One N Only Exclusive Cine Portal

ಅತೀ ಹೆಚ್ಚು ಓಟು ಪಡೆದ ಜೆಕೆ ಯಾಕೆ ಗೆಲ್ಲಲಿಲ್ಲ?

ಬಿಗ್ ಬಾಸ್ ಸೀಸನ್ ಐದರ ನೂರು ದಿನಗಳ ಸುದೀರ್ಘ ಪಯಣ ಸಮಾಪ್ತಿಗೊಂಡಿದೆ. ಕಡೆಗೂ ಗೆಲ್ಲೋರು ಯಾರು? ಎಂಬುದರ ಸುತ್ತ ಬಿಗ್‌ಬಾಸ್ ಪ್ರೇಕ್ಷಕರ ನಡುವೆ ಒಂದು ಬಿಸಿ ಬಿಸೀ ಚರ್ಚೆ, ಗೆಲ್ಲೋದು ಇವರೇ ಎಂಬ ಇದಮಿತಂ ಎಂಬಂಥಾ ಹುಸಿ ರೂಮರ್… ಇದೆಲ್ಲದರಿಂದ ಕಾವೇರಿಸಿಕೊಂಡಿದ್ದ ಬಿಗ್‌ಬಾಸ್ ಈ ಸೀಜನ್ನಿನ ವಿನ್ನರ್ ಆಗಿ ಚಂದನ್ ಶೆಟ್ಟಿ ಹೊರ ಹೊಮ್ಮಿದ್ದಾರೆ!

ಆರಂಭದಿಂದಲೂ ಹೀಗೀಗೇ ಇರಬೇಕೆಂಬ ಗೆರೆ ಹಾಕಿಕೊಂಡಂತೆ ಬಿಗ್‌ಬಾಸ್ ಮನೆಯೊಳಗೆ ಓಡಾಡಿಕೊಂಡಿದ್ದ ಚಂದನ್ ನಿಧಾನವಾಗಿ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದದ್ದು ತನ್ನ ರ‍್ಯಾಪ್ ಸಾಂಗುಗಳ ಝಲಕ್ಕಿನಿಂದ. ಕುಂತಲ್ಲೇ ಹಾಡು ಕಟ್ಟಿ, ಸಿಕ್ಕ ಐಟಮ್ಮುಗಳನ್ನೇ ಸಂಗೀತ ಪರಿಕರಗಳನ್ನಾಗಿಸಿಕೊಂಡು ಹಾಡುವ ಚಂದನ್ ಕಲೆಗೆ ಪ್ರೇಕ್ಷಕರು ಮಾರು ಹೋಗಿದ್ದರು. ಅಂಥಾದ್ದೊಂದು ಟ್ಯಾಲೆಂಟಿನಿಂದಲೇ ಇದೀಗ ಚಂದನ್ ಬಿಗ್‌ಬಾಸ್ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. ಸಾಮಾನ್ಯ ಕೋಟಾದಲ್ಲಿನ ದಿವಾಕರ್ ರನ್ನರಪ್ ಆಗಿದ್ದಾರೆ!

