One N Only Exclusive Cine Portal

ದೊಡ್ಮನೆ ವರಾಂಡದಲ್ಲೇ ಅಂಜನಿಪುತ್ರನ ಫೈಟಿಂಗ್ ಪರಾಕ್ರಮ!

ರಾಜಕುಮಾರ ಸಿನಿಮಾದ ಬ್ರಹ್ಮಾಂಡ ಗೆಲುವು, ಮತ್ತೆ ಗರಿಗೆದರಿದ ಪುನೀತ್ ಅವರ ಕ್ರೇಜು, ಒಂದಷ್ಟು ಹಿಟ್ ಸಿನಿಮಾಗಳನ್ನು ನೀಡಿರುವ ಹರ್ಷ ನಿರ್ದೇಶನ, ದೊಡ್ಡ ಸಿನಿಮಾಗಳಿಗೇ ಹೆಸರಾದ ಎಂ.ಎನ್. ಕುಮಾರ್ ನಿರ್ಮಾಣ… ಹೀಗೆ ಹಲವಾರು ಕಾರಣಗಳಿಗಾಗಿ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಅಂಜನಿಪುತ್ರ.
ದೊಡ್ಡ ಫ್ಯಾಮಿಲಿ, ಅಲ್ಲಿಗೆ ತಾಯಿಯೇ ಒಡತಿ. ಪ್ರೀತಿಯ ಮಗ ತಪ್ಪು ಮಾಡಿದ ಅಂದಕೂಡಲೇ ಅದು ಸತ್ಯವೋ, ಸುಳ್ಳೋ ಎಂದೂ ಪರೀಕ್ಷಿಸದೆ ಮನೆಯಿಂದ ಹೊರಹೋಗುವಂತೆ ಅಜ್ಞಾಪಿಸುವ ಅಮ್ಮ. ತಾಯಿಯ ಮಾತನ್ನು ವೇದವಾಕ್ಯದಂತೆ ಪಾಲಿಸುವ ಮಗ ತಾನು ಮಾಡದ ತಪ್ಪಿಗಾಗಿ ಮನೆಯಿಂದ ಹೊರಬೀಳಬೇಕಾಗುತ್ತದೆ. ಹಾಗೆ ಮನೆಯಿಂದ ಉಚ್ಛಾಟಿತ ಸದಸ್ಯನಾಗಿ ಹೊರಬಿದ್ದು ತನ್ನದೇ ಸಣ್ಣದೊಂದು ಸಾಮ್ರಾಜ್ಯ ಸ್ಥಾಪಿಸಿಕೊಂಡು ಅಲ್ಲಿ ಲೇವಾದೇವಿ ನಡೆಸಿಕೊಂಡಿರುವ ದೊಡ್ಮನೆ ಹುಡುಗ. ತಾಯಿಯನ್ನು ತೊರೆದು ಬದುಕು ಸಾಗಿಸೋ ಹುಡುಗನಿಗೆ ಜೊತೆಯಾಗುವ ಹುಡುಗಿ! ಕಥೆ ಮುಂದುವರಿದು…. ಒಂದು ಊರು, ಊರ ದೇವಸ್ಥಾನ, ಆ ದೇವಸ್ಥಾನದ ಜಾಗವನ್ನು ಕಬಳಿಸಲು ನಿಂತ ಕಿರಾತಕ. ಊರಿಗೂ ಈ ದೊಡ್ಮನೆಗೂ ಹಳೇ ನಂಟು. ಕಿರಾತನಕ ಕಾಟ ಮಿತಿಮೀರಿದಾಗ ಮತ್ತೆ ಆ ತಾಯಿ ಬುಲಾವು ನೀಡೋದು ಅದೇ ಮಗನಿಗೆ. ಇನ್ನು ಮುಂದಿನ ಕಥೆ ಹೇಳುವ ಅವಶ್ಯಕತೆಯಿಲ್ಲ. ಹೀರೋಗಿರಿಯೇ ಮುಖ್ಯವಾದ ಸಿನಿಮಾದಲ್ಲಿ ಏನೇನು ನಡೆಯಬಹುದೆಂಬ ಊಹೆ ನಿಮಗೇ ಬಿಟ್ಟಿದ್ದು.
