One N Only Exclusive Cine Portal

ಭೂಮಂಡಲದಲ್ಲಿರುವ ನಾಗಮಂಗಲಿಗರು ಮಾತ್ರವಲ್ಲ, ಎಲ್ಲರೂ ನೋಡಬೇಕಾದ ಸಿನಿಮಾ

3O5A7168 ಹ್ಯಾಪಿ ಬರ್ತ್ ಡೇ
`ಹ್ಯಾಪಿ ಬರ್ತ್ ಡೇ’ ಚಿತ್ರ ಆರಂಭ ಕಾಲದಿಂದಲೂ ಥರಹೇವಾರಿ ರೀತಿಯಲ್ಲಿ ಕುತೂಹಲ ಕೆರಳಿಸುತ್ತಲೇ ಬಂದಿದೆ. ಶುರುವಿನಲ್ಲಿ ಇದೊಂದು ಗ್ರಾಮೀಣ ಸೊಗಡಿನ ಅಪ್ಪಟ ಪ್ರೇಮ ಕಥೆ ಹೊಂದಿರುವ ಚಿತ್ರವಾಗಿ ಬಿಂಬಿತವಾಗಿತ್ತು.
ನಿರ್ದೇಶಕ ಮಹೇಶ್ ಸುಖಧರೆ ನುಡಿದಂತೆ ನಡೆದಿದ್ದಾರೆ. `ಈ ನೆಲದ ಘಮಲನ್ನು ಕಟ್ಟಿಕೊಡುವ, ನನ್ನ ತನದ ಸಿನಿಮಾ ಮಾಡುತ್ತೇನೆ’ ಎಂದು ಸುಖಧರೆ ಪ್ರೇಕ್ಷಕರಿಗೆ ಪ್ರಾಮಿಸ್ ಮಾಡಿದ್ದರು. ಕನ್ನಡದ ಸೂಪರ್ ಸ್ಟಾರ್ ಗಳಾದ, ದರ್ಶನ್, ಪುನೀತ್ ರಾಜ್ ಕುಮಾರ್, ಯಶ್, ಗಣೇಶ್ ಮತ್ತು ರೆಬೆಲ್ ಸ್ಟಾರ್ ಅಂಬರೀಶ್ ಆದಿಯಾಗಿ ಎಲ್ಲರೂ `ಹ್ಯಾಪಿ ಬರ್ತ್ ಡೇ’ ಸಿನಿಮಾದ ಕುರಿತು ನಿರೀಕ್ಷೆಯ ಮಾತುಗಳನ್ನಾಡಿದ್ದರು. ಈಗ ಮಹೇಶ್ ತಮ್ಮ ಮಾತನ್ನು ನೂರಕ್ಕೆ ನೂರರಷ್ಟು ಉಳಿಸಿಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬರೀ ಹಾರರ್, ಹೈಟೆಕ್ ಲೈಫ್ ಸ್ಟೈಲಿನ ಚಿತ್ರಗಳು, ರೌಡಿಸಂ ಮುಂತಾದ ಬೇಡದ ವೈಭವೀಕರಣದ ಸಿನಿಮಾಗಳನ್ನೇ ನೋಡಿ ನೋಡಿ ಸುಸ್ತಾಗಿದ್ದ ಪ್ರೇಕ್ಷಕರಿಗೆ `ಹ್ಯಾಪಿ ಬರ್ತ್ ಡೇ’ ಪೂರ್ಣ ಪ್ರಮಾಣದಲ್ಲಿ ಮನತಣಿಸೋದು ಗ್ಯಾರೆಂಟಿ.
ಮಂಡ್ಯ, ಮೈಸೂರು, ನಾಗಮಂಗಲವನ್ನೇ ಪ್ರಧಾನವಾಗಿಟ್ಟುಕೊಂಡು, ಆ ಪ್ರಾಂತ್ಯದ ಭಾಷೆಯನ್ನೇ ಬಳಸಿಕೊಂಡು ಕಟ್ಟಿಕೊಟ್ಟಿರುವ ಚಿತ್ರ ಹ್ಯಾಪಿ ಬರ್ತ್ ಡೇ. ಕೈ ಇಟ್ಟ ಯಾವ ಕೆಲಸದಲ್ಲೂ ಏಳ್ಗೆಯಾಗದೆ, ಹೆಚ್ಚೂ ಕಮ್ಮಿ `ಬಿಟ್ಟಿ ಕೂಳು’ ಎನಿಸಿಕೊಂಡು, ಮುಂದಿನ ದಾರಿ ಏನು ಅನ್ನೋದು