One N Only Exclusive Cine Portal

ಕುಚಿಕ್ಕೂ ಗೆಳೆಯರಿಗೇ ಗುನ್ನಾ ಇಟ್ಟನಾ ಚಂದನ್ ಶೆಟ್ಟಿ?

ಬಿಗ್‌ಬಾಸ್ ಮನೆಯೊಳಗೆ ಸಾದಾ ಸೀದಾ ವ್ಯಕ್ತಿತ್ವದಿಂದಲೇ ಪ್ರೇಕ್ಷಕರ ಮನಗೆದ್ದು ವಿನ್ನರ್ ಆಗಿಯೂ ಹೊರ ಹೊಮ್ಮಿದ್ದವನು ಚಂದನ್ ಶೆಟ್ಟಿ. ಬಿಗ್‌ಬಾಸ್ ಶೋನಲ್ಲಿ ಒಂದೇ ಮರದ ಪೆಟ್ಟಿಗೆಯನ್ನು ಬಡಿಯುತ್ತಲೇ ಕನ್ನಡದ ಟಾಪ್‌ಮೋಸ್ಟ್ ರ್‍ಯಾಪ್ ಸಿಂಗರ್ ಎಂಬಂತೆ ಪೋಸು ಕೊಟ್ಟಿದ್ದೂ ಇದೇ ಚಂದನ್ ಶೆಟ್ಟಿ. ಇದೀಗ ಈ ಮಹಾನ್ ಪ್ರತಿಭೆಗೆ ಸಿಕ್ಕಲ್ಲೆಲ್ಲ ಅವಕಾಶಗಳ ಸುರಿಮಳೆಯಾಗುತ್ತಿದೆ. ಕನ್ನಡಕ್ಕೆ ರ್‍ಯಾಪ್ ಸಾಂಗ್ ಅನ್ನು ಪರಿಚಯ ಮಾಡಿದ ಮೊದಲಿಗನೆಂಬೋ ಕಿರೀಟವನ್ನು ಭಾರ ಅಂದುಕೊಳ್ಳದೆ ಡ್ಯಾನ್ಸ್ ಶೋ ಒಂದರ ತೀರ್ಪುಗಾರನಾಗಿಯೂ ಪವಡಿಸಿರುವ ಚಂದನ್ ಶೆಟ್ಟಿ ಯಾರ್‍ಯಾರದ್ದೋ ಶ್ರಮದ ಕ್ರೆಡಿಟ್ಟನ್ನು ತಾನೇ ಬಸಿದುಕೊಂಡು ಮಿಣ್ಣಗೆ ಮೆರೆಯುತ್ತಿದ್ದಾನಾ? ಆರಂಭಿಕವಾಗಿ ತನ್ನನ್ನು ಪರಿಚಯಿಸಿದ ಒಂದಿಡೀ ತಂಡವನ್ನೇ ಮೂಲೆಗೆ ಗದುಮಿ ಎಲ್ಲಾ ನನ್ನದೇ ಎಂಬಂತೆ ಪೋಸು ಕೊಡುತ್ತಿದ್ದಾನಾ?

ಇಂಥಾದ್ದೊಂದು ಪ್ರಶ್ನೆ ಬಿಗ್‌ಬಾಸ್ ಶೋದಲ್ಲಿ ಮಾತ್ರವೇ ಈತನನ್ನು ನೋಡಿದವರನ್ನು ಕಾಡಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಆತನ ಬಗ್ಗೆ ತುಸು ಹತ್ತಿರದಿಂದ ಬಲ್ಲವರನ್ನೆಲ್ಲ ಇಂಥಾ ಗುಮಾನಿಗಳು ಗಾಢವಾಗಿಯೇ ಕಾಡಿದ್ದವು. ಅದೀಗ ನಿಜವಾಗಿದೆ!

