One N Only Exclusive Cine Portal

ಸಾಧಕರ ಸೀಟಿನಲ್ಲಿ ಕೂರಲು ಅವಸರವೇನಿತ್ತು?

ರಕ್ಷಿತ್ ಶೆಟ್ಟಿಗೆ ಪ್ರೇಕ್ಷಕರ ಪ್ರಶ್ನೆ! ರಮೇಶ್ ಅರವಿಂದ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಬಗ್ಗೆ ಮೊದಲ ಸಲ ಅಪಸ್ವರಗಳೆದ್ದಿವೆ. ಈ ಕಾರ್ಯಕ್ರಮದ ಮೊದಲ ಮತ್ತು ಎರಡನೇ ಸೀಜನ್ ಬೇಗನೆ ಮುಗಿದಾಗ ಇನ್ನೂ ಒಂದಷ್ಟು ಎಪಿಸೋಡುಗಳಿರಬೇಕಿತ್ತು ಅಂತ ಕೊಟ್ಯಂತರ ಜನ ಅಭಿಪ್ರಾಯಪಟ್ಟಿದ್ದರು. ಆ ನಂತರ ಈ ಬಾರಿ ಮೂರನೇ ಆವೃತ್ತಿ ಬಂದಾಗ ಜನ ಮುಗಿ ಬಿದ್ದು ಮತ್ತದೇ ಪ್ರೀತಿಯಿಂದ ಕಾರ್ಯಕ್ರಮ ನೋಡುತ್ತಿದ್ದಾರೆ. ಆದರೀಗ ಈ ಕಾರ್ಯಕ್ರಮವನ್ನು ಹುಚ್ಚು ಹತ್ತಿಸಿಕೊಂಡು ಪ್ರೀತಿಸುವವರ ನಡುವೆಯೇ ಒಂದು ಅಸಮಾಧಾನದ ಅಲೆ ಏಳಲು ಕಾರಣವಾಗಿರೋದು ನಟ ರಕ್ಷಿತ್ ಶೆಟ್ಟಿ! ರಕ್ಷಿತ್ ಶೆಟ್ಟಿ ಸಾಧಕರ ಸೀಟಿನಲ್ಲಿ ಕೂರುವ ಕ್ಲೂ ಸಿಕ್ಕಾಕ್ಷಣವೇ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಂಗ್ಯಗಳು ಹರಿದಾಡಲಾರಂಭಿಸಿದ್ದವು. ಈ ಕಾರ್ಯಕ್ರಮ ಪ್ರಸಾರವಾಗುತ್ತಿದ್ದಂತೆಯೇ ಅದರ ಕಾವು ಮತ್ತಷ್ಟು ಏರಿಕೊಂಡಿದೆ. ಇಂಥಾ ತಕರಾರುಗಳೆಲ್ಲವೂ ‘ರಕ್ಷಿತ್ ಶೆಟ್ಟಿ ಸಾಧಕರ ಸೀಟಿನಲ್ಲಿ ಕೂತಿದ್ದಕ್ಕೆ ಯಾವ ಹೊಟ್ಟೆಕಿಚ್ಚೂ ಇಲ್ಲ, ಅವರಲ್ಲಿ ಕೂರಬಾರದೆಂದೇನೂ ಅಲ್ಲ. ಆದರೆ ಅದಕ್ಕಿನ್ನೂ ಭಾಳಾ ಸಮಯ ಇತ್ತು ಎಂಬುದನ್ನಷ್ಟೇ ಸ್ಪಷ್ಟವಾಗಿ ಧ್ವನಿಸುತ್ತಿದೆ. ನಿಜ, ರಕ್ಷಿತ್ ಸಿಂಪಲ್ಲಾಗೊಂದ್ ಲವ್ ಸ್ಟೋರಿ, ಉಳಿದವರು ಕಂಡಂತೆ ಚಿತ್ರದ ಮೂಲಕ ಭಿನ್ನವಾದ ಚಿತ್ರ ಕೊಟ್ಟಿದ್ದಾರೆ. ಅವರ ರಿಕ್ಕಿ ಸಾಧಾರಣವಾದೊಂದು ಗೆಲುವು ದಾಖಲಿಸಿದರೆ ಅವರು ಇತ್ತೀಚೆಗೆ ತೆರೆ ಕಂಡ ಕಿರಿಕ್ ಪಾರ್ಟಿ ಮೂಲಕ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದಿದ್ದಾರೆ. ಆದರೆ ಸಾಧನೆಯೊಂದಕ್ಕೆ ಇವಿಷ್ಟೇ ಮಾನದಂಡಗಳಾ? ಈ ಹಿಂದೆ ಸಾಧಕರ ಸೀಟಿನಲ್ಲಿ ಕೂತವರ ಬದುಕನ್ನು ಕಷ್ಟಪಟ್ಟು