One N Only Exclusive Cine Portal

ಹುಲಿರಾಯನ ಹೆಜ್ಜೆ ಗುರುತು!

ಇನ್ನೇನು ದಿನದೊಪ್ಪತ್ತಿನಲ್ಲೇ ಹುಲಿರಾಯ ಚಿತ್ರ ಬಿಡುಗಡೆಯಾಲಿದೆ. ಈ ಚಿತ್ರದ ಮೂಲಕವೇ ಹೀರೋ ಆಗಿ ಹೊರ ಹೊಮ್ಮಿರುವ ಪ್ರತಿಭಾವಂತ ನಟ ಬಾಲು ನಾಗೇಂದ್ರ ಅವರಿಗೂ ಕೂಡ ಬಹು ಕಾಲದ ಒಂದು ಕನಸು ಕೈಗೂಡಿದ ಸಂಭ್ರಮ… ಬಣ್ಣದ ಕನಸು ಹೊತ್ತು ಬರಿಗಾಲಲ್ಲಿ ಅಲೆದಾಡಿ, ಪಡಬಾರದ ಪಾಡು ಪಟ್ಟ, ಕೈಗೆಟುಕಿದಂತೆ ಭ್ರಮೆ ಹುಟ್ಟಿಸಿ ಸಿಗದೆ ಕ್ವಾಟಲೆ ಕೊಟ್ಟ ಸಮಸ್ತ ಪಡಿಪಾಟಲುಗಳಿಂದಲೂ ಬಿಡುಗಡೆ ಸಿಕ್ಕಂಥಾ ಖುಷಿ… ಈಗಾಗಲೇ ಹುಲಿರಾಯ ಚಿತ್ರದ ಎನರ್ಜಿಟಿಕ್ ನಟನೆಯಿಂದ ಭಾರೀ ಪ್ರಶಂಸೆ, ನಿರೀಕ್ಷೆಗಳ ಕೇಂದ್ರಬಿಂದುವಾಗಿರೋ ಬಾಲು ನಾಗೇಂದ್ರರ ಬದುಕಿನ ಹಾದಿಯೂ ಮಜವಾದೊಂದು ಸಿನಿಮಾಕ್ಕಾಗುವಷ್ಟೇ ಚೇತೋಹಾರಿ…

ಇದೀಗ ಚಿತ್ರರಂಗದಲ್ಲಿ ಹೀರೋ ಆಗಿ ಅವತರಿಸಿರೋ ಬಾಲು ನಾಗೇಂದ್ರ ಈ ಹಂತದ ವರೆಗೆ ಬೆಳೆದು ನಿಲ್ಲಲು ನಾನಾ ಕಷ್ಟಗಳ ಹಾದಿ ತುಳಿದಿದ್ದಾರೆ. ಬಗೆ ಬಗೆಯ ಅವತಾರವೆತ್ತಿದ್ದಾರೆ. ಇಂಥಾ ಬಾಲು ಹುಟ್ಟಿದ್ದು ಚನ್ನಪಟ್ಟಣದಲ್ಲಿರುವ ತಾಯಿಯ ತವರು ಮೊಗೇನಹಳ್ಳಿಯಲ್ಲಾದರೂ ಬೆಳೆದದ್ದು, ಶಾಲಾ ಕಾಲೇಜು ಹಂತ ದಾಟಿಕೊಂಡಿದ್ದೆಲ್ಲವೂ ಬೆಂಗಳೂರಿನಲ್ಲಿಯೇ. ತಂದೆ ಹೈಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದವರು. ತಾಯಿ ಅಪ್ಪಟ ಗೃಹಿಣಿ. ಬಾಲು ಬೆನ್ನಿಗೆ ಹುಟ್ಟಿದ ತಮ್ಮ ಸೇರಿದಂತೆ ಶ್ರೀನಗರದಲ್ಲಿಯೇ ಇವರ ಪುಟ್ಟ ಸಂಸಾರ ಗೂಡು ಕಟ್ಟಿಕೊಂಡಿತ್ತು. ಆದರೆ ಬಾಲು ಅಡಿಗಡಿಗೆ ಹೋಗಿ ಕಾಲ ಕಳೆಯುತ್ತಿದ್ದದ್ದು ತಾಯಿಯ ತವರು ಮನೆಯ ಹಳ್ಳಿ ವಾತಾವರಣದಲ್ಲಿಯೇ. ಬೆಂಗಳೂರಿನ ಗೌಜಿಗೆ ಒಗ್ಗಿಕೊಂಡಿದ್ದರೂ ಹಳ್ಳಿಯ ಸೊಗಡನ್ನು ಇಂದಿಗೂ ಮೋಹಿಸುವ ಬಾಲು ಅಂಥಾದ್ದೇ ಸೊಗಡು ಹೊಂದಿರೋ ಕಥೆಯೊಂದರ ಮೂಲಕವೇ ಹೀರೋ ಆಗುತ್ತಿರೋದು ನಿಜಕ್ಕೂ ವಿಶೇಷ.ಇಂಥಾ ಬಾಲುಗೆ ಚಿಕ್ಕಂದಿನಿಂದಲೂ ಚಿತ್ರ ಕಲೆಯಲ್ಲಿ ಅತೀವ ಆಸಕ್ತಿ. ಇದನ್ನು ಗಮನಿಸಿದ ತಂದೆ ಬಾಲುರನ್ನು ಕಲಾ ಮಂದಿರ ಸ್ಕೂಲ್ ಆಫ್ ಆರ್ಟ್‌ಗೆ ಸೇರಿಸಿದ್ದರು. ಅತ್ತಿಬೆಲೆ ಪ್ರಕಾಶ್ ಮೂರ್ತಿ ಇವರ ಮೊದಲ ಪೇಂಟಿಂಗ್ ಗುರು. ಈ ಕಲಾ ಶಾಲೆಯ ಬಾಜಿನಲ್ಲಿಯೇ ಗೌರಿ ದತ್ತು ಅವರ ಬಿಂಬ ಅಭಿನಯ ಶಾಲೆಯೂ ಇತ್ತು. ಆದ್ದರಿಂದಲೇ ಬಾಲು ಸದಾ ಆ ಶಾಲೆಯೊಳಗೆ ಕದ್ದು ನೋಡಿ ಅಭಿನಯ ತರಬೇತಿಯನ್ನು ಆಸೆಗಣ್ಣಿನಿಂದ ನೋಡುತ್ತಾ, ನಾಟಕ ನೋಡುತ್ತಾ ತಮ್ಮೊಳಗಿನ ಸುಪ್ತ ಅಭಿನಯಾಸಕ್ತಿಗೂ ಸಾಣೆ ಹಿಡಿದುಕೊಂಡಿದ್ದರು.
ಈ ನಡುವೆ ಹೈಸ್ಕೂಲು ಮುಗಿಸಿದ ಬಾಲು ಸೇರಿಕೊಂಡಿದ್ದು ನ್ಯಾಷನಲ್ ಕಾಲೇಜಿಗೆ. ಅಲ್ಲಂತೂ ನಾಟಕಕ್ಕಾಗಿ ಪ್ರತ್ಯೇಕ ವಿಭಾಗವೇ ಇತ್ತು. ಈ ಹಂತದಲ್ಲಿಯೇ ನಾಟಕಗಳಲ್ಲಿ ಅಭಿನಯಿಸುತ್ತಾ ಕೆಲ ಸೀರಿಯಲ್, ಚಿತ್ರಗಳಿಗೆ ಸೆಟ್ ಹಾಕೋ ಕೆಲಸವನ್ನೂ ಮಾಡಲಾರಂಭಿಸಿದ್ದರು. ಈ ಸಿನಿಮಾ ಮತ್ತು ಧಾರಾವಾಹಿ ಸಾಂಗತ್ಯ ಸಿಕ್ಕ ನಂತರವಂತೂ ತಾನು ಸಿನಿಮಾ ನಟನಾಗಬೇಕು, ಹೀರೋ ಆಗಿ ವಿಜೃಂಭಿಸಬೇಕು ಅಂತೆಲ್ಲ ಬಲವಾಗಿ ಕನಸು ಕಾಣಲಾರಂಭಿಸಿದ ಬಾಲು, ತನ್ನ ಪೀಚು ದೇಹಸ್ಥಿತಿಯನ್ನು ಕಂಡು ನಕ್ಕುಬಿಟ್ಟಾರೆಂಬ ಕಸಿವಿಸಿಯಿಂದ ಈ ಬಗ್ಗೆ ಯಾರಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲವಂತೆ!
