One N Only Exclusive Cine Portal

ಸಿನಿಮಾ ಹುಚ್ಚು-ಕಿಡ್ನಾಪ್ ಸ್ಕೆಚ್ಚು!

Poonja-1ಈ ಸಿನಿಮಾ ಹುಚ್ಚೆಂಬುದು ಎಂತೆಂಥಾ ಹುಚ್ಚುತನ ಸೃಷ್ಟಿಸುತ್ತದೆಂಬುದನ್ನು ನಿಖರವಾಗಿ ಅಂದಾಜಿಸೋದು ಕಷ್ಟ. ಇದುವರೆಗೂ ಇಂಥಾ ಹತ್ತಾರು ವೆರೈಟಿಗಳ ಹುಚ್ಚಾಟ, ಅನಾಹುತಗಳು ನಡೆದು ಹೋಗಿವೆ. ಇದೀಗ ನಡೆದಿರುವುದು ಮಾತ್ರ ಅದೆಲ್ಲವುಗಳಲ್ಲಿ ಕೊಂಚ ಡಿಫರೆಂಟ್ ಸ್ಟೋರಿ. ಹೀರೋ ಆಗಬೇಕೆಂಲಬ ಹುಚ್ಚೊಂದನ್ನೇ ಸಾಕಿಕೊಂಡು ತಗಡು ಸಿನಿಮಾವೊಂದನ್ನು ಮಾಡಿ ಕೈ ಬರಿದು ಮಾಡಿಕೊಂಡ ತಲೆ ಮಾಸಿದವನೊಬ್ಬ ಹಣವಂತನ ಮಗನನ್ನು ಅಪಹರಿಸಲು ಹೋಗಿ ಗ್ಯಾಂಗಿನ ಸಮೇತವಾಗಿ ತಗುಲಿಕೊಂಡಿದ್ದಾನೆ. ಇಂಟರೆಸ್ಟಿಂಗ್ ವಿಚಾರವೆಂದರೆ, ಹೀಗೆ ತಗುಲಿಕೊಂಡ ಗ್ಯಾಂಗಿಗೆ ನಟಿ ಶುಭಾ ಪೂಂಜಾಳ ಮಾಜಿ ಕಾರ್ ಡ್ರೈವರ್ ಮಾಸ್ಟರ್ ಮೈಂಡ್‌ನಂತೆ ಕೆಲಸ ಮಾಡಿ ಆತನೂ ಅಂದರ್ ಆಗಿದ್ದಾನೆ!
ಅರ್ಧದಲ್ಲೇ ನಿಂತು ಹೋಗಿದ್ದ ಛಾಲೆಂಜರ್ ಎಂಬ ತಗಡು ಸಿನಿಮಾವೊಂದರ ಹೀರೋ ಮುನಿಯಪ್ಪ, ಹಸನ್ ಡೋಂಗ್ರಿ, ಜಗದೀಶ್, ಜಗನ್ನಾಥ್ ಹಾಗೂ ಮನೋಜ್ ಗ್ಯಾಂಗನ್ನು ಚಿಕ್ಕಜಾಲ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನವೀನ್ ಆಂಡ್ ಟೀಮ್ ಲೀಲಾಜಾಲವಾಗಿ ಬಲೆಗೆ ಕೆಡವಿಕೊಂಡಿದೆ. ಹೀಗೆ ತಗುಲಿಕೊಂಡಿರುವ ಹಸನ್ ಡೋಂಗ್ರಿ ಶುಭಾ ಪೂಂಜಾಳ ಕಾರಿಗೆ ಡ್ರೈವರ್ ಆಗಿದ್ದವನು. ಮೂರು ವರ್ಷಗಳ ಕಾಲ ಶುಭಾಗೆ ಡ್ರೈವರ್ ಆಗಿದ್ದ ಹಸನ್ ಆ ವಲಯದಲ್ಲಿ ಒಂದಷ್ಟು ಕಾಂಟ್ಯಾಕ್ಟುಗಳನ್ನಿಟ್ಟುಕೊಂಡಿದ್ದ. ಬಣ್ಣದ ಲೋಕದ ಸಮೀಪಕ್ಕೆ ಬಂದ ಇವನಿಗೆ ತಾನೂ ಸಿನಿಮಾ ರಂಗದಲ್ಲಿ ಏನಾದರೂ ಮಾಡಿ ಮಿಂಚಬೇಕೆಂಬ ಆಸೆ ಹುಟ್ಟಿಕೊಂಡಿತ್ತು. ಇಂಥವನು ಡಬ್ಬಾದಲ್ಲೇ ಕೊಳೆಯುತ್ತಿರುವ ಬೀರ ಎಂಬ ಸಿನಿಮಾದಲ್ಲಿ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದ ಮುನಿಯಪ್ಪನ ಸ್ನೇಹ ವಲಯಕ್ಕೆ ಎಂಟ್ರಿ ಕೊಟ್ಟಿದ್ದ. ಆ ಮೂಲಕವೇ ಮಹಾ ಅನಾಹುತವೊಂದಕ್ಕೆ ಚಾಲನೆ ಸಿಕ್ಕಂತಾಗಿತ್ತು!
ಈ ಮುನಿಯಪ್ಪ ಹುಟ್ಟಾ ಫ್ರಾಡ್ ಆಸಾಮಿ. ತಾನು ಹೀರೋ ಆಗಬೇಕೆಂಬ ಏಕ ಮಾತ್ರ ಗುರಿಯೊಂದಿಗೆ ಅಡ್ಡ ಹಾದಿಯಲ್ಲಿಯೇ ಕಾಸು ಮಾಡಲು ನಿಂತಿದ್ದ ಈತ ಈ ಹಿಂದೆ ಮಾಜೀ ಶಾಸಕರ ಮಗಳನ್ನು ಪಟಾಯಿಸಿ ಮದುವೆಯಾಗಿದ್ದ. ಈತ ಆ ಹುಡುಗಿಯನ್ನು ಮದುವೆಯಾಗಿದ್ದೇ ಕಾಸು ಪೀಕುವ ಉದ್ದೇಶದಿಂದ. ಮದುವೆಯಾಗಿ ಪ್ರಸ್ಥ ಮುಗಿಯೋದರೊಳಗೆ ಕಾಸಿಗಾಗಿ ಪೀಡಿಸಲಾರಂಭಿಸಿದ ಈ ಪೀಡೆಗೆ ಆಕೆ ಎರಡು ತಿಂಗಳಲ್ಲಿಯೇ ಡಿವೋರ್ಸ್ ಕೊಟ್ಟು ಬಚಾವಾಗಿದ್ದಳು. ಆಕೆ ಹೋದೇಟಿಗೆ ಎರಡನೇ ಮದುವೆಯಾದ ಮುನಿಯಪ್ಪನಿಗೆ ಹೀರೋ ಆಗುವ ತೆವಲು ಬತ್ತಿರಲಿಲ್ಲ. ಆದ್ದರಿಂದಲೇ ಅದು ಹೇಗೋ ಬೀರ ಸಿನಿಮಾದ ಸೆಟ್ಟಿಗೆ ತೂರಿಕೊಂಡಿದ್ದ. ಅಲ್ಲಿಯೇ ಹಸನ್ ಡೋಂಗ್ರಿಯ ಪರಿಚಯವಾಗಿತ್ತು. ಡಬ್ಬಾ ಕಥೆಯೊಂದನ್ನು ಮಾಡಿಕೊಂಡು ಅಲೆದಾಡಿದರೆ ಯಾವ ಪ್ರಡ್ಯೂಸರೂ ಸಿಗದಿದ್ದಾಗ ಕಾಸು ಬಾಚಲು ಈ ಜೋಡಿ ಮಾಡಿದ್ದು ಪಕ್ಕಾ ಫ್ರಾಡ್ ಕೆಲಸವನ್ನು!
