One N Only Exclusive Cine Portal

ಲಂಕೇಶ್ ಮತ್ತು ಸಿನಿಮಾ…

ಉತ್ತಮ ಸಾಹಿತ್ಯದ ಅಭಿರುಚಿ ಇರುವವರು ಮಾತ್ರ ಸದಭಿರುಚಿಯ ಸಿನಿಮಾಗಳನ್ನು ನೀಡಲು ಸಾಧ್ಯ. ಪಾತ್ರ ಪೋಷಣೆ ಮಾಡುವ ನಟರಿಗೆ ಹಾಗೂ ಪಾತ್ರಗಳನ್ನು ಸೃಷ್ಟಿಸುವ ಕಥೆಗಾರರಿಗೆ, ನಿರ್ದೇಶಕರಿಗಂತೂ ಸಾಹಿತ್ಯದ ಓದು ಅನಿವಾರ್ಯ. ಆದರೆ ಪ್ರಸ್ತುತ ಕನ್ನಡ ಚಿತ್ರರಂಗದಲ್ಲಿ ಇತಿಹಾಸ, ಸಾಹಿತ್ಯಗಳನ್ನು ಓದಿಕೊಂಡವರು ತೀರಾ ವಿರಳ.
ಸಾಹಿತಿ, ಬರಹಗಾರರಾಗಿದ್ದುಕೊಂಡು ಸಾಂಸ್ಕೃತಿಕ ಲೋಕಕ್ಕೆ ಹೊಸ ವಿಜನ್ ತಂದುಕೊಟ್ಟವರು ಲಂಕೇಶ್. ಇವತ್ತು ಲಂಕೇಶರು ಇದ್ದಿದ್ದರೆ 82 ವರ್ಷ ಪೂರೈಸುತ್ತಿದ್ದರು. ಭೌತಿಕವಾಗಿ ಅವರಿಲ್ಲದಿದ್ದರೂ, ಸಿನೆಮಾ ರಂಗದೊಂದಿಗೆ ಲಂಕೇಶರ ನಂಟನ್ನು ಒಮ್ಮೆ ಅವಲೋಕಿಸುವುದು ಜರೂರು.

ಪಿ. ಲಂಕೇಶರಿಗೂ ಚಿತ್ರರಂಗಕ್ಕೂ ಇದ್ದ ನಂಟು ಅಂದಿನಿಂದ ಇಂದಿನವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ಮುಂದುವರೆದೇ ಇದೆ. ‘ಲಂಕೇಶ್ ಪತ್ರಿಕೆಯನ್ನು ಆರಂಭಿಸುವ ಮುನ್ನ ಸ್ವತಃ ನಾಲ್ಕು ಚಿತ್ರಗಳನ್ನು ನಿರ್ದೇಶಿಸಿ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದ ಲಂಕೇಶರು ಆನಂತರ ‘ಪತ್ರಿಕೆ’ಯ ಒತ್ತಡದಿಂದಾಗಿ ಚಿತ್ರ ನಿರ್ದೇಶಿಸುವ ಉಸಾಬರಿಗೆ ಹೋದವರಲ್ಲ. ಆದರೂ ಅವರ ಪುತ್ರಿ ಕವಿತಾ ಲಂಕೇಶ್ ಅವರು ಲಂಕೇಶರ ಕಿರುಕಾದಂಬರಿ ‘ಅಕ್ಕ’ ಅನ್ನು ಆಧರಿಸಿ ‘ದೇವೀರಿ’ ಎಂಬ ಸಿನಿಮಾ ಮಾಡಿದಾಗ ಆ ಚಿತ್ರಕ್ಕೆ ಹಾಡುಗಳನ್ನು ಮತ್ತು ಹಲವು ಡೈಲಾಗ್‌ಗಳನ್ನು ಬರೆದಿದ್ದರು ಲಂಕೇಶ್.
ಅದೇನೇ ಇರಲಿ, ಇವತ್ತಿಗೂ ಸಿನಿಮಾ ಮಾಧ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಹಲವರು ಒಂದಲ್ಲಾ ಒಂದು ರೀತಿಯಲ್ಲಿ ಲಂಕೇಶರ ಪ್ರಭಾವಕ್ಕೆ ಒಳಗಾದವರು ಎಂದರೆ ಅತಶಯೋಕ್ತಿಯಲ್ಲ.

