One N Only Exclusive Cine Portal

ಬಿಗ್‌ಬಾಸ್: ಗೆಲ್ಲೋರ್‍ಯಾರು ಗೊತ್ತಾ?

ಈ ಸಲದ ಬಿಗ್‌ಬಾಸ್ ಶೋ ಅದರ ಅಭಿಮಾನಿ ಪ್ರೇಕ್ಷಕರಿಂದಲೇ ಬೋರಿಂಗ್ ಅನ್ನಿಸಿಕೊಂಡಿದೆ. ಒಂದು ರಿಯಾಲಿಟಿ ಶೋ ಕನಿಷ್ಠ ರೀತಿ ರಿವಾಜುಗಳಾಚೆಗೆ, ಥರ ಥರದ ಲೆಕ್ಕಾಚಾರ, ಮುಲಾಜುಗಳಿಗೆ ಬಿದ್ದರೆ ಏನೇನಾಗಬಹುದೋ ಅದೆಲ್ಲದಕ್ಕೂ ಈ ಸೀಜನ್ ಸಾಕ್ಷಿಯಾಗಿದೆ. ಇದರ ಸ್ಪರ್ಧಿಗಳಾಗಿದ್ದ ಕೆಲ ಸೆಲೆಬ್ರಿಟಿ ಅನ್ನಿಸಿಕೊಂಡಿದ್ದ ಮಂದಿ ಇರೋ ಬರೋ ಮಾನ ಮರ್ಯಾದೆಗಳನ್ನೂ ಕಳೆದುಕೊಂಡು ಹೊರ ಬಿದ್ದಿದ್ದಾರೆ. ಇದ್ದಿದ್ದರಲ್ಲಿ ಕಾಮನ್‌ಮ್ಯಾನ್ ಕೋಟಾದಲ್ಲಿ ಒಳ ಹೋಗಿದ್ದವರೇ ಒಂಚೂರು ಮಾನ ಉಳಿಸಿಕೊಂಡಿರೋದು ಈ ಸೀಜನ್‌ನ ಅಸಲೀ ಬದಲಾವಣೆ!

ಇದೀಗ ಈ ಸೀಜನ್ ಕಟ್ಟ ಕಡೆಯ ಹಂತ ತಲುಪಿಕೊಂಡಿದೆ. ಬಿಗ್‌ಬಾಸ್ ವಿನ್ನರ್ ಯಾರೆಂಬ ಕುತೂಹಲ ಎಲ್ಲೆಡೆ ಏರಿಕೊಂಡಿದೆ. ಒಂದಷ್ಟು ಮಂದಿ ಜೆಕೆ ಗೆಲ್ಲುತಾರೆಂದುಕೊಂಡರೆ, ಆ ಒಲವು ಚಂದನ್ ಶೆಟ್ಟಿ ಮೇಲೆಯೂ ಇದೆ. ಇನ್ನೊಂದಷ್ಟು ಮಂದಿ ಕಾಮನ್‌ಮ್ಯಾನ್ ದಿವಾಕರ್ ಗೆಲ್ಲಬಹುದೆಂಬ ನಿರೀಕ್ಷೆಯನ್ನೂ ಇಟ್ಟುಕೊಂಡಿದ್ದಾರೆ.

