One N Only Exclusive Cine Portal

ವಲಸೆ ಬಂದ ಹಕ್ಕಿಯ ಜೊತೆಗೇ ರಂಗನತಿಟ್ಟಿನ ಗುಬ್ಬಚ್ಚಿಯೂ ಹಾರುತ್ತದಲ್ಲ

ಕನ್ನಡದ ಮೇರು ಪ್ರತಿಭೆಗಳಾದ ಪ್ರಕಾಶ್ ರೈ ಮತ್ತು ಬಿ. ಸುರೇಶ ಹಳೇ ದೋಸ್ತಿಗಳು ಅನ್ನೋದು ಎಲ್ಲರಿಗೂ ಗೊತ್ತು. ಸಿನಿಮಾ ನಿರ್ಮಾಣದಲ್ಲೂ ಪಾಲುದಾರಿಕೆ ವಹಿಸಿದ್ದ ಈ ಜೋಡಿ ಅನೇಕ ವಿಚಾರಗಳಲ್ಲಿ ಒಂದೇ ನಿಲುವನ್ನು ತಾಳಿದ್ದಿದೆ. ಆದರೆ `ಡಬ್ಬಿಂಗ್’ ಕುರಿತಾಗಿ ಇಬ್ಬರೂ ತದ್ವಿರುದ್ಧ ದಿಕ್ಕಿನಲ್ಲಿ ಚಿಂತಿಸುತ್ತಿದ್ದಾರೆ. ಅದೇನು ಅನ್ನೋದರ ವಿವರ ಅವರವರ ಮಾತುಗಳಲ್ಲೇ ಕೇಳಿ…

My thoughts on #dubbing controversy in Kannada. Lets be fair to ones right to watch – Prakash Raj

ಎಷ್ಟೇ ದೂರದಲ್ಲಿದ್ದರೂ, ನನ್ನ ನಾಡಿನಲ್ಲಿ ನಡೆಯುತ್ತಿರುವ ಸಂವಾದಗಳು, ವಾಗ್ವಾದಗಳು ನನಗೆ ಮುಖ್ಯ ಎಂಬ ಕಾರಣಕ್ಕೆ ನಾನಿದನ್ನು ಬರೆಯುತ್ತಿದ್ದೇನೆ. ಚಲನಚಿತ್ರವೊಂದು ಬೇರೆ ಭಾಷೆಯಿಂದ ಕನ್ನಡಕ್ಕೆ ಡಬ್ ಆಗುವುದರ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಡಬ್ಬಿಂಗ್ ಪರವಾಗಿ ಇರುವವರು ತಮ್ಮ ವಾದ ಮಂಡಿಸುತ್ತಿದ್ದಾರೆ. ಡಬ್ಬಿಂಗ್ ವಿರೋಧಿಸುವವರು ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುತ್ತೇವೆಂದು ಅಬ್ಬರಿಸುತ್ತಿದ್ದಾರೆ.

ಇಂಥ ಹೊತ್ತಲ್ಲಿ ಯಾರು ಯಾರಿಗೆ ಏನು ಹೇಳುತ್ತಿದ್ದಾರೆ ಎಂಬುದೇ ಹೆಚ್ಚಿನ ಸಂದರ್ಭದಲ್ಲಿ ಸ್ಪಷ್ಟ ಇರುವುದಿಲ್ಲ. ಡಬ್ಬಿಂಗ್ ಬೇಕೆ ಬೇಡವೇ ಎಂಬುದು ನನ್ನ ಮುಂದಿರುವ ಪ್ರಶ್ನೆ ಅಲ್ಲವೇ ಅಲ್ಲ. ನಾನು ಡಬ್ಬಿಂಗ್ ಸಿನಿಮಾ ನೋಡುತ್ತೇನೋ ಇಲ್ಲವೋ ಅನ್ನುವುದಷ್ಟೇ  ಪ್ರತಿಯೊಬ್ಬನ ವೈಯಕ್ತಿಕ ನಿಲುವು.

