One N Only Exclusive Cine Portal

ಲೀಡರ್: ಸೂಲಿಬೆಲೆ ಭಾಷಣದ ವ್ಯರ್ಥ ದೃಷ್ಯ ಸಾಹಸ!

ಮಾಸ್ ಲೀಡರ್ ಚಿತ್ರದ ವಿಚಾರದಲ್ಲಿ ಎಲ್ಲಾ ಅಂದುಕೊಂಡಂತೆಯೇ ಇದೆ!
ಮನಸಿನ ತುಂಬಾ ಬರೀ ಕೋಮುದ್ವೇಷದ ವಿಷವನ್ನೇ ತುಂಬಿಕೊಂಡಿರೋ ಮನಸ್ಥಿತಿಯೊಂದರಿಂದ ಸಹಜ ಮನುಷ್ಯ ಪ್ರೇಮದ ಅಮೃತ ನಿರೀಕ್ಷಿಸಲು ಸಾಧ್ಯವೇ? ಮಾತೆತ್ತಿದರೆ ವಿಶ್ವಗುರು, ಭಾರತ, ದೇಶ ಪ್ರೇಮ ಅನ್ನುತ್ತಲೇ ಈ ನೆಲದ ಸಾಮರಸ್ಯ ಕದಡೋ ಕಸುಬಿನ ಚಕ್ರವರ್ತಿ ಕಾಲಿಟ್ಟ ಕಡೆ ಸಾಮರಸ್ಯದ ಹರಿಕೆ ಹುಟ್ಟೀತೆಂದು ನಿರೀಕ್ಷಿಸಲಾದೀತಾ? ಈ ವಿಚಾರದಲ್ಲಿ ಶಿವರಾಜ್ ಕುಮಾರ್ ಅಭಿನಯದ ಲೀಡರ್ ಚಿತ್ರದ ಬಗ್ಗೆ ಸಿನಿಬಜ್ ಈ ಹಿಂದೆ ಮಾಡಿದ್ದ ವರದಿ ನಿಜವಾಗಿದೆ!

ಶಿವರಾಜ್ ಕುಮಾರ್ ಅವರ ಅಭಿನಯದ `ಲೀಡರ್’ ಸಿನಿಮಾ ಇವತ್ತು ತೆರೆಗೆ ಬಂದಿದೆಯಲ್ಲಾ? ಈ ಸಿನಿಮಾದಲ್ಲಿ ಆರ್ಮಿ ಅಧಿಕಾರಿಯೊಬ್ಬನ ಸುತ್ತ ಹೆಣೆಯಲಾದ ಕಥೆ ಇದೆ ಅನ್ನೋದನ್ನು ಸ್ವತಃ ಚಿತ್ರತಂಡ ಹೇಳಿಕೊಂಡಿತ್ತು. ಇನ್ನು ಇದರಲ್ಲಿ ಭಯೋತ್ಪಾದನೆಯೇ ಮೂಲ ಕಥೆ, ಬಾಂಗ್ಲಾ ವಲಸಿಗರ ವಿಚಾರವೇ ಪ್ರಧಾನ ಎನ್ನುವ ಅನಿಸಿಕೆಗಳು ವ್ಯಕ್ತವಾಗಿದ್ದವು. ಅದು ಅಕ್ಷರಶಃ ನಿಜ ಕೂಡಾ ಆಗಿದೆ. ಬಾಂಗ್ಲಾದಿಂದ ಅನಧಿಕೃತವಾಗಿ ವಲಸೆ ಬಂದ ಜನರನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುವ ವಿಚಾರದಿಂದ ಆರಂಭಗೊಂಡು ನಂತರ ಕಾಶ್ಮೀರದಲ್ಲಿ ನಡೆಯುವ ಭಯೋತ್ಪಾದನಾ ಚಟುವಟಿಕೆಗಳ ತನಕ ಟೆರರಿಸಮ್ಮಿನ ನಾನಾ ಮುಖಗಳನ್ನು ತಮ್ಮದೇ ಕಲ್ಪಿತ ಕತೆಯ ಮೂಲಕ ನಿರ್ದೇಶಕ ನರಸಿಂಹ ನಿರೂಪಿಸಿದ್ದಾರೆ. ಥೇಟು ಚಕ್ರವರ್ತಿ ಸೂಲಿಬೆಲೆಯ ವಕ್ರಬುದ್ಧಿಯ ಭಾಷಣಗಳಂತೆಯೇ ಒಂದಿಡೀ ಸಿನಿಮಾ ಒನ್ ಸೈಡೆಡ್ ವಿಚಾರಗಳೊಂದಿಗೇ ಬಿಚ್ಚಿಕೊಂಡು ಹಾಗೆಯೇ ಮುಗಿದು ಹೋಗುತ್ತದೆ.