ಈ ಮುನಿಯಪ್ಪ ತನ್ನ ಸಿನಿಮಾ ಹುಚ್ಚಿಗೆ ಹಣ ಹೊಂಚಲು ಕೆಲಸಕ್ಕಾಗಿ ಅಂಡಲೆಯುತ್ತೀದ್ದ ಬಡಪಾಯಿ ನಿರುದ್ಯೋಗಿ ಹುಡುಗರನ್ನು ವಂಚಿಸುವ ಕೆಲಸಕ್ಕಿಳಿದಿದ್ದ. ಕೆಲಸಕ್ಕಾಗಿ ಅಲೆದಲೆದು ಸುಸ್ತಾದ ಯುವಕರನ್ನು ಮಾತಾಡಿಸಿ ಸಲೀಸಾಗಿ ಂತಿeಷ್ಠಿತ ಕಂಪೆನಿಗಳಲ್ಲಿ ಕೆಲಸ ಕೊಡಿಸೋದಾಗಿ ಹೇಳಿ ಸಾವಿರಗಟ್ಟಲೆ ಕಾಸು ಪೀಕಲಾರಂಭಿಸಿದ್ದ. ಬೇರೆ ಬೇರೆ ಏರಿಯಾಗಳಲ್ಲಿ ಇಂಥಾ ದಂಧೆ ನಡೆಸಿ ಕಲೆಕ್ಷನ್ನು ಆದೇಟಿಗೆ ಅಲ್ಲಿಂದ ಕಾಲ್ಕೀಳುತ್ತಿದ್ದ. ಇಂಥವನು ಈ ದಂಧೆಯಿಂದಲೇ ಒಂದಷ್ಟು ಕಾಸು ಕೂಡಿಸಿ, ಅವರಿವರಿಗೆ ಮಸ್ಕಾ ಹೊಡೆದು ಹಸನ್ ಜೊತೆ ಸೇರಿ ಚಾಲೆಂಜರ್ ಅಂತೊಂದು ಸಿನಿಮಾ ಮಾಡಿ ಹೀರೋ ಆಗಿಬಿಟ್ಟಿದ್ದ. ಆದರೆ ಚಿತ್ರವಿನ್ನೂ ಅರ್ಧ ಮುಗಿಯುವಾಗಲೇ ಹಣವೆಲ್ಲ ಖರ್ಚಾಗಿತ್ತು. ಹೇಗಾದರೂ ಮಾಡಿ ಚಿತ್ರವನ್ನು ಪೂರ್ಣಗೊಳಿಸಬೇಕೆಂಬ ಉದ್ದೇಶದಿಂದ ಇವರು ಹೊಸೆದದ್ದು ಕಿಡ್ನಾಪಿಂಗ್ ಪ್ಲಾನು!
