One N Only Exclusive Cine Portal

3 ಘಂಟೆ 30 ದಿನ 30 ಸೆಕೆಂಡೆಲ್ಲವೂ ಪ್ರೇಮಮಯ!

ಕಿರುತೆರೆ, ಜಾಹೀರಾತು ಕ್ಷೇತ್ರಗಳಲ್ಲಿ ಸಾಕಷ್ಟು ಹೆಸರು ಮಾಡಿ ಸದ್ಯ ಸಿನಿಮಾ ಕ್ಷೇತ್ರಕ್ಕೂ ಅಡಿಯಿರಿಸಿರುವ ಜಿ.ಕೆ. ಮಧುಸೂಧನ್ ಅವರ ನಿರ್ದೇಶನದ ಚೊಚ್ಚಲ ಸಿನಿಮಾ ‘೩ ಘಂಟೆ ೩೦ ದಿನ ೩೦ ಸೆಕೆಂಡ್. ಈ ಸಿನಿಮಾ ಶುರುವಾದಾಗಿನಿಂದ ಅತಿ ಹೆಚ್ಚು ಗಮನ ಸೆಳೆದಿದ್ದು ಮತ್ತು ಕುತೂಹಲಕ್ಕೂ ಕಾರಣವಾಗಿದ್ದೇ ಈ ವಿಚಿತ್ರ ಟೈಟಲ್!


ಟೈಟಲ್ ನೋಡಿದವರು ಇದು ಥ್ರಿಲ್ಲರ್ ಸಿನಿಮಾನಾ ಅಂತಾ ಊಹೆ ಪಟ್ಟಿದ್ದೂ ಇದೆ. ಇದರಲ್ಲ್ಲಿ ಥ್ರಿಲ್ ನೀಡುವ ಅಂಶಗಳು ಇದ್ದರೂ ಇದು ಔಟ್ ಅಂಡ್ ಔಟ್ ಲವ್ ಸಬ್ಜೆಕ್ಟನ್ನು ಹೊಂದಿರುವ ಸಿನಿಮಾ.
ಸೆಂಟಿಮೆಂಟುಗಳೇ ಇಲ್ಲದೆ ಪ್ರೀತಿ, ಪ್ರೇಮವನ್ನೆಲ್ಲಾ ಕೆಮಿಕಲ್ ರಿಯಾಕ್ಷನ್ನು ಅಂತಾ ನಂಬಿರೋ ಹುಡುಗಿ. ಆಕೆಯ ತಂದೆ ಶ್ರೀಮಂತ. ತಾಯಿ ಈಕೆ ಚಿಕ್ಕವಳಿದ್ದಾಗಲೇ ಬಿಟ್ಟು ಹೋಗಿರುತ್ತಾಳೆ. ತನ್ನದೇ ನ್ಯೂಸ್ ಚಾನಲ್ಲನ್ನು ಹೊಂದಿ, ಕ್ಷಣಮಾತ್ರದಲ್ಲಿ ಮಂತ್ರಿಗಿರಿಯಿಂದ ಕೆಳಕ್ಕಿಳಿಸುವ, ಮುಖ್ಯ ಮಂತ್ರಿಗೇ ಚೋಕು ಕೊಡೋ ತನ್ನದೇ ಚಾನೆಲ್ಲಿನ ಫೇಮಸ್ ಟೀವಿ ಪತ್ರಕರ್ತೆ ಈಕೆ. ಇನ್ನು ಚಾಲೆಂಜ್ ಅಂತಾ ತಗೊಂಡರೆ ಅದನ್ನು ಮಾಡಿಯೇ ತೀರುವ ಯುವ ವಕೀಲ ಚಿತ್ರದ ಹೀರೋ. ವರ್ಷದ ಹಿಂದೆ ನಡೆದ ಸದಾನಂದಗೌಡರ ಮಗನ ಪ್ರಕರಣವನ್ನು ನೆನಪಿಸುವ ಪ್ರಕರಣದೊಂದಿಗೆ ಚಿತ್ರ ಆರಂಭವಾಗುತ್ತದೆ. ನಂತರ ‘ಪ್ರೀತಿ ಸತ್ಯಾನಾ ಮಿಥ್ಯಾನಾ ಅನ್ನೋ ಚಾನೆಲ್ ಚರ್ಚೆ ಆರಂಭವಾಗುತ್ತದೆ. ಹಾಗೆ ಆರಂಭವಾಗೋ ಪ್ಯಾನಲ್ ಡಿಸ್ಕಷನ್ನು ಮತ್ತೊಂದು ಅಸಲೀ ಆಟದತ್ತ ಹೊರಳಿಕೊಳ್ಳುತ್ತದೆ. ಪ್ರೀತಿ ಅನ್ನೋದೇ ಸುಳ್ಳು ಅಂತಾ ನಂಬಿದ ಹುಡುಗಿಯ ಮನಸ್ಸಿನಲ್ಲಿ ಪ್ರೀತಿ ಚಿಗುರಿಸುವ ಹೊಸ ಬಗೆಯ ರಿಯಾಲಿಟಿ ಟಾಸ್ಕ್ ಅದು! ಈ ಟಾಸ್ಕ್‌ನಲ್ಲಿ ಹೀರೋ ಗೆಲ್ಲುತ್ತಾನಾ ಇಲ್ಲವಾ ಅನ್ನೋದು ಸಿನಿಮಾದ ಅಂತಿಮ ಸೀಕ್ರೆಟ್.