ಗೊತ್ತಾಗದೇ ಅಣ್ಣ-ಅತ್ತಿಗೆಯ ಆಶ್ರಯದಲ್ಲಿರುವ ಹುಡುಗ. ದೊಣ್ಣೆ ವರಸೆಯ ಕಿಂಗು ಎನಿಸಿಕೊಂಡ ವ್ಯಕ್ತಿಯೊಬ್ಬ ಮೋಸದ ಎಳೆಗೆ ಸಿಲುಕಿ ಸೋಲಿಗೆ ಎದೆಯೊಡ್ಡಿ, ಅದೇ ಹೊತ್ತಿಗೆ ಪ್ರೀತಿಯ ಹೆಂಡತಿಯನ್ನೂ ಕಳೆದುಕೊಂಡು, ಕುಡಿತದ ಚಟಕ್ಕೆ ಬಿದ್ದಿರುತ್ತಾನೆ. ಈತನಿಗೊಬ್ಬಳು ಮುದ್ದಾದ ಮಗಳು. ಜೆರಾಕ್ಸ್ ಅಂಗಡಿ ನಡೆಸಿಕೊಂಡು, ತನ್ನಪ್ಪನನ್ನು ಸಲಹುತ್ತಿರುತ್ತಾಳೆ. ಈ ಹುಡುಗಿಗೂ ಆ ಹುಡುಗನಿಗೂ ಲವ್ವಾಗಿಬಿಡುತ್ತದೆ. ಏನಾದರೂ ಮಾಡಿ ಹುಡುಗನಿಗೊಂದು ಬದುಕು ಕಲ್ಪಿಸಿಕೊಟ್ಟು ಆ ಮೂಲಕ ತನ್ನ ಜೀವನವನ್ನೂ ರೂಪಿಸಿಕೊಳ್ಳುವ ಪ್ಲಾನು ಮಾಡುತ್ತಾಳೆ. ಅಷ್ಟರಲ್ಲೇ ದೊಡ್ಡದೊಂದು ತಿರುವು ಘಟಿಸಿಬಿಡುತ್ತದೆ. ಹುಡುಗಿಗೆ ಕೊಟ್ಟ ಭಾಷೆಯನ್ನು ಮುರಿದು ಆಕೆಯ ತಂದೆಯ ಆಸೆ ಈಡೇರಿಸಬೇಕಾದ ಸವಾಲು ನಾಯಕನಿಗೆ ಎದುರಾಗುತ್ತದೆ…
ಅಬ್ಬಬ್ಬ ಇಂಥದ್ದೊಂದು ಸರಳ ಕಥೆಯನ್ನು ಅದೆಷ್ಟು ಚೆಂದಗೆ ಹೆಣೆದಿದ್ದಾರೆ ಗೊತ್ತಾ? ನಾಗಮಂಗಲದ ಭಾಷೆಯನ್ನು ಮುತ್ತಿನಂತೆ ಪೋಣಿಸಿದ್ದಾರೆ. ಅಲ್ಲಿನ ಹೆಣ್ಮಕ್ಕಳ ಗಡುಸು ನುಡಿ, ಮುಗ್ದ ಹೃದಯ ಎಲ್ಲವೂ ಎಳೆಎಳೆಯಾಗಿ ಅನಾವರಣಗೊಂಡಿದೆ. ಸಂಭಾಷಣೆ ಎಲ್ಲೂ ಸಿನಿಮ್ಯಾಟಿಕ್ ಆಗದೆ, ಸಹಜ ಮಾತಿನಂತೆ ಹೊರಹೊಮ್ಮಿದೆ. ಮನಮುಟ್ಟುವ ನುಡಿಗಟ್ಟುಗಳನ್ನೇ ಸಂಭಾಷಣೆಯನ್ನಾಗಿ ಹೊಸೆದಿರುವುದು ಮತ್ತು ಕಥೆಯೊಳಗೆ ಹಾಡನ್ನು, ಹಾಡಿನಲ್ಲೇ ಕಥೆಯನ್ನು ಬೆರೆಸಿರುವುದು ಸಂಭಾಷಣೆ ಬರೆದಿರುವ ನಾಗಮಂಗಲ ಕೃಷ್ಣ ಮೂರ್ತಿ ಮತ್ತು ನಿರ್ದೇಶಕರ ಜಾಣ್ಮೆ.
ಹರಿಕೃಷ್ಣರ ಸಂಗೀತದಲ್ಲಿ ಮೂಡಿಬಂದಿರುವ ದೇಸೀ ಶೈಲಿಯ ಹಾಡುಗಳು ಇಲ್ಲಿ ಬೇರೆಯದ್ದೇ ದನಿಯನ್ನು ಹೊಮ್ಮಿಸಿವೆ. ಹಿನ್ನೆಲೆ ಸಂಗೀತ ಇಲ್ಲಿ ಪ್ರಧಾನ ಪಾತ್ರವನ್ನೇ ನಿರ್ವಹಿಸಿದೆ.