ಪತ್ರಿಕೆಯ ಆರಂಭದ ದಿನಗಳಲ್ಲಿ ಲಂಕೇಶರ ಒಡನಾಟದಲ್ಲಿದ್ದ ಟಿ.ಎನ್. ಸೀತಾರಾಮ್, ಸತ್ಯಮೂರ್ತಿ ಆನಂದೂರು, ಮಹಾಬಲ ಮೂರ್ತಿ ಕೋಡ್ಲುಕೆರೆ ತರಹದವರು ಇವತ್ತು ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ತಮ್ಮದೇ ಆದ ಚಾಪನ್ನು ಅಥವಾ ಭಿನ್ನ ರೀತಿಯಲ್ಲಿ ಗುರುತಿಸಿಕೊಂಡಿರುವವರು.
ನಂತರದಲ್ಲಿ ಪತ್ರಿಕೆಯ ಬರಹಗಾರರಾಗಿ ದುಡಿದ ಎನ್.ಎಸ್. ಶಂಕರ್, ಬಿ.ಚಂದ್ರೇಗೌಡ, ರೇಖಾರಾಣಿ, ಪ್ರತಿಭಾ ನಂದಕುಮಾರ್ ಮುಂತಾದವರು ಲಂಕೇಶರ ಒಡನಾಟದಲ್ಲಿದ್ದುಕೊಂಡೇ ದೃಶ್ಯಮಾಧ್ಯಮಕ್ಕೆ ಧುಮುಕಿದವರು. ಇನ್ನು ಲಂಕೇಶರ ನೆಚ್ಚಿನ ಶಿಷ್ಯರಲ್ಲೊಬ್ಬರು ಮತ್ತು ಪತ್ರಿಕೆಯ ಹಿರಿಯ ವರದಿಗಾರರೂ ಆಗಿದ್ದ ಸದಾಶಿವ ಶೆಣೈ ಕೂಡಾ ಈಗಾಗಲೇ ಒಂದು ಸಿನಿಮಾದ ‘ಪ್ರಾರ್ಥನೆ’ ಮುಗಿಸಿದ್ದಾರೆ.
ಇನ್ನು ಮೇಷ್ಟ್ರನ್ನು ಬಹಳ ಹತ್ತಿರದಿಂದ ಕಂಡು ಮತ್ತು ಅವರ ಸ್ನೇಹ ಸಂಪಾದಿಸಿ, ನಂತರದ ದಿನಗಳಲ್ಲಿ ಚಿತ್ರರಂಗಕ್ಕೆ ಕಾಲಿಟ್ಟು ದೊಡ್ಡ ನಿರ್ದೇಶಕರೆನಿಸಿಕೊಂಡವರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಕೂಡಾ ಪ್ರಮುಖರು.
ಇವತ್ತಿಗೆ ಕನ್ನಡ ಚಿತ್ರರಂಗದ ಅಪರೂಪದ ಗೀತಸಾಹಿತಿ, ಸಂಗೀತ ನಿರ್ದೇಶಕ ಮತ್ತು ನಿರ್ದೇಶಕರೂ ಆಗಿರುವ ವಿ. ಮನೋಹರ್ ಕೂಡಾ ಲಂಕೇಶ್ ಪಾಳಯದಲ್ಲಿ ಚಿಗುರಿದ ಪ್ರತಿಭೆಯೇ. ಒಂದು ಕಾಲದಲ್ಲಿ ‘ಲಂಕೇಶ್ ಪತ್ರಿಕೆ’ಯಲ್ಲಿ ಕಾರ್ಟೂನಿಸ್ಟ್ ಆಗಿ ಕಾರ್ಯನಿರ್ವಹಿಸಿದ ಮನೋಹರ್ ಪತ್ರಿಕೆಯ ಆಫೀಸಿಗೆ ಬರುವ ಸಿನಿಮಾ ಮಂದಿ ಯಾರಾದರೂ ಪರಿಚಯವಾಗಿ ಚಿತ್ರರಂಗದಲ್ಲಿ ತಮಗೊಂದು ಛಾನ್ಸು ಕೊಡಬಹುದು ಎಂಬ ಕಲ್ಪನೆಯಲ್ಲಿದ್ದರಂತೆ.
ಚಿತ್ರಸಾಹಿತಿ ಜಯಂತ ಕಾಯ್ಕಿಣಿ ಕೂಡಾ ಲಂಕೇಶ ನೆಚ್ಚಿನ ಸ್ನೇಹಿತರಲ್ಲೊಬ್ಬರು. ದಶಕಗಟ್ಟಲೆ ಬಾಂಬೆಯ ಕಂಪೆನಿಯೊಂದರಲ್ಲಿ ಉದ್ಯೋಗಕ್ಕಿದ್ದ ಕಾಯ್ಕಿಣಿ, ಆ ಸಂದರ್ಭದಲ್ಲಿ ಪತ್ರಿಕೆ ಮತ್ತು ಲಂಕೇಶರ ನಿಕಟ ಸಂಪರ್ಕದಲ್ಲಿದ್ದವರು.
ಇವರೆಲ್ಲ ಲಂಕೇಶರ ಆಪ್ತವಲಯದಲ್ಲಿದ್ದುಕೊಂಡೇ ದೃಶ್ಯಮಾಧ್ಯಮದ ಸೆಳೆತಕ್ಕೆ ಒಳಗಾದದವರು. ಆದರೆ ದೂರದಿಂದಲೇ ಲಂಕೇಶರ ಸಾಹಿತ್ಯ ಮತ್ತು ಬರವಣಿಗೆಯನ್ನು ಅಪಾರವಾಗಿ ಓದಿಕೊಂಡು, ಅವರ ಕೆಲವು ಚಿಂತನೆಗಳನ್ನು ತಮ್ಮ ಸಿನೆಮಾ, ನಟನೆಗಳಲ್ಲಿ ಅಳವಡಿಸಿಕೊಳ್ಳಲು ಉತ್ಸುಕರಾಗಿರುವ ಅನೇಕ ಯುವ ಪ್ರತಿಭೆಗಳು ಈಗ ನಮ್ಮ ಚಿತ್ರರಂಗದಲ್ಲಿ ಕಾಣಸಿಗುತ್ತಾರೆ.


