One N Only Exclusive Cine Portal

ಬಲವಿಲ್ಲದ ಬೃಹಸ್ಪತಿಗೆ ಪ್ರೇಕ್ಷಕರ ಒಲವು ದಕ್ಕೀತೇ?!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಎರಡನೇ ಚಿತ್ರ ಬೃಹಸ್ಪತಿ. ರೀಮೇಕ್ ಸ್ಪೆಷಲಿಸ್ಟ್ ನಂದಕಿಶೋರ್ ನಿರ್ದೇಶನ, ರಾಕ್‌ಲೈನ್ ವೆಂಕಟೇಶ್ ಅವರ ಅದ್ದೂರಿ ನಿರ್ಮಾಣ ಅಂತೆಲ್ಲ ಸದ್ದು ಮಾಡಿ ಅಬ್ಬರಿಸುತ್ತಾನೆಂದುಕೊಂಡಿದ್ದ ಬೃಹಸ್ಪತಿ ಇದೀಗ ಧನುರ್ಮಾಸದ ಚಳಿಗೆ ಮುದುರಿಕೊಂಡವನಂತೆ ಥೇಟರಿನಲ್ಲಿ ಪ್ರತ್ಯಕ್ಷವಾಗಿದ್ದಾನೆ. ಪ್ರೇಕ್ಷಕರು ಬೃಹಸ್ಪತಿಯನ್ನು ಕಂಡು ಬೆಚ್ಚಗಾದರಾ ಅಂತ ನೋಡ ಹೋದರೆ ಪೆಚ್ಚು ಫೀಲಿಂಗೇ ಥೇಟರುಗಳ ತುಂಬಾ ರಾರಾಜಿಸುತ್ತಿದೆ.


ತಮಿಳಿನಲ್ಲಿ ಭಾರೀ ಕ್ರೇಜ್ ಸೃಷ್ಟಿಸಿದ್ದ ಚಿತ್ರ ವೇಲೆ ಇಲ್ಲಾದ ಪಟ್ಟದಾರಿ (ವಿಐಪಿ). ಅದರಲ್ಲಿ ನಾಯಕನಾಗಿ ನಟಿಸಿದ್ದ ಧನುಷ್ ಮತ್ತೆ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದರು. ಅದೇ ಚಿತ್ರವನ್ನು ನಂದಕಿಶೋರ್ ಕನ್ನಡಕ್ಕೆ ರೀಮೇಕ್ ಮಾಡೋ ಸದ್ದಾದಾಗ, ಅದ್ದೂರಿ ಚಿತ್ರಗಳಿಗೆ ಹೆಸರಾದ ರಾಕ್‌ಲೈನ್ ವೆಂಕಟೇಶ್ ಅದನ್ನು ನಿರ್ಮಾಣ ಮಾಡಲು ನಿಂತಾಗ, ಕ್ರೇಜಿ ಪುತ್ರ ಮನೋರಂಜನ್ ಎರಡನೇ ಸಲ ಈ ಚಿತ್ರದ ಮೂಲಕ ಮತ್ತೆ ಅದೃಷ್ಟ ಪರೀಕ್ಷೆಗೆ ನಿಂತಾಗ… ಸಹಜವಾಗೇ ಒಂದು ಕುತೂಹಲ ಹುಟ್ಟಿಕೊಂಡಿತ್ತು.
ಆದರೆ ಇಂಥಾ ಅಗಾಧ ನಿರೀಕ್ಷೆಯಿಟ್ಟುಕೊಂಡು ಥೇಟರುಗಳಿಗೆ ನುಗ್ಗಿದವರಿಗೆ ತೆರೆ ಮೇಲೆ ಕಂಡದ್ದು ಅಕ್ಷರಶಃ ಬೂಸಾ ಬೃಹಸ್ಪತಿ!