‘ಪ್ರೀತಿ ಸತ್ಯಾನಾ ಮಿಥ್ಯಾನಾ ಅಂತಾ ನಿರೂಪಿಸೋ ಸುದೀರ್ಘ ಹಾದಿಯಲ್ಲಿ ಒಂದಷ್ಟು ಉಪಕಥೆಗಳನ್ನೂ ಬಳಸಿಕೊಂಡು ಭರಪೂರ ಬೋಧನೆಯನ್ನು ನಿರ್ದೇಶಕರು ನೀಡಿದ್ದಾರೆ. ಮೇಲ್ನೋಟಕ್ಕೆ ಇದೇನಪ್ಪಾ ಪ್ರೀತಿಯ ಬಗ್ಗೆ ಇಷ್ಟೊಂದು ಉಪದೇಶ ನೀಡ್ತಿದ್ದಾರಲ್ಲಾ? ಅಂತನಿಸಿದರೂ ವಾಸ್ತವವನ್ನು ತೆರೆದಿಡುವ ಕಾರಣಕ್ಕೆ ನಿರ್ದೇಶಕ ಮಧುಸೂಧನ್ ಇಂತಾ ಪ್ರವಚನ ಮಾರ್ಗವನ್ನು ಅನುಸರಿಸಿದ್ದಾರೆ ಅನಿಸುತ್ತದೆ. ಒಂದೇ ಒಂದು ಸಮಸ್ಯೆಯೆಂದರೆ, ನಿರ್ದೇಶಕರು ವಿಜ್ಞಾನ, ಮನಶಾಸ್ತ್ರ ಮತ್ತು ಸಮಾಜ ವಿಜ್ಞಾನವನ್ನು ಅಪಾರವಾಗಿ ಓದಿಕೊಂಡು, ತಾವು ತಿಳಿದಿರೋದನ್ನೆಲ್ಲಾ ಏಕಕಾಲಕ್ಕೆ ನೋಡುಗರಿಗೆ ತಲುಪಿಸುವ ಪ್ರಯತ್ನ ಮಾಡಿರುವುದು. ಈ ಕಾರಣಕ್ಕೋ ಏನೋ ಪ್ಯಾನಲ್ ಡಿಸ್ಕಷನ್ನಿನಲ್ಲಿ ಆರಂಭವಾಗುವ ಚರ್ಚೆ, ಸಂವಾದ ಸಿನಿಮಾದ ಕ್ಲೈಮ್ಯಾಕ್ಸ್ ಹಂತ ತಲುಪಿದರೂ ಹಾಗೇ ಮುಂದುವರೆಯುತ್ತದೆ.