ವರ್ಷಗಳ ಹಿಂದೆ ತಮಿಳಿನಲ್ಲಿ ತಯಾರಾಗಿದ್ದ ಪೂಜೈ ಎನ್ನುವ ಚಿತ್ರದ ಕನ್ನಡದ ಅವತರಣಿಕೆ ಈ ಅಂಜನಿಪುತ್ರ. ಅಲ್ಲಿ ವಿಶಾಲ್ ನಿಭಾಯಿಸಿದ್ದ ಪಾತ್ರವನ್ನಿಲ್ಲಿ ಪುನೀತ್ ನಿರ್ವಹಿಸಿದ್ದಾರೆ. ಅಲ್ಲಿ ರಾಧಿಕಾ ಶರತ್ ಕುಮಾರ್ ತಾಯಿಯಾಗಿದ್ದ ಜಾಗದಲ್ಲಿ ಇಲ್ಲಿ ರಮ್ಯಾ ಕೃಷ್ಣ. ಶೃತಿ ಹಾಸನ್ ಪಾರ್ಟು ರಶ್ಮಿಕಾ ಮಂದಣ್ಣ ಪಾಲಾಗಿದೆ.
ಹೆಚ್ಚೂ ಕಮ್ಮಿ ಮೂಲ ಚಿತ್ರವನ್ನು ಹೋಲುವಂತೆ ಕಟ್ಟಿಕೊಟ್ಟಿರೋದು ನಿರ್ದೇಶಕ ಹರ್ಷ ಅವರ ಸಾಧನೆ ಎನ್ನಬಹುದು. ಆದರೆ, ಇದೇ ಬಗೆಯಲ್ಲಿ ಮೂಡಿಬಂದಿದ್ದ ದೊಡ್ಮನೆ ಹುಡುಗ ಸಿನಿಮಾದಲ್ಲಿ ಇದೇ ಪುನೀತ್ ಹೀರೋ ಆಗಿದ್ದರಿಂದ, ಅಂಥದ್ದೇ ಮತ್ತೊಂದು ಸಿನಿಮಾವನ್ನು ನೋಡಿದ ಫೀಲು ಪ್ರೇಕ್ಷಕರಿಗಾದರೆ ಅಚ್ಚರಿಯೇನಿಲ್ಲ. ರಾಜ್‌ಕುಮಾರ ಸಿನಿಮಾವನ್ನು ನೋಡಿದ್ದ ಪ್ರೇಕ್ಷಕರು ಇನ್ನೂ ಒಂದು ಹಿಡಿ ಹೆಚ್ಚು ಬಲ ಹೊಂದಿದ್ದ ಸಿನಿಮಾವನ್ನು ನಿರೀಕ್ಷಿಸಿದ್ದರು ಅನ್ನೋದು ನಿಜ. ಆದರೆ ಅಂಜನಿಪುತ್ರ ರಾಜಕುಮಾರನನ್ನು ಮೀರಿಸುವ ಅಥವಾ ಅದಕ್ಕೆ ಸರಿಗಟ್ಟುವ ಮಟ್ಟ ತಲುಪಿಲ್ಲ. ಆದರೆ ತೀರಾ ತೆಗೆದುಹಾಕುವ ಸಿನಿಮಾ ಆಗಿಯೂ ಮೂಡಿಬಂದಿಲ್ಲ. ಖಡಕ್ಕು ಫೈಟುಗಳೇ ಸಾಕು ಪುನೀತ್ ಅಭಿಮಾನಿಗಳನ್ನು ರೋಮಾಂಚನಗೊಳಿಸಲು. ಇನ್ನು ಈ ಚಿತ್ರದಲ್ಲಿ ಸ್ವತಃ ಪುನೀತ್ ಅವರೇ ತಾವು `ಫ್ಯಾಮಿಲಿ ಹೀರೋ’ ಅನ್ನೋದನ್ನು ಘೋಷಿಸಿಕೊಂಡಿದ್ದು, ಅದಕ್ಕೆ ಪೂರಕವಾಗಿ ಕೌಟುಂಬಿಕ ಕಥಾ ಹಂದರವೂ ಇರೋದರಿಂದ ಫ್ಯಾಮಿಲಿ ಆಡಿಯನ್ಸನ್ನು ಸೆಳೆಯೋದು `ಅಂಜನಿಪುತ್ರ’ನಿಗೆ ಕಷ್ಟವೇನೂ ಅಲ್ಲ.