ಡಬ್ಬಿಂಗ್ ಬರಲೇಕೂಡದು ಎಂದು ಹೇಳುವುದು ಪಾಳೇಗಾರಿಕೆಯಾಗುತ್ತದೆ ಮತ್ತು ಹಾಗೆ ಹೇಳುವ ಕಾಲಮಾನದಲ್ಲಿ ನಾವು ಬದುಕುತ್ತಿಲ್ಲ.  ಎಲ್ಲವನ್ನೂ ಎಲ್ಲ ಕಟ್ಟುಪಾಡುಗಳಿಂದ ಮುಕ್ತಗೊಳಿಸುವ ಮೂಲಕ, ಎಲ್ಲರ ಹಕ್ಕುಗಳನ್ನು ಗೌರವಿಸುವುದನ್ನು ಕಲಾವಿದರಾದ ನಾವು ಕೂಡ ಕಲಿಯಬೇಕಿದೆ. ಕಲಾವಿದರ ಹಕ್ಕುಗಳನ್ನು ಪ್ರೇಕ್ಷಕ ಕೂಡ ಗೌರವಿಸಬೇಕಾಗಿದೆ.

ಇದು ಕಲಾತ್ಮಕ ಕೊಡುಕೊಳ್ಳುವಿಕೆಯಾದ್ದರಿಂದ ಇಲ್ಲಿ ದಬ್ಬಾಳಿಕೆಗೆ ಜಾಗವಿಲ್ಲ. ನೂರು ಕೋಟಿ ಹಾಕಿ ಸಿನಿಮಾ ಮಾಡಿದವನು, ನೂರೊಂದು ಕೋಟಿಯಾದರೂ ಬರಲಿ ಎಂದು ಹಾರೈಸುವಂತೆ, ನೂರು ರುಪಾಯಿ ಕೊಟ್ಚು ಸಿನಿಮಾ ನೋಡಿದವರು ಕಿಂಚಿತ್ತಾದರೂ ಮನರಂಜನೆ ಸಿಗಲಿ ಎಂದು ಆಶಿಸುತ್ತಾನೆ.

ಯಾರ ಮನರಂಜನೆ ಯಾವುದು, ಅದು ಎಲ್ಲಿ ಸಿಗುತ್ತದೆ ಎಂದು ನಿರ್ಧರಿಸುವ ಹಕ್ಕು ಅವನಿಗಷ್ಟೇ ಇದೆಯಲ್ಲದೇ, ಮತ್ತೊಬ್ಬರಿಗೆ ಇಲ್ಲ. ಈ ಕಾರಣಕ್ಕೆ ಡಬ್ಬಿಂಗ್ ವಿರೋಧಿ ನಿಲುವನ್ನು ಒಂದು ಚಿತ್ರರಂಗ ಹೊಂದಿರುವುದು ಸರಿಯಾದ ನಿಲುವು ಅಂತ ನನಗೆ ಅನ್ನಿಸುವುದಿಲ್ಲ. ಹಾಗೆ ನೋಡಿದರೆ ನಮ್ಮ ಕನ್ನಡ ಸಿನಿಮಾಗಳು ಬೇರೆ  ಭಾಷೆಗಳಿಗೆ ಡಬ್ ಆದಾಗ ಅದನ್ನು ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವಲ್ಲ? ಬೇರೆ ಭಾಷೆಗೆ ನಮ್ಮದೇ ಸಿನಿಮಾಗಳು ರೀಮೇಕ್  ಆದಾಗ ಅದನ್ನು ಕೂಡ ನಮ್ಮ ಪ್ರಚಾರಕ್ಕೆ ಬಳಸಿಕೊಳ್ಳುತ್ತೇವಲ್ಲ? ಡಬ್ಬಿಂಗ್ ಕುರಿತ ನಿಲುವು ಹೊರಗೆ ಹೋಗುವುದಕ್ಕೂ ಒಳಗೆ ಬರುವುದಕ್ಕೂ ಸಮಾನವಾಗಿ ಹೊಂದಿಕೆಯಾಗಬೇಕು, ಅಲ್ಲವೇ? ಅಷ್ಟಕ್ಕೂ ಡಬ್ಬಿಂಗ್ ಸಿನಿಮಾಗಳನ್ನು ವಿರೋಧಿಸುವ ಮೂಲಕ ನಾವು ಮೀಸಲಾತಿ ಕೇಳುತ್ತಿದ್ದೇವೆಯೇ?

