One N Only Exclusive Cine Portal

ಸ್ಮಗ್ಲರ್‌ಗೆ ಸಿಕ್ಕಿದೆ ಬಿಡುಗಡೆ ಭಾಗ್ಯ!

ಗಾಂಧಿನಗರವೆಂಬ ಗಾಂಧಿನಗರದಲ್ಲಿ ಮೀಸೆ ತಿರುವಿ ನಿಲ್ಲುವ ಗಂಡಸರೇ ಬದುಕೋದು ಕಷ್ಟ. ಆದರೆ ಇಲ್ಲಿ ಮಹಿಳೆಯೊಬ್ಬರು ಯಾವ ಗಂಡಸಿಗೂ ಕಮ್ಮಿಯಿಲ್ಲದ ಧೈರ್ಯ, ಖಡಕ್ಕು ಮಾತು, ದಿಟ್ಟ ನಡೆಯಿಂದ ಬಿಂದಾಸ್ ಆಗಿ ನಡೆದುಬಂದಿದ್ದಾರೆ. ಇಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿರುವ ಹೆಣ್ಣುಮಗಳ ಹೆಸರು ಪ್ರಿಯಾ ಹಾಸನ್…!

ಇದುವರೆಗೆ ಈಕೆ ನಟಿಸಿರುವುದ ಬರೀ ಮೂರ್‍ನಾಲ್ಕು ಚಿತ್ರಗಳಲ್ಲಿ ಮಾತ್ರ. ಆದರೆ ಯಾವ ಹೀರೋಗೂ ಕಡಿಮೆಯಿಲ್ಲದ ಪಾಪ್ಯುಲಾರಿಟಿ, ಪ್ರಚಾರ ಪಡೆದಿದ್ದಾರೆ. ಪ್ರಿಯಾ ಹಾಸನ್‌ರ ಸಿನಿಮಾ ನಂಟು ಇವತ್ತು ನಿನ್ನೆಯದಲ್ಲ. ಸುಮಾರು ಹದಿನೈದು ವರ್ಷಗಳ ಹಿಂದೆ ಬಂದ `ಬ್ಲಾಕ್ ಅಂಡ್ ವೈಟ್’ ಚಿತ್ರದ ಮೂಲಕವೇ ಪ್ರಿಯಾ ಮುಖಕ್ಕೆ ಬಣ್ಣ ಹಚ್ಚಿದ್ದರು. ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ನಾಯಕನಟನಾಗಿ ನಟಿಸಿದ್ದ ಈ ಚಿತ್ರ ಅದೇಕೋ ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗಲಿಲ್ಲ. ಹೀಗಾಗಿ ಪ್ರಿಯಾಗೆ ಕೂಡಾ ಅದೃಷ್ಟ ಕೈಕೊಟ್ಟಂತಾಗಿತ್ತು. ನಂತರ ಒಂದಷ್ಟು ವರ್ಷ ತೆರೆಮರೆಗೆ ಸರಿದಿದ್ದ ಪ್ರಿಯಾ ಮತ್ತೆ ಚಾಲ್ತಿಗೆ ಬಂದಿದ್ದು `ಜಂಭದ ಹುಡುಗಿ’ ಚಿತ್ರದಿಂದ. `ಜಂಭದ ಹುಡುಗಿ’ ಸುಮ್ಮನೆ ಹೀಗೆ ಬಂದು ಹಾಗೆ ಹೋಗಿದ್ದಿದ್ದರೆ ಪ್ರಿಯಾ ಯಾರ ಗಮನಕ್ಕೂ ಬರುತ್ತಿರಲಿಲ್ಲವೇನೋ.