ಈ ಹಿನ್ನೆಲೆಯಲ್ಲಿ ಕೆಲ ಉದ್ಯಮಿಗಳ ಅಪಹರಣಕ್ಕೆ ಯತ್ನಿಸಿ ಸಾಕಷ್ಟು ಸಲು ಮುನಿಯನ ಗ್ಯಾಂಗು ಪರಾಭವಗೊಂಡಿತ್ತು. ಕಡೆಗೂ ಈ ಗ್ಯಾಂಗು ಕಣ್ಣಿಟ್ಟಿದ್ದು ಕಿರ್ಲೋಸ್ಕರ್ ಎಂಡಿ ವಿನಾಯಕ್ ಬಾಪಟ್ ಪುತ್ರ, ಯಲಹಂಕದ ನಿಟ್ಟೆ ಮೀನಾಕ್ಷಿ ಕಾಲೇಜಿನ ವಿದ್ಯಾರ್ಥಿ ಇಶಾನ್ ಬಾಪಟ್ ಮೇಲೆ. ಈತನ ಚಲನವಲನಗಳ ಮೇಲೆ ಹದಿನೈದು ದಿನಗಳಿಂದ ಕಣ್ಣಿಟ್ಟಿದ್ದ ಮುನಿಯನ ಗ್ಯಾಂಗು ಇದೇ ಆಗಸ್ಟ್ ಇಪ್ಪತ್ನಾಲ್ಕರಂದು ಗೆಳತಿಯೊಂದಿಗಿದ್ದ ಇಶಾನ್‌ನನ್ನು ಅಪಹರಿಸಿತ್ತು. ಈ ಕುರಿತು ಪೋಷಕರು ಯಲಹಂಕ ನ್ಯೂಟೌನ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕಿಡ್ನಾಪ್ ಮಾಡಲೆಂದೇ ಕ್ವಿಕ್ಕರ್‌ನಲ್ಲಿ ಹಳೆ ಕಾರು ಕೂಡ ಖರೀದಿಸಿದ್ದ ಈ ವಂಚಕರು ಸಂದರ್ಭದಲ್ಲಿ ನಿಶಾನ್‌ನನ್ನು ಅಪಹರಿಸಿ, ಐವತ್ತು ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದರು. ಇಶಾನ್‌ನನ್ನು ಅಪಹರಿಸಿದ ಕುಣಿಗಲ್ ಬಳಿಗೆ ಕರೆದೊಯ್ದಿದ್ದ ಆರೋಪಿಗಳ ತಂಡ ಆ ಬಳಿಕ ಪೊಲೀಸರು ಹಿಂಬಾಲಿಸುತ್ತಿದ್ದಾರೆ ಎಂಬ ಭಯದಲ್ಲಿ ಹೆಬ್ಬಾಳದ ಬಳಿ ಕರೆತಂದು ಇಶಾನ್‌ನನ್ನು ಬಿಟ್ಟು ಹೋಗಿದ್ದರು. ಈ ನಡುವೆ ಇಶಾನ್‌ನ ಪ್ರೇಯಸಿಗೆ ಕರೆ ಮಾಡಿ ಬೆದರಿಸಿದ್ದ ಮುನಿಯಪ್ಪ ಕಾಸು ಕೊಡುವಂತೆ ಆವಾಜು ಹಾಕಿದ್ದ. ಈ ಹೊತ್ತಿಗಾಗಲೇ ತನಿಖೆಗಿಳಿದಿದ್ದ ಒಬ್ಬರು ಡಿಸಿಪಿ, ಮೂವರು ಎಸಿಪಿಗಳು, ಹತ್ತು ಮಂದಿ ಇನ್‌ಸ್ಪೆಕ್ಟರ್‌ಗಳು, ಹದಿನೈದು ಮಂದಿ ಎಸ್‌ಐಗಳು ಸೇರಿ ಐವತ್ತಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ವಸತಿ ಗೃಹಗಳು, ಪಾರ್ಕ್‌ಗಳು, ಬಸ್ ಹಾಗೂ ರೈಲು ನಿಲ್ದಾಣಗಳು, ಜನ ನಿಬಿಡ ಪ್ರದೇಶಗಳು, ಹಳೆ ಕಟ್ಟಡಗಳು ಸೇರಿದಂತೆ ನಗರದೆಲ್ಲೆಡೆ ರಾತ್ರಿಯಿಡೀ ಶೋಧ ಕಾರ್ಯ ನಡೆಸಿದ್ದರು. ಬಹು ಬೇಗನೇ ಆರೋಪಿಗಳನ್ನು ಹೆಡೆಮುರಿ ಕಟ್ಟುವಂತೆ ನಗರ ಪೊಲೀಸ್ ಆಯುಕ್ತ ಮೇಘರಿಕ್ ಕೂಡಾ ಸೂಚನೆ ನೀಡಿದ್ದರು.