ನಮಗೆ ಡಬ್ಬಿಂಗ್ ಆದ ಚಿತ್ರಗಳ ಜೊತೆ ಹೋರಾಡುವ ಶಕ್ತಿ ಇಲ್ಲ ಎಂದು ಹೇಳಿಕೊಳ್ಳುತ್ತಿದ್ದೇವೆಯೇ? ಅಥವಾ ಡಬ್ಬಿಂಗ್ ಬಂದರೆ ಕನ್ನಡ ಸಿನಿಮಾಗಳನ್ನು ಯಾರೂ ನೋಡುವುದಿಲ್ಲ ಎಂಬ ಆತಂಕವೇ? ಅಂಥದ್ದೇನೂ ಬೇಕಾಗಿಲ್ಲ ಅಂತ ನನಗಂತೂ ಅನ್ನಿಸುತ್ತದೆ.  ವರ್ಷಕ್ಕೆ ನೂರೈವತ್ತು ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತವೆ.  ಗೆಲ್ಲುವುದು ಬಹುಶಃ ಹತ್ತೋ ಹನ್ನೆರಡೋ ಅಷ್ಟೇ. ಬೇರೆ ಭಾಷೆಯ ಐವತ್ತು ಸಿನಿಮಾಗಳು ಕರ್ನಾಟಕದಲ್ಲಿ ತೆರೆಕಾಣುತ್ತವೆ.  ಅವುಗಳಲ್ಲಿ ಗೆಲ್ಲುವುದು ಒಂದೋ ಎರಡೋ ಅಷ್ಟೇ. ತೆಲುಗಿನಲ್ಲೂ ತಮಿಳಿನಲ್ಲೂ ಹೆಚ್ಚು ಕಮ್ಮಿ ಇದೇ ಪರಿಸ್ಥಿತಿಯಿದೆ. ಹಿಂದಿ ಸಿನಿಮಾಗಳು ತೆಲುಗು ಚಿತ್ರರಂಗವನ್ನು ಹಾಳು ಮಾಡಿವೆ ಅಂತಲೂ ಮರಾಠಿ ಚಿತ್ರರಂಗವನ್ನು ಕೆಡಿಸಿವೆ ಅಂತಲೂ ವಾದಿಸುತ್ತಾ ಹೋದರೆ ನಾವೊಂದು ದ್ವೀಪವಾಗಿ ಬದುಕಬೇಕಾಗುತ್ತದೆ.

ಬಯಲಿನಲ್ಲಿ ಬದುಕುವುದು ಜೈಲಿನಲ್ಲಿ ಬದುಕುವುದಕ್ಕಿಂತ ಯಾವತ್ತಿದ್ದರೂ ಒಳ್ಳೆಯದು. ನಮ್ಮ ಭಾಷೆಯ ಬೇಲಿ ಹಾಕಿ ನಮ್ಮೂರನ್ನು ನಾವು ಜೈಲನ್ನಾಗಿ ಪರಿವರ್ತಿಸಕೂಡದು ಅಲ್ಲವೇ? ಯಾರಾದರೂ ನನ್ನನ್ನು ನೀವು ಡಬ್ಬಿಂಗ್ ಪರವೇ ಅಂತ ಕೇಳಿದರೆ ಅಲ್ಲ ಎನ್ನುತ್ತೇನೆ. ನನಗೆ ಸಿನಿಮಾ ಮಾಡುವ ರೋಮಾಂಚನ ಬೇಕು. ಹಾಗಿದ್ದರೆ ರೀಮೇಕ್ ಯಾಕೆ ಮಾಡುತ್ತೀರಿ ಅಂತಲೂ ಅನೇಕರು ಕೇಳುತ್ತಾರೆ.

