One N Only Exclusive Cine Portal

ಸ್ಟಾರ್ ನಿರ್ದೇಶಕನ ಬೆನ್ನಿಗೆ ನಿಂತ ಸಿನಿಬಜ್

ಗಣೇಶ್ ಕಾಸರಗೋಡು


ವಾರದ ಹಿಂದೆ ಒಂದು ಫೋನ್ ಕಾಲ್ : ಸರ್, ಸಿನಿಬಜ್‌ನಲ್ಲಿ ನಿಮ್ಮದೊಂದು ಲೇಖನ ಬಂದಿದೆ. ಎ ಟಿ ರಘು ಅವರ ಅನಾರೋಗ್ಯದ ಬಗ್ಗೆ ಬರೆದಿದ್ದೀರಿ. ಇದು ನಿಜವಾ? ಹೀಗೆಂದು ಪ್ರಶ್ನಿಸಿದವರು ಬೇರೆ ಯಾರೂ ಅಲ್ಲ; ನಮ್ಮ ಪ್ರೀತಿಯ ವಿಶುಕುಮಾರ್. ವಾರ್ತಾ ಇಲಾಖೆಯ ನಿರ್ದೇಶಕರು! ಆಶ್ಚರ್ಯವಾಯಿತು. ಆಗ ಮುಂಜಾನೆಯ 6 ಗಂಟೆ. ಅಷ್ಟರಲ್ಲೇ ಸಿನಿಬಜ್ ಓದಿ ಎ ಟಿ ರಘು ಅವರ ಬಗ್ಗೆ ವಿವರ ಕೇಳುತ್ತಿದ್ದಾರೆ ಸರ್ಕಾರಿ ಅಧಿಕಾರಿ. ಹೇಳಿದೆ: ಸರ್, ಇದು ನಿಜ. ಸುಮಾರು ೪೦ ಚಿತ್ರಗಳನ್ನು ನಿರ್ದೇಶಿಸಿದ ಕನ್ನಡದ ಸ್ಟಾರ್ ನಿರ್ದೇಶಕರೊಬ್ಬರು ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ಬಸವೇಶ್ವರ ನಗರದಲ್ಲಿರುವ ಅವರ ಅರಮನೆಯನ್ನೊಮ್ಮೆ ನೀವು ನೋಡಬೇಕು… -ನನ್ನ ಮಾತನ್ನು ಅರ್ಧಕ್ಕೇ ತಡೆದು ವಿಶುಕುಮಾರ್ ಹೇಳಿದರು: ಸರ್, ನಾನು ಅವ್ರನ್ನು ನೋಡ್ಬೇಕು. ಗೈಡ್ ಮಾಡಿ ಪ್ಲೀಸ್… ನಾನು ತಕ್ಷಣ ಒಪ್ಪಿಕೊಂಡೆ. ಮಾರನೇ ದಿನ ಮುಂಜಾನೆ ೮ಕ್ಕೆ ಬಸವೇಶ್ವರ ನಗರದ ಪುಣ್ಯ ಆಸ್ಪತ್ರೆ ಬಳಿ ಬಾಡಿಗೆ ಕಾರಿನಲ್ಲಿ ಬಂದರು ವಿಶುಕುಮಾರ್. ಅಷ್ಟರಲ್ಲೇ ನಾನು ಅಲ್ಲಿ ಹಾಜರಿದ್ದೆ.
ನಾಲ್ಕಾರು ಕಾಯಿಲೆಯ ಜೊತೆ ಎರಡೂ ಕಿಡ್ನಿ ವೈಫಲ್ಯದಿಂದಾಗಿ ಹೈರಾಣರಾಗಿದ್ದ ಎ.ಟಿ. ರಘು ಅವರು ಆ ಪುಟ್ಟ ಔಟ್ ಹೌಸ್‌ನ ಕತ್ತಲ ಕೋಣೆಯ ಮಂಚದ ಮೇಲೆ ಮಲಗಿದ್ದರು. ವಿಶುಕುಮಾರ್ ಅವರನ್ನು ನೋಡುತ್ತಲೇ ಎದ್ದು ಕೂರಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಸ್ವತಃ ವಿಶುಕುಮಾರ್ ಅವರೇ ಮುಂದೆ ಬಂದು ಎ.ಟಿ. ರಘು ಅವರಿಗೆ ಆಧಾರ ಕೊಟ್ಟು ಮಂಚದಿಂದ ಎಬ್ಬಿಸಿ ಕೂರಲು ನೆರವಾದರು.
ಎ ಟಿ ರಘು ಅವರು ಅಕ್ಷರಶಃ ಅಳುತ್ತಲೇ ತಮಗೆ ಬಂದೊದಗಿದ ದುಃಸ್ಥಿತಿಯನ್ನು ವಿಶುಕುಮಾರ್ ಅವರ ಬಳಿ ನಿವೇದಿಸಿಕೊಂಡರು.
