One N Only Exclusive Cine Portal

ಸಾತ್ವಿಕಾಗೆ ನಟನೆಯೇ ಸರ್ವಸ್ವ!


ಕಲೆಯೆಡಗಿನ ಅಸಲಿ ಆಸಕ್ತಿ ಇದ್ದಿದ್ದೇ ಹೌದಾದರೆ ಅದು ಎಲ್ಲಿದ್ದವರನ್ನೂ ತನ್ನ ತೆಕ್ಕೆಗೆ ಸೆಳೆದುಕೊಳ್ಳುತ್ತವೆ. ಐಟಿ ಕಂಪೆನಿಯೊಂದರಲ್ಲಿ ಚೆಂದದ ಕೆಲಸ ಮಾಡುತ್ತಲೇ ಮಾಡೆಲಿಂಗ್ ಕ್ಷೇತ್ರಕ್ಕೆ ಅಡಿಯಿರಿಸಿ, ಅಲ್ಲಿಂದ ಸೀದಾ ಚಿತ್ರರಂಗಕ್ಕೆ ಬಂದು ಹೀರೋಯಿನ್ ಆಗಿ ಗುರುತಿಸಿಕೊಂಡಿರೋ ಸಾತ್ವಿಕಾ ಅಪ್ಪಯ್ಯ ಈ ಮಾತಿಗೆ ತಾಜಾ ಉದಾಹರಣೆಯಾಗಬಲ್ಲವರು!

ಇತ್ತೀಚೆಗೆ ತೆರೆ ಕಂಡಿದ್ದ ಸರ್ವಸ್ವ ಚಿತ್ರದ ನಾಯಕಿಯಾಗಿ ಭರವಸೆ ಹುಟ್ಟಿಸಿರೋ ಸಾತ್ವಿಕಾ ಅಲ್ಲಿ ಎರಡು ಶೇಡ್‌ಗಳಿರೋ ಪಾತ್ರದಲ್ಲಿ ಅಭಿನಯಿಸಿದ್ದರು. ನಟನೆಯಲ್ಲಿ ಪ್ರೇಕ್ಷಕರ ಮೆಚ್ಚುಗೆಯನ್ನೂ ಗಳಿಸಿಕೊಂಡಿದ್ದಾರೆ. ಬಬ್ಲಿ ಲುಕ್ಕಿನ ಕಾಲೇಜು ಹುಡುಗಿಯ ಪಾತ್ರವೂ ಸೇರಿದಂತೆ ಎರಡೂ ಶೇಡ್‌ಗಳಲ್ಲಿ ಚೆಂದಗೆ ನಟಿಸಿರೋ ಸಾತ್ವಿಕಾರನ್ನು ಇದೀಗ ಅವಕಾಶಗಳು ಹುಡುಕಿ ಬರಲಾರಂಭಿಸಿವೆ. ಒಳ್ಳೆ ಕಥೆ ಹೊಂದಿರೋ ಅವಕಾಶಗಳನ್ನು ಮಾತ್ರವೇ ಒಪ್ಪಿಕೊಳ್ಳೋ ಮನಸ್ಥಿತಿಯ ಇವರಿಗೆ ಹಲವಾರು ಅವಕಾಶಗಳು ಬಂದಿದ್ದರೂ ಕನ್ನಡದಲ್ಲಿ ಸದ್ಯ ಹೊಸಬರ ತಂಡದ ಒಂದು ಚಿತ್ರಕ್ಕೆ ಒಪ್ಪಿಗೆ ಸೂಚಿಸಿದ್ದಾರಂತೆ. ಇದಲ್ಲದೆ ಒಂದು ತಮಿಳು ಚಿತ್ರದಲ್ಲೂ ಸಾತ್ವಿಕಾ ನಟಿಸೋ ಸೂಚನೆಗಳಿವೆ.
ಬೇರೆ ಬಾಷೆಗಳ ಕಥೆ ಏನೇ ಇದ್ದರೂ ಕನ್ನಡವನ್ನು ಮೊದಲ ಆಧ್ಯತೆಯಾಗಿಸಿಕೊಂಡಿರೋ ಸಾತ್ವಿಕಾ ಆರಂಭದಲ್ಲಿ ಐಟಿ ಕಂಪೆನಿ ಒಂದರಲ್ಲಿ ಕೆಲಸ ಮಾಡುತ್ತಿದ್ದವರು. ಆ ಕೆಲಸದ ಜೊತೆಗೇ ಮಾಡೆಲಿಂಗ್ ಕ್ಷೇತ್ರಕ್ಕೆ ಅಡಿಯಿರಿಸಿ ಆ ಮೂಲಕವೇ ಚಿತ್ರರಂಗದತ್ತ ನಡೆದು ಬಂದವರು. ಮಾಡೆಲಿಂಗ್ ಜಗತ್ತಲ್ಲಿ ಛಾಪು ಮೂಡಿಸೋ ಮೂಲಕವೇ ಗಮನ ಸೆಳೆದಿದ್ದ ಇವರಿಗೆ ಚಿತ್ರದಲ್ಲಿ ನಟಿಸೋ ಸಾಕಷ್ಟು ಆಫರ್‌ಗಳು ಬಂದಿದ್ದವು. ಆದರೆ ಒಳ್ಳೇ ಕಥೆಗಳು ಬಂದರೆ ಒಪ್ಪಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದ ಸಾತ್ವಿಕಾ ನಾಯಕಿಯಾಗಿ ನಟಿಸಿರೋ ಮೊದಲ ಚಿತ್ರ ಲೈಫ್ ಸೂಪರ್.
ಆ ನಂತರ ಸಿಕ್ಕ ಸರ್ವಸ್ವ ಚಿತ್ರದಲ್ಲಿಯೂ ಅವರದ್ದು ನೆನಪಲ್ಲುಳಿಯುವಂಥಾ ಪಾತ್ರ. ಅದೊಂಥರಾ ಡಿಫರೆಂಟ್ ಕ್ಯಾರೆಕ್ಟರ್. ಈ ಚಿತ್ರದ ಟೈಟಲ್ ಸಾಂಗ್ ಅಂತೂ ಭಾರೀ ಜನಪ್ರಿಯತೆ ಪಡೆದುಕೊಂಡಿದೆ. ಅದರಲ್ಲಿ ಸಾತ್ವಿಕಾರ ಲುಕ್, ಅಭಿನಯ ಪ್ರೇಕ್ಷಕರ ಗಮನ ಸೆಳೆದಿದೆ.
ಹೀಗೆ ಹಂತ ಹಂತವಾಗಿ ಬೆಳೆದು ಬಂದಿರೋ ಸಾತ್ವಿಕಾ ಇದೀಗ ಕನ್ನಡ ಮಾತ್ರವಲ್ಲದೆ ತಮಿಳು ಚಿತ್ರದಲ್ಲೂ ಬ್ಯುಸಿ. ಆದರೆ ಕನ್ನಡದಲ್ಲಿ ಥರ ಥರದ ಪಾತ್ರ ಮಾಡಬೇಕೆಂಬ ಕನಸು ಹೊಂದಿರೋ ಸಾತ್ವಿಕಾರ ಮುಂದೆ ಸರ್ವಸ್ವ ಚಿತ್ರದ ನಂತರ ಅವಕಾಶಗಳ ಬಾಗಿಲು ತೆರೆದುಕೊಂಡಿದೆ.

Leave a Reply

Your email address will not be published. Required fields are marked *


CAPTCHA Image
Reload Image