One N Only Exclusive Cine Portal

ಸುರೇಶ್ ಪ್ರಾಮಾಣಿಕತೆಗೆ ಗೆಲುವು…

ಅವಂತಿಕಾಳಂತಾ ನಟಿಯರು ಕೂಡಾ ಮಾಧ್ಯಮಗಳಲ್ಲಿ ಬೇರೊಬ್ಬರ ಮೇಲೆ ಆರೋಪ ಮಾಡುವಾಗ ಎಚ್ಚರದಿಂದ ಪದ ಬಳಕೆ ಮಾಡಬೇಕು. ಯಡವಟ್ಟುಗಳೆಲ್ಲಾ ಸಂಭವಿಸಿದ ನಂತರ ‘ಐ ಡೋಂಟ್ ನೋ ವಾಟ್ಸ್ ಲೈಂಗಿಂಕ್ ಕಿರುಕುಳ್. ಐ ಯಾಮ್ ನಾಟ್ ಸೇಯಿಂಗ್ ಲೈಕ್ ದಟ್ ಅಂತಾ ಜಾರಿಕೊಳ್ಳುವ ಪ್ರಯತ್ನವನ್ನೂ ಮಾಡಬಾರದು.

ಅವಂತಿಕಾ ಶೆಟ್ಟಿ ಎನ್ನುವ ನಟಿಯ ಅವಾಂತರಗಳ ಕುರಿತು ಸಿನಿಬಜ಼್ ವಸ್ತುನಿಷ್ಠ ವರದಿಯೊಂದನ್ನು ಜೂನ್ ೧ರಂದು ಪ್ರಕಟ ಮಾಡಿತ್ತು. ಈ ವರದಿ ಪ್ರಕಟಗೊಂಡ ನಂತರ ಅವಂತಿಕಾ ತನ್ನ ಫೇಸ್ ಬುಕ್ಕು, ಟ್ವಿಟರುಗಳಲ್ಲಿ ಒಂದಿಷ್ಟು ಸ್ಟೇಟಸುಗಳನ್ನು ಹಾಕಿದ್ದಳು. ಇವೆಲ್ಲವನ್ನೂ ಗಮನಿಸಿದ ಟೀವಿ ವಾಹಿನಿಗಳು ಮತ್ತು ಕೆಲವಾರು ಪತ್ರಿಕೆಗಳು ಅವಂತಿಕಾಳನ್ನು ಮಾತಾಡಿಸಿ, ಆಕೆ ಹೇಳಿದ್ದಕ್ಕೆ ಒಂದಿಷ್ಟು ಮಸಾಲೆ ಸೇರಿಸಿ ಅಸಲೀ ವಿಚಾರದ ದಿಕ್ಕು ತಪ್ಪಿಸಿ ಇಲ್ಲದ ರಾದ್ದಾಂತ ಸೃಷ್ಟಿಸಿದ್ದವು. ಸ್ವತಃ ಅವಂತಿಕಾ ಕೂಡಾ ಸಿನಿಬಜ಼್‌ಗೆ ಸಂದೇಶ ಕಳಿಸಿ ಪ್ರಕಟಿಸಿರುವ ವರದಿಯನ್ನು ತೆಗೆದುಹಾಕುವಂತೆ ವಿನಂತಿಸಿದ್ದರು. ಆದರೆ ಯಾವುದೇ ವರದಿಯ ಸತ್ಯಾಸತ್ಯತೆ ಗಮನಿಸಿ ವರದಿ ಮಾಡುತ್ತಾ ಬಂದಿರುವ ಸಿನಿಬಜ಼್ ‘ಅವಂತಿಕಾ ಅವರೇ, ನಮ್ಮ ವರದಿಯಿಂದ ನಿಮಗೆ ಬೇಸರವಾಗಿರೋದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ. ಆಧಾರಗಳಿಲ್ಲದ ಯಾವ ವರದಿಯನ್ನೂ ನಾವು ಪ್ರಕಟಿಸುವುದಿಲ್ಲ. ಭಾರತದ ಕಾನೂನು ವ್ಯವಸ್ಥೆ ಮೇಲೆ ಅಪಾರ ಗೌರವವ ಹೊಂದಿರುವ ನಾವು ಯಾವ ಕಾರಣಕ್ಕೂ ವರದಿಯನ್ನು ತೆಗೆಯಲು ಸಾಧ್ಯವಿಲ್ಲ ಎಂದು ತಿಳಿಸಲಾಗಿತ್ತು.