ಇಂಥಾದ್ದರ ನಡುವೆಯೂ ಪೇಂಟಿಂಗ್ ಆಸಕ್ತಿಯನ್ನು ಹಾಗೇ ಮುಂದುವರೆಸಿದ್ದ ಬಾಲು ಬೆಂಗಳೂರು ಹಬ್ಬದಲ್ಲಿ ಫುಟ್ಪಾತುಗಳಲ್ಲಿ ತಮ್ಮ ಪೇಂಟಿಂಗ್‌ಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕಿಡುತ್ತಿದ್ದರು. ಇಂಥಾ ಓಡಾಟಗಳಿಗೆಲ್ಲ ಕಾಲ್ನಡಿಗೆಯನ್ನೇ ನೆಚ್ಚಿಕೊಂಡಿದ್ದ ಬಾಲು ಅದೊಂದು ದಿನ ಶೇಷಾದ್ರಿಪುರಂ ಕಡೆ ಹೊರಟಿದ್ದಾಗ ಮಾರ್ಕೆಟ್ಟು ದಾಟಿದೇಟಿಗೆ ಮೂತ್ರ ಬಾಧೆ ಅಟಕಾಯಿಸಿಕೊಂಡಿತ್ತಂತೆ. ಅದರಿಂದ ಮುಕ್ತಿ ಪಡೆಯೋ ಮಾರ್ಗ ಹುಡುಕುತ್ತಿದ್ದಾಗ, ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರೋ ಕನ್ನಡ ಭವನದ ಶೌಚಾಲಯವೇ ಅದಕ್ಕೆ ಪ್ರಶಸ್ತ ಜಾಗವೆಂದು ನಿರ್ಧರಿಸಿ, ಅತ್ತ ನಡೆದು ಕೆಲಸವನ್ನೂ ಮುಗಿಸಿ ವಾಪಾಸಾಗೋವಾಗ ಸಂಸ ಬಯಲು ರಂಗಮಂದಿರದ ಕಡೆಯಿಂದ ಹಾದು ಹೋದರೆ ಅಲ್ಲಿ ಜನ ಸಾಗರವೇ ನೆರೆದಿತ್ತು. ಅತ್ತಿತ್ತ ಕಣ್ಣು ಹಾಯಿಸಿದರೆ ಒಂದು ಸಾಲಿನ ಕೊನೆಯಲ್ಲಿ ಬಾಲು ಗೆಳೆಯ ವಿನಯ್ ನಿಂತಿದ್ದ. ಹತ್ತಿರ ಹೋಗಿ ವಿಚಾರಿಸಿದರೆ ಅಲ್ಲಿ ಗಿರೀಶ್ ಕಾರ್ನಾಡ್ ಅವರು ತಮ್ಮ ಸಿನಿಮಾಕ್ಕಾಗಿ ಆಡಿಷನ್ ನಡೆಸುತ್ತಿರೋ ವಿಚಾರ ತಿಳಿದಿತ್ತು!
