One N Only Exclusive Cine Portal

ಬಾ.ಮಾ ಹರೀಶ್ ಪುತ್ರನ ಹೊಸಾ ಕನಸು!

ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿರುವವರು ಬಾ.ಮಾ ಹರೀಶ್. ಇವರ ಪುತ್ರ ಉಲ್ಲಾಸ್ ಗೌಡ ಇದೀಗ ಸದ್ದಿಲ್ಲದೆ ಹೊಸಾ ಬಗೆಯ ಮಕ್ಕಳ ಚಿತ್ರವೊಂದನ್ನು ನಿರ್ಮಾಣ ಮಾಡಲು ಮುಂದಾಗಿದ್ದಾನೆ. ಈಗಿನ್ನೂ ಇಪ್ಪತ್ತೊಂದು ವರ್ಷದ ಯುವಕನಾದ ಉಲ್ಲಾಸ್ ಸದ್ದಿಲ್ಲದೇ ಮೂರು ವರ್ಷಗಳಿಂದ ಪ್ರತಿಭಾವಂತ ಮಕ್ಕಳಿಗೆ ನಟನಾ ತರಬೇತಿ ಕೊಡುವ ಶಾಲೆಯೊಂದನ್ನು ನಡೆಸುತ್ತಾ, ಆ ಶಾಲೆಯಲ್ಲಿ ಕಲಿತ ಹುಡುಗರನ್ನೇ ಮುಂಚೂಣಿಗೆ ಬಿಟ್ಟು ಚೆಂದದ್ದೊಂದು ಮಕ್ಕಳ ಚಿತ್ರ ನಿರ್ಮಾಣ ಮಾಡಲು ಸಕಲ ತಯಾರಿಯನ್ನೂ ಮುಗಿಸಿಕೊಂಡಿದ್ದಾನೆ.


ಉಲ್ಲಾಸ್ ಈಗ ಕಾಲೇಜು ವ್ಯಾಸಂಗ ಮಾಡುತ್ತಿರೋ ಹುಡುಗ. ತಂದೆಯ ಕಾರಣದಿಂದ ಬಾಲ್ಯದಿಂದಲೇ ಸಿನಿಮಾ ಸಾಹಚರ್ಯದಲ್ಲಿ ಬೆಳೆದ ಈತನ ಆಲೋಚಾನ ಕ್ರಮ ನಿಜಕ್ಕೂ ಬೆರಗು ಹುಟ್ಟಿಸುವಂಥಾದ್ದು. ಸಾಮಾನ್ಯವಾಗಿ ಇಂಥಾ ಸಿನಿಮಾ ವಾತಾವರಣದಿಂದ ಬಂದವರು ಏಕಾಏಕಿ ಹೀರೋ ಆಗಿ ಮಿಂಚಬೇಕೆಂಬ ಕನಸು ಕಟ್ಟಿಕೊಳ್ಳುತ್ತಾರೆ. ಆದರೆ ಉಲ್ಲಾಸನದ್ದು ರಂಗಭೂಮಿಯತ್ತಲಿನ ಸೆಳೆತ. ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳ ಪ್ರತಿಭೆ ಹೊರ ಹಾಕುವಂಥಾ ರಂಗಭೂಮಿ ಅವಕಾಶಗಳು ಕಡಿಮೆ ಎಂದರಿತ ಉಲ್ಲಾಸ್ ಈಗ್ಗೆ ಮೂರು ವರ್ಷಗಳ ಹಿಂದೆ ಉಲ್ಲಾಸ್ ಸ್ಕೂಲ್ ಸಿನಿಮಾಸ್ ಎಂಬ ಶಾಲೆ ಆರಂಭಿಸಿದ್ದ.