ಇವತ್ತಿನ ಸ್ಟಾರ್ ನಿರ್ದೇಶಕ ಯೋಗರಾಜ್ ಭಟ್ ಲಂಕೇಶರ ಬರವಣಿಗೆಗಳನ್ನು ಓದುತ್ತಲೇ ಅದರ ಗುಂಗಿನಲ್ಲೇ ಬೆಳೆದವರು. ಇನ್ನೊಬ್ಬ ಯುವ ನಿರ್ದೇಶಕ ‘ದುನಿಯಾ’ ಸೂರಿಗೆ ಲಂಕೇಶರ ಬರವಣಿಗೆಗಳ ಬಗೆಗಿನ ವ್ಯಾಮೋಹ ಅದ್ಯಾವ ಪರಿ ಗೊತ್ತೆ? ಲಂಕೇಶರು ಭಾವಾನುವಾದಿಸಿರುವ ಚಾರ್ಲ್ಸ್ ಬೋದಿಲೇರನ ‘ಪಾಪದ ಹೂಗಳು ಕೃತಿಯನ್ನು ಈತ ಓದಿ ಓದಿ ಕಂಠಪಾಠ ಮಾಡಿಕೊಂಡಿರುವ ವ್ಯಕ್ತಿ.
ಇತ್ತೀಚೆಗಷ್ಟೇ ‘ಕಬೀರ ಸಿನೆಮಾವನ್ನು ನಿರ್ದೇಶಿಸಿದ್ದ ನರೇಂದ್ರ ಬಾಬು ಕೂಡ ಲಂಕೇಶರ ಪರಮಭಕ್ತ. ನರೇಂದ್ರ ಬಾಬು ಹಿಂದೊಮ್ಮೆ ಪಿಯುಸಿ ಮುಗಿಸಿದ ಮೇಲೆ ಡಿಗ್ರಿಗೆ ಸೇರಲು ಕಾಲೇಜಿನ ರಜೆಯಲ್ಲಿ ನಂಜುಂಡೇಗೌಡರ ‘ಚಿನ್ನದ ಚಂದ್ರಿಕೆ ಎಂಬ ಕಿರುಚಿತ್ರಕ್ಕೆ ಕಾಸ್ಟೂಮ್ ಡಿಸೈನರ್ ಆಗಿ ಕೆಲಸ ಮಾಡಿದ್ದರಂತೆ. ಕಡೆಗೆ ತಮ್ಮ ಕೆಲಸಕ್ಕೆ ಸಂಭಾವನೆ ಪಡೆದ ನರೇಂದ್ರ ಬಾಬು ಅದನ್ನು ಕಾಲೇಜಿಗೆ ಅಡ್ಮಿಷನ್ ಶುಲ್ಕ ಕಟ್ಟುವ ಬದಲು ಸೀದಾ ಹೋಗಿ ಲಂಕೇಶರ ‘ಟೀಕೆ ಟಿಪ್ಪಣಿ’, ‘ಸಮಗ್ರ ಕಥೆಗಳು’ ಮತ್ತಿತರ ಪುಸ್ತಕಗಳನ್ನು ಖರೀದಿಸಿದ್ದರಂತೆ.
ಲಂಕೇಶ್ ಬರಹಗಳ ಬಗ್ಗೆ ಉತ್ಕಟ ಅಭಿಮಾನವನ್ನು ಹೊಂದಿರುವ ನರೇಂದ್ರ ಬಾಬು ಲಂಕೇಶರ ‘ಸಂಕ್ರಾಂತಿ’, ‘ಕ್ರಾಂತಿ ಬಂತು, ಕ್ರಾಂತಿ’, ‘ಟಿ. ಪ್ರಸನ್ನನ ಗೃಹಸ್ಥಾಶ್ರಮ’ ನಾಟಕಗಳನ್ನೂ ನಿರ್ದೇಶಿಸಿರುವವರು. ಯಾವತ್ತಾದರೂ ಸರಿ, ಲಂಕೇಶರ ‘ಸ್ಟೆಲ್ಲಾ ಎಂಬ ಹುಡುಗಿಯನ್ನು ಸಿನೆಮಾ ಮಾಡಬೇಕು ಎಂಬ ಬಯಕೆ ಹೊಂದಿರುವ ಬಾಬುಗೆ “‘ಸಂಕ್ರಾಂತಿಯನ್ನು ನಾನು ನಿರ್ದೇಶಿಸಿದರೆ ಮಾತ್ರ ಜೆಸ್ಟಿಫೈ ಮಾಡಲು ಸಾಧ್ಯ” ಎಂಬ ಸಾತ್ವಿಕ ಅಹಂ ಕೂಡಾ ಇದೆ!
