One N Only Exclusive Cine Portal

ಚಮಕ್ ಚಮತ್ಕಾರ!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಲವ್ವು, ಮದುವೆ, ಬ್ರೇಕಪ್ಪು, ಒದ್ದಾಟ, ಕಡೆಗೆ ಒಂದಾಗೋದು – ಸಿನಿಮಾ ಕಥೆಗಳ ಮಾಮೂಲಿ ಫಾರ್ಮುಲಾ. ಇಂಥಾ ಸೂತ್ರಗಳಾಚೆಗೂ ಸಾಕಷ್ಟು ಸಿನಿಮಾಗಳು ಬಂದಿವೆ. ಅದರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿರೋ ಚಿತ್ರಗಳದ್ದೇ ಮೇಲುಗೈ. ಅದೇ ರೀತಿಯಲ್ಲಿ ಗಣೇಶ್ ಅವರಿಗೆ ಒಪ್ಪುವಂಥ ಕಥಾ ಹಂದರದೊಂದಿಗೆ ತೆರೆ ಕಂಡಿರೋ ಮತ್ತೊಂದು ಸಿನಿಮಾ ಚಮಕ್!
ಗಣೇಶ್ ಇಲ್ಲಿ ಪ್ರಸೂತಿ ತಜ್ಞ. ಡಾಕ್ಟರ್ ಎಂದರೆ ತುಂಬಾ ಗಂಭೀರವಾಗಿರಬೇಕು ಅನ್ನೋ ಸಿದ್ದಾಂತವನ್ನು ಮುರಿಯಲೆಂದೇ ಮಾಮೂಲಿ ಹುಡುಗರಂತೆ ಬದುಕುವ ಹುಡುಗ ಖುಷ್. ಮನೆಮಂದಿ ಸಮೇತ ಹೋಗಿ ಹತ್ತಾರು ಹುಡುಗಿಯರನ್ನು ನೋಡಿ ಕಡೆಗೊಬ್ಬಳೊಂದಿಗೆ ಮದುವೆಯಾಗುತ್ತಾನೆ. ಅಲ್ಲೀತನಕ ಜಾಲಿಯಾಗಿದ್ದ ಹುಡುಗನ ಬಾಳಲ್ಲಿ ಒಂದೊಂದೇ ಚಮಕ್ಕು ಎದುರಾಗುತ್ತಾ ಸಾಗುತ್ತದೆ. `ಇವಳಂದುಕೊಂಡಂತೆ ಅವನಲ್ಲ. ಇವನೆಣಿಸಿದಂತೆ ಅವಳಿಲ್ಲ’ ಅನ್ನೋದು ಪರಸ್ಪರರ ಪಾಲಿಗೆ ಅರಗಿಸಿಕೊಳ್ಳಲಾಗದ ಚಮಕ್!
ಸಿಂಪಲ್ ಸುನಿ ನಿರ್ದೇಶನ ಎಂದಮೇಲೆ ಕಥೆಯಲ್ಲಿ ಸಾಕಷ್ಟು ಟ್ವಿಸ್ಟು, ಯುವಕರ ಅಂತರಾಳಕ್ಕೆ `ಕೈ ಬಿಡುವ’ ಟ್ರಿಕ್ಕಿ ಡೈಲಾಗುಗಳು ಇದ್ದೇ ಇರುತ್ತವೆ ಅನ್ನೋದು ಇಷ್ಟು ದಿನದ ನಂಬಿಕೆ. ಅಂದುಕೊಂಡಂತೇ ಡೈಲಾಗುಗಳು ಮಜಾ ಕೊಡುತ್ತವೆ. `ಹುಟ್ಟಿದ್‌ಮೇಲೆ ಹುಟ್ಟಿಸ್ಲೇಬೇಕು’… `ಫೇಸ್ಬುಕ್ಕಿಗೇ ಹುಟ್ಟದಂಗೆ ಆಡ್ತಾವ್ರೆ’… `ಏನ್ ಕಿತ್ಕೋತಿಯಾ ಕಿತ್ಕೋ ಬಾಟಾ… ಚಪ್ಲಿ’.. ಹೀಗೆ ಹೊಸಾ ಮಾತುಗಳ ಹುಟ್ಟಿಗೆ ಸುನಿ ಕಾರಣರಾಗಿದ್ದಾರೆ. ಆದರೆ ಕಥೆಯಲ್ಲಿ ಮಾತ್ರ ಇನ್ನೊಂಚೂರು ಕಂಟೆಂಟು ಇರಬೇಕಿತ್ತು ಅನಿಸುತ್ತದೆ.