ಚಂದನ್ ಶೆಟ್ಟಿ ಮುಖ್ಯವಾಗಿ ಪ್ರವರ್ಧನಮಾನಕ್ಕೆ ಬಂದಿದ್ದು, ದೊಡ್ಡ ಮಟ್ಟದಲ್ಲಿ ಆತನನ್ನು ಗುರುತಿಸುವಂತೆ ಮಾಡಿದ್ದು ಥ್ರೀ ಪೆಗ್ ರ್‍ಯಾಪ್ ಸಾಂಗ್ ಮೂಲಕ. ಈ ಸಾಮಗನ್ನು ಹಾಡಿ ಕುಣಿದಿದ್ದ ಚಂದನ್ ಅದರ ಮ್ಯೂಸಿಕ್ಕು, ಲಿರಿಕ್ಕು ಸೇರಿದಂತೆ ಎಲ್ಲವೂ ನನ್ನದೇ ಎಂಬಂತೆ ಪೋಸು ಕೊಡುತ್ತಾ ಬಂದಿದ್ದ. ಬಿಗ್‌ಬಾಸ್ ಶೋನಲ್ಲಿ ಕೂಡಾ ಈ ರ್‍ಯಾಪ್ ಸಾಂಗನ್ನೇ ತನ್ನ ಕಿರೀಟವೆಂಬಂತೆ ಧರಿಸಿಕೊಂಡು ಓಡಾಡಿದ್ದ. ಆದರೆ ಆ ಸಾಂಗಿನ ಹಿಂದೆ, ತನ್ನ ಒಂದು ಮಟ್ಟದ ಗೆಲುವಿನ ಹಿಂದೆ ತನಗಿಂತಲೂ ಪ್ರತಿಭಾವಂತರಾದ ಒಂದು ತಂಡವೇ ಇದೆ ಅಂತ ಸುಮ್ಮನೆ ಮಾತಾಡಿದ್ದರೂ ಚಂದನ್ ದೊಡ್ಡವನಾಗುತ್ತಿದ್ದ. ಹಾಗೊಂದು ಮಾತಾಡಿದ್ದರೂ ಇದೀಗ ಇಂಥಾದ್ದೊಂದು ವಿವಾದ ಸೃಷ್ಟಿಯಾಗುತ್ತಲೇ ಇರಲಿಲ್ಲ.

ಅಂದಹಾಗೆ ಥ್ರೀ ಪೆಗ್ ರ್‍ಯಾಪ್ ಸಾಂಗ್‌ಗೆ ಸಂಗೀತ ಸಂಯೋಜನೆ ಮಾಡಿರುವುದು ವಿಜೇತ್ ಎಂಬ ಹುಡುಗ. ಇವರು ಅರ್ಜುನ್ ಸರ್ಜಾ ಅವರ ಸ್ವಂತ ಮಾವನ ಮಗ. ಇದೀಗ ಒಂದಷ್ಟು ಚಿತ್ರಗಳಲ್ಲಿ ಸಂಗೀತ ಸಂಯೋಜಕನಾಗಿ ಸದ್ದು ಮಾಡುತ್ತಿರೋ ವಿಜೇತ್ ಅರ್ಜುನ್ ಜನ್ಯಾ ಗರಡಿಯಲ್ಲಿ ಪಳಗಿರುವ ಪ್ರತಿಭೆ. ಅಷ್ಟಕ್ಕೂ ಈ ಚಂದನ್ ಶೆಟ್ಟಿಯನ್ನು ಮೊದಲು ಈ ರ್‍ಯಾಪ್ ಲೋಕಕ್ಕೆ ಪರಿಚಯ ಮಾಡಿದ್ದೇ ಈ ವಿಜೇತ್  ಕೃಷ್ಣ ಮತ್ತು ಕಿಶೋರ್ ಸರ್ಜಾ ಪುತ್ರ ಸೂರಜ್. ಆದರೆ ಕರ್ನಾಟಕಕ್ಕೇ ರ್‍ಯಾಪ್ ಸಾಂಗ್ ಪರಿಚಯ ಮಾಡಿದ್ದು ನಾನೇ ಎಂಬಂತೆ ಓಡಾಡಿಕೊಂಡಿರೋ ಚಂದನ್‌ಗೆ ಈಗ ಅದೆಲ್ಲ ಮರೆತು ಹೋಗಿರಬಹುದೇನೋ…

