ಕನ್ನಡ ಚಿತ್ರರಂಗದಲ್ಲಿ ವಿತರಕರಾಗಿ, ನಿರ್ಮಾಪಕರಾಗಿ ಪರಿಚಿತರಾಗಿರುವವರು ಬಿ.ಕೆ ಶ್ರೀನಿವಾಸ್. ಬೆಂಕೋಶ್ರೀ ಎಂದೇ ಖ್ಯಾತರಾಗಿರುವ ಅವರೀಗ ಒಂದಷ್ಟು ಕಾಲದ ನಂತರ ಮತ್ತೆ ಬಂದಿದ್ದಾರೆ. ಬೆಂಕೋಶ್ರೀ ಫಿಲಂ ಫ್ಯಾಕ್ಟರಿ ಎಂಬ ನೂತನ ಸಂಸ್ಥೆಯನ್ನು ಆರಂಭಿಸಿರುವ ಅವರೀಗ ಮತ್ತಷ್ಟು ಸದಭಿರುಚಿಯ ಚಿತ್ರಗಳನ್ನು ನಿರ್ಮಾಣ ಮಾಡುವ, ಎಂದಿನಂತೆ ಹೊಸಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದೊಂದಿಗೆ ಆಗಮಿಸಿದ್ದಾರೆ. ವಿಶೇಷವೆಂದರೆ ಈ ಸಂಸ್ಥೆಯ ಅಡಿಯಲ್ಲಿಯೇ ತಮ್ಮ ಪುತ್ರನನ್ನೂ ನಾಯಕನಾಗಿ ಲಾಂಚ್ ಮಾಡೋ ಮಹಾ ಕನಸಿನೊಂದಿಗೇ ಬೆಂಕೋಶ್ರೀ ಮೊದಲ ಹೆಜ್ಜೆಯಿಟ್ಟಿದ್ದಾರೆ.

ಒಂದಷ್ಟು ಸಮಯದವರೆಗೆ ಚಿತ್ರರಂಗದಿಂದ ದೂರವುಳಿದಿದ್ದ ಬೆಂಕೋಶ್ರೀ ಇತ್ತೀಚೆಗೆ ಒಂದು ಪತ್ರಿಕಾ ಗೋಷ್ಟಿಯನ್ನು ಆಯೋಜಿಸಿದ್ದರು. ಇದೇ ಸಂದರ್ಭದಲ್ಲಿ ಬೆಂಕೋಶ್ರೀ ಫಿಲಂ ಫ್ಯಾಕ್ಟರಿ ಸಂಸ್ಥೆಯನ್ನು ನಿರ್ದೇಶಕ ಯೋಗರಾಜ ಭಟ್ ಉದ್ಘಾಟಿಸಿದರು. ಇದಾದ ನಂತರ ಬೆಂಕೋಶ್ರೀ ಎಂದಿನಂತೆ ಹುರುಪಿನಿಂದಲೇ ತಮ್ಮ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಸವಿವರವಾದ ಮಾಹಿತಿ ಬಿಚ್ಚಿಟ್ಟಿದ್ದಾರೆ. ತಮ್ಮ ಮಗನಿಗೆ ಅಕ್ಷರ್ ಎಂಬ ನಾಮಕರಣ ಮಾಡಿ ಆತನನ್ನು ಪರಿಚಯಿಸಿದ್ದಾರೆ. ಮಗನನ್ನು ತಮ್ಮದೇ ಹೊಸಾ ಸಂಸ್ಥೆಯ ನೆರಳಲ್ಲಿ ನಾಯಕನನ್ನಾಗಿ ಲಾಂಚ್ ಮಾಡಲಿರೋ ಸೂಚನೆಯನ್ನೂ ಕೊಟ್ಟಿದ್ದಾರೆ.

ಕಡುಕಷ್ಟದಿಂದಲೇ ಬದುಕು ಕಟ್ಟಿಕೊಂಡಿರೋ ಬೆಂಕೋಶ್ರೀ ಸಾಹಿತಿಯಾಗಿಯೂ ಹೆಜ್ಜೆ ಗುರುತು ಮೂಡಿಸಿರುವವರು. ಒಳ್ಳೆಯ ಮಾರ್ಗದಲ್ಲಿಯೇ ಜೀವನ ಪೊರೆಯಲು ಮನುಷ್ಯನೊಬ್ಬ ಎಂತೆಂಥಾ ಪಡಿಪಾಟಲುಗಳನ್ನು ಅನುಭವಿಸಬಹುದೋ ಅದೆಲ್ಲವನ್ನೂ ಅನುಭವಿಸಿರುವ ಬೆಂಕೋಶ್ರೀ ಚಿತ್ರರಂಗಕ್ಕೆ ಬಂದ ಮೇಲೆಯೂ ಕಷ್ಟಪಡುವವರಿಗೆ ಸದಾ ಬೆಂಬಲವಾಗಿ ನಿಲ್ಲೋ ಮನಸ್ಥಿತಿ ಹೊಂದಿದ್ದಾರೆ. ಶಾಂತಲಾ ಥಿಯೇಟರಿನಲ್ಲಿ ಟಿಕೇಟು ಹರಿಯುವ ಕೆಲಸ ಮಾಡುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಅವರು ಹನ್ನೊಂದು ವರ್ಷಗಳ ಹಿಂದೆ ನಿರ್ಮಾಪಕನಾಗಿಯೂ ಕಾರ್ಯನಿರ್ವಹಿಸಲಾರಂಭಿಸಿದರು. ಒಟ್ಟು ಆರು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.