ತೆರೆ ಮೇಲೆ ಗಣೇಶ್ ಮತ್ತು ರಶ್ಮಿಕಾ ಪೈಪೋಟಿ ನೀಡುವಷ್ಟು ಸೊಗಸಾಗಿ ಕಂಡಿದ್ದಾರೆ. ತುಂಬಾ ಮುದ್ದಾದ ಜೋಡಿಯನ್ನು ಸಂತೋಷ್ ರೈ ಪತಾಜೆ ಮತ್ತಷ್ಟು ಮೋಹಕವಾಗಿ ತೋರಿಸಿದ್ದಾರೆ. ಕಿತ್ತು ತಿನ್ನೋದನ್ನೇ ಕಸುಬಾಗಿಸಿಕೊಂಡ ವೈದ್ಯರ ನಡುವೆ ಬಡ ದಂಪತಿಗೆ ಜನಿಸಬೇಕಾದ ಮಗುವಿನ ಬಗ್ಗೆ ಮುತುವರ್ಜಿ ತೋರುವ ಡಾಕ್ಟರಾಗಿ, ಬಿಟ್ಟುಹೋದವಳ ಹೆಜೆಗುರುತು ಮತ್ತೆ ಬಂದು ಎದೆಮೇಲೆ ಮೂಡಲಿ ಅಂತಾ ಹಂಬಲಿಸೋ ಪ್ರೀತಿಯ ಹುಡುಗನಾಗಿ ಗಣೇಶ್ ಇಷ್ಟವಾಗುತ್ತಾರೆ. ಹಾಗೆಯೇ ತುಂಬು ಬಸುರಿ ಹೆಣ್ಣುಮಗಳು ಗಂಡನಿಂದ ದೂರಾದಾಗ ಅನುಭವಿಸಬೇಕಿರುವ ಯಾತನೆಗಳು, ಹೇಗಾದರೂ ಆತ ಎದುರು ಬಂದು ನಿಂತರೆ ಸಾಕು ಅಂತಾ ತವಕಿಸುವ ಹುಡುಗಿಯ ಪಾತ್ರದಲ್ಲಿ ರಶ್ಮಿಕಾ ಕಾಡುತ್ತಾರೆ.
`ಎಲ್ಲರ ವಿಚಾರದಲ್ಲಿ ಕಾಮಿಡಿ ಪೀಸಾಗಿರೋನು ನನ್ನ ಬದುಕಿಗೆ ಮಾತ್ರ ವಿಲನ್ ಆಗಿಬಿಟ್ಯಲ್ಲಾ’ ಅಂಥಾ ಕ್ಲೈಮ್ಯಾಕ್ಸಿನಲ್ಲಿ ಡೈಲಾಗಿದೆ. ಅಂತೆಯೇ ಈ ಸಿನಿಮಾದಲ್ಲಿರುವ ಏಕೈಕ ವಿಲನ್ ಅಂಡ್ ಕಮೆಡಿಯನ್ ಅಂದರೆ ಅದು ಸಾಧು ಕೋಕಿಲಾ!
ಇತ್ತೀಚೆಗೆ ತೆಲುಗಿನಲ್ಲಿ ಬಂದಿದ್ದ ಅರ್ಜುನ್ ರೆಡ್ಡಿಯನ್ನು ನೋಡಿದವರೆಲ್ಲಾ ಕೊಂಡಾಡಿದ್ದರು. ಆ ಚಿತ್ರಕ್ಕೂ `ಚಮಕ್’ಗೂ ಸಾಕಷ್ಟು ಸಾಮ್ಯತೆಗಳಿವೆ. ಆದರೆ ಪೂರ್ತಿ ಬೇರೆಯದ್ದೇ ಕಥೆಯನ್ನು ಹೊಂದಿರುವ ಚಮಕ್ ಚಿತ್ರವನ್ನು ಇನ್ನಷ್ಟು ಗಟ್ಟಿಯಾಗಿ ರೂಪಿಸಬಹುದಿತ್ತು ಅನಿಸಿದರೂ ಮನೆಮಂದಿಯೆಲ್ಲಾ ಕೂತು `ಖುಷ್-ಖುಷಿ’ಯಾಗಿ ಸಿನಿಮಾ ನೋಡಿ ಎಂಜಾಯ್ ಮಾಡಬಹುದು. ಹಾಗಂತ ಇದು ಫ್ಯಾಮಿಲಿ ಆಡಿಯನ್ಸ್‌ಗೆ ಮಾತ್ರ ಸೀಮಿತವಾದ ಸಿನಿಮಾ ಅಂದುಕೊಳ್ಳಬೇಕಿಲ್ಲ. ಇದರ ಒಟ್ಟಾರೆ ಕಥೆಯೇ ಈ ಜನರೇಷನ್ನಿನ ಫೀಲಿಂಗುಗಳು, ಮದುವೆ ಮುಂತಾದವುಗಳ ಸುತ್ತ ಹೆಣಿಯಲ್ಪಟ್ಟಿದೆ. ಕಚಗುಳಿ ಇಡೋ ಡೈಲಾಗುಗಳೂ ಕೂಡಾ ಯುವ ಸಮೂಹವನ್ನು ಮರುಳು ಮಾಡುವಂತಿವೆ. ಒಟ್ಟಾರೆಯಾಗಿ ಎಲ್ಲಾ ವೆರೈಟಿಯ ಪ್ರೇಕ್ಷಕರನ್ನು ಮುದಗೊಳಿಸೋದೇ ಚಮಕ್ ಚಿತ್ರದ ಅಸಲೀ ಚಮತ್ಕಾರ!

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Leave a Reply

Your email address will not be published. Required fields are marked *


CAPTCHA Image
Reload Image