ಚಂದನ್ ಶೆಟ್ಟಿ ಮೈಸೂರಿನ ವಿದ್ಯಾವಿಕಾಸ ಕಾಲೇಜಿನಲ್ಲಿ ಬಿಬಿಎಂ ಮಾಡುತ್ತಿದ್ದನಲ್ಲಾ? ಆಗ ಅದೇ ಕಾಲೇಜಿನಲ್ಲಿ ಅರ್ಜುನ್ ಸರ್ಜಾ ಕುಟುಂಬದ ಹುಡುಗರಾದ ವಿಕಾಸ್ ಮತ್ತು ಸೂರಜ್ ಕೂಡಾ ಓದುತ್ತಿದ್ದರು. ಆ ಕಾಲದಲ್ಲಿಯೇ ಸಂಗೀತದ ಹುಚ್ಚು ಹತ್ತಿಸಿಕೊಂಡಿದ್ದ ವಿಜೇತ್ ಮತ್ತು ಸ್ನೇಹಿತರು ಆ ಕಾಲದಲ್ಲಿಯೇ ರ್‍ಯಾಪ್ ಸಾಂಗ್ ಒಂದನ್ನು ಮಾಡಲು ಅಣಿಯಾಗಿದ್ದರು. ಇದೇ ಸಂದರ್ಭದಲ್ಲಿ ಕಾಲೇಜ್ ಸಮಾರಂಭವೊಂದರಲ್ಲಿ ಚಂದನ್ ಶೆಟ್ಟಿ ಅದೇ ಶೈಲಿಯ ಶೋ ಒಂದನ್ನು ಕೊಟ್ಟಿದ್ದ. ಅದನ್ನು ನೋಡಿಗ ವಿಜೇತ್ ಮತ್ತು ಸೂರಜ್ ಚಂದನ್‌ನನ್ನು ಮಾತಾಡಿಸಿ ತಾವು ತಯಾರಿಸುತ್ತಿರೋ ರ್‍ಯಾಪ್ ಆಲ್ಬಂಗೆ ರ್‍ಯಾಪ್ ಸಿಂಗರ್ ಬೇಕಾಗಿದ್ದಾರೆಂಬ ಪ್ರಸ್ತಾಪವಿಟ್ಟೇಟಿಗೆ ಚಂದನ್ ಖುಷಿಯಿಂದಲೇ ಒಪ್ಪಿ ಹಾಡಿದ್ದ. ಅದು ಚಂದನ್ ಶೆಟ್ಟಿಯ ಮೊದಲ ರ್‍ಯಾಪ್ ಸಾಂಗ್!

ಆ ನಂತರ ಚಂದನ್ ತತ್ಸಮ ಅಂತೊಂದು ರ್‍ಯಾಪ್ ಸಾಂಗ್ ಮಾಡಿದ್ದ. ಆ ನಂತರ ಹಾಳಾಗೋದೆ ಎಂಬ ರ್‍ಯಾಪ್ ಸಾಂಗ್ ಮಾಡಿದ್ದಾಗ ಅದಕ್ಕೆ ಪ್ರೋಗ್ರಾಮಿಂಗ್ ಮಾಡಿದ್ದವರು ಇದೇ ವಿಜೇತ್. ಅದು ಸ್ವಲ್ಪ ಸದ್ದು ಮಾಡುತ್ತಲೇ ಥ್ರೀ ಪೆಗ್ ಸಾಂಗ್ ಮಾಡಿದಾಗ ಅದಕ್ಕೆ ವಿಜೇತ್ ಸಂಗೀತ ಸಂಯೋಜನೆ ಮಾಡಿದ್ದರು. ಆದರೆ ಚಂದನ್ ಶೆಟ್ಟಿ ಅಪ್ಪಿತಪ್ಪಿಯೂ ವಿಜೇತ್ ಸೇರಿದಂತೆ ಆ ಸಾಂಗಿನ ಹಿಂದಿದ್ದ ಯಾರನ್ನೂ ನೆನಪಿಸಿಕೊಳ್ಳಲಿಲ್ಲ. ಯೂಟ್ಯೂಬಲ್ಲಿ ಈ ಹಾಡು ಲಕ್ಷ ಲಕ್ಷ ದೋಚಿದರೂ ಚಂದನ್ ಮಾತ್ರ ಅದನ್ನು ಬಾಚಿಕೊಂಡನೇ ಹೊರತು ಬೇರ್‍ಯಾರಿಗೂ ಕೊಟ್ಟಿರಲಿಲ್ಲ. ದುರಂತವೆಂದರೆ ಈ ಸಾಂಗಿಗೆ ಸಂಗೀತ ಸಂಯೋಜನೆ ಮಾಡಿದ್ದಕ್ಕಾಗಿ ವಿಜೇತ್‌ಗೆ ಸಿಕ್ಕಿದ್ದು ಕೇವಲ ಹದಿನೈದು ಸಾವಿರ ರೂಪಾಯಿ. ಮಿಕ್ಕ ಹಣಕ್ಕಾಗಿ ಸುಮ್ಮನೆಂಬತೆ ಫೋನು ಮಾಡಿದರೂ ಚಂದನ್ ಕಡೆಯಿಂದ ನವರಂಗಿ ಆಟಗಳು ಶುರುವಾದ್ದರಿಂದಾಗಿ ವಿಜೇತ್ ತಮ್ಮ ಕನಸುಗಳಲ್ಲಿ ಕಳೆದು ಹೋಗಿದ್ದರು.