ಇನ್ನು ಇದೇ ನರೇಂದ್ರ ಬಾಬು ನಿರ್ದೇಶನದ ಲಂಕೇಶರ ನಾಟಕಗಳಲ್ಲಿ ಅಭಿನಯಿಸುತ್ತಲೇ ಚಿತ್ರರಂಗದಲ್ಲೂ ಅವಕಾಶ ಪಡೆದವರು ನಟ ಕಿಶೋರ್. ಹಾಗೆಯೇ ದಕ್ಷಿಣ ಭಾರತದ ಅದ್ಭುತ ನಟ ಎಂದೆನಿಸಿಕೊಂಡು ಹಲವಾರು ರಾಷ್ಟ್ರ ಮತ್ತು ರಾಜ್ಯಗಳಲ್ಲಿ ಪ್ರಶಸ್ತಿಗಳಿಗೆ ಭಾಜನರಾಗಿರುವ ಪ್ರಕಾಶ್ ರೈ ಕೂಡಾ ಲಂಕೇಶರ ಅಭಿಮಾನಿಯೇ. “ನಾನು ಲಂಕೇಶರ ನೇರ ಶಿಷ್ಯನಲ್ಲದಿದ್ದರೂ ಅವರ ಬರವಣಿಗೆ, ನಾಟಕಗಳು ನನ್ನನ್ನು ಪರೋಕ್ಷವಾಗಿ ಮತ್ತು ಅಪಾರವಾಗಿ ಪ್ರಭಾವಿಸಿದ್ದವು” ಎಂದು ರೈ ತಮ್ಮ ಅನೇಕ ಸಂದರ್ಶನ ಗಳಲ್ಲಿ ಹೇಳಿಕೊಳ್ಳುತ್ತಲೇ ಇರುತ್ತಾರೆ.
ಹಾಗೆಯೇ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಲೇ ಇಡೀ ಇಂಡಿಯಾ ಚಿತ್ರರಂಗವನ್ನು ಆಕರ್ಷಿಸಿದ ನಟ ಅನಂತ್ ನಾಗ್ ಕೂಡಾ ಲಂಕೇಶರ ಹತ್ತಿರದ ಸ್ನೇಹಿತರಾಗಿದ್ದವರು. ಅಷ್ಟೇ ಏಕೆ, ಲಂಕೇಶರ ಮಕ್ಕಳಾದ ಕವಿತಾ ಲಂಕೇಶ್ ಮತ್ತು ಇಂದ್ರಜಿತ್ ಕೂಡಾ ಈಗ ಸಿನೆಮಾ ಉದ್ಯಮದಲ್ಲೇ ನೆಲೆ ಕಂಡುಕೊಂಡಿದ್ದಾರೆ.
“ರಂಗಭೂಮಿಯಲ್ಲಿ ನಾನು ಕಿಟಕಿಯಿಂದ ಮಾತ್ರ ಪ್ರೀತಿ ಮಾಡುತ್ತಿದ್ದೆ, ಆದರೆ ಸಿನಿಮಾ ನನಗೆ ಮುಕ್ತವಾಗಿ ಪ್ರೀತಿಸುವುದನ್ನು ಕಲಿಸಿಕೊಟ್ಟಿತು” ಎಂದು ಸ್ವತಃ ಲಂಕೇಶರೇ ಹೇಳಿದ್ದಾಗಿ ಒಮ್ಮೆ ಟಿ.ಎನ್. ಸೀತಾರಾಮ್ ‘ಸೂತ್ರಧಾರ ಅನ್ನುವ ಪತ್ರಿಕೆಯೊಂದರಲ್ಲಿ ಬರೆದಿದ್ದರು.
ಹಾಗೆಯೇ ಲಂಕೇಶ್ ಮತ್ತವರ ಸಾಹಿತ್ಯವನ್ನು ಪ್ರೀತಿಸುವವರಿಗೆ ‘ಸಿನಿಮಾ ವನ್ನು ಸಂಕೀರ್ಣವಾಗಿ ನೋಡುವ ಶಕ್ತಿ ಮತ್ತು ಆಳವಾಗಿ ಅಭ್ಯಸಿಸುವ ಕ್ರಮವನ್ನು ಕಲಿಸಿಕೊಟ್ಟಿದೆ.

