One N Only Exclusive Cine Portal

ಗಟ್ಟಿ ಕತೆಯೊಂದಿಗೆ ಚಮಕ್ ಕೊಡಲಿದ್ದಾರೆ ಸಿಂಪಲ್ ಸುನಿ!

ಸಿಂಪಲ್ ಸುನಿ ನಿರ್ದೇಶನದ ಚಮಕ್ ಚಿತ್ರ ಟೀಸರ್, ಹಾಡು ಸೇರಿದಂತೆ ಈಗಾಗಲೇ ನಾನಾ ರೀತಿಯಲ್ಲಿ ಪ್ರೇಕ್ಷಕರನ್ನು ಸೆಳೆದಿದೆ. ಕನ್ನಡ ಚಿತ್ರರಂಗದಲ್ಲಿ ಭರಪೂರ ಗೆಲುವಿನ ಹಿಸ್ಟರಿಯನ್ನು ಮರುಕಳಿಸುವಂತೆ ಮಾಡುತ್ತದಾ? ಅಂತೊಂದು ಕುತೂಹಲಭರಿತ ನಿರೀಕ್ಷೆ ಹುಟ್ಟು ಹಾಕಿರೋ ಈ ಚಿತ್ರ ಥೇಟರುಗಳಲ್ಲಿ ಕಾಣಿಸಿಕೊಳ್ಳಲು ಇನ್ನೊಂದು ದಿನವಷ್ಟೇ ಬಾಕಿ ಉಳಿದುಕೊಂಡಿದೆ.
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಕಾಂಭಿನೇಷನ್‌ನ ಈ ಚಿತ್ರದಲ್ಲಿ ಸಿಂಪಲ್ ಸುನಿ ನಾನಾ ಹೊಸತನಗಳ ಮೂಲಕ ಪ್ರೇಕ್ಷಕರಿಗೇ ಅಚ್ಚರಿಯ ಚಮಕ್ ಕೊಡಲಿದ್ದಾರೆಂಬುದೂ ಅವರದ್ದೇ ಮಾತುಗಳಲ್ಲಿ ಜಾಹೀರಾಗಿದೆ. ಇದೀಗ ಈ ಚಿತ್ರದ ಬಿಡುಗಡೆಯ ಹೊಸ್ತಿಲಲ್ಲಿಯೂ ಚಿತ್ರತಂಡ ಮಾಧ್ಯಮವನ್ನು ಮುಖಾಮುಖಿಯಾಗಿ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದೆ.
ಸಿಂಪಲ್ಲಾಗೊಂದ್ ಲವ್ ಸ್ಟೋರಿ ಚಿತ್ರದಲ್ಲಿ ಕಚಗುಳಿ ಇಡೋ ಸಂಭಾಷಣೆಯಿಂದಲೇ ಗೆದ್ದಿದ್ದವರು ಸುನಿ. ಆ ಚಿತ್ರದಲ್ಲಿ ಕಥೆಗಿಂತಲೂ ಇಂಥಾ ಸಂಭಾಷಣೆಗೇ ಹೆಚ್ಚು ಒತ್ತು ಕೊಡಲಾಗಿತ್ತು. ಆ ನಂತರದಲ್ಲಿಯೂ ಸುನಿ ಪ್ರಧಾನವಾಗಿ ನೆಚ್ಚಿಕೊಂಡಿದ್ದು ಚುರುಕಿನ ಸಂಭಾಷಣೆಯ ಅಸ್ತ್ರವನ್ನೇ. ಆದರೆ ಚಮಕ್ ಚಿತ್ರವನ್ನು ಒಂದು ಗಟ್ಟಿ ಕಥೆಯೊಂದಿಗೇ ಪ್ರೆಸೆಂಟ್ ಮಾಡಬೇಕೆಂಬ ಆಸೆಯಿಂದ ಕಥೆಗಾಗಿಯೇ ನಾಲಕೈದು ವರ್ಷಗಳಿಂದ ಸುನಿ ಕೆಲಸ ಮಾಡಿದ್ದಾರಂತೆ. ಸಾಮಾನ್ಯವಾಗಿ ಈವರೆಗೂ ತಮ್ಮ ಚಿತ್ರದ ಬಗ್ಗೆ ತಾವೇ ಹೊಗಳಿಕೊಳ್ಳೋ ಟ್ರ್ಯಾಕಿನಿಂದ ಸುನಿ ದೂರ ಇದ್ದವರು. ಆದರೆ ಈ ಚಿತ್ರದ ಬಗ್ಗೆ ಅವರೇ ಒಂದಷ್ಟು ಹೊಗಳಿಕೆಯ, ಆತ್ಮವಿಶ್ವಾಸದ ಮಾತಾಡಿದ್ದಾರೆ.