ಆದರೆ ಈವತ್ತಿಗೂ ಥ್ರೀ ಪೆಗ್ ಸಾಂಗ್ ಎಂದರೆ ಅದು ತನ್ನೊಬ್ಬನದ್ದೇ ಪ್ರತಿಭೆಯ ಫಲ ಎಂಬಂತೆ ಚಂದನ್ ಓಡಾಡಿಕೊಂಡಿದ್ದಾನೆ. ಎಲ್ಲರೂ ಕನ್ನಡಕ್ಕೆ ರ್‍ಯಾಪ್ ಸಾಂಗ್ ಪರಿಚಯ ಮಾಡಿದ್ದೇ ಚಂದನ್ ಶೆಟ್ಟಿ ಎಂಬಂತೆ ಅಟ್ಟಕ್ಕೇರಿಸಿದ್ದಾರೆ. ಆದರೆ ಈತ ಸಕಲೇಶಪುರದಲ್ಲಿ ಲಗೋರಿ ಆಡುತ್ತಿರುವಾಗಲೇ ರ್‍ಯಾಪ್ ಸಾಂಗ್ ಬಗ್ಗೆ ಕನ್ನಡದಲ್ಲಿ ಒಂದಷ್ಟು ಜನ ಆಲೋಚಿಸಿದ್ದರು.

ಚಂದನ್ ಶೆಟ್ಟಿ ಬಿಗ್‌ಬಾಸ್ ಶೋನಲ್ಲಿ ಥ್ರೀ ಪೆಗ್ ಸೇರಿದಂತೆ ಎಲ್ಲ ವಿಚಾರಗಳನ್ನೂ ತನ್ನೊಬ್ಬನ ಟ್ಯಾಲೆಂಟು ಎಂಬಂತೆ ಬಿಂಬಿಸಿಕೊಂಡ. ತನ್ನ ಗೆಲುವಿನ ಹಿಂದೆ ಸ್ನೇಹಿತರದ್ದೊಂದು ಗುಂಪಿದೆ ಅಂತ ಅಪ್ಪಿ ತಪ್ಪಿಯೂ ಹೇಳಲಿಲ್ಲ. ಅಷ್ಟಕ್ಕೂ ಚಂದನ್ ಶೆಟ್ಟಿ ವಿಜೇತ್ ಅಂಡ್ ಟೀಮ್ ಮೂಲಕವೇ ಧ್ರುವ ಸರ್ಜಾ, ಚಿರಂಜೀವಿ ಸರ್ಜಾಗೆ ಪರಿಚಯವಾಗಿದ್ದ. ಚಿರಂಜೀವಿಯ ಮೂಲಕವೇ ಅರ್ಜುನ್ ಜನ್ಯಾ ಗರಡಿ ಸೇರಿಕೊಂಡಿದ್ದ. ಈ ನಿಟ್ಟಿನಲ್ಲಿ ನೋಡ ಹೋದರೆ ವಿಜೇತ್ ಮತ್ತು ಸ್ನೇಹಿತರು ಆರಂಭ ಕಾಲದಿಂದಲೂ ಚಂದನ್ ಜೊತೆಗಿದ್ದವರು. ಆದರೆ ಸಣ್ಣ ಯಶಸ್ಸಿನ ಅಹಂಮ್ಮಿನಿಂದ ಚಂದನ್ ಮೈ ಮರೆತಂತಿದೆ. ಇದು ಹೀಗೆಯೇ ಮುಂದುವರೆದರೆ ಚಂದನ್ ಶೆಟ್ಟಿ ಬಹು ಬೇಗನೆ ಮರದ ಡಬ್ಬಿಯ ಸಮೇತ ಮೂಲೆ ಸೇರಿದರೂ ಅಚ್ಚರಿಯೇನಿಲ್ಲ!

Leave a Reply

Your email address will not be published. Required fields are marked *


CAPTCHA Image
Reload Image