One N Only Exclusive Cine Portal

ಸ್ನೇಹಕ್ಕೆ ಮುಳ್ಳಾದ ಅಸಲೀ ಕಾರಣವೇನು?

ಇನ್ನು ದರ್ಶನ್ ಗೆದ್ದ ನಂತರ ‘ನಮ್ಮ ದರ್ಶನ್’ ಅಂತಾ ಹತ್ತಿರ ಹೋದ ಅನೇಕ ನಟರು ದರ್ಶನ್ ಅವರ ಅಭಿಮಾನಿಗಳನ್ನು ಹೈಜಾಕ್ ಮಾಡುವ ಪ್ರಯತ್ನ ಮಾಡಿದರೇ ಹೊರತು ಅವರಿಗೆ ಬೇಕಿದ್ದದ್ದು ದರ್ಶನ್ ಜೊತೆಗಿನ ಸ್ನೇಹವಲ್ಲ- ಇದು ಸ್ವತಃ ದರ್ಶನ್ ಅವರಿಗೆ ಒಳಗೊಳಗೇ ಸಾಕಷ್ಟು ನೋವುಂಟುಮಾಡಿರುವ ವಿಚಾರ. 


ಆಗ ದರ್ಶನ್ ಅವಕಾಶಕ್ಕಾಗಿ ತೀರಾ ಒದ್ದಾಡುವ ಸ್ಥಿತಿಯಿತ್ತು. ಒಂದು ಕಡೆ ಮನೆ ಕಡೆ ಕಷ್ಟ, ಮತ್ತೊಂದು ಕಡೆ ಬದುಕಲ್ಲಿ ನೆಲೆನಿಲ್ಲಲೇಬೇಕಿರುವ ಅನಿವಾರ್ಯತೆ. ಆ ಸಂದರ್ಭದಲ್ಲೇ ‘ಹುಚ್ಚ’ ಸಿನಿಮಾ ಚಿತ್ರೀಕರಣ ಶುರುವಾಗುವ ಹಂತದಲ್ಲಿತ್ತು. ಆಗಿನ್ನೂ ಛಾಯಾಗ್ರಾಹಕರಾಗಿದ್ದ ಅಣಜಿ ನಾಗರಾಜ್ ನಿರ್ದೇಶಕ ಓಂ ಪ್ರಕಾಶ್ ರಾವ್ ಬಳಿ ಕರೆದುಕೊಂಡು ಹೋಗಿ ‘ಈತ ತೂಗುದೀಪ ಶ್ರೀನಿವಾಸ್ ಅವರ ಮಗ. ಒಂದು ಕ್ಯಾರೆಕ್ಟರ್ ಹಾಕಿಕೊಡಿ’ ಎಂದು ವಿನಂತಿಸಿದ್ದರು.

‘ಓಕೆ ಓಕೆ ಓಕೆ ಮಾಡ್ಸಣ ಬಿಡಿ’ ಅಂದಿದ್ದರು ಓಂಪ್ರಕಾಶ್. ಆದರೆ ಅದೇನು ಮಸಲತ್ತು ನಡೆದಿತ್ತೋ ಅಥವಾ ದರ್ಶನ್ ಅನ್ನೋ ಹುಡುಗನನ್ನು ಯಾರೂ ಸೀರಿಯಸ್ಸಾಗಿ ಪರಿಗಣಿಸಿರಲಿಲ್ಲವೋ? ದರ್ಶನ್ ಮಾಡಬೇಕಿದ್ದ ಪಾತ್ರದಲ್ಲಿ ನಟ ತಾರಕೇಶ್ ಪಟೇಲ್ ಮಾಡಿದ್ದರು. ಇದಾದ ನಂತರ ‘ಮೆಜೆಸ್ಟಿಕ್’ ಸಿನಿಮಾದ ಕಥೆ ಕೇಳಿದ್ದ ಸುದೀಪ್ ‘ನನಗೆ ಆ ಕ್ಯಾರೆಕ್ಟರ್ ಒಪ್ಪಲ್ಲ. ನಾನು ಮಾಡೋದಿಲ್ಲ’ ಎಂದುಬಿಟ್ಟಿದ್ದರು. ಆಗ ನಿರ್ಮಾಪಕ ಎಂ.ಜಿ. ರಾಮಮೂರ್ತಿ, ಭಾಮಾ ಹರೀಶ್, ಡಾ. ವಿ. ನಾಗೇಂದ್ರ ಪ್ರಸಾದ್ ಮತ್ತು ನಿರ್ದೇಶಕ ಸತ್ಯ – ಇಷ್ಟೂ ಜನರನ್ನು ದರ್ಶನ್ ಬಳಿಗೆ ಕರೆದೊಯ್ದಿದ್ದು ಮತ್ತದೇ ಅಣಜಿ ನಾಗರಾಜ್.