ಈಗ ಕಡೆಗೂ ಅವಂತಿಕಾ ನಿರ್ಮಾಪಕರ ವಿರುದ್ಧ ಮಾಡಿದ್ದರು ಎನ್ನುವ ಆರೋಪ ಸುಳ್ಳೆಂದು ಸಾಬೀತಾಗಿದೆ. ಸ್ವತಃ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚರ್ಚೆ ನಡೆದು ಪ್ರಕರಣಕ್ಕೆ ತೆರೆ ಬಿದ್ದಿದೆ. ಆದರೆ ಕೆಲವು ಮಾಧ್ಯಮಗಳು ಮಾತ್ರ ನಿರ್ಮಾಪಕ ಕೆ.ಎ. ಸುರೇಶ್ ಅವರನ್ನೇ ಟಾರ್ಗೆಟ್ ಮಾಡಿಕೊಂಡು ‘ಮಂಚಕ್ಕೆ ಕರೆದ ನಿರ್ಮಾಪಕ, ‘ರೂಮಿಗೆ ಬಾ ಅಂದ ನಿರ್ಮಾಪಕ… ಅಂತೆಲ್ಲಾ ಒಬ್ಬ ನಿಯತ್ತಿನ ಚಿತ್ರ ನಿರ್ಮಾಪಕನ ಮಾನವನ್ನು ಹರಾಜಿಗಿಡುವ ಪ್ರಯತ್ನ ಮಾಡಿದ್ದವಲ್ಲಾ? ಅವರು ಪಟ್ಟ ವೇದೆನೆಗೆ ಪರಿಹಾರ ಸಿಗಲು ಸಾಧ್ಯವಾ? ಗೋವಿಂದಾಯ ನಮಃ, ಶ್ರಾವಣಿ ಸುಬ್ರಮಣ್ಯ, ಶಿವಲಿಂಗ ಸೇರಿದಂತೆ ಒಂದಿಷ್ಟು ಚಿತ್ರಗಳನ್ನು ನಿರ್ಮಿಸಿರುವ ಸುರೇಶ್ ಅವರ ಬಗ್ಗೆ ಇಂಡಸ್ಟ್ರಿಯಲ್ಲಿ ತೀರಾ ಕಟ್ಟುನಿಟ್ಟಿನ ಮನುಷ್ಯ, ಎಲ್ಲೂ ಹಣ ವೇಸ್ಟು ಮಾಡಂತೆ ಸಿನಿಮಾ ಮಾಡೋ ಬುದ್ದಿವಂತ, ಅಳೆದೂ ತೂಗಿ ಖರ್ಚು ಮಾಡ್ತಾರೆ… ಎಂಬಿತ್ಯಾದಿ ಮಾತುಗಳಿವೆ. ಆದರೆ ಈ ವರೆಗೆ ಎಲ್ಲೂ ಹೆಣ್ಮಕ್ಕಳ ವಿಚಾರದಲ್ಲಿ ಒಂದಿಷ್ಟೂ ಹೆಸರು ಕೆಡಿಸಿಕೊಂಡವರಲ್ಲ. ಕಳೆದ ಏಳೆಂಟು ವರ್ಷಗಳಿಂದ ತಾವಾಯಿತು ತಮ್ಮ ಸಿನಿಮಾ ವ್ಯವಹಾರವಾಯಿತು ಎನ್ನುವಂತಿರುವ ಸುರೇಶ್ ಸಭ್ಯ ಕುಟುಂಬಸ್ತ ಅನ್ನೋದರಲ್ಲಿ ಯಾವ ಅನುಮಾನಗಳೂ ಇಲ್ಲ. ಹೀಗಿರುವಾಗ ಏಕಾಏಕಿ ನಟಿಯ ಮಾತನ್ನು ಕೇಳಿ, ಅದನ್ನು ತಿರುಚಿ ಕೆಲವರು ಸುದ್ದಿ ಬಿತ್ತರಿಸಿದ್ದಿದೆಯಲ್ಲಾ? ಅದಕ್ಕೆ ಏನೆನ್ನಬೇಕೋ.. ಆಡಬಾರದ ಆಟವಾಡುವ ಅರೆಹುಚ್ಚ ಪ್ರಥಮನಂತ, ಸಂಚುಗಾತಿ ಚೆಡ್ಡಿ ಚಿಕ್ಕಿಯ ಪರ ವಕಾಲತ್ತು ವಹಿಸಿ ಅರಚಿಕೊಳ್ಳುವ ಕೆಲವು ವಾಹಿನಿಗಳಿಗೆ ಸುರೇಶ್ ಅವರ ಹಿನ್ನೆಲೆ ವಿಚಾರಿಸುವ ವ್ಯವಧಾನವಿರಲಿಲ್ಲವೇ? ಅಥವಾ ‘ಲೈಂಗಿಕ ಕಿರುಕುಳ ಅಂತಾ ಸುದ್ದಿ ಮಾಡಿದರೆ ಹೆಚ್ಚು ಟಿ.ಆರ್.ಪಿ. ಸಿಗುತ್ತದೆ ಅನ್ನೋ ಹಸಿವಿತ್ತಾ? ಇನ್ನೇನು ಲೆಕ್ಕಾಚಾರವೋ ಗೊತ್ತಿಲ್ಲ. ಒಟ್ಟಿನಲ್ಲಿ ನಿರ್ಮಾಪಕ ಸುರೇಶ್ ಅವರನ್ನು ಸರಕು ಮಾಡಿಕೊಂಡರು. ನಿಜಕ್ಕೂ ತಪ್ಪು ಮಾಡಿದ್ದಿದ್ದರೆ ಇದ್ದದ್ದನ್ನೆಲ್ಲಾ ಪ್ರಸಾರ ಮಾಡಲಿ, ಏನೂ ತಪ್ಪಿಲ್ಲದ ಸುರೇಶ್ ಅವರ ಮನೆ ವಾತಾವರಣದಲ್ಲಿ ಅದೊಂದು ದಿನ ಎಷ್ಟೆಲ್ಲಾ ಆತಂಕ ಎದುರಾಗಿತ್ತೋ? ಅಲ್ಲವೇ…
ಅವಂತಿಕಾಳಂತಾ ನಟಿಯರು ಕೂಡಾ ಮಾಧ್ಯಮಗಳಲ್ಲಿ ಬೇರೊಬ್ಬರ ಮೇಲೆ ಆರೋಪ ಮಾಡುವಾಗ ಎಚ್ಚರದಿಂದ ಪದ ಬಳಕೆ ಮಾಡಬೇಕು. ಯಡವಟ್ಟುಗಳೆಲ್ಲಾ ಸಂಭವಿಸಿದ ನಂತರ ‘ಐ ಡೋಂಟ್ ನೋ ವಾಟ್ಸ್ ಲೈಂಗಿಂಕ್ ಕಿರುಕುಳ್. ಐ ಯಾಮ್ ನಾಟ್ ಸೇಯಿಂಗ್ ಲೈಕ್ ದಟ್ ಅಂತಾ ಜಾರಿಕೊಳ್ಳುವ ಪ್ರಯತ್ನವನ್ನೂ ಮಾಡಬಾರದು.
ಇರಲಿ, ಅವಂತಿಕಾ ಶೆಟ್ಟಿ ಮುಂಬೈನಲ್ಲಿ ನೆಲೆಸಿರುವ ಕನ್ನಡದ ಪ್ರತಿಭೆ. ಇನ್ನು ಮುಂದೆ ಇಂಥವೆಲ್ಲ ಕಿರಿಕಿರಿಗಳನ್ನು ಮೈಮೇಲೆಳೆದುಕೊಳ್ಳದೆ ಇನ್ನೂ ದೊಡ್ಡ ಎತ್ತರಕ್ಕೇರಲಿ. ಸುರೇಶ್ ರಂಥ ನಿರ್ಮಾಪಕ ಇನ್ನಷ್ಟು ಎಚ್ಚರದಿಂದ ಸಿನಿಮಾಗಳನ್ನು ನಿರ್ಮಿಸುತ್ತಿರಲಿ. ಆತುರದ ಮಾಧ್ಯಮಗಳು ತಾಳ್ಮೆ ಕಲಿಯುವಂತಾಗಲಿ…

Leave a Reply

Your email address will not be published. Required fields are marked *


CAPTCHA Image
Reload Image