One N Only Exclusive Cine Portal

ವಿಷ್ಟು ಸ್ಮಾರಕ ಸ್ಥಳಾಂತರ : ರೊಚ್ಚಿಗೆದ್ದಿದ್ದಾರೆ ಅಭಿಮಾನಿಗಳು!

Vishnu-5ವಿಷ್ಣು ಅಭಿಮಾನಿಗಳ ಕನಸಿಗೆ ಎಲ್ಲರೂ `ಸಮಾಧಿ’ ಕಟ್ಟಿ ಬಿಟ್ಟಿದ್ದಾರೆ. ವಿಷ್ಣು ಸಮಾಧಿ ಬೆಂಗಳೂರಿನಲ್ಲೇ ಆಗಬೇಕೆಂದು ಹೋರಾಟಕ್ಕಿಳಿದವರಲ್ಲಿ ವಿಷ್ಣುಸೇನಾ ಸಮಿತಿಯ ರಾಜ್ಯಾಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ
ಒಂದು ಮಹಾಮೋಸದ ಬಗ್ಗೆ `ಸಿನಿಬಜ್ ಜೊತೆ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
`ಬೆನ್ನಿಗೆ ಚೂರಿ ಹಾಕುವುದೆಂದರೆ ಇದೇ ಇರಬೇಕು. ವಿಷ್ಣು ಸ್ಮಾರಕವನ್ನು ಸ್ಥಳಾಂತರ ಮಾಡಲು ನಮ್ಮದೇನು ತಕರಾರಿಲ್ಲವೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕಲಾವಿದರ ಸಂಘ, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ ಮತ್ತಿತರ ಸಂಘಗಳು ಸರ್ಕಾರಕ್ಕೆ ಪತ್ರ ಕೊಟ್ಟಿವೆ ಎಂಬ ವಿಷಯವನ್ನು ಕೇಳಲ್ಪಟ್ಟೆ. ಕೊನೆಗೂ ಇವರಿಗೆಲ್ಲಾ ಡಾ.ವಿಷ್ಣು ಅವರ ನೆನಪಾಗಿಬಿಟ್ಟರು. ಕಂಡ ಕಂಡ ಕಡೆ ವಿಷ್ಣು ಅವರ ಮೇಲೆ ಬದುಕಿದ್ದಷ್ಟು ದಿನವೂ ಹಲ್ಲೆಗಳಾಗುತ್ತಿದ್ದಾಗ ಇವರ್ಯಾರೂ ಸರ್ಕಾರಕ್ಕೆ ಪತ್ರ ಬರೆಯಲಿಲ್ಲ. ಬಹುಶಃ ಲೆಟರ್ ಹೆಡ್ ಖಾಲಿಯಾಗಿತ್ತೇನೋ ಆಗ ಪಾಪ!veeraka