ನನಗೆ ಒಂದು ಕತೆ ಇಷ್ಟವಾದರೆ ಅದನ್ನು ನನ್ನದಾಗಿಸಿಕೊಳ್ಳಲು ನೋಡುತ್ತೇನೆ. ಆ ಕತೆಯನ್ನು ನಾನು ಪೂರ್ತಿಯಾಗಿ ನನ್ನದನ್ನಾಗಿ ಮಾಡಿಕೊಳ್ಳುವುದು
ಅಂದರೆ ಅದರ ಜೊತೆ ಒಂದಷ್ಟು ದಿನಗಳನ್ನು ಕಳೆಯುವುದು. ನಮ್ಮವರೇ ಆದ ಹೇಮಂತ್ ನಿರ್ದೇಶಿಸಿದ ಗೋಧಿಬಣ್ಣ ಸಾಧಾರಣ ಮೈಕಟ್ಟನ್ನು ನಾನು ರೀಮೇಕ್ ಮಾಡುತ್ತಿರುವುದು ಕೂಡ ಆ ಕತೆ ಇಷ್ಟವಾದ್ದರಿಂದ. ಯಾರದೋ ಮಗುವನ್ನು ದತ್ತು ತೆಗೆದುಕೊಂಡು ಬೆಳೆಸುವುದರಲ್ಲೂ ಒಂದು ಸುಖವಿದೆ.
ನಮ್ಮದೇ ಮಗುವನ್ನು ಬೆಳೆಸುವುದರಲ್ಲೂ ಒಂದು ಸುಖವಿದೆ.

ಅಂತಿಮವಾಗಿ ನಾವು ಮಕ್ಕಳ ಜೊತೆಗಿರುತ್ತೇವೆ ಅನ್ನುವುದಷ್ಟೇ ಮುಖ್ಯ. ನಾನು ಡಬ್ಬಿಂಗ್ ಪರ ಅಲ್ಲ ಅಂದಾಕ್ಷಣ, ಡಬ್ಬಿಂಗನ್ನು ತಡೆಯುತ್ತೇನೆ ಅಂತಲ್ಲ.
ಯಾವುದನ್ನೇ ಆಗಲಿ ತಡೆಯುವುದರಲ್ಲಿ ನನಗೆ ನಂಬಿಕೆ ಇಲ್ಲ. ಅದರ ಜತೆಗೆ ಗುದ್ದಾಡುವುದರಲ್ಲಿ ನಿಜವಾದ ಸೃಜನಶೀಲ ಶಕ್ತಿಯಿದೆ ಎಂದು ತಿಳಿದುಕೊಂಡವನು ನಾನು. ಬೇಂದ್ರೆಯವರ ಜೊತೆಜೊತೆಗೇ ಗೋಪಾಲಕೃಷ್ಣ ಅಡಿಗರು, ಅಡಿಗರ ಜತೆಗೇ ಕೆ ಎಸ್ ನರಸಿಂಹಸ್ವಾಮಿಯವರು ತಮ್ಮ ತಮ್ಮ ಪಾಲಿನ ಪದ್ಯಗಳನ್ನು ಬರಕೊಂಡು ನಮಗೆ ಎಷ್ಟೊಂದು ವೈವಿಧ್ಯಮಯವಾದ ಕವಿತೆಗಳನ್ನು ಕೊಟ್ಟರು. ಆ ಕಾಲಕ್ಕೆ ಯೇಟ್ಸ್ ಬರೆದ ಪದ್ಯಗಳೂ, ಷೇಕ್ಸ್ ಪಿಯರ್  ಬರೆದ ಸಾನೆಟ್ಟುಗಳೂ ಕನ್ನಡಕ್ಕೆ ಬರುತ್ತಿದ್ದವು. ಅವ್ಯಾವುವೂ ನಮ್ಮ  ಕವಿಗಳ ಮಹತ್ವವನ್ನು ಕಮ್ಮಿ ಮಾಡಲಿಲ್ಲ.ಅವರಿಗೆ ಸಮನಾಗಿ ಅಥವಾ ಅವರನ್ನು ಮೀರಿಸುವಂತೆ  ನಮ್ಮವರಿದ್ದಾರೆ ಎಂಬ ಹೆಮ್ಮೆಯನ್ನು ನಮ್ಮಲ್ಲಿ ಮೂಡಿಸಿತು.ಡಬ್ಬಿಂಗ್ ಕೂಡ ಅಂಥ ಕೆಲಸವನ್ನೇ ಮಾಡಲಿದೆ. ನಾವು ಡಬ್ಬಿಂಗಿಗೆ ಅಂಜುವುದಿಲ್ಲ.  ಡಬ್ಬಿಂಗು ಬಂತು ಅಂದಾಕ್ಷಣ ಯಾರೂ ಗಂಟು ಮೂಟೆ ಕಟ್ಟಿಕೊಂಡು ಗೂಡು ಸೇರುವುದಿಲ್ಲ. ವಲಸೆ ಬಂದ ಹಕ್ಕಿಯ ಜೊತೆಗೇ ರಂಗನತಿಟ್ಟಿನ ಗುಬ್ಬಚ್ಚಿಯೂ ಹಾರುತ್ತದೆ, ಕಾಳು ಹೆಕ್ಕುತ್ತದೆ, ಬದುಕುತ್ತದೆ. ಅದಲ್ಲವೇ ಹೋರಾಟ, ಅದಲ್ಲವೇ ಬದುಕು, ಅದಲ್ಲವೇ ರೋಮಾಂಚನ. ಆ ಪುಳಕವನ್ನು ನಾವು ಬರಿದೇ ಹೋರಾಡಿ ಕಳೆದುಕೊಳ್ಳುವುದು ಬೇಡ.  ಹೋರಾಡುವುದಕ್ಕೆ ಬೇಕಾದಷ್ಟು ಸಂಗತಿಗಳಿವೆ. ತಡೆಯುವುದಕ್ಕೆ ಸಮಾಜ ವಿರೋಧಿ ವಿಚಾರಗಳಿವೆ. ಅಲ್ಲವೇ.

