One N Only Exclusive Cine Portal

`ಸರ್ಕಾರದ ವಿರುದ್ಧ ಮಾತಾಡಿದರೆ ನನ್ನ ತಾಯಿಯ ಧರ್ಮ ಕೆದಕ್ತಾರೆ…’

ಪ್ರಶ್ನೆ ಮಾಡೋದೇ ದೇಶದ್ರೋಹ, ಪ್ರಧಾನಿಯನ್ನು ಪ್ರಶ್ನೆ ಮಾಡೋರೆಲ್ಲ ದೇಶ ದ್ರೋಹಿಗಳು… ಇಂತಾ ಮನಸ್ಥಿತಿ ಸರ್ವಾಧಿಕಾರಕ್ಕೆ ಮಾತ್ರವೇ ಹೇಳಿ ಮಾಡಿಸಿದಂಥಾದ್ದು. ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಯಾವ ಪಕ್ಷದ ಅದ್ಯಾರೇ ಅಧಿಕಾರ ಸೂತ್ರ ಹಿಡಿದಿದ್ದರೂ ಇಂಥಾ ಧೋರಣೆ ಖಂಡನಾರ್ಹ. ದುರಂತವೆಂದರೆ, ಹಾಲಿ ಕೇಂದ್ರ ಸರ್ಕಾರದ ದರ್ಬಾರಿನಲ್ಲಿ ಇಂಥಾ ಮನಸ್ಥಿತಿಯೇ ದೇಶಾದ್ಯಂತ ಮಡುಗಟ್ಟಿಕೊಂಡಿದೆ. ಇದಕ್ಕೆ ಸಾಮಾಜಿಕ ಜಾಲ ತಾಣಗಳು ಅವ್ಯಾಹತವಾಗಿ ಬಳಕೆಯಾಗುತ್ತಿವೆ.
ಇದೀಗ ಬಹುಭಾಷಾ ನಟ ಪ್ರಕಾಶ್ ರೈ ಇಂಥಾ ಸಾಮಾಜಿಕ ಜಾಲತಾಣಗಳ ಕೆಟ್ಟ ಮನಸ್ಥಿತಿಯ ವಿರುದ್ಧ ಜಸ್ಟ್ ಆಸ್ಕಿಂಗ್ ಎಂಬ ವಿನೂತನ ಸಾಮಾಜಿಕ ಅಭಿಯಾನ ಆರಂಭಿಸಿದ್ದಾರೆ. ಈ ಮೂಲಕ ಪ್ರಸ್ತುತ ದೇಶವ್ಯಾಪಿ ಹರಡಿಕೊಂಡಿರೋ ಆನ್‌ಲೈನ್ ವಿಷದ ಬಗ್ಗೆ ಬಹಿರಂಗ ಚರ್ಚೆಗೂ ವೇದಿಕೆ ಸಿಕ್ಕಂತಾಗಿದೆ.
ಪ್ರಕಾಶ್ ರೈ ಎಂದಿನ ನಿರ್ಭಿಢೆಯ ಶೈಲಿಯಲ್ಲಿಯೇ ವಾಸ್ತವವನ್ನು ತೆರೆದಿಟ್ಟಿದ್ದಾರೆ. ಜಾತಿ, ಧರ್ಮ ಮತ್ತು ರಾಜಕೀಯ ಪಕ್ಷಗಳಾಚೆಗೆ ಆಲೋಚಿಸಬೇಕಾದ ಮಾನವೀಯ ಅಂಶಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಪ್ರಕಾಶ್ ರೈ ಗೌರಿ ಲಂಕೇಶ್ ಹತ್ಯೆ ವಿಚಾರದಲ್ಲಿ ಮಾತಾಡಿದಾಗ, ಮೋದಿಯನ್ನು ಪ್ರಶ್ನೆ ಮಾಡಿದಾಗ ಒಂದು ಬಣದ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಎಂತೆಂಥಾ ಅಸಹ್ಯಗಳನ್ನು ಕಾರಿಕೊಂಡರೆಂಬುದು ಕಣ್ಣೆದುರಿನ ಸತ್ಯ. ಇದರ ಬಗೆಗೂ ಪ್ರತಿಕ್ರಿಯಿಸಿರೋ ಪ್ರಕಾಶ್ ರೈ `ನಾನು ಸರ್ಕಾರವನ್ನು ಪ್ರಶ್ನೆ ಮಾಡಿದರೆ ನನ್ನ ತಾಯಿಯ ಧರ್ಮದ ಬಗ್ಗೆ ಕೆದಕುತ್ತಾರೆ ಅನ್ನುವ ಮೂಲಕ ಈವತ್ತಿನ ಆನ್‌ಲೈನ್ ಸ್ವೇಚ್ಚಾಚಾರದ ಬಗೆಗೂ ಚರ್ಚೆ ಹುಟ್ಟು ಹಾಕಿದ್ದಾರೆ.
ಯಾರ್ಯಾರೋ ಹೀಗೆ ಸಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ನಿಂದನೆಯ ಹಾದಿ ಹಿಡಿದರೆ ಆಯಾ ಪಕ್ಷದ ಮುಖಂಡರು ಅದಕ್ಕೆ ಬ್ರೇಕ್ ಹಾಕಬೇಕು. ಆದರೆ ಇತ್ತಿಚೆಗೇಕೋ ರಾಜಕೀಯ ಪಕ್ಷಗಳು ಮನುಷ್ಯತ್ವವಿಲ್ಲದ ಚಟುವಟಿಕೆಗಳನ್ನೇ ಬೆಂಬಲಿಸುತ್ತಿರುವಂತಿದೆ. ಈ ಮನಸ್ಥಿತಿ ತೊಲಗದೇ ಹೋದರೆ ಮನಸುಗಳ ನಡುವೆಯೇ ಸಲೀಸಾಗಿ ತುಂಬಲಾರದ ಕಂದಕ ಸೃಷ್ಟಿಯಾಗೋದನ್ನು ಯಾರೂ ಅಲ್ಲಗಳೆಯುವಂತಿಲ್ಲ.
ನರೇಂದ್ರ ಮೋದಿಯಾಗಲಿ, ಮನಮೋಹನ್ ಸಿಂಗ್ ಆಗಲಿ, ಪ್ರಧಾನಿ ಸೀಟಲ್ಲಿ ಕೂತವರನ್ನು ಪ್ರಶ್ನೆ ಮಾಡೋದು ನಿಷಿದ್ದವಲ್ಲ. ಅದು ನಿಷಿದ್ದ ಎಂದಾದರೆ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ. ಹಾಗೆಯೇ ರಾಜಕೀಯ ಸೇರಿದಂತೆ ಯಾವುದೇ ಸಾಮಾಜಿಕ ಭಿನ್ನಾಭಿಪ್ರಾಯಗಳಲ್ಲಿ ವೈಯಕ್ತಿಕ ನಿಂದನೆ ಸರಿಯಾದುದಲ್ಲ. ಜಸ್ಟ್ ಆಸ್ಕಿಂಗ್ ಅಭಿಯಾನದ ಮೂಲಕ ಪ್ರಕಾಶ್ ರೈ ಇಂಥಾದ್ದೊಂದು ಗಂಭೀರ ಆಯಾಮದ ಚರ್ಚೆಗೆ ಚಾಲನೆ ನೀಡಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image