One N Only Exclusive Cine Portal

ಹೊಸಾ ವರ್ಷಕ್ಕೆ 3 ಘಂಟೆ 30 ದಿನ 30 ಸೆಕೆಂಡ್ ಸಾಥ್!

ಹೊಸಾ ವರ್ಷಕ್ಕೆ ತೆರೆಕಾಣಲು ಸಂಪೂರ್ಣವಾಗಿ ತಯಾರಾಗಿರುವ ಚಿತ್ರ 3 ಘಂಟೆ 30 ದಿನ 30 ಸೆಕೆಂಡ್. ವಿಭಿನ್ನವಾದ ಶೀರ್ಷಿಕೆಯಿಂದಲೇ ಗಮನ ಸೆಳೆದಿರೋ ಈ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದೆ. ಶೀರ್ಷಿಕೆಯಂತೆಯೇ ಇಡೀ ಚಿತ್ರವೂ ನಾನಾ ಹೊಸತನಗಳನ್ನು ಹೊಂದಿದೆ ಎಂಬ ಸಂದೇಶವನ್ನು ಈ ಟ್ರೈಲರ್ ಪ್ರೇಕ್ಷಕರಿಗೆ ರವಾನಿಸಿದೆ. ಈ ಮೂಲಕ ಅರುಗೌಡ ಮುಖ್ಯಭೂಮಿಕೆಯಲ್ಲಿರೋ ಈ ಚಿತ್ರದ ಬಗೆಗಿನ ಕ್ರೇಜ಼್ ಇಮ್ಮಡಿಸಿದೆ.

ಈ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅರು ಗೌಡ ಸೇರಿದಂತೆ ಬಹುತೇಕರು ಚಿತ್ರದ ಬಗೆಗಿನ ಒಂದೊಂದೇ ಅಂಶಗಳನ್ನು ಬಿಚ್ಚಿಡುತ್ತಾ ಸಾಗಿದರು. ಬ್ರೈನ್ ಶೇರ್ ಕ್ರಿಯೇಷನ್ಸ್ ಮೂಲಕ ಚಂದ್ರಶೇಖರ್ ಆರ್.ಪದ್ಮಶಾಲಿ ಮೊದಲ ಬಾರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಈ ಚಿತ್ರವನ್ನು ಕಥೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿರುವವರು ಜಿ.ಕೆ ಮಧುಸೂಧನ್. ಒಂದು ಮಾಮೂಲಿ ಚಿತ್ರ ನೋಡಿದ್ದಕ್ಕಿಂತ ತಮ್ಮ ಚಿತ್ರ ಬೇರೆಯದ್ದೇ ಫೀಲ್ ಹುಟ್ಟಿಸೋದು ಗ್ಯಾರೆಂಟಿ ಎಂಬ ಭರವಸೆ ನಿರ್ದೇಶಕರದ್ದು. ಇನ್ನುಳಿದಂತೆ ದೃಷ್ಯಾವಳಿಗಳು, ಸಂಭಾಷಣೆಗಳು ನೋಡುಗರನ್ನು ಬೇರೆಯದ್ದೇ ಲೋಕಕ್ಕೆ ಕರೆದೊಯ್ಯುವಂತಿವೆ. ಇದಕ್ಕೆ ಪೂರಕವಾದ ಮಾತುಗಳು ಇಡೀ ಚಿತ್ರವನ್ನು ಬೇರೆಯದ್ದೇ ಫೀಲ್ ಹುಟ್ಟುವಂತೆ ರೂಪಿಸಿವೆ ಎಂಬುದು ನಿರ್ದೇಶಕರ ಮಾತು.

ಅದ್ದೂರಿ ತಾರಾಗಣ ಈ ಚಿತ್ರದ ಮತ್ತೊಂದು ಆಕರ್ಷಣೆ. ಡೈನಮಿಕ್ ಸ್ಟಾರ್ ದೇವರಾಜ್ ಒಂದು ಪ್ರಮುಖವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಕಣ್ಣು ಕಳೆದುಕೊಂಡ ಮಾಜೀ ಸೈನಿಕನ ಪಾತ್ರದಲ್ಲಿ ಮನೋಜ್ಞವಾಗಿ ನಟಿಸಿದ್ದಾರಂತೆ. ತುಂಬಾ ವರ್ಷಗಳ ನಂತರ ದೇವರಾಜ್ ಅವರಿಗೆ ಸುಧಾರಾಣಿ ಜೋಡಿಯಾಗಿದ್ದಾರೆ. ಇವರಿಬ್ಬರ ಪಾತ್ರಗಳೂ ಇಡೀ ಚಿತ್ರದ ಪ್ರಮುಖ ಆಕರ್ಷಣೆಯಾಗಲಿದೆ ಎಂಬುದು ಚಿತ್ರ ತಂಡದ ಭರವಸೆ.

ಇಂಥಾ ನುರಿತ ಕಲಾವಿದರ ದಂಡಿನ ನಡುವೆ ಸಮರ್ಥವಾಗಿ ಅಭಿನಯಿಸಿರೋ ಖುಷಿ ನಾಯಕ ಅರು ಗೌಡರದ್ದು. ಈ ಚಿತ್ರ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಕ್ರೇಜ್ ಹುಟ್ಟಿಸಿವೆ ಎಂಬ ಖುಷಿ, ಯೂಟ್ಯೂಬ್‌ನಲ್ಲಿ ಭಾರೀ ಜನಪ್ರಿಯತೆ ಗಳಿಸಿದ್ದ ಹಾಸ್ಯ ಸನ್ನಿವೇಶಕ್ಕೆ ಕತ್ತರಿ ಬಿದ್ದಿದೆ ಎಂಬ ಸಣ್ಣ ಬೇಸರ ಮತ್ತು ಅಂಥಾ ಕಚಗುಳಿ ಇಡೋ ಸಾಲು ಸಾಲು ದೃಷ್ಯಾವಳಿಗಳಿವೆ ಎಂಬ ದೊಡ್ಡ ಸಮಾಧಾನ ಅರು ಗೌಡರ ಮಾತುಗಳಲ್ಲಿ ಹಣಕಿ ಹಾಕುತ್ತಿದ್ದವು.

ಈ ಚಿತ್ರದ ಹಾಡು ಮತ್ತು ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ನಿಭಾಯಿಸಿರುವವರು ಶ್ರೀಧರ್ ಸಂಭ್ರಮ್. ಅವರ ಪಾಲಿಗೆ ಹಾಡುಗಳಿಗಿಂತಲೂ ಮೂವತೈದು ದಿನಗಳ ಸತತ ಶ್ರಮ ಹಾಕಿ ಹಿನ್ನೆಲೆ ಸಂಗೀತ ನೀಡಿದ್ದೇ ವಿಶೇಷ ಅನುಭವವಂತೆ. ಅಂದಹಾಗೆ ಈಗಾಗಲೇ ನಾನಾ ರೀತಿಯಲ್ಲಿ ಜನರನ್ನು ಸೆಳೆದಿರೋ ಈ ಚಿತ್ರ ಅಪ್ಪಟ ಸ್ವಮೇಕ್. ಇದು ಮುಂದಿನ ತಿಂಗಳು ರಾಜ್ಯಾಧ್ಯಂತ ತೆರೆ ಕಾಣಲಿದೆ.

Leave a Reply

Your email address will not be published. Required fields are marked *


CAPTCHA Image
Reload Image