ಆ ವಿಷಯ ತಿಳಿದೇಟಿಗೆ ನಟನಾಗೋ ಹಂಬಲ ಪುಟಿದೆದ್ದು ತನಗೂ ಅವಕಾಶ ಸಿಗಬಹುದಾ ಅಂತ ವಿಚಾರಿಸಿದರೆ ಮುನ್ನಾ ದಿನವೇ ಅಪ್ಲಿಕೇಷನ್ನು ಹಾಕಿದ ಮಂದಿಗೆ ಮಾತ್ರ ಅವಕಾಶ ಎಂಬ ವಿಚಾರ ಗೆಳೆಯನ ಕಡೆಯಿಂದಲೇ ತಿಳಿದಿತ್ತು. ಇನ್ನೇನು ಸಪ್ಪೆ ಮುಖ ಹಾಕಿ ಹೊರಡಬೇಕೆಂಬಷ್ಟರಲ್ಲಿ ಗೆಳೆಯ ಸುಮ್ಮನೆ ತನ್ನ ಹಿಂದೆ ಬಂದು ಕೊನೇ ಸಾಲಿನಲ್ಲಿ ನಿಲ್ಲುವಂತೆ ಸೂಚಿಸಿದ್ದ. ಆ ಹೊತ್ತಿಗೆಲ್ಲಾ ಕಾರ್ನಾಡರು ‘ಸ್ನೇಹಿತರೇ ನಿಮ್ಮ ಮನೆಯಲ್ಲಿ ಕದ್ದರೆ ಎಕ್ಸ್‌ಪ್ರೆಷನ್ ಹೇಗಿರುತ್ತೆ ಎಂಬ ಸಿಚುವೇಷನ್ನಿಗೆ ಸಂಬಂಧಿಸಿದಂತೆ ಅಭಿನಯ ಮಾಡೋ ಸವಾಲೆಸೆದು ‘ಯಾರು ಮೊದಲು ಅಭಿನಯ ಮಾಡ್ತೀರಿ ಅಂದಾಗ ಆ ಪಾಟಿ ಸಂದಣಿಯಲ್ಲಿ ಏಕಾಏಕಿ ನೀರವ ಮೌನ. ಆಡಿಷನ್‌ಗೆ ನಿಂತಿದ್ದ ಸರತಿ ಸಾಲಿನಿಂದ ಎತ್ತಲ್ಪಟ್ಟ ಏಕೈಕ ಕೈ ಮತ್ತು ಹೊರಟ ಸ್ವರ ಹುಲಿರಾಯ ಬಾಲು ನಾಗೇಂದ್ರರದ್ದು!
ಹಾಗೆ ಕಾರ್ನಾಡರ ಎದುರು ನಿಂತ ಬಾಲು ‘ಹಂಗಾದ್ರೆ ನನ್ ಫ್ರೆಂಡ್ ಕ್ಯಾರೆಕ್ಟ್ರು ಯಾರು ಅಂತ ಪ್ರಶ್ನೆ ಎಸೆದಿದ್ದರು. ‘ಸದ್ಯ ನಾನೇ ಅಂದ್ಕೋ ಅಂತ ಕರ್ನಾಡರು ಪಾತ್ರ ಪ್ರವೇಶ ಮಾಡುತ್ತಲೇ ಬಾಲು ಅವರ ಕಪಾಳಕ್ಕೊಂದು ಏಟು ಹಾಕಿದ್ದರಂತೆ. ತಕ್ಷಣವೇ ಕಾರ್ನಾಡರು ಕುಸಿದು ಬಿದ್ದೇಟಿಗೆ ಬಾಲುಗೆ ಕೆಲಸ ಕೆಟ್ಟಿತೆಂಬ ಕಸಿವಿಸಿ. ಹೀಗೆ ಕಂಗಾಲಾಗಿದ್ದ ಬಾಲುರನ್ನು ಕಾರ್ನಾಡರೇ ‘ನಾನು ಕ್ಯಾರೆಕ್ಟರಲ್ಲಿದೀನಿ ಮುಂದ್ವರೆಸು ಅಂದಾಗಲೇ ಕೊಂಚ ಸಮಾಧಾನ. ಹಾಗೆ ಆಡಿಷನ್ ಮುಗಿಸಿ ಮತ್ತೆ ಶೇಷಾದ್ರಿಪುರಂನತ್ತ ಹೊರಟ ಬಾಲುಗೆ ತಾನು ಕಾರ್ನಾಡರಿಗೆ ಹೊಡೆದದ್ದರಿಂದ ಸೆಲೆಕ್ಟಾಗೋದು ಅನುಮಾನವೇಂದೇ ಅನ್ನಿಸಿತ್ತಂತೆ!