ಇದೆಲ್ಲ ಏನೇ ಆದರೂ ಜಿ.ಕೆ. ಮಧುಸೂಧನ್ ಎರಡು ದಶಕದ ಹಿಂದಿನ ನಿರ್ದೇಶಕರ ವರಸೆಗಳನ್ನು ಮತ್ತೆ ತೆರೆ ಮೇಲೆ ಪ್ರಯೋಗಿಸಿದ ಫೀಲ್ ನೋಡುಗರ ಅನುಭವಕ್ಕೆ ದಕ್ಕುತ್ತದೆ. ಪ್ರತಿಯೊಂದು ದೃಶ್ಯಕ್ಕೂ ಅದಕ್ಕೊಪ್ಪುವ ಹಿನ್ನೆಲೆ ಸಂಗೀತ ಕೊಡಿಸಿದ್ದಾರೆ. ಬಹುಶಃ ಮಧುಸೂಧನ್ ಅವರು ಕನ್ನಡದಲ್ಲಿ ಅತಿಹೆಚ್ಚು ಜಾಹೀರಾತುಗಳನ್ನು ರೂಪಿಸಿರುವ ಕಾರಣಕ್ಕೋ ಏನೋ ಸಿನಿಮಾದಲ್ಲಿ ತೀರಾ ಸರಳವಾಗಿ ರೂಪುಗೊಳ್ಳಬೇಕಿದ್ದ ದೃಶ್ಯಗಳೂ ಸಹ ಜಾಹೀರಾತುಗಳಂತೆ ಕೃತಕ ಎನಿಸುತ್ತದೆ. ಆದರೆ ಪ್ರತಿಯೊಂದು ಫ್ರೇಮನ್ನೂ ಅತಿ ಶ್ರದ್ಧೆ ವಹಿಸಿ ಕಟ್ಟಿಕೊಟ್ಟಿರೋ ನಿರ್ದೇಶಕರ ಶ್ರಮ ಕೂಡಾ ತೆರೆಯಲ್ಲಿ ಪ್ರತಿಫಲಿಸಿದೆ. ಈ ಎಲ್ಲ ಕಾರಣಕ್ಕೆ ಇದನ್ನು ನಿರ್ದೇಶಕ ಪ್ರಧಾನ ಸಿನಿಮಾ ಎಂದರೂ ತಪ್ಪಾಗೋದಿಲ್ಲ.


ಇನ್ನು ಚಿತ್ರದ ನಾಯಕ ಅರು ಗೌಡ ಲವಲವಿಕೆಯಿಂದ ನಟಿಸಿದ್ದಾರೆ. ಕಾವ್ಯ ಶೆಟ್ಟಿಯ ಗತ್ತು ತೆರೆಗೆ ಸೂಕ್ತವಾಗಿ ಹೊಂದಿಕೆಯಾಗಿದೆ. ಖತರ‍್ನಾಕ್ ಪೊಲೀಸ್ ಆಗಿ ಕಾಣಿಸಿಕೊಂಡಿರುವ ಯತಿರಾಜ್ ಅವರ ನಟನೆಗೆ ಅವರ ಗರಿ ಮೀಸೆ ಕೂಡಾ ಸಾಥ್ ನೀಡಿದೆ! ಶ್ರೀಧರ್ ಸಂಭ್ರಮ್ ಅವರ ಹಾಡುಗಳು ಚೆಂದಗೆ ಕೇಳಿಸುತ್ತವೆ. ಇಡೀ ಚಿತ್ರದಲ್ಲಿ ವೆರೈಟಿ ವರೈಟಿ ಹಿನ್ನೆಲೆ ಸಂಗೀತ ನೀಡಲು ಅವರು ಪಟ್ಟಿರುವ ಶ್ರಮ ವರ್ಕೌಟಾಗಿದೆ. ಕುಟುಂಬದ ಎಲ್ಲರೂ ಕೂತು ನೋಡಬಹುದಾದ ಯಾವುದೇ ಅಸಭ್ಯ ದೃಶ್ಯಗಳಿಲ್ಲದ, ಕೆಟ್ಟಾ ಕೊಳಕು ಡೈಲಾಗುಗಳಿಲ್ಲದ ಸಭ್ಯತೆಯಿಂದಲೂ ಗಮನ ಸೆಳೆಯೋ ಈ ಚಿತ್ರ ಇದುವರೆಗೆ ಹುಟ್ಟಿಸಿದ್ದ ನಿರೀಕ್ಷೆಗಳಿಗೇನೂ ಮೋಸ ಮಾಡೋದಿಲ್ಲ.

Leave a Reply

Your email address will not be published. Required fields are marked *


CAPTCHA Image
Reload Image