ಪಕ್ಕದ ರಾಜ್ಯಗಳಲ್ಲಿ ಹಾಸ್ಯಕಲಾವಿದರಿಗೆಲ್ಲಾ `ಪದ್ಮಶ್ರೀ ಪ್ರಶಸ್ತಿಗಳು ಬಂದಿವೆ. ಆದರೆ ನಮ್ಮ ನಾಡಿನ ಅಭಿನವ ಭಾರ್ಗವನಿಗೆ ಈ ಪ್ರಶಸ್ತಿ ಸಿಕ್ಕಿಲ್ಲ. ನಾವೆಲ್ಲರೂ ಸೇರಿ ಶಿಫಾರಸ್ಸು ಮಾಡುವ ಪತ್ರ ಬರೆಯಬೇಕೆಂದು ಇವರ್ಯಾರಿಗೂ ಆಗ ಅನಿಸಲೇ ಇಲ್ಲ. ವಿಷ್ಣು ಚಲನಚಿತ್ರರಂಗದಲ್ಲಿ ೨೫ ವರ್ಷ, ೩೦ ವರ್ಷ, ೩೫ ವರ್ಷ, ೩೭ ವರ್ಷ ಪೂರೈಸಿದಾಗ ಅವರಿಗಾಗಿ ಒಂದು ಕಾರ್ಯಕ್ರಮ ಮಾಡಬೇಕೆಂದು ಇವರ್ಯಾರೂ ಪತ್ರ ಬರೆಯಲೇ ಇಲ್ಲ. ಸ್ವರಸ್ವತಿಯ ಪೂಜೆ ಅಂದ್ರೆ ಇದು ನೋಡಿ!
ವಿಷ್ಣು ಅವರಿಗೆ ಗೌರವ ಡಾಕ್ಟರೇಟ್ ಬಂದಾಗ, ಕನಿಷ್ಠ ಸೌಜನ್ಯಕ್ಕಾದರೂ ಒಂದು ಅಭಿನಂದನಾ ಸಮಾರಂಭ ಮಾಡುವ ನಿಟ್ಟಿನಲ್ಲಿ ಯೋಚಿಸಲಿಲ್ಲ. ಕನ್ನಡ ಚಿತ್ರರಂಗದ ವಜ್ರಮಹೋತ್ಸವದ ಸಂದರ್ಭದಲ್ಲಿ ವಿಷ್ಣು ಅವರನ್ನು ಹತ್ತರಲ್ಲಿ ಹನ್ನೊಂದು ಎಂಬಂತೆ ಪೋಷಕ ಕಲಾವಿದರ ಮಧ್ಯೆ ಕೂರಿಸಿ ಸನ್ಮಾನಿಸುವ ಭರದಲ್ಲಿ ಅವಮಾನಿಸಿದಾಗ ಇವರ್ಯಾರಿಗೂ ಅದನ್ನು ಪ್ರತಿಭಟಿಸಬೇಕೆಂದು ಅನಿಸಲಿಲ್ಲ. ಅವಮಾನಿಸುವುದೇ ಇವರ ಉದ್ಯೊಗವಾ?
ಅದೆಲ್ಲಾ ಬಿಡಿ, ವಿಷ್ಣು ಬದುಕಿದ್ದಷ್ಟು ದಿನವೂ ಗಾಂಧಿನಗರಕ್ಕೆ ಕಾಲಿಡಲಿಲ್ಲ. ಆಗಲೂ ಯಾರೂ ಈ ನಿಟ್ಟಿನಲ್ಲಿ ಬನ್ನಿ ಅಂತ ಪತ್ರ ಬರೆಯಲಿಲ್ಲ!
ಆದರೆ, ಈಗ ಪತ್ರ ಬರೆದಿದ್ದಾರೆ. ರಾಜಧಾನಿಯಿಂದ ವ್ಯವಸ್ಥಿತವಾಗಿ ವಿಷ್ಣು ಅವರನ್ನು ಸ್ಥಳಾಂತರಿಸಲು ಒಂದಾಗಿ ಪತ್ರ ಬರೆದಿದ್ದಾರೆ. ಶಹಬ್ಬಾಶ್, ಅಲ್ಲಾ ಸ್ವಾಮಿ, ಭಾರತಿ ಮೇಡಂ ೭ ವರುಷ ಕಾದು ಕುಳಿತಾಗ ನೀವೆಲ್ಲಾ ಎಲ್ಲಿ ಹೋಗಿದ್ರಿ? ಆಗ ನೀವೆಲ್ಲರೂ ಒಟ್ಟಾಗಿ ಬಂದು ಸರ್ಕಾರದ ಬಳಿ ನಿಯೋಗದಲ್ಲಿ ಹೋಗಿ, ವಿಷ್ಣು ಸ್ಮಾರಕ ಬೇಗ ಮಾಡಿ ಅಂತ ಪತ್ರ ಕೊಟ್ಟಿದ್ದಿದ್ದರೆ ಇಷ್ಟೊತ್ತಿಗೆ ಸ್ಮಾರಕ ನಿರ್ಮಾಣವಾಗಿ ಯಾವುದೋ ಕಾಲವಾಗಬೇಕಿತ್ತು. ಆದರೆ ಆಗೆಲ್ಲಾ ತೆರೆಮರೆಯಲ್ಲಿದ್ದವರು ಈಗ ಸ್ಮಾರಕ ಶಿಫ್ಟ್ ಅಂದ ಕೂಡಲೇ ಒಂದಾಗಿಬಿಟ್ಟಿರಲ್ಲ. ನಿಮಗಿದು ತರವೇ? ಅಂದರೆ ರಾಜಧಾನಿಯಲ್ಲಿ ವಿಷ್ಣು ಇರುವುದು ನಿಮಗೆ ಬೇಡವಾಗಿದೆ ಅಲ್ಲವೇ? ಸಂಸ್ಕಾರವಾದ ಜಾಗದಿಂದ ಸ್ಥಳಾಂತರ ಮಾಡುವ ಹೀನಕೃತ್ಯವೂ ನಿಮಗೆ ಒಪ್ಪಿತವಾಗಿದೆ. ನೀವುಗಳೆಲ್ಲ ಗೆದ್ದೆತ್ತಿನ ಬಾಲ ಹಿಡಿಯುವ ಹೀನ ಸಂಸ್ಕೃತಿಗೆ ಒಗ್ಗಿಹೋಗಿದ್ದೀರಾ?
ಅದಕ್ಕಿಂತ ದುರಂತವೇನು ಗೊತ್ತಾ?
ವಿಷ್ಣು ಅವರ ಜೊತೆ ಈ ಎಲ್ಲಾ ಘಟನೆಗಳಲ್ಲಿ ಯಾರಿಲ್ಲದಿದ್ದರೂ ಅವರ ಜೊತೆಯಿದ್ದವರು, ಅವರ ಉಸಿರಿಗೆ ಉಸಿರಾಗಿ ನಿಂತವರು ಅವರ ಅಭಿಮಾನಿಗಳು. ಆದ್ರೆ ಈಗ ಭಾರತಿ ಮೇಡಂ ಅಂತಹ ಅಭಿಮಾನಿಗಳನ್ನು ದೂರವಿಟ್ಟು, ಆಗೆಲ್ಲಾ ಪತ್ತೆಯೇ ಇಲ್ಲದವರನ್ನು ಜೊತೆ ಮಾಡಿಕೊಂಡು ಸ್ಮಾರಕ ಶಿಫ್ಟ್ ಮಾಡುತ್ತಿದ್ದಾರೆ. ಇನ್ನೂ ಮುಂದುವರೆದು, ಸ್ಮಾರಕಕ್ಕಾಗಿ ಹೋರಾಡುವವರನ್ನು ಅಭಿಮಾನಿಗಳೇ ಅಲ್ಲ ಅಂತ ಸರ್ಟಿಫಿಕೇಟ್ ಬೇರೆ ಕೊಟ್ಟು ಬಿಟ್ಟಿದ್ದಾರೆ. ಇಂಥಾ ಕ್ಷುದ್ರ ತಂತ್ರಗಾರಿಕೆ ರಾಜಕೀಯ ಪಕ್ಷಗಳಲ್ಲೂ ಇರಲಿಕ್ಕಿಲ್ಲವೇನೋ. ಎಂಥಾ ಕಾಲ ಬಂತಪ್ಪಾ…

– ನವೀನ್

1 thought on “ವಿಷ್ಟು ಸ್ಮಾರಕ ಸ್ಥಳಾಂತರ : ರೊಚ್ಚಿಗೆದ್ದಿದ್ದಾರೆ ಅಭಿಮಾನಿಗಳು!

Leave a Reply

Your email address will not be published. Required fields are marked *


CAPTCHA Image
Reload Image