One N Only Exclusive Cine Portal

ಸಿ 3 ಹಾಡು-ಟ್ರೈಲರ್ ಅನಾವರಣ

ವಿಭಿನ್ನ ಕಥೆ, ಹಾರರ್ ಹಿನ್ನೆಲೆಯಲ್ಲಿ ಮೂಡಿಬಂದಿರುವ ಸಿ 3 ಚಿತ್ರದ ಆಡಿಯೋ ಹಾಗೂ ಟ್ರೈಲರ್ ಅನಾವರಣ ಸಮಾರಂಭ ಇತ್ತೀಚೆಗೆ ನಡೆಯಿತು. ಈ ಹಿಂದೆ ಶಿವಮಣಿ, ಆಸ್ಕರ್ ಕೃಷ್ಣ, ಶ್ರೀನಿವಾಸರಾಜು ಮುಂತಾದ ನಿರ್ದೇಶಕರ ಬಳಿ ಕೆಲಸ ಮಾಡಿದ ಕೃಷ್ಣಕುಮಾರ್ ಬಿ. ಹೊಂಗನೂರು ಈ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ನಾಯಕ, ನಾಯಕಿ ಬಿಟ್ಟರೆ ಯಾವುದೇ ಪಾತ್ರಗಳಿಲ್ಲ, ಒಂದೆರಡು ಪಾತ್ರಗಳು ಕಂಡುಬಂದರೂ ಅದು ಒಂದೆರಡು ಸೀನ್‌ಗಳಲ್ಲಿ ಮಾತ್ರ. ಇಡೀ ಚಿತ್ರದ ಕಥೆ ನಡೆಯುವುದು ಒಂದೇ ರಾತ್ರಿಯಲ್ಲಿ ಹಾಗೂ ಒಂದೇ ಲೊಕೇಶನ್‌ನಲ್ಲಿ. ಕಿರುತೆರೆಯ ಲಕ್ಷ್ಮೀ ಬಾರಮ್ಮ ಖ್ಯಾತಿಯ ವಿಜಯಕುಮಾರ್ ಹಾಗೂ ಪ್ಯಾಟಿ ಹುಡ್ಗೀರ್ ಖ್ಯಾತಿಯ ಐಶ್ವರ್ಯ ಆ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈಗಾಗಲೇ ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಮೊನ್ನೆ ಚಿತ್ರದ ಆಡಿಯೋ ಸಿಡಿಯನ್ನು ಜ್ಯೋತಿಷಿ ಗಣಪತಿ ಹೆಬ್ಬಾರ್ ಅವರು ಬಿಡುಗಡೆ ಮಾಡಿದರು, ಇನ್ನು ಚಿತ್ರದ ಟ್ರೈಲರನ್ನು ನಿರ್ದೇಶಕ ಆಸ್ಕರ್ ಕೃಷ್ಣ ಲಾಂಚ್ ಮಾಡಿದರು. ಚಿತ್ರದಲ್ಲಿ ಕೇವಲ ಒಂದೇ ಹಾಡಿದ್ದು, ಅದಕ್ಕೆ ಡಾ.ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದಾರೆ, ವಿಜಯ ಪ್ರಕಾಶ್ ಹಾಗೂ ಜೋಗಿ ಸುನೀತಾ ದನಿಗೂಡಿಸಿದ್ದಾರೆ. ಈ ಚಿತ್ರವನ್ನು ಬಿ.ಎಂ.ಚೇತನ್ ಅವರು ನಿರ್ಮಾಣ ಮಾಡಿದ್ದಾರೆ. ಆದಿಲ್ ನದಾಫ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಇಡೀ ರಾತ್ರಿ ಕಛೇರಿಯ ಒಳಗೇ ನಾಯಕ ಇರಬೇಕಾದ ಸಂದರ್ಭ ಒದಗಿಬಂದಿರುತ್ತದೆ. ಆ ಸಂದರ್ಭದಲ್ಲಿ ಆತನ ಮನಸ್ಸು ಏನೇನೆಲ್ಲಾ ಯೋಚನೆ ಮಾಡುತ್ತದೆ, ಮನುಷ್ಯ ಭಯ ಆದಾಗ ಹೇಗೆ ನಡೆದುಕೊಳ್ತಾನೆ, ಭಯ ಎದುರಿಸುವಾಗ ಹೇಗೆ ಧೈರ್ಯ ತಂದುಕೊಳ್ತಾನೆ ಎಂದು ಈ ಪಾತ್ರದ ಮೂಲಕ ನಿರ್ದೇಶಕರು ಹೇಳುವ ಪ್ರಯತ್ನ ಮಾಡಿದ್ದಾರೆ. ನಾಯಕ ಅಲ್ಲಿಂದ ಹೇಗೆ ಪಾರಾಗಿ ಹೊರಬರುತ್ತಾನೆ ಕೊನೆಯಲ್ಲಿ ಏನಾಗುತ್ತಾನೆ ಎನ್ನುವುದೇ ಈ ಚಿತ್ರದ ಕಥೆ. ಈ ಸಂದರ್ಭದಲ್ಲಿ ನಿರ್ದೇಶಕ ಕೃಷ್ಣಕುಮಾರ್ ಮಾತನಾಡುತ್ತ ಕೆಂಗೇರಿ ಬಳಿ ಸರ್ಕಾರಿ ಕಛೇರಿಯೊಂದರಲ್ಲಿ ಇಡೀ ಚಿತ್ರಕ್ಕೆ ಚಿತ್ರೀಕರಣ ನಡೆಸಲಾಗಿದೆ. ಒಂದು ಬಿಲ್ಡಿಂಗ್ ಒಳಗೆ ಒಬ್ಬ ವ್ಯಕ್ತಿಯ ಸುತ್ತ ನಡೆವ ಕಥೆ ಇಟ್ಟುಕೊಂಡು ಒಂದು ಎಕ್ಸ್‌ಪರಿಮೆಂಟ್ ಮಾಡಿದ್ದೇನೆ. ಈ ಮಧ್ಯೆ ನಾಯಕಿಯೂ ಬರುತ್ತಾಳೆ, ಆಕೆ ಹೇಗೆ, ಏಕೆ ಬರುತ್ತಾಳೆ ಅಂತ ಹೇಳುವುದೇ ಚಿತ್ರದ ಕಥೆ ಎಂದು ಹೇಳಿದರು. ನಂತರ ನಿರ್ಮಾಪಕರಾದ ಚೇತನ್ ಮಾತನಾಡುತ್ತ ಇದೇ ಮೊದಲಬಾರಿಗೆ ಚಿತ್ರವನ್ನು ನಿರ್ಮಾಣ ಮಾಡಿದ್ದೇನೆ. ನಂತರದಲ್ಲಿ ಇನ್ನೂ ಹಲವಾರು ಸಿನಿಮಾ ಮಾಡುವ ಯೋಜನೆಯಿದೆ ಎಂಬುದಾಗಿ ಹೇಳಿಕೊಂಡರು. ಸಂಗೀತ ನಿರ್ದೇಶಕ ಆದಿಲ್ ನದಾಫ್ ಮಾತನಾಡುತ್ತ ಇದು ನನ್ನ ಸಂಗೀತ ನಿರ್ದೇಶನದ ೨ನೇ ಚಿತ್ರ. ಚಿರದಲ್ಲಿ ಒಂದೇ ಒಂದು ಹಾಡಿದ್ದು, ಅಂಬಾರಿ ಏರಿ ನಾವು ಹೋಗೋಣ ಬಾರೋ ಎಂದ ಈ ಹಾಡನ್ನು ಡಾ.ನಾಗೇಂದ್ರ ಪ್ರಸಾದ್ ರಚಿಸಿದ್ದಾರೆ ಎಂದು ಹೇಳಿದರು. ಚಿತ್ರದ ನಾಯಕನಟ ವಿಜಯ ಕುಮಾರ್ ಮಾತನಾಡುತ್ತ ಒಬ್ಬ ಸಾಫ್ಟ್‌ವೇರ್ ಕಂಪನಿಯ ಹುಡುಗನಾಗಿ ನಾನೀ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಿರ್ದೇಶಕ ಕೃಷ್ಣಕುಮಾರ್ ನನಗೆ ಹತ್ತು ವರ್ಷಗಳ ಸ್ನೇಹಿತ. ೨೮ ರಾತ್ರಿಗಳು ಒಂದೇ ಲೊಕೇಶನ್‌ನಲ್ಲಿ ಶೂಟ್ ಮಾಡಿದೆವು. ಒಬ್ಬನೇ ವ್ಯಕ್ತಿ ಒಂದು ಸ್ಥಳದಲ್ಲಿ ಬಂಧಿಯಾಗಿದ್ದಾಗ ಏನೆಲ್ಲ ತರ‍್ಲೆಗಳನ್ನು ಮಾಡಬಹುದು ಎಂದು ನನ್ನ ಪಾತ್ರದ ಮೂಲಕ ತೋರಿಸಿದ್ದಾರೆ ಎಂದು ಹೇಳಿದರು. ನಾಯಕಿ ಐಶ್ವರ್ಯ ಮಾತನಾಡುತ್ತ ಕಾಮಿಡಿ, ಥ್ರಿಲ್ಲರ್ ಎಲ್ಲಾ ಇರುವಂಥ ಎಂಟರ್‌ಟೈನ್‌ಮೆಂಟ್ ಪ್ಯಾಕೇಜ್ ಇದು. ನಾಯಕನನ್ನು ಗೋಳುಹುಯ್ದುಕೊಳ್ಳುವ ಪಾತ್ರ ಎಂದು ತನ್ನ ಪಾತ್ರದ ಬಗ್ಗೆ ಹೇಳಿಕೊಂಡರು.

Tags:

Leave a Reply

Your email address will not be published. Required fields are marked *


CAPTCHA Image
Reload Image