One N Only Exclusive Cine Portal

ಚಂದನ್ ಶೆಟ್ಟಿಯ ಮನಕಲಕುವ ಫ್ಲ್ಯಾಶ್‌ಬ್ಯಾಕ್!

ಈ ಹಿಂದಿನ ವಿಜೇತರು ಗೆದ್ದ ದುಡ್ಡನ್ನು ಏನು ಮಾಡೋದು ಅನ್ನೋ ಲೆಕ್ಕಾಚಾರದಲ್ಲಿ ಇದ್ದರು. ಆದರೆ ಚಂದನ್ ಶೆಟ್ಟಿ “ಕನ್ನಡ ಹಡುಗಳನ್ನು ಇಂಗ್ಲಿಷ್ ಜಾಗದಲ್ಲಿ ಕೂರಿಸಬೇಕು” ಅಂದನಲ್ಲಾ? ಅದು ನಿಜವಾದ ಮತ್ತು ಆತನ ಹೃದಯದಲ್ಲಿ ಜೀವ ಪಡೆದಿರುವ ಕನ್ನಡ ಪ್ರೀತಿ…

ಬಿಗ್‌ಬಾಸ್ ಸೀಜನ್ ಐದರ ಅಂತಿಮ ಫಲಿತಾಂಶ ಮೊಟ್ಟಮೊದಲ ಸಲ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಬೇರೆ ಸ್ಪರ್ಧಿಗಳತ್ತ ಒಲವಿದ್ದ ಪ್ರೇಕ್ಷಕರೂ ಕೂಡಾ ಚಂದನ್‌ಶೆಟ್ಟಿ ಗೆದ್ದಿರೋದರ ಬಗ್ಗೆ ಖುಷಿ ಹೊಂದಿದ್ದಾರೆ. ಈ ಮೂಲಕ ಏನಾದರೂ ಸಾಧಿಸಬೇಕೆಂಬ ಕನಸು ಹೊತ್ತ ಹುಡುಗನೊಬ್ಬ ವಿಜಯಿಯಾದದ್ದು ಬಿಗ್‌ಬಾಸ್ ಶೋಧ ಏಕೈಕ ಸಾರ್ಥಕತೆಯಾಗಿಯೂ ಪ್ರೇಕ್ಷಕರನ್ನು ತೃಪ್ತವಾಗಿಟ್ಟಿದೆ. ಈ ರಿಯಾಲಿಟಿ ಶೋದ ಬಗೆಗಿನ ಅಷ್ಟೂ ತಕರಾರುಗಳನ್ನು ಬದಿಗಿಟ್ಟು ಚಂದನ್ ಎಂಬ ಹುಡುಗನ ಗೆಲುವನ್ನಷ್ಟೇ ದೃಷ್ಟಿಯಲ್ಲಿಟ್ಟುಕೊಂಡು ನೋಡಿದರೆ ಈ ಬಾರಿಯ ಬಿಗ್‌ಬಾಸ್ ಸೀಜನ್ ನಿಜಕ್ಕೂ ಸಾರ್ಥಕವಾಗಿದೆ ಅಂತ ಯಾರಿಗಾದರೂ ಅನ್ನಿಸದಿರೋದಿಲ್ಲ. ಯಾಕೆಂದರೆ, ಚಂದನ್ ಶೆಟ್ಟಿಯ ಹಿನ್ನೆಲೆಯೇ ಅಂಥಾದ್ದಿದೆ!

ಬಿಗ್‌ಬಾಸ್ ಶೋಗೆ ಚಂದನ್ ಶೆಟ್ಟಿ ಸ್ಪರ್ಧಿಯಾಗಿ ಬಂದಾಗ ತಮ್ಮ ನೆಚ್ಚಿನ ಸಿಂಗರ್ ಬಂದ ಅಂತ ಹರ್ಷಗೊಂಡವರ ಸಂಖ್ಯೆಗಿಂತಲೂ ಈ ಹುಡುಗ ಯಾರೆಂಬ ಪ್ರಶ್ನೆ ಹೊತ್ತವರ ಸಂಖ್ಯೆಯೇ ದೊಡ್ಡ ಮಟ್ಟದಲ್ಲಿತ್ತು. ಹಾಗಂತ ಚಂದನ್ ಶೆಟ್ಟಿ ತನ್ನೂರಿನಿಂದ ಬಸ್ಸು ಹತ್ತಿ ಬಿಡದಿಯಲ್ಲಿಳಿದು ಸೀದಾ ಬಿಗ್‌ಬಾಸ್ ಮನೆ ಸೇರಿಕೊಂಡವನಲ್ಲ. ಕನಸು ಕಟ್ಟಿಕೊಂಡು ಬೆಂಗಳೂರಿಗೆ ಬಂದಿಳಿಯೋ ಎಲ್ಲ ಜೀವಗಳನ್ನು ಈ ಬೆಂಗಳೂರು ಎಂತೆಂಥಾ ಅಗ್ನಿಪರೀಕ್ಷೆಗೀಡುಮಾಡುತ್ತದೋ ಅಂಥವನ್ನೆಲ್ಲ ಎದುರುಗೊಂಡೇ ಬಿಗ್‌ಬಾಸ್ ಮನೆ ಸೇರಿಕೊಂಡಿದ್ದವನು ಚಂದನ್ ಶೆಟ್ಟಿ.