ಮುಸ್ಲಿಮರು ನಮ್ಮವರೇ ಎಂದು ಹೇಳುತ್ತಲೇ ಅವರ ವಿರುದ್ಧ ಕಾರಿಕೊಳ್ಳೋ ಸಂಘಪರಿವಾರದ ಅಜೆಂಡಾವನ್ನೇ ಬಹುಶಃ ನರಸಿಂಹ ಕೂಡಾ ತಮ್ಮ ಸಿನಿಮಾದಲ್ಲಿ ಅಳವಡಿಸಿಕೊಂಡಂತಿದೆ. ದೇಶಭಕ್ತಿಯ ಹೆಸರಲ್ಲಿ ಮುಸ್ಲಿಮರನ್ನು ವಿಲನ್ನುಗಳಂತೆ ಚಿತ್ರಿಸಿದ್ದಾರೆ. ಕಥಾನಾಯಕ ಶಿವರಾಜ್ ಕುಮಾರ್ ಮತ್ತು ಅವರ ಇಕ್ಕೆಲೆಗಳಲ್ಲಿ ಸದಾ ಸುಳಿದಾಡುವ ವಿಜಯ ರಾಘವೇಂದ್ರ ಮತ್ತು ಗುರು ಜಗ್ಗೇಶ್ ಆರ್ಮಿ ಯೋಧರಾಗಿರುತ್ತಾರೆ. ಆ ಸಂದರ್ಭದಲ್ಲಿ ನಾಯಕನ ತಂಗಿ ಪ್ರೇಮಪಾಶಕ್ಕೆ ಸಿಲುಕಿರುತ್ತಾಳೆ. ಆಕೆ ಪ್ರವಾಸಕ್ಕೆಂದು ಹೊರಟ ಸಂದರ್ಭದಲ್ಲಿ ಅವಳ ಪ್ರಿಯಕರ ಒಂದು ಜರ್ಕಿನ್ನು ಹಾಕಿ ಕಳಿಸುತ್ತಾನೆ. ನೀವೇ ಊಹಿಸಿ ಆತ ಮುಸ್ಲಿಂ ಟೆರರಿಸ್ಟು ಲವ್ವಿನ ಹೆಸರಲ್ಲಿ ಜಿಹಾದ್ ಸಾಧಿಸೋದು ಆತನ ಉದ್ದೇಶವಾಗಿರುತ್ತದೆ. ನಾಯಕನ ತಂಗಿಯ ಜೊತೆಗೆ ಪಯಣಿಸುತ್ತಿದ್ದವರೆಲ್ಲಾ ಜರ್ಕಿನ್ನಿನೊಳಗಿಂದ ಸಿಡಿಯುವ ಬಾಂಬಿಗೆ ಆಹಾರಾವಾಗಿಬಿಡುತ್ತಾರೆ…. `ಲೀಡರ್’ ಸಿನಿಮಾದ ತುಂಬಾ ಇಂಥವೇ ದೃಶ್ಯಗಳು ತುಂಬಿಹೋಗಿವೆ. ಮುಂದೇನಾಗುತ್ತದೆ ಅನ್ನೋದು ಮೊದಲೇ ಗೊತ್ತಾಗುತ್ತಾ ಸಾಗೋದು ಪೆಡಸು ಚಿತ್ರಕತೆಯ ಸೈಡ್ ಎಫೆಕ್ಟ್ ಇರಬಹುದು. ಸಿನಿಮಾ ಆರಂಭವಾಗೋದೇ ಚಕ್ರವರ್ತಿ ಸೂಲಿಬೆಲೆಯ ಹಿನ್ನೆಲೆ ದನಿಯೊಂದಿಗೆ. ಇನ್ನು ಮುಕ್ತಾಯವಾಗೋ ಹೊತ್ತಿಗೆ ಸೂಲಿಬೆಲೆಯ ಭಾಷಣ ಕೂಡಾ ಮುಗಿದಂತಾಗುತ್ತದೆ. ಒಂದು ಪೂರ್ವಗ್ರಹಪೀಡಿತ ಕತೆಯನ್ನು ಪ್ರೇಕ್ಷಕರಿಗೊಪ್ಪಿಸಲು ಬೇಕಾದ ಎಲ್ಲ ಪ್ರಯತ್ನ ಇಲ್ಲಿ ನಡೆದಿದೆ.