ಆರಂಭದಲ್ಲಿ ಸೀತಾರಾಮ್‌ಕಾರಂತ್ `ಜಂಭದ ಹುಡುಗಿ’ಯ ನಿರ್ದೇಶಕರಾಗಿದ್ದರು. ಆದರೆ ಸಿನಿಮಾ ಆರಂಭಗೊಂಡಾಗ ಸ್ವತಃ ನಿರ್ಮಾಪಕಿಯೂ ಆಗಿದ್ದ ಪ್ರಿಯಾ ಮತ್ತು ಸೀತಾರಾಂ ನಡುವೆ ಸಣ್ಣದೊಂದು ಭಿನ್ನಾಪ್ರಿಯಾಯ ಮೂಡಿ, ಕಾರಂತರ ಜಾಗದಲ್ಲಿ ಸ್ವತಃ ಪ್ರಿಯಾ ಅವರೇ ನಿಂತು ನಿರ್ದೇಶನ ಮಾಡಿದರು. ಈ ಸಣ್ಣದೊಂದು ವಿವಾದ ಪ್ರಿಯಾ ಹಾಸನ್‌ಅವರಿಗೆ ಮತ್ತುಷ್ಟು ಪ್ರಚಾರ ತಂದುಕೊಟ್ಟಿತ್ತು. ಬಹುಶಃ ಇಷ್ಟೆಲ್ಲಾ ವಿವಾದದ ನಂತರ ಸಿನಿಮಾ ಚೆಂದವಾಗಿ ಮೂಡಿಬರದಿದ್ದರೆ ಇಡೀ ಉದ್ಯಮ ಅದಕ್ಕೆ ಪ್ರಿಯಾರನ್ನೇ ಹೊಣೆಯನ್ನಾಗಿಸಿಬಿಡುತ್ತಿತ್ತೇನೋ. ಆದರೆ ಪ್ರಿಯಾ ಅವರ ಅದೃಷ್ಟವೋ, ಅಥವಾ ಅವರ ಶ್ರಮಕ್ಕೆ ದೊರೆತ ಪ್ರತಿಫಲವೋ `ಜಂಭದ ಹುಡುಗಿ’ ನೂರು ದಿನಗಳನ್ನು ಪೂರೈಸಿ ಸೂಪರ್ ಹಿಟ್ ಚಿತ್ರ ಎನಿಸಿಕೊಂಡುಬಿಟ್ಟಿತು.
ಮಾಲಾಶ್ರೀ, ವಿಜಯಶಾಂತಿಯರಿಗೆ ಸರಿಗಟ್ಟುವಂತಹ ಪ್ರಿಯಾರ ಆಕ್ಷನ್ ಸನ್ನಿವೇಶಗಳನ್ನು ಜನ ಕಣ್ಣು ಜಪ್ಪರಿಸಿಕೊಂಡು ನೋಡಿದರು. ಪ್ರಿಯಾ ಹಾಕಿದ ಸ್ಟೆಪ್ಪುಗಳನ್ನು ಕಂಡ ಪ್ರೇಕ್ಷಕರು ಶಿಳ್ಳೆಹೊಡೆದು ಎಂಜಾಯ್ ಮಾಡಿದರು. ಮಾತ್ರವಲ್ಲದೆ, ಪ್ರಿಯಾರ ಮನೋಜ್ಞ ಅಭಿನಯ ಕನ್ನಡದ ಚಿತ್ರರಸಿಕರ ಮನ ಗೆದ್ದುಬಿಟ್ಟಿತ್ತು.
