One N Only Exclusive Cine Portal

ಕಿರುಚಿತ್ರವೊಂದರ ಮೂಲಕ ಕೈಗೂಡಿದ ‘ಅಮರ’ ಕನಸು!

ಕಟ್ಟಿಕೊಂಡ ಕನಸಿಗೆ ಪೂರಕವಾಗಿ ಶ್ರಮ ಹಾಕಿದರೆ ಅದು ಎಲ್ಲೇ ಅಲೆದಾಡಿಸಿದರೂ ಗುರಿಯ ನೇರಕ್ಕೆ ತಂದು ನಿಲ್ಲಿಸುತ್ತದೆ. ಈ ಮಾತಿಗೆ ತಕ್ಕುದಾಗಿಯೇ ತಮ್ಮ ಬಹು ಕಾಲದ ಆಸೆಯೊಂದನ್ನು ನೆರವೇರಿಸಿಕೊಂಡಿರುವವರು ಅಟೆಂಪ್ಟ್ ಟು ಮರ್ಡರ್ (ಎಟಿಎಂ) ಚಿತ್ರದ ನಿರ್ದೇಶಕ ಅಮರ್!

ಇದೇ ತಿಂಗಳ ಇಪ್ಪತ್ತನೇ ತಾರೀಕಿನಂದು ಬಿಡುಗಡೆಗೆ ಸಜ್ಜಾಗಿರುವ ಚಿತ್ರ ಎಟಿಎಂ. ಹಂತ ಹಂತವಾಗಿ ಕುತೂಹಲ ಹುಟ್ಟಿಸುತ್ತಾ ಸಾಗಿ ಬಂದಿರುವ ಈ ಚಿತ್ರವೀಗ ಬಹು ನಿರೀಕ್ಷಿತ ಚಿತ್ರವಾಗಿ ಹೊರ ಹೊಮ್ಮಿದೆ. ಈ ಚಿತ್ರ ಜೀವ ಪಡೆದು ಅಮರ್ ಅವರ ಬಹುಕಾಲದ ಕನಸೊಂದು ನನಸಾದದ್ದೇ ಒಂದು ಚೆಂದದ ಕಥೆ!

ಶಾಲಾ ಕಾಲೇಜು ಹಂತ ತಲುಪಿದ ಹೊತ್ತಿಗೆಲ್ಲ ಚಿತ್ರರಂಗ ಬಹುತೇಕ ಯುವ ಮನಸುಗಳನ್ನು ಆಕರ್ಷಿಸುತ್ತದೆ. ಮೂಲತಃ ಬೆಂಗಳೂರಿನವರೇ ಆದ ಅಮರ್ ಕೂಡಾ ಅಂಥಾ ಮೋಡಿಗೊಳಗಾದವರೇ. ಆದ್ದರಿಂದಲೇ ಅವರು ಆನಿಮೇಷನ್ ವಿಷಯದಲ್ಲಿಯೇ ಡಿಗ್ರಿ ಮಾಡಿದ್ದರು. ಅದುವೇ ಚಿತ್ರರಂಗದ ಒಡನಾಟವನ್ನು ಕಲ್ಪಿಸಿ ಇಷ್ಟದ ಕ್ಷೇತ್ರದೊಳಗೆ ಅಂಬೆಗಾಲಿಡುವಂತೆ ಮಾಡಿತ್ತು.

ಆನಿಮೇಷನ್ ಮುಗಿಸಿದ ನಂತರ ಅಮರ್ ಕಿರುಚಿತ್ರಗಳ ಎಡಿಟಿಂಗ್ ಮುಂತಾದವುಗಳಲ್ಲಿ ಸಕ್ರಿಯರಾದರು. ಅದರ ಜೊತೆಗೇ ಸಿಜಿ ವರ್ಕ್‌ನಲ್ಲಿಯೂ ಬ್ಯುಸಿಯಾದರು. ಈ ನಡುವೆಯೇ ‘ವಿರ್ಥಟ್ ಎಕ್ಸ್‌ಪಿರಿಯನ್ಸ್’ ಅಂತೊಂದು ಕಿರುಚಿತ್ರವನ್ನೂ ನಿರ್ದೇಶನ ಮಾಡಿದ ಅಮರ್ ಮತ್ತೊಂದು ಕಿರು ಚಿತ್ರಕ್ಕೆ ಕ್ಯಾಮೆರಾ ವರ್ಕ್ ಮಾಡಿದ್ದರು. ಅಟೆಂಪ್ಟ್ ಟು ಮರ್ಡರ್ ಚಿತ್ರಕ್ಕೆ ಜೀವ ಬಂದಿದ್ದೇ ಅಲ್ಲಿಂದ ಎಂಬುದು ಅಸಲೀ ವಿಶೇಷ.

ಈ ಶಾರ್ಟ್ ಮೂವಿ ಮಾಡುವಾಗಲೇ ಪರಿಚಯವಾದವರು ನಿರ್ಮಾಪಕ ಎಸ್.ವಿ ನಾರಾಯಣ್. ಅಮರ್ ಚಿತ್ರವೊಂದನ್ನು ನಿರ್ದೇಶನ ಮಾಡುವ ಕನಸಿಟ್ಟುಕೊಂಡಿದ್ದಾರೆಂಬ ವಿಚಾರ ತಿಳಿದ ನಾರಾಯಣ್ ಅವರು ಕಥೆ ಹೇಳುವಂತೆ ಕೇಳಿದ್ದರಂತೆ. ತಕ್ಷಣವೇ ಅಮರ್ ಕಥೆ ಹೇಳಿದಾಗ ನಿರ್ಮಾಪಕರು ಖುಷಿಯಿಂದಲೇ ಒಪ್ಪಿಕೊಳ್ಳುವ ಮೂಲಕ ಎಟಿಎಂ ಚಿತ್ರಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿತ್ತು.

ಇದೀಗ ಆ ಚಿತ್ರವನ್ನು ಅಮರ್ ಬಿಡುಗಡೆಯ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ಕಾಸು ಹಾಕಿದ ನಿರ್ಮಾಪಕರು ಖುಷಿಯಾಗುವಂಥಾ ಚಿತ್ರ ಮಾಡಿರುವ ಅಮರ್ ಅದು ಪ್ರೇಕ್ಷಕರಿಗೂ ಮುದ ನೀಡುತ್ತದೆಂಬ ಭರವಸೆ ಹೊಂದಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image