ಸತೀಶ್ ನೀನಾಸಂ ಮತ್ತು ರಚಿತಾರಾಮ್ ನಟನೆಯ ಬಹುನಿರೀಕ್ಷಿತ ಚಿತ್ರ ಅಯೋಗ್ಯ ಈ ವಾರ ತೆರೆ ಕಂಡಿದೆ. ಈಗಾಗಲೇ ಈ ಚಿತ್ರದ ಹಾಡುಗಳು ಸಿಕ್ಕಾಪಟ್ಟೆ ಹಿಟ್ ಆಗಿರೋದರಿಂದ ಸಹಜವಾಗಿಯೇ ಸಿನಿಮಾ ಬಗ್ಗೆಯೂ ಸಾಕಷ್ಟು ಕುತೂಹಲ ಮೂಡಿತ್ತು. `ಅಯೋಗ್ಯ ಗ್ರಾಮಪಂಚಾಯ್ತಿ ಸದಸ್ಯ ಎನ್ನುವ ಶೀರ್ಷಿಕೆಯ ಕಾರಣಕ್ಕೆ ವಿವಾದಗಳೂ ಹುಟ್ಟಿಕೊಂಡಿದ್ದವಾದ್ದರಿಂದ ಎಲ್ಲ ಬಗೆಯ ಪ್ರೇಕ್ಷಕರಿಗೆ `ಅಯೋಗ್ಯನ ಕತೆ ಏನಿರಬಹುದು ಎನ್ನುವ ಕ್ಯೂರಿಯಾಸಿಟಿಯಿತ್ತು. ಇಂದು ತೆರೆಕಂಡಿರುವ ಸಿನಿಮಾ ಎಲ್ಲ ಪ್ರಶ್ನೆಗಳಿಗೂ ಉತ್ತರದಂತಿದೆ.

 

ಜಾತಿ, ಧರ್ಮಗಳಂಥಾ ಕಂಟಗಳ ನಡುವೆ ಇವತ್ತಿಗೂ ಗ್ರಾಮೀಣ ಪ್ರದೇಶದಲ್ಲಿ ಪ್ರೇಮಿಗಳು ಪಡಬಾರದ ಪಾಡು ಪಡಬೇಕಾದ ಸ್ಥಿತಿಯಿದೆ. ಜಗತ್ತಿನ ವಿರೋಧವನ್ನು ತನ್ನ ಮೈಮೇಲೆಳೆದುಕೊಂಡು ಪ್ರೇಮಿಗಳನ್ನು ಒಂದು ಮಾಡುವ ಸೇವಾ ಮನೋಭಾವ `ಅಯೋಗ್ಯನದ್ದು. ಕೆಲಸವಿಲ್ಲದೇ ತಿರುಗುವವನು, ಪ್ರಯೋಜನಕ್ಕೆ ಬಾರದವನು ಎಂಬಿತ್ಯಾದಿಯಾಗಿ ಊರವರಿಂದ ಬೈಸಿಕೊಳ್ಳುತ್ತಾ ಓಡಾಡುವ ಲೋಕನಿಂದಿತ ಹುಡುಗ ಸಿದ್ದೇಗೌಡ (ನೀನಾಸಂ ಸತೀಶ್) ಸದಾ ತನ್ನೊಟ್ಟಿಗೆ ಇನ್ನೂ ಇಬ್ಬರು ಗೆಣೇಕ್ಕಾರರನ್ನು ಒಟ್ಟಿಗೆ ಹಾಕಿಕೊಂಡು ಯಾರ್‍ಯಾರದ್ದೋ ಸಮಸ್ಯೆಗಳಿಗೆ ಸ್ಪಂದಿಸುವ ಸಿದ್ದನನ್ನು ಜನ `ಅಯೋಗ್ಯ ಅಂತಲೇ ಬ್ರಾಂಡು ಮಾಡಿಬಿಟ್ಟಿರುತ್ತಾರೆ. ತಾಯಿಗೆ ಮಾತ್ರ ಬಲು ಪ್ರೀತಿಯ ಕೂಸಿದು. ಏನಾದರೂ ಮಾಡಿ ಈತನಿಗೆ ಮದುವೆ ಮಾಡಿಬಿಡಬೇಕು ಅನ್ನೋದು ತಾಯಿಯ ಬಯಕೆ. ಈ ಕಾರಣಕ್ಕೇ ಮದುವೆ ಮಾಡಿಸೋ ಬ್ರೋಕರನ ಕೈ, ಕಾಲು ಹಿಡಿದು ತನ್ನ ಮಗನಿಗೊಂದು ಹೆಣ್ಣು ಹುಡುಕಿಕೊಡು ಅಂತಾ ದುಂಬಾಲು ಬೀಳೋ ತಾಯಿ ಹೃದಯವದು. ಊರೆಲ್ಲಾ ತಿರುಗಾಡಿದರೂ ಈತನಿಗೆ ಮಾಡಲು ನೆಟ್ಟಗೆ ಕೆಲಸವಿಲ್ಲವೆನ್ನುವ ಕಾರಣಕ್ಕೆ ಯಾರೆಂದರೆ ಯಾರೂ ಹೆಣ್ಣು ಕೊಡದೆ ಅವಮಾನಿಸಿ ಕಳಿಸುತ್ತಿರುತ್ತಾರೆ. ಕಡೆಗೊಂದು ದಿನ ಬ್ರೋಕರು ಹುಡುಗಿಯೊಬ್ಬಳನ್ನು ನೋಡಲು ಕಳಿಸಿದರೆ ಪುಣ್ಯಾತ್ಮ ಸಿದ್ದ ಬ್ರೋಕರನ ಮಗಳಿಗೇ ಕಾಳು ಹಾಕಿರುತ್ತಾನೆ. ಅಲ್ಲಿಗೆ ಅಯೋಗ್ಯನ ಲೈಫಲ್ಲಿ ಹುಡುಗಿಯೂ ಬಂದಂತಾಗುತ್ತದೆ! ಈ ನಡುವೆ ಊರಗೌಡನ ವಿರೋಧ ಕಟ್ಟಿಕೊಂಡು ಗ್ರಾಮಪಂಚಾಯ್ತಿ ಎಲೆಕ್ಷನ್ನಿಗೆ ನಿಲ್ಲುವ ಧೈರ್ಯ ಮಾಡುತ್ತಾನೆ ಹೀರೋ. ಆ ನಂತರ ಶುರುವಾಗೋದೇ ಅಸಲೀ ಕತೆ.