-ಪ್ರಕಾಶ್ ರೈ


ಪ್ರಿಯ ಗೆಳೆಯ,
ನಿನ್ನ ನಿಲುವು ಅದು.
ನನ್ನ ನಿಲುವು ಇದು:
ಡಬ್ಬಿಂಗ್ ಕಲೆ ಅಲ್ಲ. ಅದು ಒಂದು ಕಲೆಯನ್ನು ವಿಕೃತಗೊಳಿಸುವ ವ್ಯಾಪಾರೀ ಸರಕು.
ಮೂಲ ಚಿತ್ರದಲ್ಲಿ ನಟಿಸಿದವರ ದನಿಯನ್ನು ಬಿಟ್ಟು ಒಂದು ಕಲಾಕರತಿಯನ್ನು ನೋಡುವುದು ನನ್ನ ಪಾಲಿಗೆ ಗೊಮ್ಮಟೇಶ್ವರನಿಗೆ ಸೂಪರ್ ಮ್ಯಾನ್ ಚಡ್ಡಿ ಹಾಕಿದಂತೆ ಕಾಣುತ್ತದೆ, ಬೇಲೂರಿನ ಶಿಲ್ಪಕ್ಕೆ ಏಷಿಯನ್ ಪೆಯಿಂಟ್ ಹೊಡೆದಂತೆ ಕಾಣುತ್ತದೆ. (ಕೋಕಾಕೋಲದ ಹೆಸರನ್ನೇ ಹೋಲುವ ಬೇರೆಯ ಕೋಲಾಗಳನ್ನು ಆ ಕಂಪೆನಿಯು ಕಾಪಿರೈಟ್ ಇನ್ಫ್ರಿಂಜ್ಮೆಂಟ್ ಹೆಸರಲ್ಲಿ ತಡೆದುದನ್ನು ಇಲ್ಲಿ ನೆನೆಯಬಹುದು)
ಈ ಕಾರಣಕ್ಕಾಗಿಯೇ ಯಾವುದೇ ಸಿನಿಮಾ (ಕಲಾಕೃತಿ) ಮತ್ತೊಂದು ಭಾಷೆಗೆ ಡಬ್ ಆಗುವುದನ್ನು ನಾನು ಒಪ್ಪುವುದಿಲ್ಲ. ಹಾಗೆ ಒಬ್ಬ ಕಲಾವಿದನ ದನಿಗೆ ಬದಲಿ ಭಾಷೆಯವನ ದನಿ ಕೂಡಿಸುವುದು ಅಪಚಾರ ಎಂಬುದು ನನ್ನ ನಿಲುವು. ಅದೇ ಕಲಾವಿದ ದನಿ ಕೊಡುತ್ತಾನಾ? ಆಗ ನೋಡುವ.
ಉಪಿರಿ ಚಿತ್ರದ ನಾಗಾರ್ಜುನ, ಕಾರ್ತಿ, ಪ್ರಕಾಶ್ ಅವರೇ ಕನ್ನಡಕ್ಕೂ ದನಿ ಕೊಡುವುದಾದರೆ ಅದು ಒಪ್ಪಬಹುದಾದ್ದು.