ಕಡೆಗೆ ಚಿಕ್ಕಜಾಲ ಇನ್ಸ್‌ಪೆಕ್ಟರ್ ಸುನೀಲ್ ಕುಮಾರ್ ಆರೋಪಿಗಳ ಹೆಜ್ಜೆ ಜಾಡು ಅರಿತು ತಕ್ಷಣವೇ ತನಿಖೆಗಿಳಿದಿದ್ದರು. ಇಶಾನ್‌ನ ಗೆಳತಿಯಿಂದಲೇ ಕರೆ ಮಾಡಿಸಿದಾಗ ರಿಸೀವ್ ಮಾಡಿದವನು ಹಸನ್ ಡೋಂಗ್ರಿ. ಆತ ಯಥಾ ಪ್ರಕಾರ ಹಣ ತಂದು ಕೊಡುವಂತೆ ದುಂಬಾಲು ಬಿದ್ದಿದ್ದ.
ಬಳಿಕ ಯುವತಿ ಕಾಸು ಕೊಡಲು ಒಪ್ಪಿದಾಗ ಈ ಪ್ರಳಯಾಂತಕರು ಹಲವಾರು ಬಾರಿ ಭೇಟಿಯ ಜಾಗ ಬದಲಾವಣೆ ಮಾಡಿದ್ದರು. ಬಳಿಕ ಪೊಲೀಸರೇ ಕೊಟ್ಟ ಐಡಿಯಾದ ಪ್ರಕಾರ ಹುಡುಗಿ ತನ್ನ ಬಳಿ ಆಟೋ ಬಾಡಿಗೆಗೂ ಕಾಸಿಲ್ಲ, ನಿಮಗೆ ಕೊಡಬೇಕಾದ ಕಾಸಲ್ಲಿಯೇ ಬಾಡಿಗೆ ಕೊಡುತ್ತೇನೆಂದಾಗ ಹಸನ್ ಪಕ್ಕಾ ಸ್ಪಾಟ್ ಫಿಕ್ಸ್ ಮಾಡಿದ್ದ. ತಕ್ಷಣವೇ ಆಟೋ ಡ್ರೈವರ್ ಗೆಟಪ್ಪಿನಲ್ಲಿದ್ದ ಇನ್ಸ್‌ಪೆಕ್ಟರ್ ಸುನೀಲ್ ಕುಮಾರ್ ಹುಡುಗಿಯೊಂದಿಗೆ ತೆರಳಿದ್ದರು. ಉಳಿಕೆ ಪೊಲೀಸರು ಓಲಾ ಕ್ಯಾಬ್‌ಗಳಲ್ಲಿ ಹಿಂಬಾಲಿಸಿದ್ದರು. ಕಡೆಗೂ ಕಾಸಿಗಾಗಿ ಬಾಯಿ ಬಿಟ್ಟುಕೊಂಡು ಬಂದಿದ್ದ ಹಸನ್ ಪೊಲೀಸರ ಬಲೆಗೆ ಬಿದ್ದಿದ್ದ. ಆತನ ಬುಡಕ್ಕೊದೆಯುತ್ತಲೇ ಹೀರೋ ಮುನಿಯನಿದ್ದ ಸ್ಥಳದ ಮಾಹಿತಿ ನೀಡಿದಾಗ ಪೊಲೀಸರೂ ಆತನನ್ನೂ ಹಿಡಿದು ತಂದಿದ್ದಾರೆ.
ಈ ಪ್ರಕರಣದ ಸಂಬಂಧವಾಗಿ ಪೊಲೀಸರು ತದುಕಿತ್ತಲೇ ಹೀರೋ ಮುನಿಯಾ ಹಿಂದೆ ಮಾಡಿದ್ದ ಲಫಡಾಗಳನ್ನೂ ಹೇಳಿಕೊಂಡಿದ್ದಾನೆ. ಸದ್ಯ ಹೀರೋ ಆಗುವ ಹುಚ್ಚಿನ ಮುನಿಯನಿಗೆ ಜೈಲೇ ಗಟ್ಟಿ!

Leave a Reply

Your email address will not be published. Required fields are marked *


CAPTCHA Image
Reload Image