ಆರ್ಮಿ ಅಧಿಕಾರಿಯೊಬ್ಬ ಅಂಡರ್ ಕವರ್ ಏಜೆಂಟ್ ಆಗಿ ಕಾರ್ಯ ನಿರ್ವಹಿಸುವುದು, ಆರ್ಮಿ ಅಧಿಕಾರಿ ಮತ್ತು ಬೆಂಗಳೂರಿನ ಕಮಿಷನರ್ ಒಟ್ಟಿಗೆ ಸೇರಿ ಪ್ರೆಸ್ ಮೀಟ್ ನಡೆಸುವುದು, ದೈಹಿಕ ಅರ್ಹತೆ ಇಲ್ಲದವರನ್ನೂ ಆರ್ಮಿ ಕಮಾಂಡೋಗಳಾಗಿ ತೋರಿಸಿರೋದು… ಹೀಗೆ ಸಿನಿಮಾದ ತುಂಬಾ ಅಭಾಸಗಳೇ ತುಂಬಿ ಹೋಗಿವೆ. ಸಂಭಾಷಣೆಯಂತೂ ಕೇಸರೀ ಸಮಾವೇಶದ ಭಾಷಣದಂತೆ ಕಿವಿಗಪ್ಪಳಿಸುತ್ತವೆ. ಇಡೀ ಸಿನಿಮಾವನ್ನು ನೋಡಿಸಿಕೊಂಡು ಹೋಗೋದು ಗುರುಪ್ರಶಾಂತ್ ರೈ ಅವರ ಅವರ ಕ್ಯಾಮೆರಾ ಕೆಲಸ ಮತ್ತು ವೀರ್ ಸಮರ್ಥ್ ಅವರ ಹಿನ್ನೆಲೆ ಸಂಗೀತ ಮತ್ತು ಮಧುರವಾದ ಹಾಡುಗಳು.
ಒಟ್ಟಾರೆಯಾಗಿ `ಲೀಡರ್’ ಅರೆಬೆಂದ ನಿರ್ದೇಶಕನೊಬ್ಬನ ಒಡಕು ಕಲಾಕೃತಿಯಂತಾಗಿದೆ. ನಮ್ಮದು ಹಿಂದೂಸ್ಥಾನ, ವಿವಿಧತೆಯಲ್ಲಿ ಏಕತೆ ಎನ್ನುತ್ತಲೇ ಅಲ್ಪಸಂಖ್ಯಾತರನ್ನು ಪ್ರತ್ಯೇಕಿಸಿ ನೋಡುವ, `ಭೂತದ ಬಾಯಲ್ಲಿ ಭಗವದ್ಗೀತೆ’ ಎನ್ನುವಂಥಾ ಮನಸ್ಥಿತಿಯ ಸಿನಿಮಾ ಇದಾಗಿದೆ. ಇಷ್ಟಕ್ಕೂ ಲೀಡರ್ ಅನ್ನೋ ಪದ ಕೂಡಾ ಈ ಸಿನಿಮಾಗೆ ಅಷ್ಟು ಹೊಂದೋದಿಲ್ಲ. ಅದ್ಯಾಕೆ ಅಷ್ಟು ಕಿತ್ತಾಡಿಕೊಂಡು ಈ ಹೆಸರಿಟ್ಟರೋ ಗೊತ್ತಿಲ್ಲ. ಇದೆಲ್ಲ ಏನೇ ಇದ್ದರೂ ಸೆಂಚುರಿ ಸ್ಟಾರ್, ಕರುನಾಡ ಚಕ್ರವರ್ತಿ ಎಂಬಿತ್ಯಾದಿ ಬಿರುದಾಂಕಿತರಾದ ಡಾ. ಶಿವರಾಜ್ ಕುಮಾರ್ ಅವರು ಖಡಕ್ಕಾಗಿ ನಟಿಸಿದ್ದಾರೆ. ಅವರ ಪೆಪ್ಪರ್ ಸಾಲ್ಟ್ ಲುಕ್ಕು ಅಭಿಮಾನದಾಚೆಗೂ ಕೂಡಾ ನೋಡೋ ಎಲ್ಲರನ್ನೂ ಮೋಡಿ ಮಾಡುತ್ತದೆ. ಲೂಸ್ ಮಾದ ಯೋಗಿ ಸ್ಪೆಷಲ್ ಕ್ಯಾರೆಕ್ಟರ್ ಆದರೂ ವಿಶೇಷವಾಗಿ ಗಮನ ಸೆಳೆಯುವಂತೆ ನಟಿಸಿದ್ದಾರೆ. ಶ್ರೀನಗರ ಕಿಟ್ಟಿ ಅವರ ಮುದ್ದು ಕೂಸು ಪರಿಣಿತಾ ಮೊದಲ ಚಿತ್ರದಲ್ಲೇ ಹತ್ತಾರು ಸಿನಿಮಾದಲ್ಲಿ ನಟಿಸಿದ ಅನುಭವಿಯಂತೆ ನಟಿಸಿದ್ದಾಳೆ.