ಅದಕ್ಕೆ ಸರಿಯಾಗಿ ಆಡಿಷನ್ ಆಗಿ ನಾಲಕ್ಕು ತಿಂಗಳು ಕಳೆದಿದ್ದರೂ ಸದ್ದೇ ಇರಲಿಲ್ಲ. ಅದಾದ ಮೇಲೆ ಒಂದು ದಿನ ಮ್ಯಾನೇಜರ್ ರಾಮಚಂದ್ರ ಫೋನ್ ಮಾಡಿ ಆಡಿಷನ್‌ನಲ್ಲಿ ಸೆಲೆಕ್ಟಾದ ಶುಭ ವಾರ್ತೆ ತಲುಪಿಸಿದ್ದರು. ಮಾರನೇ ದಿನ ರಂಗಶಂಕರ ಆವರಣದಿಂದ ತಾವೇ ಸ್ವತಃ ಬಾಲುರನ್ನು ಮನೆಗೆ ಕರೆದುಕೊಂಡು ಹೋದ ಕಾರ್ನಾಡ್ ಪೂರ್ಣಚಂದ್ರ ತೇಜಸ್ವಿ ಅವರ ಚಿದಂಬರ ರಹಸ್ಯ ಕಾದಂಬರಿಯನ್ನು ಸಿನಿಮಾ ಮಾಡುತ್ತಿರೋ ವಿಚಾರ ತಿಳಿಸಿ ಅದರಲ್ಲಿನ ಇಂಗ್ಲಿಷ್ ಗೌಡ ಅಥವಾ ರಫಿ ಪಾತ್ರವನ್ನು ಮಾಡೋ ಆಫರ್ ನೀಡಿದ್ದರು. ಕಡೆಗೂ ಆ ಚಿತ್ರದಲ್ಲಿ ಬಾಲು ಇಂಗ್ಲಿಷ್ ಗೌಡನ ಪಾತ್ರ ಮಾಡಿದ್ದರು. ಬಾಲು ಮೊದಲ ಸಲ ನಟನಾಗಿ ಬಣ್ಣ ಹಚ್ಚಿದ್ದು ಹೀಗೆ!
ಅದಾದ ನಂತರ ನಿರ್ದೇಶಕ ಚೈತನ್ಯ ಸೇರಿದಂತೆ ಧಾರಾವಾಹಿ ಮತ್ತು ಸಿನಿಮಾ ಮಂದಿಯ ಸಾಂಗತ್ಯವೂ ಸಿಕ್ಕಿತ್ತು. ಆ ಬಳಿಕ ಬಾಲುಗೆ ತಾನು ಮೊದಲ ಸಲ ಅಭಿನಯಿಸಿರೋ ಚಿತ್ರ ಬಿಡುಗಡೆಯಾಗೋದೇ ಪುಳಕ. ಅದಕ್ಕಾಗಿ ಕಾಯುತ್ತಾ ಕನಸು ಕಾಣುತ್ತಾ ಅದೊಂದು ದಿನ ಕಾಪೌಂಡು ಹತ್ತಿ ಕೂತಿದ್ದ ಬಾಲುಗೆ ಕುಳ್ಳಗಿನ ಕಟ್ಟುಮಸ್ತಾದ ಆಕೃತಿಯೊಂದು ತನ್ನನ್ನೇ ಗಮನಿಸುತ್ತಿರೋ ಗುಮಾನಿ ಕಾಡಲಾರಂಭಿಸಿತ್ತು. ಕಡೆಗು ಆ ಆಕೃತಿ ತಾನೇ ಹತ್ತಿರ ಬಂದು ತಾನು ಸೂರಿ ಅಂತ ಪರಿಚಯಿಸಿಕೊಂಡು ತಾನು ದುನಿಯಾ ಅಂತೊಂದು ಚಿತ್ರ ಮಾಡುತ್ತಿರೋದಾಗಿ ಹೇಳಿ ಅದರಲ್ಲಿ ನೀವು ಆಕ್ಟ್ ಮಾಡ್ತೀರಾ ಎಂಬ ಆಫರ್ ಕೊಟ್ಟಿದ್ದರು. ಅದಾದೇಟಿಗೇ ತಾನೂ ನಟ, ತಾನು ಅಭಿನಯಿಸಿರೋ ಚಿದಂಬರ ರಹಸ್ಯ ಚಿತ್ರ ಇನ್ನೇನು ರಿಲೀಸಾಗುತ್ತೆ ಅಂತ ಬಾಲು ಪ್ರವರ ಒಪ್ಪಿಸುತ್ತಿದ್ದರೆ ಸೂರಿ ಮುಖದಲ್ಲಿ ತೆಳ್ಳಗಿನ ನಗು. ಯಾಕೆಂದರೆ ಚಿದಂಬರ ರಹಸ್ಯ ಅದಾಗಲೇ ಒಂದಷ್ಟು ಎಪಿಸೋಡುಗಳಲ್ಲಿ ಟೆಲಿಫಿಲಂ ರೂಪದಲ್ಲಿ ಚಂದನ ವಾಹಿನಿಯಲ್ಲಿ ಪ್ರದರ್ಶನ ಕಂಡಿತ್ತಂತೆ!