ಲಂಕೇಶ್ – ಪರಿಚಯ

ಲಕೇಶರು ಜನಿಸಿದ್ದು ಮಾರ್ಚ್ ೮ ೧೯೩೫. ಶಿವಮೊಗ್ಗೆಗೆ ೧೪.೪ ಕಿ.ಮೀ ದೂರದಲ್ಲಿರುವ ಕೊನಗವಳ್ಳಿ ಎಂಬ ಗ್ರಾಮದಲ್ಲಿ. ಶಿವಮೊಗ್ಗೆಯ ಇಂಟರ್ ಮೀಡಿಯಟ್ ಕಾಲೇಜ್ (೧೯೫೩-೫೫)ನಲ್ಲಿ ಇಂಟರ್ ಮೀಡಿಯಟ್; ಬೆಂಗಳೂರಿನ ಸೆಂಟ್ರಲ್ ಕಾಲೇಜ್ (೧೯೫೫-೫೮) ನಲ್ಲಿ ಇಂಗ್ಲಿಷ್ ಆನರ‍್ಸ್; ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಇಂಗ್ಲಿಷ್ ಎಂ.ಎ. (೧೯೫೮-೫೯)
೧೯೫೯ರಿಂದ ೧೯೬೨ರವರೆಗೆ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜ್‌ನಲ್ಲಿ ಅಧ್ಯಾಪಕ. ಆಮೇಲೆ ಸೆಂಟ್ರಲ್ ಕಾಲೇಜಿನಲ್ಲಿ ಮೂರು ವರ್ಷ (೧೯೬೨-೬೫), ಸರ್ಕಾರಿ ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ಒಂದು ವರ್ಷ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹನ್ನೆರಡು ವರ್ಷ (೧೯೬೬-೭೮) ಅಧ್ಯಾಪಕ. ೧೯೭೮ರಲ್ಲಿ ಅಧ್ಯಾಪಕ ವೃತ್ತಿಗೆ ರಾಜೀನಾಮೆ. ೧೯೭೭ರಲ್ಲಿ ‘ಪಲ್ಲವಿ ಚಿತ್ರ ನಿರ್ದೇಶನ, ೧೯೮೦ರಲ್ಲಿ ನಾಲ್ಕನೆಯ ಚಿತ್ರ ‘ಎಲ್ಲಿಂದಲೋ ಬಂದವರು ಬಿಡುಗಡೆ. ೧೯೮೦ರಲ್ಲಿ ‘ಲಂಕೇಶ್ ಪತ್ರಿಕೆಯ ಆರಂಭ. ಲಂಕೇಶರ ಸಂಪೂರ್ಣ ವಿವರ ಅವರದ್ದೇ ಆತ್ಮಕತೆ ಹುಳಿಮಾವಿನಮರ ದಲ್ಲಿ ಸಿಗುತ್ತದೆ. ಲಂಕೇಶರು ಪ್ರಪಂಚದ ಸಿನಿಮಾಗಳ ಬಗ್ಗೆ ಬರೆದ ಲೇಖನಗಳು ‘ಈ ನರಕ ಈ ಪುಲಕ ಹೆಸರಿನಲ್ಲಿ ಪುಸ್ತಕವಾಗಿದೆ.

Leave a Reply

Your email address will not be published. Required fields are marked *


CAPTCHA Image
Reload Image