ಕ್ರಿಸ್ಟಲ್ ಪಾರ್ಕ್ ಸಿನೆಮಾಸ್ ಲಾಂಛನದಲ್ಲಿ ಟಿ.ಆರ್. ಚಂದ್ರಶೇಖರ್ ನಿರ್ಮಾಣದಲ್ಲಿ ನೀನಾಸಂ ಸತೀಶ್ ಅಭಿನಯದ ಅಯೋಗ್ಯ ಚಿತ್ರತಂಡ ರೊಚ್ಚಿಗೆದ್ದಿದೆ. ರಾಜ್ಯದಲ್ಲಿ ಯಶಸ್ವೀ ಪ್ರದರ್ಶನ ಕಾಣುತ್ತಿರುವ ಈ ಚಿತ್ರಕ್ಕೆ ಪರಭಾಷೆಯ ನೆಲದಲ್ಲಿ ಥೇಟರು ಸಿಗದೆ, ಅಸಡ್ಡೆ ಅಹಂಕಾರಗಳು ತೂರಿ ಬರುತ್ತಿರೋದು ಅದಕ್ಕೆ ಕಾರಣ. ಇದನ್ನು ವಿರೋಧಿಸಿ ಚಿತ್ರತಂಡ ಫಿಲಂ ಚೇಂಬರ್ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿದೆ.

ಕನ್ನಡ ಚಿತ್ರಗಳನ್ನು ಎತ್ತಂಗಡಿ ಮಾಡಿಯಾದರೂ ಪರಭಾಷಾ ಚಿತ್ರಗಳನ್ನು ಮೆರೆಸುವ ಔದಾರ್ಯ ಕರ್ನಾಟಕದಲ್ಲಿದೆ. ಆದರೆ ಪರಭಾಷೆಗಳಲ್ಲಿ, ಹೊರ ರಾಜ್ಯಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಎಂಥಾ ಮನ್ನಣೆ ಸಿಗುತ್ತಿದೆ ಎಂಬುದು ಅಯೋಗ್ಯ ಚಿತ್ರದ ವಿಚಾರದಲ್ಲಿ ಮತ್ತೊಮ್ಮೆ ಬಯಲಾಗಿದೆ. ಯಾಕೆಂದರೆ, ಈ ಚಿತ್ರವನ್ನು ಬೇರೆ ರಾಜ್ಯಗಳಲ್ಲಿ ವಿತರಿಸೋ ಹಕ್ಕು ತೆಗೆದುಕೊಂಡವರೇ ಅಲ್ಲಿನವರ ಉದಾಸೀನತೆ, ಒಣ ಅಹಂಕಾರದಿಂದ ಕಂಗಾಲೆದ್ದಿದ್ದಾರೆ. ಅಯೋಗ್ಯ ಸಿನಿಮಾ ಕರ್ನಾಟಕದಲ್ಲಿ ಗೆದ್ದಿದೆ. ಈ ಬಗ್ಗೆ ಅದೇನೇ ಮನವರಿಕೆ ಮಾಡಿಕೊಟ್ಟರೂ ಬೇರೆ ರಾಜ್ಯಗಳ ಮಂದಿ ಅಯೋಗ್ಯ ಚಿತ್ರ ಬಿಡುಗಡೆ ಮಾಡಲು ಅಡ್ಡಗಾಲಾಗುತ್ತಿದ್ದಾರೆ.

