One N Only Exclusive Cine Portal

ಸರ್ಕಾರಿ ಕೆಲಸ ದೇವರ ಕೆಲಸ ಚಿತ್ರದ ಆಡಿಯೋ ಲಾಂಚ್!

ಅದ್ದೂರಿ ಚಿತ್ರಗಳಿಗೆ ಹೆಸರುವಾಸಿಯಾಗಿರೋ ಅಶ್ವಿನಿ ರಾಂಪ್ರಸಾದ್ ಬಹು ಕಾಲದ ನಂತರ ನಿರ್ಮಾಣ ಮಾಡಿರುವ ಚಿತ್ರ `ಸರ್ಕಾರಿ ಕೆಲಸ ದೇವರ ಕೆಲಸ. ರವೀಂದ್ರ ನಿರ್ದೇಶನದ ಈ ಚಿತ್ರ ಇದುವರೆಗೂ ಥರ ಥರದಲ್ಲಿ ಸುದ್ದಿ ಮಾಡುತ್ತಾ, ನಿರೀಕ್ಷೆ ಕೆರಳಿಸುತ್ತಾ ಬಂದಿದೆ. ಇದೀಗ ಈ ಚಿತ್ರದ ಹಾಡುಗಳು ಲೋಕಾರ್ಪಣೆಗೊಂಡಿವೆ.

ಕರ್ನಾಟಕದಲ್ಲಿ ದಶಕಗಳ ಹಿಂದೆಯೇ ಛಾಪು ಮೂಡಿಸಿದ್ದ ಅಶ್ವಿನಿ ಆಡಿಯೋ ಕಂಪೆನಿಯ ಮಾಲೀಕರು ರಾಮಪ್ರಸಾದ್. ಭಾವ ಗೀತೆ, ಭಕ್ತಿಗೀತೆ, ಚಿತ್ರ ಗೀತೆಯೂ ಸೇರಿದಂತೆ ಚೆಂದದ ಹಾಡುಗಳು ಈ ಸಂಸ್ಥೆಯಿಂದ ಹೊರ ಬಂದಿವೆ. ಹೀಗೆ ವರ್ಷಾಂತರಗಳಿಂದ ಹಾಡುಗಳ ಸಾಂಗತ್ಯದಲ್ಲಿರುವ ರಾಂಪ್ರಸಾದ್ ಅವರಿಗೆ ಜನ ಯಾವ ಥರದ ಹಾಡುಗಳನ್ನು ಇಷ್ಟ ಪಡುತ್ತಾರೆ, ಯಾವ ರೀತಿಯ ಹಾಡುಗಳನ್ನು ನಿರೀಕ್ಷೆ ಮಾಡುತ್ತಾರೆ ಎಂಬುದೆಲ್ಲಾ ಪಕ್ಕಾ ಗೊತ್ತಿದೆ.
ವ್ಯವಹಾರದಾಚೆಗೂ ಸಂಗೀತವನ್ನು ಬಹುವಾಗಿ ಪ್ರೀತಿಸುವ ರಾಂಪ್ರಸಾದ್ ಅವರು ಸರ್ಕಾರಿ ಕೆಲಸ ದೇವರ ಕೆಲಸ ಚಿತ್ರಕ್ಕಾಗಿ ತಾವೇ ಖುದ್ದಾಗಿ ಹಾಡುಗಳನ್ನು ಚೆಂದಗೆ ರೂಪಿಸಿದ್ದಾರೆ. ಈ ಚಿತ್ರದ ಶೀರ್ಷಿಕೆ ಗೀತೆಯನ್ನೂ ಕೂಡಾ ಚಂದನ್ ಶೆಟ್ಟಿ ಕಡೆಯಿಂದ ಮಾಡಿಸಿದ್ದಾರೆ. ಈ ಹಾಡಿಗೆ ಸ್ಬತಃ ಸಂಗೀತ ಸಂಯೋಜಿಸಿ, ತಾವೇ ಹಾಡಿ ಅಭಿನಯವನ್ನೂ ಮಾಡಿದ್ದಾರೆ ಚಂದನ್ ಶೆಟ್ಟಿ. ಈ ಹಿಂದೆ ಚಂದನ್ ಶೆಟ್ಟಿ ಹಾಡುಗಳ ಆಲ್ಬಂ ಒಂದನ್ನುಜ ಮಾಡಿದ್ದಾಗ ಅದನ್ನು ಅಶ್ವಿನಿ ರಾಂಪ್ರಸಾದ್ ಅವರೇ ರೂಪಿಸಿಕೊಟ್ಟಿದ್ದರಂತೆ. ಅದಾದ ನಂತರ ಅವರ ಕಡೆಯಿಂದ ಚಂದನ್‌ಗೆ ಬುಲಾವು ಬಂದಿದ್ದು ಈ ಚಿತ್ರದ ಟೈಟಲ್ ಸಾಂಗಿಗಾಗಿ. ಅದನ್ನು ಚಂದನ್ ರ್‍ಯಾಪ್ ಶೈಲಿಯಲ್ಲಿ ಚೆಂದಗೆ ತಯಾರು ಮಾಡಿದ್ದಾರೆ.
ಅಶ್ವಿನಿ ರಾಂಪ್ರಸಾದ್ ಅವರ ಮನದಿಂಗಿತಕ್ಕೆ ತಕ್ಕುದಾಗಿ ಸಾಹಿತ್ಯ ಒದಗಿಸಿರುವವರು ವಿ ನಾಗೇಂದ್ರ ಪ್ರಸಾದ್. ಇನ್ನುಳಿದಂತೆ ರಾಂಪ್ರಸಾದ್ ಅರ್ಜುನ್ ಜನ್ಯಾ ಅವರ ಪಕ್ಕದಲ್ಲೇ ಕೂತು ಹಾಡುಗಳಿಗೆ ಟ್ಯೂನು ಹಾಕಿಸಿದ್ದಾರೆ. ಪಾತ್ರಗಳಿಗೆ ಸರಿ ಹೊಂದುವಂಥವರಿಂದಲೇ ಹಾಡಿಸಿದ್ದಾರೆ. ಸ್ಟುಡಿಯೋದಲ್ಲಿ ಹಾಡುಗಳನ್ನು ಕೇಳಿದವರೆಲ್ಲ ಮೆಚ್ಚಿಕೊಂಡಿದ್ದಾರಂತೆ. ಅಷ್ಟಕ್ಕೂ ರಾಂಪ್ರಸಾದ್ ನಿರ್ಮಾಣ ಮಾಡಿದ್ದ ಈ ಹಿಂದಿನ ಚಿತ್ರಗಳ ಹಾಡುಗಳೂ ಸೂಪರ್ ಹಿಟ್ಟಾಗಿದ್ದವು. ಸರ್ಕಾರಿ ಕೆಲಸ ದೇವರ ಕೆಲಸದ ಹಾಡುಗಳೂ ಅಂಥಾದ್ದೇ ದಾಖಲೆ ಬರೆಯುತ್ತವೆ ಎಂಬ ಭರವಸೆ ಚಿತ್ರ ತಂಡದಲ್ಲಿದೆ.

Leave a Reply

Your email address will not be published. Required fields are marked *


CAPTCHA Image
Reload Image