ಇದೀಗ ಅವರ ಗಮನ ಪ್ರಧಾನವಾಗಿ ಕೇಂದ್ರೀಕರಿಸಿರೋದು ಅವರ ಮಗ ಅಕ್ಷರ್‌ನನ್ನು ಹೀರೋ ಆಗಿ ಲಾಂಚ್ ಮಾಡೋದರ ಮೇಲೆ. ಅಕ್ಷರ್ ಎಳವೆಯಿಂದಲೂ ತಂದೆಯ ಸಿನಿಮಾ ವಾತಾವರಣದಲ್ಲಿಯೇ ಬೆಳೆದವನು. ತಾನೇ ಕಿರುಚಿತ್ರಗಳನ್ನೂ ಮಾಡಿ ಅಚ್ಚರಿ ಹುಟ್ಟಿಸಿದ್ದವನು. ಮಗನ ಆಸಕ್ತಿ ಗಮನಿಸಿದ ಬೆಂಕೋಶ್ರೀ ಆತ ನಟನಾಗಿ ನೆಲೆಗೊಳ್ಳಲು ಬೇಕಾದ ಎಲ್ಲ ಸಾಥ್ ಅನ್ನೂ ನೀಡಿದ್ದರು. ಅದರ ಫಲವಾಗಿ ಅಕ್ಷರ್ ರಂಗಭೂಮಿಯಲ್ಲಿಯೂ ನಟನಾಗಿ ಪಳಗಿಕೊಂಡಿದ್ದಾನೆ. ಡಾನ್ಸ್, ಫೈಟ್ ಸೇರಿದಂತೆ ಎಲ್ಲದರಲ್ಲಿಯೂ ತರಬೇತಿ ಪಡೆದುಕೊಂಡಿದ್ದಾನೆ. ಹೀಗೆ ತಮ್ಮ ಮಗ ನಟನಾಗಲು ಎಲ್ಲ ಅರ್ಹತೆಗಳನ್ನು ಪಡೆದ ಮೇಲೆಯೇ ಬೆಂಕೋಶ್ರೀ ಆತನನ್ನು ಹೀರೋ ಆಗಿ ಲಾಂಚ್ ಮಾಡಲು ನಿರ್ಧರಿಸಿದ್ದಾರೆ.

ಅಕ್ಷರ್ ಮೊದಲ ಚಿತ್ರವನ್ನು ಯಾರು ನಿರ್ದೇಶನ ಮಾಡಲಿದ್ದಾರೆಂಬುದೂ ಸೇರಿದಂತೆ ಎಲ್ಲ ವಿವರಗಳನ್ನು ಬೆಂಕೋಶ್ರೀ ಇಷ್ಟರಲ್ಲಿಯೇ ಕೊಡಲಿದ್ದಾರಂತೆ. ಮಗನನ್ನು ಏಕಾಏಕಿ ಹೀರೋ ಆಗಿ ಲಾಂಚ್ ಮಾಡದೆ, ವರ್ಷಾಂತರಗಳ ಕಾಲ ಪಳಗುವಂತೆ ಮಾಡಿ ಆತ ಹೀರೋ ಆಗೋ ಅರ್ಹತೆ ಪಡೆದಿದ್ದಾನೆ ಅನ್ನಿಸಿದ ಮೇಲಷ್ಟೇ ಬೆಂಕೋಶ್ರೀ ಆ ಬಗ್ಗೆ ಮುಂದಡಿ ಇಟ್ಟಿದ್ದಾರೆ. ಲಾಭ ನಷ್ಟದಾಚೆಗೆ ಹೊಸಬರಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಬೆಂಕೋಶ್ರೀ ಮಗನ ಸಿನಿಮಾ ಎಂಟ್ರಿ ಸಹಜವಾಗಿಯೇ ಕುತೂಹಲಕ್ಕೆ ಕಾರಣವಾಗಿದೆ.

#

LEAVE A REPLY

Please enter your comment!
Please enter your name here

10 + 1 =