ಈ ನಡುವೆ ಸೂರಿ ನಟಿಸಿ ಅಂತ ಬಾಲುಗೆ ಹೇಳಿದ್ದರೂ ಪಾತ್ರ ಯಾವುದೆಂದು ಮಾತ್ರ ಹೇಳಿರಲಿಲ್ಲ. ಕಡೆಗೊಂದು ದಿನ ರೌರವ ಬಿಸಿಲಲ್ಲಿ ಕ್ಯಾಮೆರಾ ಮುಂದೆ ನಿಲ್ಲಿಸಿದಾಗಲೂ ಬಾಲುಗೆ ಪಾತ್ರ ಯಾವುದೆಂಬುದರ ಸುಳಿವಿರಲಿಲ್ಲ. ಇದೇ ಅವಸ್ಥೆಯಲ್ಲಿ ಮಧ್ಯಾಹ್ನದವರೆಗೂ ಕ್ಯಾಮೆರಾ ಮುಂದೆ ನಿಂತಿದ್ದ ಬಾಲು ಈ ಬಗ್ಗೆ ಸೂರಿಯನ್ನು ಕೇಳುವ ವಿಫಲ ಯತ್ನ ನಡೆಸಿ ಕಡೆಗೂ ಮನೆಯತ್ತ ಮುಖಮಾಡಿ ಮತ್ತೆ ದುನಿಯಾ ಶೂಟಿಂಗಿನತ್ತ ತಲೆ ಹಾಕಿರಲಿಲ್ಲ!
ಇದಾಗಿ ನಾಲಕೈದು ತಿಂಗಳಾದ ಬಳಿಕ ಮತ್ತೆ ಸೂರಿ ಅಚಾನಕ್ಕಾಗಿ ಸಿಕ್ಕಿ ಸ್ನೇಹ ಮತ್ತೆ ಮುಂದುವರೆದಿತ್ತು. ನಂತರ ಅವರ ಸಂಪರ್ಕದಲ್ಲಿದ್ದ ಬಾಲುಗೆ ಇಂತಿ ನಿನ್ನ ಪ್ರೀತಿಯ ಚಿತ್ರದಲ್ಲಿ ಪುಟ್ಟದೊಂದು ಪಾತ್ರ ಸಿಕ್ಕಿತ್ತು. ಜಂಗ್ಲಿ ಚಿತ್ರದಲ್ಲಿ ಪ್ರಭಾವಿ ನೆಗೆಟಿವ್ ಪಾತ್ರವೊಂದು ದಕ್ಕಿತ್ತು. ಆ ನಂತರ ಕಡ್ಡಿಪುಡಿ ಚಿತ್ರದಲ್ಲಿ ಸೂರಿ ಬಾಲು ಅವರಿಗೆಂದೇ ರೆಕ್ಕೆ ವೆಂಕಟೇಶ ಅಂತೊಂದು ಪಾತ್ರ ಸೃಷ್ಟಿಸಿದ್ದರು. ಆ ಪಾತ್ರ ಬಾಲುಗೆ ಭಾರೀ ಹೆಸರು ತಂದು ಕೊಟ್ಟಿತ್ತು. ಆ ಹೊತ್ತಿಗೆಲ್ಲಾ ಬಾಲು ಮತ್ತು ಸೂರಿ ನಡುವೆ ಸ್ನೇಹ ಗಾಢವಾಗಿತ್ತು. ಕಡ್ಡಿಪುಡಿ ಸಂದರ್ಭದಲ್ಲಿಯೇ ಸೂರಿ ತಮ್ಮ ಮುಂದಿನ ಚಿತ್ರದಲ್ಲಿ ನೀನೇ ಹೀರೋ ಅಂತ ಬಾಲುಗೆ ಭರವಸೆಯನ್ನೂ ಕೊಟ್ಟಿದ್ದರಂತೆ. ಇದಾಗುತ್ತಲೇ ಬಾಲುಗೆ ಸಾಲು ಸಾಲಾಗಿ ಅವಕಾಶಗಳು ಬರಲಾರಂಭಿಸಿದ್ದವು. ಆದರೆ ಅದೆಲ್ಲವನ್ನೂ ಸೂರಿ ಕೊಟ್ಟ ಭರವಸೆಯ ನಂಬಿಕೆಯಿಂದಲೇ ನಿರಾಕರಿಸಿದ್ದರು. ಇದಲ್ಲದೇ ಬೇರೆ ಆಫರ್‌ಗಳನ್ನು