ಇನ್ನುಳಿದಂತೆ ಇಡೀ ಚಿತ್ರವನ್ನು ಒಂದು ದೃಷ್ಯ ಕಾವ್ಯದಂತೆ ಕಟ್ಟಿಕೊಟ್ಟಿರೋ ಧನ್ಯತಾ ಭಾವವೂ ಸುನಿ ಅವರ ಮಾತುಗಳಲ್ಲಿ ಧ್ವನಿಸುತ್ತಿತ್ತು. ಅಂದಹಾಗೆ ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಹೆರಿಗೆ ತಜ್ಞ ಡಾಕ್ಟರಾಗಿಕಾಣಿಸಿಕೊಂಡಿದ್ದಾರೆ. ಈವರೆಗೂ ಕಾಲೇಜು ಹುಡುಗಿ, ಬಬ್ಲಿ ಕ್ಯಾರೆಕ್ಟರುಗಳಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ಆವರಿಸಿಕೊಂಡಿದ್ದ ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ಪಕ್ಕಾ ಸಂಪ್ರದಾಯಸ್ಥ ಮನೆತನದ ಹುಡುಗಿಯಾಗಿ, ಜವಾಬ್ದಾರಿಯುತ ಹೆಂಡತಿಯಾಗಿ ಕಾಣಿಸಿಕೊಂಡಿದ್ದಾರೆ. ಅದರ ನಡುವೆಯೂ ಹೇಗೆಲ್ಲ ಚಮಕ್ ಕೊಡುತ್ತಾ ಹೋಗುತ್ತಾರೆಂಬುದೇ ಇಡೀ ಚಿತ್ರದ ಕುತೂಹಲಗಳಲ್ಲಿ ಪ್ರಧಾನವಾದುದಂತೆ.
ಇದುವರೆಗಿನ ಪಾತ್ರಗಳು ತನ್ನದೇ ನಿಜ ಜೀವನದ ಪಲ್ಲಟಗಳಿಗೆ ಹತ್ತಿರವಿದ್ದುದರಿಂದ ರಶ್ಮಿಕಾ ಅಷ್ಟಾಗಿ ತಲೆ ಕೆಡಿಸಿಕೊಳ್ಳದೇ ನಟಿಸಿದ್ದರಂತೆ. ಆದರೆ ಚಮಕ್ ಚಿತ್ರದ ಪಾತ್ರಕ್ಕಾಗಿ ಅವರು ವಿಪರೀತ ತಯಾರಿ ಮಾಡಿಕೊಂಡಿದ್ದಾರಂತೆ. ಒಟ್ಟಾರೆಯಾಗಿ ಈ ಚಿತ್ರ ನೋಡಿ ಹೊರ ಬರೋ ಪ್ರತೀ ಪ್ರೇಕ್ಷಕರೂ ಖುಷಿ ಖುಷಿಯಾಗಿ ಎಂಥಾ ಚಮಕ್ ಕೊಟ್ರಿ ಅಂತ ಉದ್ಘಾರವೆತ್ತೋದು ಗ್ಯಾರೆಂಟಿ ಎಂಬುದು ರಶ್ಮಿಕಾರ ಭರವಸೆ!

Leave a Reply

Your email address will not be published. Required fields are marked *


CAPTCHA Image
Reload Image