One N Only Exclusive Cine Portal

ಸರಳ ನಡವಳಿಕೆಯಿಂದ ಮಾದರಿಯಾದ ಪುನೀತ್!

ಉಚ್ಚೆಗೆ ಅರ್ಜೆಂಟಾದರೂ ಫೈವ್ ಸ್ಟಾರ್ ಹೊಟೇಲಿನ ಪಾಯಿಖಾನೆಯನ್ನೇ ಹುಡುಕೋ ದೊಡ್ಡಸ್ತಿಕೆ ಸೆಲೆಬ್ರಿಟಿ ಅನ್ನಿಸಿಕೊಂಡ ಅನೇಕರಿಗೆ ಅಂಟಿಕೊಂಡಿರುತ್ತದೆ. ಆದರೆ ನಿಜಕ್ಕೂ ಸ್ಟಾರ್ ನಟರೆನ್ನಿಸಿಕೊಂಡವರು ಇಂಥಾ ತೋರಿಕೆಯಾಚೆ ಸರಳತೆ ಮೆರೆದು ಅಚ್ಚರಿ ಹುಟ್ಟಿಸುತ್ತಾರೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೂಡಾ ಅಂಥಾದ್ದೇ ಒಂದು ಸರಳ, ಸಹಜ ನಡವಳಿಕೆಯ ಮೂಲಕ ಗಮನ ಸೆಳೆದಿದ್ದಾರೆ.
ಪುನೀತ್ ರಾಜ್ ಕುಮಾರ್ ರಸ್ತೆ ಬದಿಯ ಮೊಬೈಲ್ ಕ್ಯಾಂಟಿನ್‌ನಲ್ಲಿ ತಿಂಡಿ ತಿನ್ನುತ್ತಾರೆಂದರೆ ನಂಬಲು ತುಸು ಕಷ್ಟವಾದೀತು. ಆದರೆ ಹೊಸಪೇಟೆಯಲ್ಲಿ ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಮುಗಿಸಿ ವಾಪಾಸಾಗುತ್ತಿದ್ದ ಪುನೀತ್ ತಮ್ಮ ಬಳಗದ ಜೊತೆಗೆ ಹೆದ್ದಾರಿ ಪಕ್ಕದಲ್ಲಿನ ಮೊಬೈಲ್ ಕ್ಯಾಂಟಿನ್ ಒಂದರಲ್ಲಿ ತಿಂಡಿ ತಿಂದಿದ್ದಾರೆ. ಆ ಹೊಟೇಲ್‌ನವರ ಜೊತೆ ತೀರಾ ಸಾಮಾನ್ಯನಂತೆ ಬೆರೆತು ಮುದ ನೀಡಿದ್ದಾರೆ.


ಕಳೆದ ಶನಿವಾರ ತಡರಾತ್ರಿಯ ವರೆಗೂ ನಡೆದಿದ್ದ ಆಡಿಯೋ ರಿಲೀಸ್ ಕಾರ್ಯಕ್ರಮ ಮುಗಿಸಿಕೊಂಡ ಪುನೀತ್ ಮಾರನೇ ದಿನ ಬೆಳಗ್ಗೆ ವಿನಯ್ ರಾಜ್‌ಕುಮಾರ್, ನಿರ್ಮಾಪಕರಾದ ರಾಜ್ ಕುಮಾರ್ ಮುಂತಾದವರ ಜೊತೆ ಬೆಂಗಳೂರಿನತ್ತ ಹೊರಟಿದ್ದರು. ಮುಂದೆಲ್ಲಿಯಾದರೂ ತಿಂಡಿ ತಿನ್ನೋದೆಂಬ ಬಗ್ಗೆ ತೀರ್ಮಾನವಾಗಿತ್ತು. ಆದರೆ ತುಸು ದೂರ ಹೆದ್ದಾರಿಯಲ್ಲಿ ಸಾಗಿದ ಬಳಿಕ ಪಕ್ಕದಲ್ಲಿ ಪುಟ್ಟ ಕ್ಯಾಂಟೀನ್ ಕಂಡ ಪುನೀತ್ ಅಲ್ಲೇ ಕಾರು ನಿಲ್ಲಿಸಲು ಸೂಚಿಸಿದ್ದರು. ನಂತರ ಅಲ್ಲೇ ತಿಂಡಿ ತಿಂದಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ತಮ್ಮ ಕ್ಯಾಂಟೀನ್‌ಗೆ ಬಂದು ತಿಂಡಿ ತಿಂದಿದ್ದರಿಂದ ಅದರ ಮಾಲೀಕರು ಖುಷಿಗೊಂಡು ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ. ಡಾ ರಾಜ್ ಕುಮಾರ್ ಕೂಡಾ ಇಂಥಾದ್ದೇ ಸರಳ ನಡವಳಿಕೆಗಳಿಗೆ ಹೆಸರಾದವರು. ಅವರ ಪುತ್ರ ಪುನೀತ್ ಕೂಡಾ ಅದನ್ನೇ ಮೈಗೂಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image