ಆದರೆ, ವಾಹಿನಿ ಮಂದಿಯ ಆಂತರಿಕ ಬೇಗುದಿಯೇ ಬೇರೆಯದ್ದಿದೆ. ಇಲ್ಲಿ ಜೆಕೆ ಗೆದ್ದರೂ, ಚಂದನ್, ದಿವಾಕರ್ ಯಾರೇ ಗೆದ್ದರೂ ಪ್ರೇಕ್ಷಕರ ಓಟಿಂಗ್ ನೆಪ ಮಾತ್ರ. ಅಲ್ಲಿ ಇತರೇ ಲೆಕ್ಕಾಚಾರಗಳೇ ಮೇಲುಗೈ ಪಡೆದಿರುತ್ತವೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಈ ದಿವಾಕರ್ ಎಂಬ ವಿಚಿತ್ರ ಪ್ರಾಣಿಯನ್ನು ಆರಂಭದಲ್ಲಿ ಜನ ವಿಚಿತ್ರವಾಗಿಯೇ ನೋಡಿದ್ದರೂ ಯಾವ ಕಿಸುರೂ ಇಲ್ಲದೆ ಮಾತಾಡೋ ಆತ ಕ್ರಮೇಣ ಹತ್ತಿರಾಗಿದ್ದ. ಜೆಕೆಗೆ ಹೋಲಿಸಿ ನೋಡಿದರೂ ದಿವಾಕರನ ಕಿಮ್ಮತ್ತು ಬಿಗ್‌ಬಾಸ್ ಮನೆಯಲ್ಲಿ ತುಸು ಹೆಚ್ಚೇ ಇದೆ. ಕಡೇ ವಾರದಲ್ಲಂತೂ ಪ್ರೇಕ್ಷಕರೇ ಓರ್ವ ಸಾಮಾನ್ಯ ಸೇಲ್ಸ್ ಮ್ಯಾನ್ ಆಗಿರುವ ದಿವಾಕರನನ್ನೇ ಗೆಲ್ಲಿಸಬೇಕೆಂಬ ಮನದಾಸೆ ಹೊಂದಿದ್ದಾರೆ. ಆದರೆ ಅದು ಸಾಧ್ಯವಾಗೋ ಯಾವ ಲಕ್ಷಣವೂ ಇಲ್ಲ. ಯಾಕೆಂದರೆ ದಿವಾಕರ ಗೆಲ್ಲೋದರಿಂದ ವಾಹಿನಿ ಮಂದಿಗೆ ಯಾವ ಫಾಯಿದೆಯೂ ಇಲ್ಲ!

ಇನ್ನು ಜೆಕೆ ಗೆದ್ದರೆ ಅದು ಅಪವಾದವಾಗಿ ಕಿಚ್ಚಾ ಸುದೀಪ್ ಹೆಗಲೇರಿಕೊಳ್ಳುತ್ತದೆ. ಇದುವರೆಗಿನ ಬಹುತೇಕ ಸೀಜನ್ನುಗಳಲ್ಲಿಯೂ ಸುದೀಪ್ ಆಪ್ತರು ಸ್ಪರ್ಧಿಗಳಾಗಿದ್ದರು. ಅರುಣ್ ಸಾಗರ್ ಸೇರಿದಂತೆ ಅನೇಕರು ಗೆಲ್ಲೋ ಅರ್ಹತೆ ಹೊಂದಿದ್ದರೂ ಸುದೀಪ್ ಅವರ ಸಂದಿಗ್ದತೆಯಿಂದಾಗಿ ಗೆಲುವಿನಿಂದ ದೂರಾಗುವಂಥಾ ಸಂದರ್ಭ ಸೃಷ್ಟಿಯಾಗಿತ್ತು. ಈ ಬಾರಿಯೂ ಜೇಕೆ ವಿಚಾರದಲ್ಲಿ ಮತ್ತೆ ಅಂಥಾದ್ದೇ ಸಂದಿಗ್ಧ ಎದುರಾಗಿದೆ. ಇದೂ ಉಲ್ಟಾ ಹೊಡೆದರೆ ಡಬ್ಬಾ ಬಡಿಯುತ್ತಾ ಒಂದಷ್ಟು ಮನರಂಜನೆ ನೀಡಿದ್ದ ಚಂದನ್ ಮೊದಲ ಸೀಜನ್ನಿನ ಅರುಣ್‌ಸಾಗರ್ ಅವರಂತಾದರೂ ಅಚ್ಚರಿಯೇನಿಲ್ಲ.

ಈ ಬಾರಿಯ ಸೀಜನ್‌ನಲ್ಲಿ ಮಾಸ್ ಅನ್ನಿಸುವಂಥಾ ಸ್ಪರ್ಧಿಗಳೇ ಇರಲಿಲ್ಲ. ಆಗೀಗ ತಿರುಗಿ ಬಿದ್ದರೂ ಮತ್ತೆ ತಣ್ಣಗಾಗುತ್ತಾ ಪ್ರತೀ ಆಟವನ್ನೂ ಗೆಲ್ಲಬೇಕೆಂಬ ಏಕ ಮಾತ್ರ ಉದ್ದೇಶದಿಂದ ಮಾತ್ರ ಆಡೋ ಸ್ಪರ್ಧಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಈ ಬಾರಿ ಮಾನ ಮರ್ಯಾದೆಗಳನ್ನು ಬಿಗ್‌ಬಾಸ್ ಮನೆಯೊಳಗೇ ಬಿಟ್ಟು ಹೋದವರು ಬಿಟ್ಟರೆ ಬೇರೆಯದ್ದೇ ಇಮೇಜು ಕಟ್ಟಿಕೊಂಡು ಹೊರ ಬಿದ್ದ ಒಬ್ಬೇ ಒಬ್ಬ ಸ್ಪರ್ಧಿ ಇಲ್ಲ. ಅಕಾಸ್ಮಾತಾಗಿ ಜೆಕೆ ಗೆದ್ದರೂ ಕೂಡಾ ಅವರ ವೃತ್ತಿ ಜೀವನದಲ್ಲಿ ಅಂಥಾದ್ದೇನೂ ಬದಲಾವಣೆಗಳಾಗೋದೂ ಸಂದೇಹ. ಯಾಕೆಂದರೆ ಅವರೂ ಕೂಡಾ ಅಸಲೀ ಸ್ವರೂಪವನ್ನು ಅಪ್ಪಿತಪ್ಪಿಯೂ ಬಿಟ್ಟುಕೊಡದೆ ಒಂದೇ ಮೂಡಿನಲ್ಲಿ ಬಿಗ್‌ಬಾಸ್ ಯಾತ್ರೆ ಮುಗಿಸಿದ್ದಾರೆ.

ಇನ್ನುಳಿದಂತೆ ಈ ಬಾರಿ ಬಿಗ್‌ಬಾಸ್ ಮನೆಗೆ ತೆರಳಿ ಮಾನ ಕಳೆದುಕೊಂಡು ವಾಪಾಸಾಗಿದ್ದೊಂದೇ ಸೆಲೆಬ್ರಿಟಿ ಸ್ಪರ್ಧಿಗಳಿಗೆ ಸಿಕ್ಕ ಫಾಯಿದೆ. ಹಿರಿಯರಾದ ಚಂದ್ರು ಸೇರಿದಂತೆ, ಜಗನ್‌ನನ್ನೂ ಒಳಗೊಂಡು ಬಹುತೇಕರು ಛೀ ತೂ ಅನ್ನಿಸಿಕೊಂಡೇ ಹೊರ ಬಂದಿದ್ದಾರೆ. ಈ ಸೀಜನ್ ಸೆಲೆಬ್ರಿಟಿಗಳ ಪಾಲಿಗೆ ಅಕ್ಷರಶಃ ಕಂಟಕವಾಗಿ ಮಾರ್ಪಾಡಾಗಿದೆ. ಹೀಗಿರುವಾಗ ಸಾಮಾನ್ಯ ಕೋಟಾದ ದಿವಾಕರನನ್ನು ಗೆಲ್ಲಿಸಿದರೆ ಮುಂದಿನ ಸೀಜನ್ನಿನಿಂದ ಸೆಲೆಬ್ರಿಟಿಗಳು ಆ ಕಡೆ ಮುಖ ಹಾಕಲೂ ಹೆದರೋ ಸಂಭವವಿದೆ. ಈ ವಿಚಾರದಲ್ಲಿಯೂ ಆಯೋಜಕರು ಸಂದಿಗ್ಧಕ್ಕೆ ಸಿಕ್ಕಿಕೊಂಡಿದ್ದಾರೆ!

ಒಟ್ಟಾರೆಯಾಗಿ ವಿಜೇತರ ಆಯ್ಕೆ ಜನರ ಓಟಿಂಗಿನ ಆಧಾರದಲ್ಲಿ ನಡೆಯುತ್ತೆ ಅನ್ನೋದು ಮಹಾ ಭ್ರಮೆ. ಅಲ್ಲಿ ವಾಹಿನಿ ಮಂದಿಯ ಲಾಭ ನಷ್ಟದ ಲೆಕ್ಕಾಚಾರಗಳೇ ಪ್ರಧಾನ ಪಾತ್ರ ವಹಿಸುತ್ತವೆಂಬುದು ಸತ್ಯ!

Leave a Reply

Your email address will not be published. Required fields are marked *


CAPTCHA Image
Reload Image