ಇಂಜಿನಿಯರಿಂಗ್ ಓದಿ ಮುಗಿಸಿದ ಎಷ್ಟೋ ಜನದಂತೆ ಈ ಚಿತ್ರದ ಹೀರೋ ಕೂಡಾ ನಿರುದ್ಯೋಗಿ. ಓದಿಗೆ ತಕ್ಕ ಕೆಲಸ ಸಿಗದೆ ಮನೆಯಲ್ಲಿ ಬಿಟ್ಟಿ ಕೂಳು ಎನಿಸಿಕೊಂಡು, ಟೈಮ್ ಪಾಸ್ ಮಾಡಿಕೊಂಡು ತಿರುಗಾಡುವ ಹುಡುಗನ ಪಾಲಿಗೆ ದೊಡ್ಡದೊಂದು ಪ್ರಾಜೆಕ್ಟು ಸಿಗುತ್ತದೆ. ಅದನ್ನು ಹಳ್ಳ ಹಿಡಿಸಲು ವಿರೋಧಿ ಪಡೆ ಟೊಂಕ ಕಟ್ಟಿ ನಿಲ್ಲುತ್ತದೆ. ಹೆಜ್ಜೆ ಹೆಜ್ಜೆಗೂ ಕ್ವಾಟಲೆ ಕೊಡಲು ಶುರು ಮಾಡುತ್ತದೆ. ಅದೆಲ್ಲವನ್ನೂ ಮೀರಿ ಹೀರೋ ತನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಾನಾ ಇಲ್ಲವಾ ಅನ್ನೋದು ಸಿನಿಮಾದ ಮುಖ್ಯ ಅಂಶ. ಆದರೆ ನಿರ್ದೇಶಕರ ಕಾಟಾಚಾರ, ಬೇಜವಾಬ್ದಾರಿ ಇಡೀ ಚಿತ್ರವನ್ನು ನುಂಗಿ ನೀರು ಕುಡಿದಿದೆ.
ತಮಿಳಿನಲ್ಲಿ ಈ ಚಿತ್ರದ ಕಥೆ ನಿಜಕ್ಕೂ ಖದರ್ ಹೊಂದಿತ್ತು. ಅದಕ್ಕೆ ಧನುಷ್ ನಟನೆ, ನಿರ್ದೇಶನ ಎಲ್ಲವೂ ಸಾಥ್ ನೀಡಿತ್ತು. ಆದರೆ ಅದೇ ಚಿತ್ರದ ಕನ್ನಡಾವತರಣಿಕೆ ಬೃಹಸ್ಪತಿಯಲ್ಲಿ ಎಲ್ಲವೂ ತದ್ವಿರುದ್ಧ. ಈ ಚಿತ್ರದ ವಿಚಾರದಲ್ಲಿ ನಿರ್ದೇಶನವೇ ಪೇಲವವಾಗಿದೆ. ಮೂಲಕ ಚಿತ್ರಕ್ಕೆ ಸರಿಸಾಟಿಯಾಗಿ ದೃಷ್ಯ ಕಟ್ಟುವಲ್ಲಿ, ಬೋರು ಹೊಡೆಸದಂತೆ ನಿರೂಪಣೆ ಮಾಡುವಲ್ಲಿ ಮತ್ತು ಮನೋರಂಜನ್‌ನಿಂದ ಕಥೆಗೆ ಬೇಕಾದಂಥಾ ನಟನೆ ತೆಗೆಸುವಲ್ಲಿ ನಂದಕೀಶೋರ್ ಪೂರ್ತಿ ಸೋತಿದ್ದಾರೆ. ನಿರ್ದೇಶನದ ಕಥೆಯೇ ಹೀಗಿರೋದರಿಂದ ಇಡೀ ಚಿತ್ರ ಅಲ್ಲಲ್ಲಿ ಲಯ ಹಿಡಿದಂತೆ ಕಂಡರೂ ಮತ್ತೆ ಮತ್ತೆ ಹಳ್ಳ ಹಿಡಿದಿದೆ!