ಒಪ್ಪಿಕೊಳ್ಳಬೇಡ ಎಂಬ ಮಾತೂ ಸೂರಿ ಕಡೆಯಿಂದ ಹೊರ ಬಿದ್ದಿತ್ತಲ್ಲಾ? ಬಾಲು ಅದನ್ನೇ ನಂಬಿ ಅಖಂಡ ಎರಡು ವರ್ಷ ಕಾದಿದ್ದರಂತೆ. ಈ ನಡುವೆ ಹಣಕಾಸಿನ ಸಮಸ್ಯೆಯೂ ಉಲ್ಭಣಿಸಿ ವಿಕೋಪಕ್ಕೆ ಹೋಗಿದ್ದ ಸಂದರ್ಭದಲ್ಲಿಯೇ ಅದೊಂದು ದಿನ ಸೂರಿ ‘ಇನ್ನೊಂದೆರಡು ಚಿತ್ರವಾದ ಮೇಲೆ ನಿನ್ನ ಚಿತ್ರ ಮಾಡೋಣ, ಆ ತನಕ ಬೇರೆ ನೋಡ್ಕಂಡಿರು ಅಂದು ಬಿಟ್ಟಿದ್ದರು. ಎರಡು ವರ್ಷ ಕಾದು ಅವಕಾಶ ಸೇರಿದಂತೆ ಎಲ್ಲವನ್ನೂ ಕಳೆದುಕೊಂಡಿದ್ದ ಬಾಲು ಅಕ್ಷರಶಃ ದಿಕ್ಕು ತೋಚದಂತಾಗಿದ್ದರಂತೆ!
ಆ ಬಳಿಕ ತಾನೇನು ಸೂರಿಗೋಸ್ಕರ ಬಂದಿಲ್ಲ, ತನ್ನ ಆಸೆ, ಕನಸು ನನ್ನದೆಂಬ ಗಟ್ಟಿ ನಿರ್ಧಾರ ಮಾಡಿ ಎದ್ದು ನಿಂತ ಬಾಲು ಹೊಸತೇನನ್ನೋ ಮಾಡೋ ಹಂಬಲದೊಂದಿಗೆ ಮತ್ತೆ ಹುಡುಕಾಟ ಆರಂಭಿಸಿದ್ದರು. ಸಿನಿಮಾ ವಿಚಾರದಲ್ಲಿ ಸೂರಿ ಮತ್ತು ಬಾಲು ಇಬ್ಬರೂ ಅಕ್ಷರಶಃ ತಿಕ್ಕಲರೇ. ಈ ಇಬ್ಬರ ಗೆಳೆತನದಲ್ಲಿ ಅದ್ಯಾಕೆ ಗ್ಯಾಪು ಕ್ರಿಯೇಟ್ ಆಯಿತೋ ಗೊತ್ತಿಲ್ಲ. ಈ ಕ್ಷಣಕ್ಕೂ ಸೂರಿ ಮತ್ತು ಬಾಲು ಒಟ್ಟು ಸೇರಿ ಸಿನಿಮಾ ಮಾಡಿದರೆ ಅದ್ಭುತವಾದ್ದೊಂದು ಕಲಾಕೃತಿ ‘ದುನಿಯಾಗೆ ದಕ್ಕೋದರಲ್ಲಿ ಡೌಟಿಲ್ಲ. ಆದರೆ, ಆ ಸಂದರ್ಭದಲ್ಲಿ ಬಾಲುಗೆ ನೆನಪಾದದ್ದು ನಾಲಕೈದು ವರ್ಷಗಳ ಹಿಂದೆ ತುಘ್ಲಕ್ ಚಿತ್ರದಲ್ಲಿ ಅವಕಾಶ ಕೊಟ್ಟಿದ್ದ ನಿರ್ದೇಶಕ ಅರವಿಂದ ಕೌಶಿಕ್. ತಕ್ಷಣವೇ ನಂಬರು ಹುಡುಕಿದ ಬಾಲು ‘ಸಿನಿಮಾ ಮಾಡೋಣ್ವಾ ಅಂತ ಮೆಸೇಜು ಬಿಟ್ಟಿದ್ದರು. ಅತ್ತಲಿಂದ ತಕ್ಷಣವೇ ‘ಮಾಡೇ ಬಿಡಣ ಎಂಬ ಮೆಸೇಜು ಬಂದಿತ್ತು. ಹಾಗೆ ಶುರುವಾದದ್ದು ಹುಲಿರಾಯ ಚಿತ್ರ.