ಈ ಶಾಲೆಯೀಗ ರಾಜಾಜಿನಗರ ಮತ್ತು ವಿಜಯ ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಆಯಾ ವಿಭಾಗಕ್ಕೆ ಆಯಾ ಕ್ರೇತ್ರದಲ್ಲಿ ಪರಿಣತಿ ಹೊಂದಿದವರಿಂದಲೇ ತರಬೇತಿ ಈ ಶಾಲೆಯಲ್ಲಿ ತರಬೇತಿ ಕೊಡಲಾಗುತ್ತದೆ. ಒಂದಷ್ಟು ವಿದ್ಯಾರ್ಥಿಗಳು ಇಲ್ಲಿ ಕಲಿತಿದ್ದಾರೆ. ಆದರೆ ಈ ಶಾಲೆಯಲ್ಲಿ ವಿದ್ಯಾರ್ಥಿಗಳಾಗಿದ್ದ ಮಕ್ಕಲು ನಂತರ ಎಲ್ಲೋ ಕಳೆದು ಹೋಗೋದನ್ನು ಮನಗಂಡ ಉಲ್ಲಾಸ್ ಅವರೆಲ್ಲರನ್ನೂ ಒಟ್ಟುಗೂಡಿಸಿ ಈಗೊಂದು ಮಕ್ಕಳ ಸಿನಿಮಾ ಮಾಡಲು ಮುಂದಾಗಿದ್ದಾನೆ.


ತಾನು ನಿರ್ಮಾಪಕನಾಗಿಯಷ್ಟೇ ಉಳಿದುಕೊಂಡು ನಿರ್ದೇಶನ, ಸಂಕಲನ, ಸಂಗೀತ ಸೇರಿದಂತೆ ಎಲ್ಲವನ್ನೂ ತನ್ನ ಶಾಲೆಯ ವಿದ್ಯಾರ್ಥಿಗಳಿಂದಲೇ ಮಾಡಿಸುತ್ತಿರೋದು ಅಸಲೀ ವಿಶೇಷ. ಲೋಹಿತ್ ಎಂಬ ಎಂಟನೇ ತರಗತಿ ವಿದ್ಯಾರ್ಥಿ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾನೆ. ಒಂಭತ್ತನೇ ತರಗತಿಯ ಲೋಹಿತ್ ಜಿ ಸಂಕಲನದ ಜವಾಬ್ದಾರಿ ಹೊತ್ತಿದ್ದಾನೆ. ಫಸ್ಟ್ ಪಿಯು ವಿದ್ಯಾರ್ಥಿನಿ ವರ್ಣಶ್ರೀ ಸಂಗೀತ ನಿದೇಶನದ ಹೊಣೆ ಹೊತ್ತಿದ್ದಾಳೆ. ಎಂಟನೇ ಕ್ಲಾಸಿನ ಹುಡುಗಿಯೊಬ್ಬಳು ಪೋಸ್ಟರ್ ಡಿಸೈನಿಂಗ್ ಮಾಡಲಿದ್ದಾಳೆ. ಇವರೆಲ್ಲರಿಗೂ ನುರಿತವರ ಬಳಿಯಲ್ಲಿ ಈಗಾಗಲೇ ತರಬೇತಿ ಕೊಡಿಸಲಾಗುತ್ತಿದೆಯಂತೆ.


ಬರುವ ತಿಂಗಳು ಈ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮವನ್ನು ಆಯೋಜಿಸಿರುವ ಉಲ್ಲಾಸ್ ಅದಾಗಲೇ ನಾಗರಭಾವಿಯಲ್ಲಿ ತನ್ನ ಶಾಲೆಯ ಮೂರನೇ ಶಾಖೆ ತೆರೆಯುವ ಆಲೋಚನೆಯಲ್ಲಿದ್ದಾನೆ. ಎಳೆಯರಲ್ಲಿನ ಪ್ರತಿಭೆ ಅನಾವರಣಗೊಳಿಸಿ ಅವರಿಂದಲೇ ಒಂದು ಚಿತ್ರ ನಿರ್ಮಾಣ ಮಾಡುವ ಕನಸು ಹೊಂದಿರೋ ಉಲ್ಲಾಸ್ ಕನಸು ನನಸಾಗಲೆಂದು ಹಾರೈಸೋಣ.

Leave a Reply

Your email address will not be published. Required fields are marked *


CAPTCHA Image
Reload Image