ಈ ಹಿಂದೆ ತೆರೆ ಕಂಡಿದ್ದ ಸಾಹೇಬ ಮನೋರಂಜನ್ ಅವರ ಮೊದಲ ಚಿತ್ರ. ಅದರಲ್ಲಿ ಒಂದು ರೇಂಜಿಗೆ ಓಕೆ ಎಂಬಂತೆ ನಟಿಸಿದ್ದರು. ಆದರೆ ಎರಡನೇ ಚಿತ್ರದಲ್ಲಿಯೂ ನಟನೆಯ ವಿಚಾರದಲ್ಲಿ ಸಾಹೇಬರು ಕೊಂಚವೂ ಸುಧಾರಿಸಿಕೊಂಡಂತಿಲ್ಲ. ಅದು ಒಂದು ಕಡೆಯಾದರೆ ಅವರ ತಮಿಳ್ಗನ್ನಡದ ಪ್ರಹಾರ ಪ್ರೇಕ್ಷಕರಿಗೆ ಹಾರರ್ ಮೂವಿ ನೋಡಿದಷ್ಟೇ ಭಯ ಹುಟ್ಟಿಸಿದೆ. “ಪೊಳೀಸ್, ಟೆಣ್ಣಿಸ್ ಬಾಳ್, ಟೆಲಿಸ್ಕೋಬ್, ತಪ್ಪಳ್ಳಾ ಮಾಡ್ಬಾಡ್ದು, ಕಂಪಣಿ…” ಇವೆಲ್ಲಾ ಮನೋರಂಜನ್ ಅವರ ಮಾತಿನ ಧಾಟಿಯ ಸ್ಯಾಂಪಲ್ಲು! ಈ ತಮಿಳ್ಗನ್ನಡವೇ ಅಲ್ಲಲ್ಲಿ ಮನೋರಂಜನ್ ಚೆಂದಗೆ ನಟಿಸಿದ ದೃಷ್ಯಗಳನ್ನೂ ನುಂಗಿ ಹಾಕಿದೆ. ಅದು ಪ್ರೇಕ್ಷಕರನ್ನು ಇರಿಟೇಟ್ ಮಾಡುವಲ್ಲಿಯೂ ಪ್ರಧಾನ ಪಾತ್ರ ವಹಿಸಿದೆ. ಕಡೇ ಪಕ್ಷ ಮುತುವರ್ಜಿ ವಹಿಸಿ ಡಬ್ಬಿಂಗ್ ಮಾಡಿಸಿದ್ದರೂ ಈ ಅಭಾಸದಿಂದ ಪಾರಾಗುವ ಛಾನ್ಸಿತ್ತು. ಇರೋದರಲ್ಲಿ ಮೊದಲ ನಾಯಕಿ ಚೆಂದ ಕಾಣುತ್ತಾಳೆ. ಮನೋರಂಜನ್ ಡ್ಯಾನ್ಸು, ಸಾಧು ಕೋಕಿಲಾ ಕಾಮಿಡಿ ರಿಲೀಫ್ ನೀಡುತ್ತದೆ. ಸಾಯಿಕುಮಾರ್ ಎಂದಿನಂತೆ ಪಾತ್ರದೊಳಗೆ ಸೇರಿಕೊಂಡು ನಟಿಸಿದ್ದಾರೆ. ಹರಿಕೃಷ್ಣ ಮ್ಯೂಸಿಕ್ಕು ಮತ್ತು ಹಿನ್ನೆಲೆ ಸಂಗೀತ ಓಕೆ ಓಕೆ. ಸತ್ಯ ಹೆಗಡೆ ಕ್ಯಾಮೆರಾ ಕೆಲಸದಲ್ಲಿ ಎಂದಿನ ಶ್ರದ್ಧೆ ಕಾಣುತ್ತದೆ.


ಇನ್ನುಳಿದಂತೆ ಇತರೇ ಪಾತ್ರಗಳ ವಿಚಾರಕ್ಕೆ ಬರೋದಾದರೆ ಸಿತಾರ ಬೃಹಸ್ಪತಿಗೆ ಅಮ್ಮನಾಗಿ ನಟಿಸಿದ್ದಾರೆ. ಸಾಯಿ ಕುಮಾರ್ ಅವರ ನಟನೆಯ ಬಗ್ಗೆ ದೂಸ್ರಾ ಮಾತಾಡುವಂತಿಲ್ಲ. ಮಿಕ್ಕ ಪಾತ್ರಗಳನ್ನು ನಿರ್ವಹಿಸಿದವರ ಕಡೆಯಿಂದಲೂ ಮೋಸವೇನಿಲ್ಲ. ಆದರೆ ನಿರ್ದೇಶನವೇ ಹಳಿ ತಪ್ಪಿದ್ದರಿಂದ, ಹೀರೋ ನಟನೆಯೇ ಮೈನಸ್ ಆಗಿರೋದರಿಂದ ಬೃಹಸ್ಪತಿ ಚಿತ್ರ ಮಂಕಾಗಿದೆ.
ರಾಕ್‌ಲೈನ್ ವೆಂಕಟೇಶ್ ಅದೇನೇ ಅದ್ದೂರಿಯಾಗಿ ಚಿತ್ರ ನಿರ್ಮಾಣ ಮಾಡಿದರೂ ಕೂಡಾ ನಿರ್ದೇಶನ, ನಟನೆ ವಿಫಲವಾದರೆ ಎಲ್ಲವೂ ವ್ಯರ್ಥ. ಅದು ಬೃಹಸ್ಪತಿ ವಿಚಾರದಲ್ಲಿ ಖುಲ್ಲಂಖುಲ್ಲ ಸಾಬೀತಾಗಿದೆ!

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Leave a Reply

Your email address will not be published. Required fields are marked *


CAPTCHA Image
Reload Image