ಹಾಸನದ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಹುಟ್ಟಿದ ಚಂದನ್ ಆರಂಭಿಕವಾಗಿ ಓದಿದ್ದು ಸಕಲೇಶಪುರದಲ್ಲಿ. ನಂತರ ದಕ್ಷಿಣಕನ್ನಡದ ಪುತ್ತೂರಿನಲ್ಲಿ ಪಿಯುಸಿ ವ್ಯಾಸಂಗ ಮುಗಿಸಿಕೊಂಡಿದ್ದ ಚಂದನ್‌ಗೆ ಸಣ್ಣ ವಯಸ್ಸಿನಿಂದಲೂ ಸಂಗೀತದ ಬಗ್ಗೆ ವಿಪರೀತ ಆಸಕ್ತಿ ಇತ್ತು. ಆದರೆ ಬೆನ್ನುಹತ್ತಿದ ಸಂಕಷ್ಟ, ಜವಾಬ್ದಾರಿಗಳು ಬಿಡಬೇಕಲ್ಲಾ? ಒಂದು ಹಂತದಲ್ಲಿ ತನ್ನ ಕನಸಿಗಿಂತಲೂ ಮನೆ ಮಂದಿಯನ್ನು ಚೆಂದಗೆ ನೋಡಿಕೊಳ್ಳೋದೇ ಮೊದಲು ತಾನು ಮಾಡಬೇಕಾದ ಕೆಲಸ ಅಂದುಕೊಂಡ ಚಂದನ್ ಮೈಸೂರಿನಲ್ಲಿ ಎಂಬಿಎ ಮುಗಿಸಿಕೊಂಡ. ಬೆಂಗಳೂರಿಗೆ ಹೋದರೆ ಒಂದು ಕೆಲಸವನ್ನೂ ಹುಡುಕಿಕೊಂಡು ಅದರ ಮಧ್ಯೆಯೇ ತನ್ನ ಕನಸನ್ನೂ ಈಡೇರಿಸಿಕೊಳ್ಳಬಹುದು ಎಂಬ ಆಸೆಯಿಂದ ಬೆಂಗಳೂರಿನ ಬಸ್ಸು ಹತ್ತಿದ್ದ.

 

ಹಾಗೆ ಬೆಂಗಳೂರಿಗೆ ಬಂದಿಳಿದ ಚಂದನ್ ಹಳ್ಳಿ ಕಡೆಯಿಂದ ಈ ಮಹಾನಗರಿಗೆ ಬರುವ ಬಹುತೇಕರು ಅನುಭವಿಸೋ ಎಲ್ಲ ಕಷ್ಟಗಳನ್ನೂ ಅನುಭವಿಸಿದ್ದ,. ಕಡೆಗೂ ಒಂದು ಕಾಲ್‌ಸೆಂಟರ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡರೂ ಕಟ್ಟಿಕೊಂಡಿದ್ದ ಕನಸುಗಳು ಕೈ ಬಿಟ್ಟಿರಲಿಲ್ಲ, ಬದುಕು ಬದಲಾಗಲೂ ಇಲ್ಲ. ಆ ಕಾಲಕ್ಕೆ ಕಿಷ್ಕಿಂಧೆಯಂಥಾದ್ದೊಂದು ಕೋಣೆಯಲ್ಲಿ ವಾಸವಿದ್ದ ಚಂದನ್ ಅದೊಂದು ದಿನ ಕಾಲ್ ಸೆಂಟರ್ ಕೆಲಸವನ್ನೂ ಬಿಟ್ಟು ತನ್ನಿಷ್ಟದ ಸಂಗೀತ ಕ್ಷೇತ್ರದಲ್ಲಿಯೇ ಮುಂದುವರೆಯಬೇಕೆಂಬ ಹಂಬಲದಿಂದ ಮುಂದುವರೆದಾಗಲೂ ಮೊದಲಿಗೆ ಸಿಕ್ಕಿದ್ದು ಅವಮಾನ ಮಾತ್ರ!