ಇನ್ನು ವಲಸೆ ಹಕ್ಕಿಯ ಜೊತೆಗೆ ಗುಬ್ಬಿ ಬದುಕುವುದೇ ಸಹಜ ಎನ್ನುವುದಾದರೆ ನಮ್ಮಲ್ಲಿ ಈಗ ಎಲ್ಲ ಭಾಷೆಗಳ ಸಿನಿಮಾ ಜೊತೆಗೇ ನಮ್ಮ ಸಿನಿಮಾಗಳು ಸ್ಪರ್ಧೆ ಮಾಡುತ್ತಿವೆ. ಬಾಹುಬಲಿ ಜೊತೆಗೆ ರಂಗಿತರಂಗ ಸ್ಪರ್ಧಿಸಿಯೇ ಗೆದ್ದದ್ದು.
ತಮಿಳುನಾಡಿನಲ್ಲಿ ಕೋಲಾ ವಿರುದ್ಧ ಸಮರ ಮಾಡುತ್ತಿರುವವರು ನೀರಿನ ಬಳಕೆಯನ್ನು ಕುರಿತ ವಿಷಯವನ್ನು ಆದ್ಯತೆಯಾಗಿಸಿ ಸಮರ ಮಾಡುತ್ತಾ ಇದ್ದಾರೆ. ಆ ಸಮರಕ್ಕೆ ಹೋಲಿಸಿ ಡಬ್ಬಿಂಗ್ ವಿರುದ್ಧದ ಹೋರಾಟವನ್ನು ನೋಡಬಹುದು. ನಮ್ಮಲ್ಲಿ ತಯಾರಾಗುವ ೧೬೦ ಸಿನಿಮಾಗಳಿಗೇ ಪ್ರದರ್ಶನ ಅವಕಾಶ ಸಿಗುತ್ತಿಲ್ಲ. ಇನ್ನೂ ಮೂಲ ಪರಭಾಷೆಯ ಜೊತೆಗೆ ಕನ್ನಡಕ್ಕೆ ಡಬ್ ಆದುದು ಬಂದರೆ ಅದು ನಮ್ಮ ಭಾಷೆಯ ಸಿನಿಮಾಗಳಿಗೆ ಪ್ರದರ್ಶನ ಮಂದಿರದ ಕೊರತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಅಷ್ಟೇ. ಮೂಲಭಾಷೆಯ ಸಿನಿಮಾ ಇಲ್ಲಿ ಬಿಡುಗಡೆ ಆಗುವುದೇ ಇಲ್ಲ ಎಂಬ ವ್ಯವಸ್ಥೆ ಬರುವುದಾದರೆ ಆಗ ಡಬ್ ಆದ ಸಿನಿಮಾ ಬರಲಿ. ನೋಡುವ. ಹಾಗಾಗದು ಎಂಬುದು ಇಲ್ಲಿರುವ ಸಮಸ್ಯೆ.
ಈ ಕಾರಣಕ್ಕಾಗಿ ನಾನು ಡಬ್ಬಿಂಗ್ ವಿರೋಧಿಸುತ್ತಲೇ ಇರುತ್ತೇನೆ.

– ಬಿ.ಸುರೇಶ

Leave a Reply

Your email address will not be published. Required fields are marked *


CAPTCHA Image
Reload Image