One N Only Exclusive Cine Portal

ಹೊಸ ನಕ್ಷತ್ರದ ಕಿಡಿ

ಭುವನ್‌ಚಂದ್ರ ಅಭಿನಯದ ಬಹು ನಿರೀಕ್ಷಿತ ಚಿತ್ರ `ಕಿಡಿ ಬಿಡುಗಡೆಯಾಗಿದೆ. ನಿರ್ಮಾಣ ಹಂತದಿಂದಲೂ ಸಾಕಷ್ಟು ಕುತೂಹಲ ಕೆರಳಿಸಿದ್ದ ಈ ಚಿತ್ರ ಪ್ರೇಕ್ಷಕರನ್ನು ಮೋಡಿ ಮಾಡುವಲ್ಲಿ ಯಶ ಕಂಡಿದೆ. ಈ ಚಿತ್ರ ನೋಡಿದ ಪ್ರೇಕ್ಷಕರೇ ಕನ್ನಡ ಚಿತ್ರರಂಗದಲ್ಲೊಬ್ಬ ಹೊಸಾ ಸ್ಟಾರ್ ಹುಟ್ಟಿಕೊಂಡ ಅಂತ ಅಭಿಪ್ರಾಯ ಪಡುತ್ತಿದ್ದಾರೆ!
ಸಾಹಸಸಿಂಹ ವಿಷ್ಣವರ್ಧನ್ ಅಭಿನಯದ ವಿಷ್ಣು ಸೇನಾ ಚಿತ್ರದಲ್ಲಿ ಪಾತ್ರ ಮಾಡಿದ್ದ ಸ್ಫುರದ್ರೂಪಿ ಯುವಕ ಭುವನ್ ಚಂದ್ರ ಆ ಮೂಲಕವೇ ಎಲ್ಲರ ಗಮನ ಸೆಳೆದಿದ್ದರು. ಈ ಚಿತ್ರದಲ್ಲಿ ಅವರ ಅಭಿನಯ ಗಮನಿಸಿದ ಬಹುತೇಕರು ಈ ಹುಡುಗ ನಾಯಕ ನಟನಾಗಿ ನೆಲೆ ನಿಲ್ಲೋದು ಹ್ಯಾರಂಟಿ ಎಂದೂ ಮಾತಾಡಿಕೊಂಡಿದ್ದರು. ಆದರೆ, ಆ ಹಾದಿಯಲ್ಲಿ ಬಹಳಷ್ಟು ಶ್ರಮ ಹಾಕಿದರೂ ಸಂಪೂರ್ಣವಾಗಿ ಹೀರೋ ಆಗಲು ಇಷ್ಟು ವರ್ಷ ಪಡಿಪಾಟಲು ಪಡಲೇ ಬೇಕಾಗಿ ಬಂದಿತ್ತು. ಇದೀಗ ಅವರು ಕಿಡಿ ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕರಾಗಿ ಹೊರ ಹೊಮ್ಮಿದ್ದಾರೆ.
ರೀಮೇಕ್ ಚಿತ್ರವಾದರೂ ಆರಂಭ ಕಾಲದಿಂದಲೂ ಕುತೂಹಲ ಕಾಯ್ದುಕೊಂಡಿದ್ದ ಚಿತ್ರ ಕಿಡಿ. ಕೋರಿಯೋಗ್ರಾಫರ್ ರಸ್.ರಘು ಮೊದಲ ಸಲ ನಿರ್ದೇಶನ ಮಾಡಿರೋ ಈ ಚಿತ್ರದ ಆಡಿಯೋ ಮತ್ತು ಟ್ರೈಲರ್ ಬಿಡುಗಡೆಯಾಗಿ ಜನಮನ ಗೆದ್ದಿತ್ತು. ಈ ವಾರ ಸಿನಿಮಾ ಕೂಡಾ ರಿಲೀಸಾಗಿದೆ.
ಮಲೆಯಾಳಂನಲ್ಲಿ ಸೂಪರ್ ಹಿಟ್ಟಾಗಿದ್ದ ಕಲಿ ಚಿತ್ರದ ರೀಮೇಕ್ `ಕಿಡಿ. ಮಲೆಯಾಳದ ಸೂಪರ್ ಸ್ಟಾರ್ ಮಮ್ಮುಟಿ ಅವರ ಪುತ್ರ ದುಲ್ಕರ್ ಕಲಿಯಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದರು. ಆ ಪಾತ್ರವನ್ನಿಲ್ಲಿ ಭುವನ್ ಚಂದ್ರ ನಿರ್ವಹಿಸಿದ್ದಾರೆ. ಕಿರುತೆರೆ ನಟಿ ಪಲ್ಲವಿ ಈ ಚಿತ್ರದ ಮೂಲಕ ನಾಯಕಿಯಾಗಿ ಹೊರ ಹೊಮ್ಮಿದ್ದಾರೆ.