ಹಾಗಂತ ಇದರ ಹಿಂದೆ ಸಂಪೂರ್ಣವಾಗಿ ಪ್ರೇಕ್ಷಕರ ಓಟಿಂಗ್ ಮಾತ್ರವೇ ಕೆಲಸ ಮಾಡಿದೆ ಅಂದುಕೊಳ್ಳಬೇಕಿಲ್ಲ. ಇದರ ಹಿಂದೆ ನಾನಾ ಲೆಕ್ಕಾಚಾರಗಳಿದ್ದಾವೆ. ಆದರೆ ಅದೆಲ್ಲದರಾಚೆಗೂ ಬಿಗ್‌ಬಾಸ್ ಪ್ರೇಕ್ಷಕರಲ್ಲಿ ಚಂದನ್ ವಿನ್ನರ್ ಆಗಿ ಆಯ್ಕೆಯಾದದ್ದರ ಬಗ್ಗೆ ಅಷ್ಟೇನೂ ತಕರಾರುಗಳಿಲ್ಲ. ಅಷ್ಟರಮಟ್ಟಿಗೆ ಈ ಬಾರಿಯ ಬಿಗ್‌ಬಾಸ್ ಶೋನ ಅಂತಿಮ ರಿಸಲ್ಟ್ ತಕ್ಕಮಟ್ಟಿಗೆ ವಿವಾದಾತೀತವಾಗಿದೆ. ಆ ಮೂಲಕ ಕಿಚ್ಚಾ ಸುದೀಪ್ ಕೂಡಾ ಪ್ರೇಕ್ಷಕರ ನಂಬಿಕೆಗಳನ್ನು ಗೌರವಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಹಾಗೊಂದು ವೇಳೆ ಪ್ರೇಕ್ಷಕರ ಓಟಿಂಗೇ ಇಲ್ಲಿ ಅಂತಿಮವಾಗಿದ್ದಿದ್ದರೆ ಯಾರು ಗೆಲ್ಲುತ್ತಿದ್ದರು? ಅತೀ ಹೆಚ್ಚು ಓಟು ಬಿದ್ದಿದ್ಯಾರಿಗೆ ಅಂತೆಲ್ಲ ಪ್ರಶ್ನೆಗಳು ಹುಟ್ಟೋದು ಸಹಜವೇ. ಆ ನಿಟ್ಟಿನಲ್ಲಿ ಒಂದು ಮೂಲದ ಮಾಹಿತಿಯ ಪ್ರಕಾರ ಎದುರುಗೊಳ್ಳುವವರು ಜಯಕಾರ್ತಿಕ್ ಅಂದರೆ ಜೆಕೆ. ನಿಜ, ಜೆಕೆ ಅಂದರೆ ಅಹಂಕಾರಿ, ಯಾರಿಗೂ ಕೇರು ಮಾಡದ ಸ್ವಭಾವದ ಆಸಾಮಿ ಅಂತೆಲ್ಲ ಇಮೇಜುಗಳಿದ್ದವು. ಅಶ್ವಿನಿ ನಕ್ಷತ್ರ ಸೀರಿಯಲ್ ಮೂಲಕವೇ ಜೆಕೆಯನ್ನು ಪರಿಚಯ ಮಾಡಿಕೊಂಡಿದ್ದವರಿಗಂತೂ ಆ ಪಾತ್ರದಲ್ಲಿನ ಗತ್ತು, ದೌಲತ್ತುಗಳೇ ಆತನ ಅಸಲೀ ವ್ಯಕ್ತಿತ್ವ ಅನ್ನಿಸಿದ್ದರಲ್ಲಿ ಅಚ್ಚರಿಯೇನಿಲ್ಲ. ಆದರೆ ಅಂಥಾ ಎಲ್ಲ ಅನಿಸಿಕೆಗಳನ್ನೂ ಈ ನೂರು ದಿನಗಳ ಯಾನದಲ್ಲಿ ಜೇಕೆ ಸುಳ್ಳಾಗಿಸಿದ್ದಾರೆ. ಆ ಮೂಲಕವೇ ಪ್ರೇಕ್ಷಕರಿಗೆ ಮತ್ತಷ್ಟು ಆಪ್ತವಾಗಿದ್ದಾರೆ. ಆದ್ದರಿಂದಲೇ ಅತೀ ಹೆಚ್ಚು ಓಟುಗಳು ಬಂದಿದ್ದು ಜೇಕೆಗೆ ಮಾತ್ರ!