ಗಂಭೀರ ಸಿನಿಮಾಗಳನ್ನು ನೋಡೋ ಪ್ರೇಕ್ಷಕರಿಗೆ ಟ್ರ್ಯಾಕ್ ಕಾಮಿಡಿ ಅಂದರೆ ಅಲರ್ಜಿ. ಆದರಿಲ್ಲಿ ಸಾಧು ಕೋಕಿಲ, ಚಿಕ್ಕಣ್ಣ ಮತ್ತು ಗಿರೀಶ್ ಕಾಮಿಡಿಯದ್ದೇ ಕಾರುಬಾರು. ಯಾವ ಹಾಸ್ಯದ ದೃಶ್ಯಗಳನ್ನು ಕಂಡು ಕೆಲವು ಪ್ರೇಕ್ಷಕರು ಮುಖ ಕಿವುಚುತ್ತಾರೋ ಅದೇ ದೃಶ್ಯಗಳು ಮತ್ತೊಂದು ವರ್ಗದ ಆತ್ಮಸಂತೋಷಕ್ಕೆ ಕಾರಣವಾಗಿದೆ. ಒಂದೇ ಥರದ ನಟನೆಯನ್ನು ಮೈಗೂಡಿಸಿಕೊಂಡು ಬೋರು ಹೊಡೆಸುತ್ತಿದ್ದ ಚಿಕ್ಕಣ್ಣ ಒಂಚೂರು ಬೇರೆ ರೀತಿ ಅಭಿನಯಿಸೋ ಮನಸ್ಸು ಮಾಡಿ ಗೆದ್ದಿದ್ದಾರೆ.
ಇನ್ನು ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ತೆರೆ ಮೇಲೆ ಮೋಹಕವಾಗಿ ಕಾಣಿಸಿಕೊಂಡಿದ್ದರೂ ಪುನೀತ್ ಪಕ್ಕ ನಿಲ್ಲಿಸಿದಾಗ ಪೀಚುಪೀಚೆನಿಸುತ್ತಾರೆ! ರವಿಬಸ್ರೂರ್ ಸಂಗೀತ ಮತ್ತು ಹಿನ್ನೆಲೆ ಸಂಗೀತ ಪರವಾಗಿಲ್ಲ. ರಘು ನಿಡುವಳ್ಳಿ ಮತ್ತು ಚೇತನ್ ಕುಮಾರ್ ಬರೆದಿರೋ ಹಾಡುಗಳ ಸಾಲು ಗಮನ ಸೆಳೆಯುವಂತಿವೆ. ಆದರೆ ಮೂಲ ಚಿತ್ರ ನೋಡಿದವರಿಗೆ ಚಿತ್ರ ಅಲ್ಲಲ್ಲಿ ಪೇಲವ ಅನ್ನಿಸುತ್ತೆ. ಅದನ್ನು ಒಂದು ರೇಂಜಿಗೆ ಪುನೀತ್ ರಾಜ್‌ಕುಮಾರ್ ಅವರ ಪವರ್‌ಫುಲ್ ಅಭಿನಯ ಮೀರಿಕೊಳ್ಳುತ್ತೆ ಎಂಬುದು ಅಸಲೀ ಪ್ಲಸ್ ಪಾಯಿಂಟ್. ರಾಜಕುಮಾರ ಚಿತ್ರದ ಗೆಲುವು, ಅದನ್ನೇ ಮೀರಿಸೋ ನಿರೀಕ್ಷೆಗಳನ್ನೆಲ್ಲ ಮನಸಿಂದ ಡಿಲೀಟು ಮಾಡಿ ಥೇಟರು ಹೊಕ್ಕರೆ ಅಂಜನಿಪುತ್ರನ ಕಡೆಯಿಂದ ಖಂಡಿತಾ ಮೋಸವಾಗೋದಿಲ್ಲ!

Leave a Reply

Your email address will not be published. Required fields are marked *


CAPTCHA Image
Reload Image