ಅಚ್ಯುತ ಕುಮಾರ್, ರೆಬೆಲ್ ಸ್ಟಾರ್ ಅಂಬರೀಶ್ ಸೇರಿದಂತೆ ಈ ಚಿತ್ರದಲ್ಲಿ ಘಟಾನುಘಟಿ ನಟ ನಟಿಯರ ದಂಡೇ ಇದೆ. ಒಟ್ಟಾರೆಯಾಗಿ ಇದೊಂದು ಬಹುತಾರಾಗಣದ ಚಿತ್ರ. ಇನ್ನೂ ವಿಶೇಷವೆಂದರೆ, ಸದ್ಯ ಸ್ಯಾಂಡಲ್‌ವುಡ್‌ನ ಕಾಮಿಡಿ ಕಿಂಗ್‌ಗಳಾಗಿ ಗುರುತಿಸಿಕೊಂಡಿರುವ ಸಾಧು ಕೋಕಿಲಾ, ಚಿಕ್ಕಣ್ಣ ಮತ್ತು ಬುಲೆಟ್ ಪ್ರಕಾಶ್ ಇಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಮೂವರು ಒಟ್ಟಾಗಿದ್ದಾರೆಂದರೆ ಬರ್ತಡೇ ನೋಡಲು ಬಂದವರಿಗೆ ನೂರಕ್ಕೆ ನೂರರಷ್ಟು ಕಾಮಿಡಿ ಕಿಕ್ ಖರೇ. ಇದು ಚಿತ್ರದಲ್ಲಿ ಕಾಮಿಡಿಗೂ ಸಂಪೂರ್ಣ ಮಹತ್ವವಿದೆ.
ಇನ್ನು ಈ ಚಿತ್ರದಲ್ಲಿ ಎಲ್ಲೂ ಅನಗತ್ಯ ಎನಿಸುವ ದೃಶ್ಯಗಳಿಲ್ಲ. ನಾಯಕ ಸಚಿನ್ ಗೆ ಇದು ಮೊದಲ ಸಿನಿಮಾವಾದರೂ ಅನುಭವೀ ಸಾಹಸಿಯಂತೆ ಫೈಟ್ ಮಾತ್ರವಲ್ಲ, ನಟನೆಯನ್ನೂ ಮಾಡಿದ್ದಾರೆ. ನಟ ನಾಯಕ ನಾಯಕಿಯರ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಇದೆಯೋ ನಟ ಅಚ್ಯುತರ ಪಾತ್ರ ಕೂಡಾ ಅದಕ್ಕೆ ಸರಿಗಟ್ಟುವಂಥದ್ದು. ಸುರೇಶ್ ಜಯಕೃಷ್ಣರ ಡ್ರೋನ್ ಶಾಟ್‌ಗಳು ಇಡೀ ಮೈಸೂರು ಪ್ರಾಂತ್ಯವನ್ನು ಕಣ್ಣಮುಂದೆ ತಂದು ನಿಲ್ಲಿಸುತ್ತದೆ.
ಒಟ್ಟಾರೆ ಹೇಳಬೇಕೆಂದರೆ, ಇದೊಂದು `ನಿರ್ದೇಶಕನ ಚಿತ್ರ’. `ನಮ್ಮ ನೇಟಿವಿಟಿಯ ಸಿನಿಮಾಗಳೇ ಬರುತ್ತಿಲ್ಲ’ ಅಂತಾ ಕೊರಗುತ್ತಿದ್ದವರೆಲ್ಲಾ ತಪ್ಪದೇ ನೋಡಬೇಕಿರುವ ಸಿನಿಮಾ ಹ್ಯಾಬಿ ಬರ್ತ್‌ಡೇ.
-ಅರುಣ್

__________________

ನಮ್ಮ ರೇಟಿಂಗ್ **** (4/5)

Leave a Reply

Your email address will not be published. Required fields are marked *


CAPTCHA Image
Reload Image