ಆದರೂ ಜೇಕೆ ಯಾಕೆ ಗೆಲ್ಲಲಿಲ್ಲ ಅಂತ ನೋಡ ಹೋದರೆ ಒಂದಷ್ಟು ಸೂಕ್ಷ್ಮ ವಿಚಾರಗಳು ಹೊರ ಬೀಳುತ್ತವೆ. ಈವರೆಗಿನ ಸೀಜನ್ನುಗಳಲ್ಲಿನ ಫಲಿತಾಂಶದಲ್ಲಿ ವಾಹಿನಿಯ ಮಂದಿ ಅದೇನೇ ಹಿಕಮತ್ತುಗಳನ್ನು ನಡೆಸಿದರೂ ಕೂಡಾ ಅದರ ಕಲೆಯನ್ನು ತಮ್ಮ ವ್ಯಕ್ತಿತ್ವಕ್ಕೆ ಅಂಟಿಕೊಳ್ಳದಂತೆ ನೋಡಿಕೊಂಡು ಬಂದವರು ಕಿಚ್ಚಾ ಸುದೀಪ್. ಇಂಥಾದ್ದರಿಂದಾಗಿಯೇ ಅವರ ಆಪ್ತ ವಲಯದಲ್ಲಿರೋ ಅರುಣ್ ಸಾಗರ್ ಮೊದಲ ಸೀಜನ್ನಿನಲ್ಲಿ ಅರ್ಹತೆ ಇದ್ದರೂ ಅದರಿಂದ ವಂಚಿತರಾಗಿದ್ದರು. ಇನ್ನುಳಿದಂತೆ ಇದೀಗ ಗೆಲುವಿನ ಹತ್ತಿರ ಹೋಗಿ ವಾಪಾಸಾಗಿರೋ ಜೇಕೆ ಕೂಡಾ ಸುದೀಪ್ ಅವರ ಆತ್ಮೀಯ ಗೆಳೆಯ. ಆತನನ್ನೇ ಗೆಲ್ಲಿಸಿದರೆ ಗೆಳೆಯನನ್ನು ಗೆಲ್ಲಿಸಿದರೆಂಬ ಅಪವಾದ ಬರೋದು ಗ್ಯಾರೆಂಟಿ. ಹೀಗಿರೋವಾಗ ಜೇಕೆ ನಂತರ ಪ್ರೇಕ್ಷಕರ ಒಲವು ಹೊಂದಿರೋ ಚಂದನ್ ಶೆಟ್ಟಿಯನ್ನೇ ಗೆಲ್ಲಿಸೋದು ಸೇಫು ಎಂಬ ಲೆಕ್ಕಾಚಾರದಿಂದ ಅಂತಿಮ ಫಲಿತಾಂಶ ಹೊರ ಬಿದ್ದಿದೆ.

ಅಂದಹಾಗೆ ಈ ಹುಡುಗ ಚಂದನ್ ಶೆಟ್ಟಿ ಕೂಡಾ ಈ ಫಲಿತಾಂಶದ ರೂವಾರಿಯಾಗಲು ಅರ್ಹ ಎಂಬುದರಲ್ಲಿ ಎರಡು ಮಾತಿಲ್ಲ. ಅತ್ಯಂತ ಕಷ್ಟದ ಜೀವನವನ್ನು ಎದುರುಗೊಳ್ಳುತ್ತಲೇ ತನ್ನೊಳಗಿನ ಕಲೆಯನ್ನೇ ಗುರಿಯಾಗಿಸಿಕೊಂಡು ಬೆಳೆದು ನಿಂತವರು ಚಂದನ್. ಬಿಗ್‌ಬಾಸ್ ಶೋ ಮೂಲಕ ಆತ ಮತ್ತಷ್ಟು ಖ್ಯಾತಿ ಹೊಂದಿದ್ದಾರೆ. ಚಂದನ್ ಬಿಗ್‌ಬಾಸ್ ಒಳ ಹೋದ ಮೇಲೆ ಆತ ಹಾಡಿದ್ದ ಹಾಡುಗಳನೇಕವು ಜನ ಮನ ಗೆದ್ದಿವೆ. ಹೊರ ಬಂದ ಬಳಿಕ ಇನ್ನಷ್ಟು ಅವಕಾಶಗಳು ಅರಸಿ ಬರೋದರಲ್ಲಿ ಯಾವುದೇ ಸಂದೇಹಗಳಿಲ್ಲ!

Leave a Reply

Your email address will not be published. Required fields are marked *


CAPTCHA Image
Reload Image