ಹೀಗೆ ಒಂದೇ ಚಿತ್ರದಲ್ಲಿ ಹಲವಾರು ವಿಶಿಷ್ಟತೆಗಳಿಂದ ಪ್ರಿಯಾ ನಟಿಯಾಗಿಯೂ, ನಿರ್ದೇಶಕಿಯಾಗಿಯೂ ಸ್ಪಷ್ಟವಾಗಿ ಗುರುತಿಸಿಕೊಂಡರು. ಕನ್ನಡದಲ್ಲಿ ಮಹಿಳಾ ನಿರ್ದೇಶಕಿಯರು ತೀರಾ ವಿರಳ. ಇರುವ ಬೆರಳೆಣಿಕೆಯ ನಿರ್ದೇಶಕರು ನಟಿಸುವ ಗೋಜಿಗೆ ಹೋಗುತ್ತಿಲ್ಲ. ಹೀಗಿರುವಾಗ, ಪ್ರಿಯಾ ತಮ್ಮ ಚಿತ್ರದಲ್ಲಿ ನಟಿಸುವುದು ಮಾತ್ರವಲ್ಲದೆ, ಸ್ವತಃ ನಿರ್ದೇಶನವನ್ನೂ ಮಾಡುತ್ತಿರುವುದು ಎಲ್ಲರ ಆಕರ್ಶಣೆಗೆ ಕಾರಣವಾಗಿದೆ. ಸಾಹಸ ದೃಶ್ಯಗಳನ್ನು ಪ್ರಾಕ್ಟೀಸ್ ಮಾಡದೆ, ಯಾವುದೇ ಡ್ಯೂಪ್ ಕೂಡಾ ಬಳಸದೆ ಯಾವ ಆಕ್ಷನ್ ಹೀರೋಗೂ ಕಮ್ಮಿ ಇಲ್ಲದಂತೆ ಫೈಟ್ ಮಾಡುವ ಪ್ರಿಯಾರ ತಾಕತ್ತು ನಿಜಕ್ಕೂ ದೊಡ್ಡದು. ಅದೊಂದು ದಿನ ಮಲೇಶಿಯಾದಲ್ಲಿ ಚಿತ್ರೀಕರಣ ಮಾಡುತ್ತಿದ್ದ ಸಂದರ್ಭದಲ್ಲಿ ಪ್ರಿಯಾ ನೀರಿನಲ್ಲಿ ಸಿಕ್ಕಿಕೊಂಡಿದ್ದರಂತೆ. ಹೀಗಾಗಿ ಗ್ವೌ ಎನ್ನುವ ಕತ್ತಲೆಯಲ್ಲಿ ನಡೆಯುತ್ತಿದ್ದ ಈ ಚಿತ್ರೀಕರಣದಲ್ಲಿ ಒಂದು ಕ್ಷಣ ಎಲ್ಲರೂ ಗಾಬರಿಗೆ ಬಿದ್ದಿದ್ದರಂತೆ. ಇವತ್ತಿನ ದಿನದಲ್ಲಿ ಸಣ್ಣ ಪುಟ್ಟ ನಾಯಕನಟರೂ ಈ ರೀತಿಯ ರಿಸ್ಕ್‌ಗಳಿಗೆ ಕೈಹಾಕುವುದಿಲ್ಲ. ಆದರೆ ಪ್ರಿಯಾ ಹಾಸನ್ ಎಲ್ಲ ಭಯಗಳನ್ನೂ ಮೆಟ್ಟಿನಿಂತು ಸಾಧನೆಯ ದಾರಿಯಲ್ಲಿ ಪಯಣಿಸುತ್ತಿದ್ದಾರೆ. ಜಂಭದ ಹುಡುಗಿ ಸಿನಿಮಾ ದನಂತರ ಪ್ರಿಯಾ ಹಾಸನ್ ಕಥೆ, ಚಿತ್ರಕತೆ ಬರೆದು ನಟಿಸಿ ನಿರ್ದೇಶಿಸಿದ್ದ `ಬಿಂದಾಸ್ ಹುಡುಗಿ’ ತೆರೆಗೆ ಬಂದು, ಅದು ಕೂಡಾ ಹಿಟ್ ಆಗಿತ್ತು. ಈ ನಡುವೆ ಪ್ರಿಯಾ ಹಾಸನ್ `ಸ್ಮಗ್ಲರ್’ ಸಿನಿಮಾವನ್ನು ಆರಂಭಿಸಿದರು. ಆದರೆ ಮೊದಲೆರಡು ಸಿನಿಮಾಗಳಷ್ಟು ಸ್ಮಗ್ಲರ್ ಸಲೀಸಾಗಿ ಮುಗಿಯಲಿಲ್ಲ. ಜಂಭದ ಹುಡುಗಿ, ಬಿಂದಾಸ್ ಹುಡುಗಿ ಸಿನಿಮಾದ ನಂತರ ಪ್ರಿಯಾಹಾಸನ್ ಶುರುಮಾಡಿದ್ದ ಸಿನಿಮಾ ಸ್ಮಗ್ಲರ್. ಈ ಸಿನಿಮಾ ಶುರುವಾಗಿ ಬರೋಬ್ಬರಿ ನಾಲ್ಕು ವರ್ಷಗಳೇ ಕಳೆದುಹೋಗಿದೆ. ಆರಂಭದಲ್ಲಿ ವೀರು ಎನ್ನುವ ತೆಲುಗು ಬಿಡ್ಡ ಇದರ ನಿರ್ದೇಶಕರಾಗಿದ್ದರು. ದಿನಕಳೆದಂತೆ ಪ್ರಿಯಾ ಹಾಸನ್ ಅವರೇ ನಿರ್ದೇಶನದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದರು. ಈ ಸಿನಿಮಾ ಆರಂಭವಾಗಿ ಮುಗಿಯೋಹೊತ್ತಿಗೆ ಪ್ರಿಯಾ ತಾಯಿ ತೀರಿಕೊಂಡಿದ್ದರು. ತಾಯಿಯನ್ನು ಕಳೆದುಕೊಂಡ ಪ್ರಿಯಾ ಭಯಂಕರ ಖಿನ್ನತೆಗೊಳಗಾಗಿದ್ದರಂತೆ. `ತಾಯಿಯಿಲ್ಲದೇ ಹೇಗೆ ಜೀವನ ಸಾಗಿಸೋದು’ ಅಂತಾ ಯೋಚಿಸುತ್ತಿದ್ದ ಹೊತ್ತಲ್ಲೇ ಮೇಡಮ್ಮು ಮದುವೆಯಾಗುವ ತೀರ್ಮಾನಕ್ಕೆ ಬಂದಿದ್ದರು. ಈ ನಡುವೆ ಗಜಗರ್ಭದಲ್ಲಿದ್ದಂತಾಗಿದ್ದ ಸ್ಮಗ್ಲರ್ ಈ ವಾರ ತೆರೆಮೇಲೆ ಪ್ರಸವವಾಗುತ್ತಿದೆ. ಈ ಸಿನಿಮಾ ಬಿಡುಗಡೆ ಯಾವ ಪ್ರಚಾರದ ಅಬ್ಬರವಿಲ್ಲದೆ ನಡೆಯುತ್ತಿದೆ. `ಈ ಸಿನಿಮಾದ ಪಬ್ಲಿಸಿಟಿಗೆ ನಾನು ಹೆಚ್ಚು ಮಹತ್ವ ಕೊಡುತ್ತಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಗಂಡುಬೀರಿ ಅಂತಾ ಸಿನಿಮಾ ಆರಂಭಿಸುತ್ತಿದ್ದೀವಿ. ಅದಕ್ಕೆ ಸಿಕ್ಕಾಪಟ್ಟೆ ಗ್ರಾಂಡ್ ಆಗಿ ಪ್ರಚಾರ ಮಾಡ್ತೀವಿ’ ಎನ್ನುತ್ತಿದ್ದಾರೆ.
ಇದೆಲ್ಲ ಏನೇ ಇರಲಿ, ಪ್ರಿಯಾ ಅವರ ಎಲ್ಲ ಸಾಧನೆಗೆ ಮನೆಯವರು, ಹಿತೈಶಿಗಳು ಬೆನ್ನೆಲುಬಾಗಿ ನಿಂತಿದ್ದಾರೆ. ಜಂಭದ ಹುಡುಗಿಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ, ಈ ಬಿಂದಾಸ್ ಗರ್ಲ್ ಚಿತ್ರರಂಗದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ.

Leave a Reply

Your email address will not be published. Required fields are marked *


CAPTCHA Image
Reload Image