ಅಲ್ಲಿಂದ ದರ್ಶನ್ ಹೀರೋ ಆಗಿ ‘ಮೆಜೆಸ್ಟಿ’ಕ್ ಅನ್ನೋ ಬಸ್ಸು ಹತ್ತಿ ಇಳಿದಿದ್ದರು. ಅಷ್ಟೇ! ಮೊದಲ ಚಿತ್ರದಲ್ಲೇ ಸ್ಟಾರ್ ಆಗಿಬಿಟ್ಟಿದ್ದರು. ಸ್ಯಾಂಡಲ್ ವುಡ್’ನಲ್ಲಿ ದರ್ಶನ್ ಯುಗ ಆರಂಭವಾಗಿತ್ತು. ಆದರೆ ಕೆಲ ಸಂದರ್ಶನಗಳಲ್ಲಿ ಸುದೀಪ್ “ಮೆಜೆಸ್ಟಿಕ್” ಚಿತ್ರದಲ್ಲಿ ನಾ ನಟಿಸಬೇಕಿತ್ತು. ನಾ ಆ ಆಫರ್ ಕೈಚೆಲ್ಲಿದ್ದರಿಂದ ದರ್ಶನ್ ಪಾಲಾಯಿತು ಅಂದಿದ್ದರು. ಸುದೀಪ್ ಬಿಟ್ಟುಕೊಟ್ಟ ಅವಕಾಶದಿಂದ ದರ್ಶನ್ “ಮೆಜೆಸ್ಟಿಕ್” ಚಿತ್ರ ಮಾಡಿದ್ದರು ಎಂಬಂತೆ ಕೆಲ ಮಾಧ್ಯಮಗಳು ಟೈಪಿಸಿದ್ದರು. ಇದೆಲ್ಲವೂ ದರ್ಶನ್ ಅಭಿಮಾನಿಗಳಿಗೆ ಮತ್ತು ಚಾಲೆಂಜಿಂಗ್ ಸ್ಟಾರ್’ಗೆ ಪದೇ ಪದೇ ರೇಜಿಗೆ ಹುಟ್ಟಿಸಿದೆ.

ದರ್ಶನ್ ಪ್ರಕಾರ ‘ಯಾರೂ ನನಗಾಗಿ ಅವಕಾಶಗಳನ್ನು ಬಿಟ್ಟುಕೊಡಲಿಲ್ಲ. ಬದಲಿಗೆ ಬೇರೆಯವರು ಬಿಟ್ಟ ಪಾತ್ರಗಳನ್ನು ನಾನು ಕಣ್ಣಿಗೆ ಒತ್ತಿಕೊಂಡು ಮಾಡಿದೆ. ಅದು ನನ್ನನ್ನು ಗೆಲ್ಲಿಸಿತು’ ಅನ್ನೋದು. ಅದು ನಿಜ ಕೂಡಾ ಹೌದು ‘ನನ್ನ ಪ್ರೀತಿಯ ರಾಮು’ ಚಿತ್ರದಲ್ಲಿ ಶಿವರಾಜ್ ಕುಮಾರ್ ನಟಿಸಬೇಕಿತ್ತು. ಆದರೆ ಅವರು ಆ ಪಾತ್ರವನ್ನು ರಿಜೆಕ್ಟ್ ಮಾಡಿದರು. ಅದು ದರ್ಶನ್ ಪಾಲಾಯಿತಷ್ಟೇ. ಹೀಗೇ ಅನೇಕ ಹೀರೋಗಳು ಬೇಡ ಅಂತಾ ಬಿಟ್ಟ ಸಿನಿಮಾಗಳಷ್ಟೇ ದರ್ಶನ್ ಅವರಿಗೆ ದಕ್ಕಿದವೇ ಹೊರತು. ಯಾವ ಸ್ಟಾರ್’ಗಳೂ ‘ಈ ಹುಡುಗ ನಮ್ಮ ಹಿರಿಯ ನಟನ ಮಗ. ಹೀಗೋ ಆಗಿ ಬೆಳೀಲಿ’ ಅಂತಾ ತಮ್ಮ ಪಾತ್ರಗಳನ್ನು ಬಿಟ್ಟುಕೊಟ್ಟು ಬೆಳೆಸಿದ ನಿದರ್ಶನಗಳಿಲ್ಲ.