ಕೋಪ ಎಂಬುದನ್ನು ಬಹುತೇಕರು ಸಣ್ಣ ವಿಚಾರ ಅಂದುಕೊಂಡಿರುತ್ತಾರೆ. ಎಲ್ಲರ ನಿತ್ಯ ಬದುಕಿನ ಜೊತೆಗಾರನಂತಿರೋ ಈ ಕೋಪ ಯಾಮಾರಿದರೆ ಎಲ್ಲೆಲ್ಲಿಗೋ ಕೊಂಡೊಯ್ದು ಬಿಡುತ್ತದೆ. ಅಂಥಾದ್ದೇ ಭಿನ್ನವಾದ ಕಥಾ ಹಂದರ ಹೊಂದಿರೋ ಚಿತ್ರ ಕಿಡಿ. ಇದರಲ್ಲಿ ಭುವನ್ ಚಂದ್ರ ಕಿಡಿಕಾರುವ ನಿಗಿ ನಿಗಿ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಮೊದಲ ಭಾಗ ಇನ್ನೊಂದಿಷ್ಟು ವೇಗ ಪಡೆದುಕೊಳ್ಳಬೇಕಿತ್ತು. ದ್ವಿತೀಯ ಭಾಗವಂತೂ ಕ್ಷಣಕ್ಷಣವೂ ರೋಚಕವಾಗಿ ಸಾಗುತ್ತದೆ. ವಸಂತರಾವ್ ಕುಲಕರ್ಣಿ ಮೂಡಿಗೆರೆಯ ಬಳಿ ಡಾಬಾದ ಸೆಟ್ ಕೃತಕವಾದದ್ದು ಅನ್ನಿಸೋದೇ ಇಲ್ಲ. ಅಷ್ಟು ನೈಜವಾಗಿದೆ. ಎಮಿಲ್ ಸಂಗೀತ ಸಂಯೊಜನೆ ಮತ್ತು ಹಿನ್ನೆಲೆ ಸಂಗೀತ ಹೊಸತನದಿಂದ ಕೂಡಿದೆ.
ಈ ಚಿತ್ರದಲ್ಲಿ ಭುವನ್ ಚಂದ್ರ ಅವರ ಚುರುಕಾದ ಅಭಿನಯ ಎಲ್ಲರ ಗಮನ ಸೆಳೆದಿದೆ. ಮೆಚ್ಚುಗೆಗೂ ಪಾತ್ರವಾಗಿದೆ. ಈ ಮೂಲಕವೇ ಅವರು ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟನಾಗಿ ನೆಲೆ ನಿಲ್ಲುವ ಎಲ್ಲ ಲಕ್ಷಣಗಳೂ ಗೋಚರಿಸಿವೆ.
ಪಕ್ಕಾ ಪಳಗಿದ ನಟನಂತೆ ಕಿಡಿ ಚಿತ್ರದಲ್ಲಿ ನಟಿಸೋ ಮೂಲಕ ಭುವನ್ ಚಂದ್ರ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಗೆದ್ದಿದ್ದಾರೆ. ಸಾಮಾನ್ಯವಾಗಿ ಎಲ್ಲರೂ ಗೆಲುವಿಗಾಗಿ ಹಪಹಪಿಸುತ್ತಾರೆ. ಆದರೆ ಅದಕ್ಕಾಗಿ ನಾನಾ ಕೆಲಸ ಮೈಮೇಲೆಳೆದುಕೊಳ್ಳಲು ಹಿಂದೇಟು ಹಾಕುತ್ತಾರೆ. ಆದರೆ ಭುವನ್ ಚಂದ್ರ ಕಿಡಿ ಚಿತ್ರದ ವಿಚಾರದಲ್ಲಿ ನಾನಾ ಜವಾಬ್ದಾರಿಗಳನ್ನು ಮೇಲೆಳೆದುಕೊಂಡು ಅದೆಲ್ಲವನ್ನೂ ಅಚ್ಚುಕಟ್ಟಗಿ ನಿರ್ವಹಿಸಿದ್ದರು. ಅದಕ್ಕೆ ಕಾರಣವಾಗಿದ್ದದ್ದು ಗೆಲ್ಲಲೇ ಬೇಕೆಂಬ ಹಂಬಲ. ಅದೆಲ್ಲವೂ ಇದೀಗ ಸಾರ್ಥಕಗೊಂಡಿದೆ!

Leave a Reply

Your email address will not be published. Required fields are marked *


CAPTCHA Image
Reload Image