ಎಲ್ಲರಿಂದ `ಅಯೋಗ್ಯ ಎಂದು ಲೇವಡಿಗೊಳಗಾದ ನಾಯಕನಿಗೆ ಊರಲ್ಲಿ ಮನೆ ಮನೆಗೂ ಟಾಯ್ಲೆಟ್ಟು ಕಟ್ಟಿಸಿಕೊಡಬೇಕು, ಗ್ರಾಮವನ್ನು ಉದ್ದಾರ ಮಾಡಬೇಕು. ತನ್ನ ಪರಿಸರವನ್ನು ಸಾಮಾಜಿಕ ಅನಿಷ್ಠಗಳಿಂದ ಮುಕ್ತಿಗೊಳಿಸಬೇಕು ಎನ್ನುವ ಪ್ರಗತಿಪರ ಚಿಂತನೆಗಳು. ಈತನ ಸಮಾಜಮುಖಿ ಚಿಂತನೆಗಳ ವಿರುದ್ಧವಾಗಿ ನಿಂತವನು ಊರ ಗೌಡ ರವಿಶಂಕರ್. ಆತನ್ನು ಯಾರೂ ಎದುರು ಹಾಕಿಕೊಳ್ಳಲು ಸಾಧ್ಯವೇ ಇಲ್ಲ ಅನ್ನೋ ಸಂದರ್ಭದಲ್ಲೂ ಗೌಡನ ವಿರುದ್ಧ ಹೇಗೆಲ್ಲಾ ಸಂಚು ರೂಪಿಸುತ್ತಾನೆ ಅನ್ನೋ ಅಂಶಗಳು ಸಿನಿಮಾದಲ್ಲಿ ಮಜವಾಗಿ ನಿರೂಪಿತಗೊಂಡಿದೆ.

ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಪ್ರತಿಭೆಗಳು ಮಾತ್ರ ಸೃಷ್ಟಿಸಬಹುದಾದ ಕಲಾಕೃತಿ `ಅಯೋಗ್ಯ. ಬಹುಶಃ ನಿರ್ದೇಶಕ ಮಹೇಶ್ ಮತ್ತು ನಾಯಕನಟ ಸತೀಶ್ ಇಬ್ಬರೂ ಮಂಡ್ಯ ಜಿಲ್ಲೆಯ ಕುಗ್ರಾಮಗಳಿಂದ ಬಂದವರಾದ್ದರಿಂದ ಇಂಥದ್ದೊಂದು ಸಿನಿಮಾ ಕಟ್ಟಿಕೊಡುವಲ್ಲಿ ಪೂರ್ಣಪ್ರಮಾಣದಲ್ಲಿ ಗೆದ್ದಿದ್ದಾರೆ. ಕಮರ್ಷಿಯಲ್ ಸಿನಿಮಾವೊಂದರಲ್ಲಿ, ಜನರನ್ನು ರಂಜಿಸುತ್ತಲೇ ಈ ನಾಡಿನ ಜನರನ್ನು ಇವತ್ತಿಗೂ ಹಿಂಡುತ್ತಿರುವ ಶೌಚಾಲಯ ಸಮಸ್ಯೆ, ಜಾತಿ ವ್ಯವಸ್ಥೆಯಂತಾ ವಿಚಾರಗಳನ್ನು ಎಳೆಎಳೆಯಾಗಿ ತೆರೆದಿಟ್ಟಿರೋದು ನಿರ್ದೇಶಕ ಮಹೇಶ್ ಹೆಚ್ಚುಗಾರಿಕೆ. ಇಲ್ಲಿ ಯಾವ ಮಾತುಗಳೂ ಸಂಭಾಷಣೆ ಅನ್ನಿಸೋದೇ ಇಲ್ಲ. ಮೈಸೂರು ಸೀಮೆಯ ನೆಲದ ಆಡುಭಾಷೆಯನ್ನೇ ಡೈಲಾಗುಗಳನ್ನಾಗಿಸಿದ್ದಾರೆ. ಈ ಕಾರಣಕ್ಕಾಗಿ ಸಂಭಾಷಣೆಕಾರರಾದ ಮಾಸ್ತಿ ಮತ್ತು ಶರತ್ ಚಕ್ರವರ್ತಿ ಅವರನ್ನು ಅಭಿನಂದಿಸಲೇಬೇಕು.

ನೀನಾಸಂ ಸತೀಶ್, ರವಿಶಂಕರ್, ಕಾಮಿಡಿ ಕಿಲಾಡಿಗಳು ಶಿವರಾಜ್ ಕೆ.ಆರ್. ಪೇಟೆ, ಗಿರೀಶ್ ಎಲ್ಲರೂ ಸ್ಪರ್ಧೆಗೆ ಬಿದ್ದವರಂತೆ ನಟಿಸಿ ನಗಿಸುತ್ತಾರೆ. ಹಿರಿಯ ನಟ ಸುಂದರ್ ರಾಜ್ ಪಾತ್ರ ಮತ್ತು ನಟನೆಯಂತೂ ಯಾರೂ ನಿರೀಕ್ಷಿಸದ ರೀತಿಯಲ್ಲಿ ಮೂಡಿಬಂದಿದೆ. ಸುಂದರ್ ರಾಜ್ ಅವರ ನಟನೆಯಲ್ಲಿನ ಬದಲಾವಣೆ ನೋಡಿದರೆ ಪೋಷಕ ಪಾತ್ರಗಳಲ್ಲಿ ಮತ್ತೊಂದು ಬ್ಯುಸಿಯಾಗೋದರಲ್ಲಿ ಡೌಟಿಲ್ಲ. ಇನ್ನು ನಾಯಕಿ ರಚಿತಾರಾಮ್ ಕೂಡಾ ಗಟ್ಟಿಗಿತ್ತಿ ಹೆಣ್ಮಗಳಾಗಿ ಇಷ್ಟವಾಗುತ್ತಾರೆ.
ಇನ್ನು ಅಯೋಗ್ಯನಿಗಾಗಿ ಅರ್ಜುನ್ ಜನ್ಯಾ ಸಂಯೋಜಿಸಿರುವ ಸಂಗೀತದ ಮೋಡಿ ಈಗಾಗಲೇ ಜನರನ್ನು ತಲುಪಿಯಾಗಿದೆ. ಪ್ರೀತಮ್ ತೆಗ್ಗಿನಮನೆ ಛಾಯಾಗ್ರಹಣ, ಸುರೇಶ್ ಆರ್‍ಮುಗಂ ಸಂಕಲನ, ರಘು ಕಲಾನಿರ್ದೇಶನ ಎಲ್ಲವೂ ಅಚ್ಚುಕಟ್ಟು. ಎಲ್ಲರೂ ಒಮ್ಮೆಯಾದರೂ ನೋಡಲೇಬೇಕಾದ, ಪಕ್ಕಾ ಪನರಂಜನಾ ಸಿನಿಮಾ ಅಯೋಗ್ಯ.

#

LEAVE A REPLY

Please enter your comment!
Please enter your name here

18 − seventeen =