ಫಾರ್ಮಾಲಿಟಿಗಾಗಿ ರಘು ಅವರ ಪುಟ್ಟದೊಂದು ಬಯೋಡಾಟಾ ಪಡೆದು ಏನೋ ನೋಟ್ ಮಾಡಿಕೊಂಡರು ವಿಶುಕುಮಾರ್. ಸಾಂತ್ವನ ಹೇಳಿದರು. ರಘು ಅವರಿಗೆ ಹುಸಿ ಭರವಸೆ ನೀಡಲಿಲ್ಲ. ಹೊರಗೆ ಬರುವಾಗ ನನ್ನಲ್ಲಿ ಹೇಳಿದರು ವಿಶುಕುಮಾರ್: ಮುಖ್ಯ ಮಂತ್ರಿ ನಿಧಿಯಿಂದ ಹಣ ಕೊಡಿಸುವ ಪ್ರಯತ್ನ ಮಾಡುತ್ತೇನೆ. ಎಷ್ಟೂಂತ ಗೊತ್ತಿಲ್ಲ. ಸಾಧ್ಯವಾದಷ್ಟು ಹೆಚ್ಚು ಕೊಡಿಸಲು ವಿನಂತಿಸಿಕೊಳ್ಳುತ್ತೇನೆ… -ನಾನು ಥ್ಯಾಂಕ್ಸ್ ಎಂದೆ.
ಮುಂದಿನ ಎರಡೇ ಎರಡು ದಿನಗಳಲ್ಲಿ ಮತ್ತೆ ಫೋನ್ ಮಾಡಿ ವಿಶುಕುಮಾರ್ ಹೇಳಿದರು: ಮುಖ್ಯ ಮಂತ್ರಿಗಳಿಗೆ ಒಂದು ನೋಟ್ ಪುಟಪ್ ಮಾಡಿದ್ದೇನೆ. ಉಮಾಶ್ರೀಯವರು ಒಂದು ಶಿಫಾರಸ್ಸು ಪತ್ರ ಕೊಟ್ಟಿದ್ದಾರೆ. ನಾಳೆ, ನಾಡಿದ್ದರಲ್ಲಿ ಹಣ ಕಲೆಕ್ಷನ್ ಆಗತ್ತೆ… ನಾನಂದೆ: ಇದರ ಸಂಪೂರ್ಣ ಕ್ರೆಡಿಟ್ ನಿಮಗೆ ಮತ್ತು ಸಿನಿಬಜ್’ಗೆ ಸಲ್ಲಬೇಕು…! ಅವರು ನಕ್ಕರು ಅಷ್ಟೇ.
ವಿಶುಕುಮಾರ್ ಪ್ರಾಮಿಸ್ ಮಾಡಿದಂತೆಯೇ ಮುಂದಿನ ಎರಡೇ ಎರಡು ದಿನಗಳಲ್ಲಿ 5 ಲಕ್ಷದ ಚೆಕ್ ಎ.ಟಿ. ರಘು ಅವರ ಕೈಲಿತ್ತು!
ಎ.ಟಿ. ರಘು ನಿರ್ದೇಶನದ ಆಶಾ ಚಿತ್ರದ ಮೂಲಕ ನಾಯಕ ನಟರಾದ ಅರ್ಜುನ್ ಸರ್ಜಾ ಅವರಿಗೊಂದು ಮೆಸೇಜ್ ಮಾಡಿ ಅಕೌಂಟ್ ನಂಬರ್ ಕಳಿಸಿದ್ದೆ. ಕ್ಷಣ ಸ್ಪಂದಿಸಿದ ಅರ್ಜುನ್ ಸರ್ಜಾ, ರಘು ಅವರ ಅಕೌಂಟ್‌ಗೆ ೫೦ ಸಾವಿರ ರೂಪಾಯಿ ಡೆಪಾಸಿಟ್ ಮಾಡಿದರು…. ಥ್ಯಾಂಕ್ಸ್ ಸರ್ಜಾ.
ಸಿನಿಬಜ್ ಓದಿ ಸಿಂಗಾಪೂರ್‌ನಿಂದ ಸಿದ್ದಬಸವಯ್ಯ ಎಂಬ ಹೆಸರಿನ ೩೦ ವರ್ಷದ ಸ್ಫುರದ್ರೂಪಿ ಯುವಕನೊಬ್ಬ ಮೆಸೇಜ್ ಮಾಡಿ ರಘು ಅವರ ಅಕೌಂಟ್‌ಗೆ 10 ಸಾವಿರ ರೂಪಾಯಿ ಡೆಪಾಸಿಟ್ ಮಾಡಿದ್ದ. ಥ್ಯಾಂಕ್ಯೂ ಸಿದ್ದು.
ನಾನು ಬರೆದ ಮೌನ ಮಾತಾದಾಗ ಪುಸ್ತಕ ಓದಿ ಇನ್‌ಫೋಸಿಸ್‌ನ ಸುಧಾ ಮೂರ್ತಿಯವರು ಹತ್ತು ಮಂದಿ ಅಸಹಾಯಕ ಕಲಾವಿದರಿಗೆ ತಲಾ 25 ಸಾವಿರ ರೂಪಾಯಿಗಳ ಧನ ಸಹಾಯ ಮಾಡಿದ್ದರು. ಎ ಟಿ ರಘು ಅವರ ಅನಾರೋಗ್ಯದ ಸುದ್ದಿ ತಿಳಿದ ಅದೇ ಸುಧಾಮೂರ್ತಿ ಎಂಬ ಮಹಾತಾಯಿ ಅಕೌಂಟ್ ನಂಬರ್ ತರಿಸಿ 2 ಲಕ್ಷ ರೂಪಾಯಿಗಳನ್ನು ಡೆಪಾಸಿಟ್ ಮಾಡಿದ್ದಾರೆ! ಇವರಲ್ಲದೇ ಕೆ.ಜೆ. ಕುಮಾರ್, ವೆಂಕಟೇಶ್ ಪ್ರಸಾದ್… ಮೊದಲಾದ ಸಹೃದಯಿಗಳು ಕೂಡಾ ಧನಸಹಾಯ ಮಾಡಿದ್ದಾರೆ. ಎ.ಟಿ. ರಘು ಸಂಪನ್ನ!

Leave a Reply

Your email address will not be published. Required fields are marked *


CAPTCHA Image
Reload Image