One N Only Exclusive Cine Portal

ಲಕ್ಷ್ಮೀನಾರಾಯಣರ ತಿಕ್ಕಲು ಪ್ರಪಂಚ!

ವಿನಯಾ ಪ್ರಸಾದ್… ಕನ್ನಡ ಚಿತ್ರರಂಗ ಮಾತ್ರವಲ್ಲ ನೆರೆಯ ಭಾಷೆಗಳಲ್ಲೂ ಹೆಸರು ಮಾಡಿರುವ ಪ್ರಬುದ್ಧ ನಟಿ. ಪಾತ್ರ ಯಾವುದೇ ಇದ್ದರೂ ಅದನ್ನು ಲೀಲಾಜಾಲವಾಗಿ ನಿಭಾಯಿಸಬಲ್ಲ ಮಹಿಳೆ. ಇಂಥವರಿಗೆ ಇದ್ದಕ್ಕಿದ್ದಹಾಗೆ ನಿರ್ದೇಶಕಿಯಾಗಬೇಕು ಅನ್ನೋ ಅಕಾಲಿಕ ಬಯಕೆ ಯಾಕೆ ಹುಟ್ಟಿತೋ ಗೊತ್ತಿಲ್ಲ.
ತುಂಬು ಕುಟುಂಬದ ಮನೆಯಲ್ಲಿನ ಮಕ್ಕಳು ಮದುವೆ ಮಾಡಿಕೊಂಡು ಅವರವರ ಪಾಡಿಗೆ ವಿದೇಶಗಳಲ್ಲಿ ನೆಲೆಸಿ, ಹೆತ್ತವರನ್ನು ಪಳೆಯುಳಿಕೆಯಂತೆ ಬಿಟ್ಟು ಹೋಗುತ್ತಾರಲ್ಲಾ? ಆಗ ಅಪ್ಪ ಅಮ್ಮಂದಿರ ಪರಿಸ್ಥಿತಿ ಏನಾಗುತ್ತದೆ? ಅವರನ್ನಾವರಿಸುವ ಖಿನ್ನತೆಯನ್ನು ಯಾರು ನಿವಾರಿಸಬೇಕು? ಇಂಥದ್ದೊಂದು ಸೂಕ್ಷ್ಮ ಕಥಾವಸ್ತು ‘ಲಕ್ಷ್ಮೀ ನಾರಾಯಣರ ಪ್ರಪಂಚನೇ ಬೇರೆ ಸಿನಿಮಾದ್ದು. ಇಂಥ ಎಳೆಯನ್ನಿಟ್ಟುಕೊಂಡು ಅದ್ಭುತವಾದ ಕಥೆಗಳ ಸಿನಿಮಾಗಳು ಎಲ್ಲ ಭಾಷೆಯಲ್ಲೂ ಬಂದುಹೋಗಿವೆ. ಎಸ್.ಬಿ. ಬಾಲಸುಬ್ರಹ್ಮಣ್ಯಂ ಮತ್ತು ಜ್ಯೂಲಿ ಲಕ್ಷ್ಮಿ ಅವರ ಅಭಿನಯದಲ್ಲಿ ಮಿಧುನಂ ಎನ್ನುವ ಕ್ಲಾಸಿಕ್ ಸಿನಿಮಾ ತೆಲುಗಿನಲ್ಲಿ ಕೆಲವೇ ವರ್ಷಗಳ ಹಿಂದೆ ಬಿಡುಗಡೆಯಾಗಿತ್ತು. ಬಹುಶಃ ತಾವೂ ಇಂಥದ್ದೊಂದು ಸಿನಿಮಾ ಮಾಡಬೇಕು ಅಂತಾ ವಿನಯಾ ಪ್ರಸಾದ್ ಹೊರಟರೇನೋ.
ಈ ಚಿತ್ರದಲ್ಲಿ ವಿನಯಾ ಅವರ ಪತಿ, ಮಗಳು ಕೂಡಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿನಯಾ ಪತಿ ಜ್ಯೋತಿ ಪ್ರಕಾಶ್ ಅತ್ರೆ ಡಾ. ಬುದ್ದಿಜೀವಿ ಬುದ್ದಿಮಾನ್ ಎನ್ನುವ ವೈದ್ಯ ಭಯಂಕರರಾಗಿ ಕಾಣಿಸಿಕೊಂಡಿದ್ದಾರೆ. ಇಡೀ ಸಿನಿಮಾದಲ್ಲಿ ಎಲ್ಲರಿಗಿಂತ ಹೆಚ್ಚು ಅಬ್ಬರಿಸಿರೋದು ಇವರೇ. ಆ ಮೂಲಕ ತುಂಬಾ ಸೀರಿಯಸ್ ಆದ ವಿಚಾರವನ್ನು ಹಾಸ್ಯದ ಮೂಲಕ ಹೇಳಬೇಕು ಎನ್ನುವ ವಿನಯಾ ಅವರ ಪ್ರಯತ್ನ ಹಂಡ್ರೆಡ್ ಪರ್ಸೆಂಟ್ ವಿಫಲವಾಗಿದೆ. ಸಿನಿಮಾದ ಕಡೆಯ ಹತ್ತು ನಿಮಿಷ ಗಂಭೀರ ಸ್ವರೂಪ ಪಡೆಯುತ್ತದೆ. ಇದನ್ನು ನೋಡಲು ಇಡೀ ಚಿತ್ರವನ್ನು ಸಹಿಸುವುದು ಮಾತ್ರ ಅಸಾಧ್ಯ.
ಇವತ್ತು ನಿರ್ಮಾಣಗೊಳ್ಳುತ್ತಿರುವ ಧಾರಾವಾಹಿಗಳು ಕೂಡಾ ಸಿನಿಮಾ ರೇಂಜಿನಲ್ಲೇ ಇವೆ. ಆದರೆ ‘ಲನಾಪ್ರಬೇ’ ಸಿನಿಮಾ ಗುಣಮಟ್ಟದಲ್ಲಿ ತೀರಾ ಕಳಪೆ ಎನಿಸುವಂತಿದೆ. ಸಿನಿಮಾ ಮಾಡಿ ಅದನ್ನು ತೆರೆಗೆ ತಂದರಷ್ಟೇ ಸಾಕು ಎನ್ನುವ ಭರದಲ್ಲಿ ಒಂದು ಚಿತ್ರವನ್ನು ಹೇಗೆಲ್ಲಾ ಮಾಡಬಹುದೋ ಹಾಗೆ ರೂಪಿಸಿದ್ದಾರೆ. ಖಂಡಿತಾ ಇದು ದುಡ್ಡು ಕೊಟ್ಟು ನೋಡಲು ಅನರ್ಹವಾದ ಸಿನಿಮಾ ಅನ್ನೋದಂತೂ ನಿಜ.

 

Leave a Reply

Your email address will not be published. Required fields are marked *


CAPTCHA Image
Reload Image