ಇನ್ನು ದರ್ಶನ್ ಗೆದ್ದ ನಂತರ ‘ನಮ್ಮ ದರ್ಶನ್’ ಅಂತಾ ಹತ್ತಿರ ಹೋದ ಅನೇಕ ನಟರು ದರ್ಶನ್ ಅವರ ಅಭಿಮಾನಿಗಳನ್ನು ಹೈಜಾಕ್ ಮಾಡುವ ಪ್ರಯತ್ನ ಮಾಡಿದರೇ ಹೊರತು ಅವರಿಗೆ ಬೇಕಿದ್ದದ್ದು ದರ್ಶನ್ ಜೊತೆಗಿನ ಸ್ನೇಹವಲ್ಲ- ಇದು ಸ್ವತಃ ದರ್ಶನ್ ಅವರಿಗೆ ಒಳಗೊಳಗೇ ಸಾಕಷ್ಟು ನೋವುಂಟುಮಾಡಿರುವ ವಿಚಾರ.
ದರ್ಶನ್ ಮತ್ತು ಸುದೀಪ್ ಒಟ್ಟಿಗಿದ್ದಾರೆ ಅನ್ನೋ ಕಾರಣಕ್ಕೇ ಅದೆಷ್ಟೋ ಮ್ಯೂಚವಲ್ ಫ್ಯಾನ್ಸ್ ಗ್ರೂಪ್’ಗಳು ಹುಟ್ಟಿಕೊಂಡಿವೆ. ಇತ್ತೀಚಿನ ದಿನಗಳಲ್ಲಿ ಸುದೀಪ್ ಚಿತ್ರದ ಭರ್ಜರಿ ಸಕ್ಸಸ್ ಹಿಂದೆ ದರ್ಶನ್ ಅಭಿಮಾನಿಗಳ ಪಾಲಿದೆ. ಯಾಕೆಂದರೆ, ಸುದೀಪ್ ಅವರ ಚಿತ್ರವನ್ನು ನೋಡುತ್ತಿರುವ ಒಂದು ಪಾಲಿನ ಅಭಿಮಾನಿಗಳು ದರ್ಶನ್ ಅವರ ಮೂಲ ಆರಾಧಕರು. ಇವೆಲ್ಲ ಏನೇ ಆಗಲಿ ‘ಮನಸ್ಸಿನಲ್ಲಿ ನಾನಾ ಲೆಕ್ಕಾಚಾರ ಹಾಕಿಕೊಂಡು ಬರುವ ಯಾವ ಸ್ನೇಹವೂ ನನಗೆ ಬೇಡ’ ಎನ್ನುವ ಮನಸ್ಥಿತಿ ಬಹುಶಃ ದರ್ಶನ್ ಅವರಿಗಿದ್ದಂತೆ ಕಾಣುತ್ತಿದೆ. ಹೀಗಾಗಿ ಅನೇಕ ಹೀರೋಗಳ ಜೊತೆ ಸ್ನೇಹವನ್ನು ದೂರವಿಟ್ಟಿದ್ದಾರೆ. ಅಭಿಮಾನಿಗಳಿಗಾಗಿ ಯಾರನ್ನು ಬೇಕಾದರೂ ಎದುರಾಕಿ ಕೊಳ್ಳಲು ದರ್ಶನ್ ಹಿಂದೆ ಮುಂದೆ ನೋಡಲ್ಲ ಎಂಬುದು ಸ್ಯಾಂಡಲ್ ವುಡ್’ನ ಸತ್ಯ ಸಂಗತಿ.

ಹೀಗಾಗಿ, ತಾವು, ತಮ್ಮ ಸಿನಿಮಾ, ಅಭಿಮಾನಿಗಳು ಅಂತಾ ಸೈಲೆಂಟಾಗಿದ್ದುಬಿಟ್ಟಿದ್ದಾರೆ. ಈ ನಡುವೆ ಹೆಬ್ಬುಲಿ ಚಿತ್ರದ ಬಿಡುಗಡೆಯ ನಂತರದ ಪತ್ರಿಕಾಗೋಷ್ಟಿಯಲ್ಲಿ ‘ನಮ್ಮ ಸಿನಿಮಾದ ಕಲೆಕ್ಷನ್ ಹೇಳಿಕೊಂಡು ನಮ್ಮ ಬಲ ತೋರಿಸುವ ಅಗತ್ಯ ಇಲ್ಲ’ ಅಂತಾ ಸುದೀಪ್ ಮಾರ್ಮಿಕವಾಗಿ ಮಕಾತಾಡಿದ್ದೂ ಬಹುಶಃ ದರ್ಶನ್ ಅವರನ್ನು ಕೆರಳಿಸಿರಬಹುದು. ಈ ನಡುವೆ ಮಾಧ್ಯಮದ ಒಂದಿಬ್ಬರು ಕಿಡಿಗೇಡಿಗಳು ಈ ಇಬ್ಬರ ನಡುವೆ ಹುಳಿ ಹಿಂಡಿ ಮಧ್ಯೆ ‘ಲಾಭ’ ಮಾಡಿಕೊಳ್ಳುವ ಯತ್ನವನ್ನು ಬಹಳಾ ನಿಷ್ಟೆಯಿಂದ ಮಾಡುತ್ತಾ ಬರುತ್ತಿದ್ದಾರೆ. ಯಾವುದೋ ಹಳೆಯ ಟೀವಿ ಸಂದರ್ಶನದ ಭಾಗವನ್ನು ಅಪ್ ಲೋಡ್ ಮಾಡಿ ಇಲ್ಲದ ಕಿತಾಪತಿ ಮಾಡುತ್ತಿದ್ದಾರೆ..

Leave a Reply

Your email address will not be published. Required fields are marked *


CAPTCHA Image
Reload Image