ಒಂದೆರಡು ಎಪಿಸೋಡಿಗೆ ಒಗ್ಗಿಸಲಾಗಿತ್ತು. ಆದರೆ ರಕ್ಷಿತ್ ಕಾರ್ಯಕ್ರಮ ಕಷ್ಟಪಟ್ಟು ಒಂದು ಎಪಿಸೋಡಿಗೆ ಹಿಗ್ಗಿಸಿದ್ದು ಸ್ಪಷ್ಟವಾಗಿಯೇ ಕಾಣಿಸುವಂತಿತ್ತು. ಇದರ ತಾತ್ಪರ್ಯವಿಷ್ಟೇ; ರಕ್ಷಿತ್ ಶೆಟ್ಟಿ ಸಾಗಿ ಬಂದಿರುವ ಹಾದಿ ತೀರಾ ಚಿಕ್ಕದು, ಸಾಗಬೇಕಿರೋ ಹಾದಿ ಫರ್ಲಾಂಗು ದೂರವಿರೋವಾಗಲೇ ಅರ್ಜೆಂಟಾಗಿ ಹೋಗಿ ಸಾಧಕರ ಸೀಟಲ್ಲಿ ಕೂತೆದ್ದು ಬರುವಂಥಾ ಅವಸರವೇನಿತ್ತೋ ಭಗವಂತನೇ ಬಲ್ಲ! ಅಷ್ಟಕ್ಕೂ ಈ ವಾಹಿನಿಯ ಮಂದಿ ಅದೇಕೆ ಸಾಧಕರ ಆಯ್ಕೆಯಲ್ಲಿ ಸೂಕ್ಷ್ಮತೆ ಕಳೆದುಕೊಳ್ಳುತ್ತಿದ್ದಾರೆಂದು ಸಾಮಾನ್ಯ ಪ್ರೇಕ್ಷಕರೂ ಅಸಮಾಧಾನಗೊಂಡಿದ್ದಾರೆ. ಕರ್ನಾಟಕದಲ್ಲೇನು ಸಾಧಕರಿಗೆ ಬರವಿದೆಯಾ? ನಾಟಕ, ರಂಗಭೂಮಿ, ಯಕ್ಷಗಾನ, ಚಿತ್ರರಂಗ, ಮಾಧ್ಯಮ, ಹೋರಾಟ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ದಾಖಲಾಗಲೆ ಬೇಕಿರುವಂಥಾ ಸಾಧನೆ ಮಾಡಿದವರು ಬಹಳಷ್ಟಿದ್ದಾರೆ. ಹೀಗಿರೋವಾಗ ಕಲ್ಲು ಮುಳ್ಳಿನ ಹಾದಿ ದಾಟಿ ಸಾಧನೆ ಮಾಡಿದವರನ್ನು ಬದಿಗೊತ್ತಿ, ಆ ಹಾದಿಯಲ್ಲಿ ಬೆರಳೆಣಿಕೆಯ ಮೈಲಿಗಲ್ಲು ದಾಟಿದವರನ್ನೇ ಸಾಧಕರೆಂದು ಬಿಂಬಿಸಿದರೆ ಖಂಡಿತವಾಗಿಯೂ ಕಾರ್ಯಕ್ರಮ ಕಸುವು ಕಳೆದುಕೊಳ್ಳುತ್ತದೆ. ಸುಮ್ಮನೆ ಅನುಭವಗಳನ್ನು ಮೂಟೆ ಕಟ್ಟಿ ಹೆಗಲಿಗಿಟ್ಟರೆ ರಕ್ಷಿತ್ ಶೆಟ್ಟಿಯಂಥಾ ಎಳೆಯರು ಎರಡು ಹೆಜ್ಜೆ ಎತ್ತಿಡಲೂ ಪ್ರಯಾಸ ಪಡುವಂಥಾ ಅನುವಭದ ಗಣಿಗಳು, ಸಾಧಕರು ಕರ್ನಾಟಕದಲ್ಲಿದ್ದಾರೆ. ಇಂತಾ ಸಂದರ್ಭದಲ್ಲಿ ಪತ್ರಕರ್ತರೊಬ್ಬರು ಫೇಸ್ ಬುಕ್ಕಲ್ಲಿ ಬರೆದ ‘ರಕ್ಷಿತ್ ಶೆಟ್ಟಿಯನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಕರೆದದ್ದು ತಪ್ಪಲ್ಲ, ಇದನ್ನೊಪ್ಪಿ ರಕ್ಷಿತ್ ಹೋಗಿದ್ದು ತಪ್ಪು ಎಂಬ ಬರಹ ವಾಸ್ತವವನ್ನು ಧ್ವನಿಸುವಂತಿದೆ!

Leave a Reply

Your email address will not be published. Required fields are marked *


CAPTCHA Image
Reload Image