ಮನರಂಜೆನಯ ಮೂಲಕ ಕನ್ನಡಿಗರ ಭಾವನೆಗಳಲ್ಲಿ ಶಾಶ್ವತ ಸ್ಥಾನ ಪಡೆದಿರುವ ಸ್ಟಾರ್ ಸುವರ್ಣ ವಾಹಿನಿ ಇದೀಗ ಹೊಸ ಧಾರವಾಹಿ ‘ಬಿಳಿ ಹೆಂಡ್ತಿ’ಯನ್ನು ನೋಡುಗರ ಮನಸ್ಸುಗಳಿಗೆ ತಲುಪಿಸಲು ಸಜ್ಜಾಗಿದೆ. ಏಪ್ರಿಲ್ 16ರಂದು ರಾತ್ರಿ 7ಗಂಟೆಗೆ ‘ಬಿಳಿ ಹೆಂಡ್ತಿ’ ಪ್ರಸಾರವಾಗಲಿದ್ದು ಕನ್ನಡ ಕಿರುತೆರೆಯಲ್ಲಿ ಈ ಮಾದರಿಯ ಪ್ರಯತ್ನ ಇದೇ ಮೊದಲು.
ಕಥಾಸಾರಾಂಶ:ಸಂಪ್ರದಾಯಸ್ಥ ಕುಟುಂಬದ ಹುಡುಗ ಅಜಿತ್(ನಾಯಕ) ವಿದೇಶಕ್ಕೆ ಕೆಲಸಕ್ಕೆ ಹೋದವನು ವಿದೇಶದಲ್ಲೇ ಶೆರ್ಲಿ(ನಾಯಕಿ) ಎಂಬ ಹುಡುಗಿಯನ್ನು ಪ್ರೀತಿಸಿ ಮದುವೆಯಾಗುತ್ತಾನೆ ಮುಂದೆ ಹೆಂಡತಿಯೊಂದಿಗೆ ಊರಿಗೆ ಬರುವ ಅಜಿತ್ ಕುಟುಂಬದವರಿಗೆ ದೊಡ್ಡ ಆಘಾತ ಕೊಡುತ್ತಾನೆ.
ವಿದೇಶಿ ಹುಡುಗಿಯನ್ನು ಮದುವೆಯಾದ ಎಂಬ ಕಾರಣಕ್ಕೆ ಅಜಿತ್ ಅಣ್ಣ ಉಮಾಕಾಂತನ ಮದುವೆ ನಿಂತು ಹೋಗುತ್ತೆ. ಇಡೀ ಬದುಕಿನುದ್ದಕ್ಕೂ ಸಂಸ್ಕಾರವನ್ನೇ ಉಸಿರಾಡಿದ ಅಜಿತ್ ತಂದೆ ಪದ್ಮನಾಭಶಾಸ್ತ್ರಿ ಸೊಸೆ ವಿದೇಶಿಯಳು ಎಂಬ ಕಾರಣಕ್ಕೆ ಮಠದ ಧರ್ಮಾಧಿಕಾರಿ ಪಟ್ಟದಿಂದ ಕೆಳಗಿಳಿಯುತ್ತಾರೆ.ಒಟ್ಟಾರೆ ಪದ್ಮನಾಭ ಶಾಸ್ತ್ರಿಗಳ ಬದುಕು ದೊಡ್ಡ ದೊಡ್ಡ ಪಲ್ಲಟಗಳನ್ನು ಎದುರಿಸುತ್ತದೆ.
ವಿದೇಶಿ ಹುಡುಗಿ ಎಂಬ ಕಾರಣಕ್ಕೆ ಅವಮಾನ ಆಘಾತಗಳ ಸ್ವಾಗತದೊಂದಿಗೆ ಗಂಡನ ಮನೆ ಸೇರುವ ಶೆರ್ಲಿ ಭಾರತೀಯ ಸಂಸ್ಕೃತಿ ಹಾಗು ಆಚಾರ ವಿಚಾರಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಅಧ್ಯಯನ ಮಾಡಿರುತ್ತಾಳೆ. ಕನ್ನಡ ಕಲಿತು ಊರಿನವರ ಮನಸುಗಳನ್ನು ಗೆಲುತ್ತ ತನ್ನ ಗಂಡನ ಮನೆಯ ಸವಾಲುಗಳನ್ನು ಬಗೆಹರಿಸುತ್ತ ಶೆರ್ಲಿ ಪ್ರಾರ್ಥನಾಳಾಗಿ ಬದಲಾಗುವ ಕಥೆಯೇ ‘ಬಿಳಿ ಹೆಂಡ್ತಿ’
ಪಾತ್ರ ವರ್ಗ: ಬಿಳಿ ಹೆಂಡ್ತಿ ಪಾತ್ರದಲ್ಲಿ ಪೊಲ್ಯಾಂಡ್ ಮೂಲದಕ್ರಿಸ್ಟೀನಾ ದೆವೀನಾ ಲಾಸನ್ ನಟಿಸುತ್ತಿದ್ದಾರೆ. ಉಳಿದಂತೆ ಕಿರುತೆರೆಯ ಅನುಭವಿ ಕಲಾವಿದರಾದ ಶ್ರೀಕಾಂತ್ ಹೆಬ್ಳಿಕರ್, ಸಿದ್ದರಾಜ್ ಕಲ್ಯಾಣ್ಕರ್, ದೀಪಕ್ ಗೌಡ, ಶಿಲ್ಪ, ಪ್ರಿಯಾ ತರುಣ್, ದೀಪಿಕ, ಮಾನ್ಯಾ ಹಾಗು ತೇಜಸ್ವಿನಿ ನಟಿಸುತ್ತಿದ್ದಾರೆ.
“ಫಾರಿನ್ ಹುಡುಗಿಯೊಬ್ಬಳು ಕನ್ನಡದ ಅದರಲ್ಲೂ ಸಂಪ್ರದಾಯಸ್ಥ ಕುಟುಂಬದ ಮನೆಗೆ ಸೊಸೆಯಾಗಿ ಬರುತ್ತಾಳೆ ಎಂಬ ಕಾನ್ಸೆಪ್ಟ್ ತುಂಬ ಕುತೂಹಲಕಾರಿಯಾಗಿದೆ. ಈ ಕಥೆಯ ಪ್ರತಿ ಸಂಚಿಕೆಯನ್ನು ತುಂಬ ಇಂಟೆನ್ಸ್ಆಗಿ ಕಟ್ಟಿಕೊಡಲಾಗಿದ್ದು ‘ಬಿಳಿ ಹೆಂಡ್ತಿ’ ಖಂಡಿತವಾಗಿಯೂ ಕನ್ನಡಿಗರ ಮನೆಮಾತಾಗುತ್ತಾಳೆ” ಎಂಬುದು ಸ್ಟಾರ್ ಸುವರ್ಣ ವಾಹಿನಿಯ ಬಿಜಿನೆಸ್ ಹೆಡ್ ಸಾಯಿ ಪ್ರಾಸಾದ್ ಅವರ ಅಭಿಪ್ರಾಯ.