ಅಯೋಗ್ಯ ಸಿನಿಮಾ ಪ್ರದರ್ಶನಕ್ಕೆ ಅತಿ ಹೆಚ್ಚು ಅಡೆತಡೆಗಳುಂಟಾಗಿರೋದು ಹೈದ್ರಾಬಾದಿನಲ್ಲಿ. ಅಲ್ಲಿನ ಮಲ್ಟಫ್ಲೆಕ್ಸ್‌ಗಳೂ ಸೇರಿದಂತೆ ಯಾವ ಚಿತ್ರ ಮಂದಿರಗಳಲ್ಲಿಯೂ ಅಯೋಗ್ಯನಿಗೆ ಅವಕಾಶ ಸಿಗುತ್ತಿಲ್ಲ. ಈ ಬಗ್ಗೆ ವಿಚಾರಿಸಿದರೆ ‘ತೆಲುಗು ಸಿನಿಮಾಗಳೇ ಭರ್ಜರಿಯಾಗಿ ಓಡುತ್ತಿವೆ. ಆದ್ದರಿಂದ ಸಾಧ್ಯವೇ ಇಲ್ಲ’ ಎಂಬಂಥಾ ಅಹಮ್ಮಿನ ಉತ್ತರಗಳೇ ಸಿಗುತ್ತಿವೆಯಂತೆ.

ನಮ್ಮ ರಾಜ್ಯದಲ್ಲಿ ಬೇರೆ ಭಾಷೆಗಳ ಸಿನಿಮಾಗಳಿಗೆ ಭಾರೀ ಪ್ರೋತ್ಸಾಹ ನೀಡಿ, ಕನ್ನಡ ಚಿತ್ರಗಳ ಕತ್ತು ಹಿಸುಕಿಯಾದರೂ ಅವಕಾಶ ಮಾಡಿ ಕೊಡಲಾಗುತ್ತದೆ. ಆದರೆ ಬೇರೆ ಭಾಷೆಗಳಲ್ಲಿ ಇಂಥಾ ದರ್ಪ ಕಾಣಿಸುತ್ತಿರೋದರ ವಿರುದ್ಧ ಇಂದು ಮಧ್ಯಾಹ್ನ ಎರಡು ಘಂಟೆಗೆ ಫಿಲಂ ಚೇಂಬರ್ ಮುಂದೆ ಪ್ರತಿಭಟನೆ ನಡೆಯಲಿದೆ. ನಂತರ ಈ ಬಗ್ಗೆ ಫಿಲಂ ಚೇಂಬರ್ ಅಧ್ಯಕ್ಷರಿಗೆ ಮನವಿ ನೀಡಿ ಕನ್ನಡ ಚಿತ್ರಗಳನ್ನು ಸಂಕಟದಿಂದ ಪಾರು ಮಾಡುವಂತೆ ಕೇಳಿಕೊಳ್ಳಲು ಚಿತ್ರತಂಡ ನಿರ್ಧರಿಸಿದೆ.

ಕರ್ನಾಟಕದಲ್ಲಿನ ಅಷ್ಟೂ ಮಲ್ಟಿಫ್ಲೆಕ್ಸ್‌ಗಳಿಗೆ ಪರಭಾಷಾ ಚಿತ್ರಗಳ ಮೇಲೇ ಪ್ರೀತಿ. ಥೇಟರುಗಳಲ್ಲಿಯೂ ಪರಭಾಷಾ ಚಿತ್ರಗಳದ್ದೇ ಹಾವಳಿ. ಇದರಿಂದ ಕನ್ನಡ ಚಿತ್ರಗಳು ನಷ್ಟ ಅನುಭವಿಸುತ್ತಿದ್ದರೂ ಫಿಲಂ ಚೇಂಬರ್ ಅಧ್ಯಕ್ಷರಾಗಲಿ, ಸದಸ್ಯರಾಗಲಿ ಪೀಠ ಬಿಟ್ಟು ಮೇಲೇಳೋದಿಲ್ಲ. ಆದರೆ ಅಯೋಗ್ಯ ಚಿತ್ರತಂಡದ ಪ್ರತಿಭಟನೆಯ ನಂತರವಾದರೂ ಚೇಂಬರ್ ಮಂದಿ ಈ ಬಗ್ಗೆ ಗಮನ ಹರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

#

LEAVE A REPLY

Please enter your comment!
Please enter your name here

fifteen + two =