ಈ ಚಿತ್ರ ಆರಂಭಿಸಿದಾಗಲೂ ಕಥೆ, ನಿರ್ದೇಶಕ ಮತ್ತು ನಟ ಬಿಟ್ಟರೆ ಬೇರ‍್ಯಾವ ದಿಕ್ಕು ಇರಲಿಲ್ಲ. ಕಡೆಗೋರ್ವ ನಿರ್ಮಾಪಕರೂ ಇರಲಿಲ್ಲ. ಹೀಗಿರುವಾಗಲೇ ಬಾಲು ಗೆಳೆಯ ಕೇಶವ ಹಣ ಹಾಕಲು ಮುಂದೆ ಬಂದು ಫಸ್ಟ್ ಲುಕ್ ಟೀಸರ್ ರೆಡಿಯಾಗಿತ್ತು. ಆದರೆ ಅದಾಗೋ ಹೊತ್ತಿಗೆಲ್ಲ ಕೇಶವ ಹಿಂದೆ ಸರಿದಿದ್ದರು. ಈ ಟೀಸರ್ ಅನ್ನು ಯೂಟ್ಯೂಬ್ ನಲ್ಲಿ ಬಿಟ್ಟಾಗ ಸಿಕ್ಕಿದ್ದು ಪ್ರಶಂಸೆಯ ಮಹಾಪೂರ. ಬಳಿಕ ಚಿತ್ರರಂಗದ ಬಗ್ಗೆ ಉತ್ಕಟ ಕನಸು ಹೊಂದಿರೊ ನಿರ್ಮಾಪಕ ನಾಗೇಶ್ ಕೋಗಿಲು ಅವರು ಸಿಕ್ಕಿ ಕಡೆಗೂ ಹುಲಿರಾಯ ಪಕ್ಕಾ ರೆಡಿಯಾಗಿದ್ದಾನೆ.
ಈ ಚಿತ್ರದ ಮೂಲಕವೇ ಬಾಲು ನಾಗೇಂದ್ರ ಪೂರ್ಣಪ್ರಮಾಣದ ಕಮರ್ಷಿಯಲ್ ಹೀರೋ ಆಗಿ ಹೊರ ಹೊಮ್ಮುತ್ತಿದ್ದಾರೆ. ನಾನಾ ಕಷ್ಟ ಕೋಟಲೆ, ನಿರಾಸೆಗಳನ್ನು ನುಂಗಿಕೊಂಡೇ ಛಲ ಬಿಡದೇ ಈ ಹಂತದ ವರೆಗೆ ಬೆಳೆದು ಬಂದಿರೋ ಬಾಲು ನಾಗೇಂದ್ರ ಅವರಿಗೆ ಹುಲಿರಾಯ ಭರ್ಜರಿ ಯಶ ತಂದು ಕೊಡಲೆಂದು ಹಾರೈಸೋಣ.

Leave a Reply

Your email address will not be published. Required fields are marked *


CAPTCHA Image
Reload Image