾ ಸ್ಟೋರಿಯ ಬಗ್ಗೆ ಮಾತಾಡಲಾರಂಭಿಸಿದ್ದಾರೆ. ಆದ್ದರಿಂದಲೇ ಅವರ ಬಗ್ಗೆ ಇಷ್ಟೆಲ್ಲಾ ಗುಮಾನಿಗಳು ಹುಟ್ಟಿಕೊಂಡಿವೆ.
ಒಂದು ವೇಳೆ ರೂಪಾ ಪ್ರಕರಣದ ಕಥೆಯನ್ನು ಕೈಗೆತ್ತಿಕೊಂಡರೂ ಅದೇನು ಸಲೀಸಿನ ಸಂಗತಿಯಲ್ಲ. ಈ ಜೈಲು ಮಾಫಿಯಾದ ವಿಚಾರದಲ್ಲಿ ಹತ್ತಾರು ಕೊಂಬೆ ಕೋವೆಗಳಿವೆ. ಅಷ್ಟಕ್ಕೂ ಈ ಸುದ್ದಿಯ ಕೇಂದ್ರ ಬಿಂದುವಾದ ರೂಪಾ ಅವರ ಬಗೆಗೇ ನಾನಾ ಆರೋಪಗಳು ಬಂದಿವೆ. ರಿಯಲಿಸ್ಟಿಕ್ ಕಥೆಯನ್ನು ಸಿನಿಮಾ ಮಾಡೋದು ದೊಡ್ಡದಲ್ಲ. ಆದರೆ ಅಂಥ ಕಥೆಯ ಆಳದಲ್ಲಿರೋ ರಿಯಲ್ ಸತ್ಯಗಳನ್ನು ಕೆದಕೋದು ನಿಜವಾದ ಸವಾಲು. ಅದು ರಮೇಶ್ ಕೈಲಿ ಸಾಧ್ಯವಾ ಎಂಬುಸು ಅಸಲೀ ಪ್ರಶ್ನೆ!
ಇಷ್ಟಕ್ಕೂ ಒಂದಿ ಸಿನಿಮಾವನ್ನೂ ಘೋಷಿಸಿ, ಮುಹೂರ್ತ, ಪ್ರೆಸ್ ಮೀಟುಗಳಂಥವನ್ನೂ ಮಾಡಿ ಆ ನಂತರ ಹೂಡಿಕೆದಾರರನ್ನು ಕ್ಯಾಚು ಹಾಕೋದು ರಮೇಶ್ ಶೈಲಿ. ಹೀಗಿರುವಾಗ ರೂಪಾ ಕಥೆ ರೂಪುಗೊಳ್ಳೋಕೆ ಇನ್ನೆಷ್ಟು ಶತಮಾನಗಳು ಬೇಕೋ!!

Leave a Reply

Your email address will not be published. Required fields are marked *


CAPTCHA Image
Reload Image