One N Only Exclusive Cine Portal

ಶಿವಮಣಿ ನೈಟ್ ರೌಂಡಿಂಗ್ ಸೀಕ್ರೇಟ್!

ನಿರ್ದೇಶಕ ಶಿವಮಣಿ ಗೊತ್ತಲ್ಲ? ರಾಜಕೀಯ, ಗೋಲೀಬಾರ್, ಸ್ವಾತಿ ಸಿನಿಮಾಗಳಿಂದ ಹಿಡಿದು ಅಶೋಕ, ಮಸ್ತಿ, ಜೋಶ್, ಸಿಂಹಾದ್ರಿ ಸೇರಿದಂತೆ ಹತ್ತಾರು ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟವರು. ಲವ್ ಯೂ ಎನ್ನುವ ಸಿನಿಮಾದ ಮೂಲಕ ಹೀರೋ ಕೂಡಾ ಆದವರು. ಇತ್ತೀಚೆಗೆ ನಿರ್ದೇಶನಕ್ಕಿಂತ ನಟನೆಯನ್ನೇ ಹೆಚ್ಚು ನೆಚ್ಚಿಕೊಂಡಂತೆ ಕಾಣುತ್ತಿರುವ ಶಿವಮಣಿ ಇನ್ನೇನು ತೆರೆಗೆ ಬರಲು ತಯಾರಾಗಿರುವ ನೀನಾಸಂ ಸತೀಶ್ ಅಭಿನಯದ ‘ಟೈಗರ್ ಗಲ್ಲಿ ಸಿನಿಮಾದಲ್ಲಿ ಕೂಡಾ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ.
ಆದರೆ, ನಾವಿಲ್ಲಿ ಹೇಳಹೊರಟಿರುವುದು ಸಿನಿಮಾವನ್ನು ಹೊರತಾದ ಶಿವಮಣಿ ಅವರ ಮಾನವೀಯ ಕಾರ್ಯವೊಂದರ ಕುರಿತು.
ಶಿವಮಣಿ ಅವರು ವಾಸವಿರೋದು ಬೆಂಗಳೂರಿನ ನಾಗರಬಾವಿಯಲ್ಲಿ. ನಾಗರಬಾವಿ ರಿಂಗ್ ರೋಡ್ ಬಿ.ಡಿ.ಎ ಕಾಂಪ್ಲೆಕ್ಸಿನ ಆಜುಬಾಜಲ್ಲಿ ಮನೆಗಳಿಗಿಂತಾ ಇಂಡಸ್ಟ್ರಿಗಳು, ಗೃಹೋಪಯೋಗಿ ಮಳಿಗೆಗಳೇ ಹೆಚ್ಚು. ಇಲ್ಲಿ ಜೀವಿಸುತ್ತಿರುವ ಬೀದಿನಾಯಿಗಳಿಗೆ ಸುಲಭಕ್ಕೆ ಯಾವ ಆಹಾರವೂ ದಕ್ಕೋದಿಲ್ಲ. ರಾತ್ರಿ ಒಂಭತ್ತು ಗಂಟೆ ಹೊತ್ತಿಗೆ ನಿರ್ದೇಶಕ ಶಿವಮಣಿ ತಮ್ಮ ದ್ವಿಚಕ್ರ ವಾಹನದಲ್ಲಿ ರೌಂಡು ಹೊಡೆಯುತ್ತಾ ಅಲ್ಲಲ್ಲಿ ನಿಲ್ಲಿಸಿ ಬೀದಿನಾಯಿಗಳಿಗೆ ಆಹಾರ ನೀಡುತ್ತಾ ಸಾಗುತ್ತಿರುತ್ತಾರೆ. ನಾಯಿಗಳೂ ಕೂಡಾ ಶಿವಮಣಿಯವರು ಬರೋದನ್ನೇ ಕಾದು ಕೂತು ಅವರ ಬೈಕು ಕಾಣುತ್ತಿದ್ದಂತೆಯೇ ಒಂದೆಡೆ ದಂಡು ಸೇರಿ ಸಂಭ್ರಮಿಸುತ್ತಿರುತ್ತವೆ.
‘ಸಿನಿಮಾದೋರು ಸುಟ್ಟ ಕೈಗೆ ಸುಣ್ಣವಿಕ್ಕದ ಜನ. ಇವರ ಸೆಂಟಿಮೆಂಟುಗಳೇನಿದ್ದರೂ ತೆರೆ ಮೇಲಷ್ಟೇ ಅಂತಾ ಅನೇಕರು ಮಾತಾಡುತ್ತಾರೆ. ಹಾಗೊಮ್ಮೆ ಯಾರಿಗಾದರೂ ಸಹಾಯ ಮಾಡಿದರೂ ಊರಿಡೀ ಡಂಗೂರ ಬಾರಿಸಿ ಪ್ರಚಾರ ತಗೊಳ್ಳೋದು ಸಿನಿಮಾ ಮಂದಿಯ ವರಸೆ. ಆದರೆ, ‘ಏನೋ ನನ್ನ ಕೈಲಾದ ಸೇವೆ ಮಾಡ್ಕೊಂಡಿದೀನಿ. ಇದರಿಂದ ಪ್ರಚಾರ ಪಡೆಯೋದು ನನಗಿಷ್ಟವಿಲ್ಲ… ಎನ್ನುವ ಶಿವಮಣಿಯವರಲ್ಲಿ ನಿಜವಾದ ಮನುಷ್ಯ ಕಾಣಿಸುತ್ತಾನೆ. ಸಿನಿಮಾ ಪರಿವಾರದವರಲ್ಲಿ ಮಾನವೀಯತೆ ಇದೆ ಅನ್ನೋದು ಇಂಥಾ ಅಪರೂಪದ ವ್ಯಕ್ತಿತ್ವಗಳಿಂದ ಆಗಾಗ ಸಾಬೀತಾಗುತ್ತದೆ. ಈ ಮೂಲಕ ಮನಸ್ಸು ಬೆಚ್ಚಗಾಗುತ್ತದೆ.

 

Leave a Reply

Your email address will not be published. Required fields are marked *


CAPTCHA Image
Reload Image