ಆದರೆ, ಇಂಥಾ ಸೂಕ್ಷ್ಮ ಕಥಾ ವಸ್ತುವೊಂದನ್ನು ಚಿತ್ರವಾಗಿಸಬೇಕಾದರೆ ಕಣ್ಣೆದುರಿನ ವಿದ್ಯಮಾನಗಳನ್ನು ತಟಸ್ಥವಾಗಿ ನೋಡುವಂಥಾ ವಿಶಿಷ್ಟ ಮನಸ್ಥಿತಿ ಬೇಕಾಗುತ್ತದೆ. ಕೇವಲ ಬಾಂಗ್ಲಾದಿಂದ ಬಂದ ವಲಸಿಗರನ್ನು ಮಾತ್ರವಲ್ಲ; ಇಲ್ಲಿ ಅಸ್ತಿತ್ವದಲ್ಲಿರೋ ಅಷ್ಟೂ ಜಾತಿ ಧರ್ಮಗಳನ್ನೂ ಕೂಡಾ ಈ ನೆಲದಲ್ಲಿ ಬೇರೆ ಬೇರೆ ಪಕ್ಷಗಳು ಓಟ್ ಬ್ಯಾಂಕ್ ಆಗಿಸಿಕೊಂಡಿವೆ. ಭಯೋತ್ಪಾದನೆಯಂಥಾ ರಾಕ್ಷಸೀಯ ವಿದ್ಯಮಾನಗಳ ಹಿಂದೆಯೂ ಇಂಥಾದ್ದೇ ಮಸಲತ್ತುಗಳಿದ್ದಾವೆ. ಆದರೆ, ಚಕ್ರವರ್ತಿ ಸೂಲಿಬೆಲೆಯಂಥವರು ಬೇರ್‍ಯಾವುದೋ ಗ್ರಹದಿಂದ ಇಳಿದು ಬಂದ ಕ್ಷುದ್ರ ಜೀವಿಗಳಂತೆ ಬಿಂಬಿಸೋ ಮುಸಲ್ಮಾನ ಹುಡುಗ ಮತ್ತು ಹಿಂದೂ ಹುಡುಗಿ, ಹಿಂದೂ ಹುಡುಗ ಮುಸಲ್ಮಾನ ಹುಡುಗಿಯ ನಡುವಿನ ಪ್ರೇಮವೂ ಭಯೋತ್ಪಾದನೆಯ ಒಂದು ಮುಖ ಎಂಬುದು ಪೂರ್ವಾಗ್ರಹ ಪೀಡಿತವಲ್ಲದೇ ಬೇರೇನೂ ಅಲ್ಲ.
ಇತ್ತಲಿಂದ ಒಂದು ಧರ್ಮದ ವಿರುದ್ಧ ಯವಕರ ತಲೆ ಕೆಡಿಸಿ, ಅತ್ತ ಕಡೆ ಅದೇ ಧರ್ಮದ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಾನೆಂಥಾ ಸಾಮರಸ್ಯದ ಹರಿಕಾರ ನೋಡಿ ಅಂತ ತನ್ನ ಬೆನ್ನಯ ತಾನೇ ತಟ್ಟಿಕೊಳ್ಳೋ ಕಲೆ ಸೂಲಿಬೆಲೆಗೆ ಕರಗತ. ಇಂಥಾ ಎಲಿಮೆಂಟಿನ ಎಂಟ್ರಿಯಿಂದಾಗಿ ಇಡೀ ಲೀಡರ್ ಚಿತ್ರ ಹಳಿತಪ್ಪಿ ಬೋರಲು ಬಿದ್ದಿರೋದು ದುರಂತ. ಸೂಲಿಬೆಲೆಯಂಥವರ ಭಾಷಣ ಬೇರೆ, ಸಿನಿಮಾ ಭಾಷೆಯೇ ಬೇರೆ ಎಂಬ ಸಾಮಾನ್ಯ ಜ್ಞಾನ ನಿರ್ದೇಶಕರಿಗೆ ಇಲ್ಲದಿರೋದು ಮತ್ತೂ ದುರಂತ!

Leave a Reply

Your email address will not be published. Required fields are marked *


CAPTCHA Image
Reload Image