ಅಲ್ಲಿಲ್ಲಿ ಅಲೆದು ಕಡೆಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಗರಡಿ ಸೇರಿಕೊಂಡ ಚಂದನ್ ಅಲ್ಲಿಯೇ ನೆಲೆ ನಿಂತಿದ್ದ. ಜನ್ಯಾ ಸುದೀಪ್ ಅಭಿನಯದ ವರದ ನಾಯಕ ಚಿತ್ರದಲ್ಲಿ ಒಂದು ಹಾಡು ಹಾಡೋ ಅವಕಾಶವನ್ನೂ ಕೊಟ್ಟಿದ್ದರು. ಇದಾದ ನಂತರ ಈತ ಅದೆಷ್ಟೋ ಚಿತ್ರಗಳಿಗೆ ಹಾಡು ಬರೆದಿದ್ದ. ಎಷ್ಟೋ ಹಾಡುಗಳನ್ನು ಹಾಡಿದ್ದ. ಆದರೆ ಒಂದೇ ಒಂದು ವೇದಿಕೆಯಲ್ಲಿಯೂ ಈ ಹುಡುಗನನ್ನು ಗುರುತಿಸುವ ಕೆಲಸ ಆಗಲೇ ಇಲ್ಲ. ತಾನು ಪ್ರಸಿದ್ಧ ಗಾಯಕನಾಗಬೇಕೆಂಬ ಹಂಬಲದಿಂದಿದ್ದ ಚಂದನ್ ಇದರಿಂದ ಪ್ರತೀ ಕ್ಷಣವೂ ಘಾಸಿಗೊಳ್ಳುತ್ತಿದ್ದ. ತಾನು ಹಾಡು ಬರೆದ, ಹಾಡಿದ ಚಿತ್ರಗಳ ಕಾರ್ಯಕ್ರಮಗಳಾದಾಗ ತನ್ನನ್ನು ಗುರುತಿಸುತ್ತಾರೆಂಬ ಆಸೆಗಣ್ಣಿನಿಂದ ಕಾಯುತ್ತಿದ್ದ ಚಂದನ್‌ಗೆ ನಿರಾಸೆಯೊಂದೇ ಗಟ್ಟಿಯಾಗುತ್ತಿತ್ತು.

ಏನಾದರೋಂದು ಮಾಡದೇ ಹೋದರೆ ಯಾರ್‍ಯಾರದ್ದೋ ನೆರಳ ನಡುವೆ ಕಳೆದು ಹೋಗೋದು ಗ್ಯಾರೆಂಟಿ ಎಂಬ ಸತ್ಯ ಗೊತ್ತಾಗಿ ಹೋಗಿತ್ತು. ೨೦೧೬ರಲ್ಲಿ ಇಂಥಾದ್ದೇ ಒಂದು ನಿರಾಸೆಯಾದಾಗ ಚಂದನ್ ಆ ಹತಾಶೆಯನ್ನು ಎದೆಯಲ್ಲಿಟ್ಟುಕೊಂಡೇ ಹಾಳಾಗೋದೆ ಎಂಬ ರ್‍ಯಾಪ್ ಶೈಲಿಯ ಹಾಡೊಂದನ್ನು ಬರೆದ. ನಂತರ ಅದನ್ನು ತಾನೇ ಹಾಡಿ ವೀಡಿಯೋ ಮಾಡಿ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿದ್ದ. ಅದಕ್ಕೆ ಸಿಕ್ಕ ಅಗಾಧವಾದ ಪ್ರತಿಕ್ರಿಯೆ, ಮೆಚ್ಚುಗೆಗಳನ್ನು ಕಂಡು ಖುದ್ದು ಚಂದನ್ ಶೆಟ್ಟಿಯೇ ಥ್ರಿಲ್ ಆಗಿದ್ದ. ಆ ನಂತರ ಅನಾಮಿಕನಾಗಿದ್ದ ಈತ ಹಂತ ಹಂತವಾಗಿ ಲೈಮ್‌ಲೈಟ್‌ಗೆ ಬರಲಾರಂಭಿಸಿದ್ದ. ಪವರ್ ಚಿತ್ರದಲ್ಲಿ ಈತನೇ ಬರೆದಿದ್ದ ಧಮ್ ಪವರೇ ಎಂಬ ಹಾಡಂತೂ ಚಂದನ್‌ಗೆ ಅಪಾರ ಖ್ಯಾತಿ ತಂದು ಕೊಟ್ಟಿತ್ತು. ೩ ಪೆಗ್ ಮತ್ತು ಪಕ್ಕಾ ಚಾಕ್ಲೇಟ್ ಗರ್ಲ್ ಹಾಡುಗಳೂ ಚಂದನ್ ಜನಪ್ರಿಯತೆಯನ್ನು ಹೆಚ್ಚಿಸಿದವು.

ಹೀಗೆ ಹಂತ ಹಂತವಾಗಿ ಬೆಳೆದು ಬಂದಿದ್ದ ಚಂದನ್ ಬಿಗ್‌ಬಾಸ್ ಮನೆ ಸೇರುವ ಹೊತ್ತಿಗೆಲ್ಲಾ ಮುಖ್ಯ ಗಾಯಕನಾಗಿ, ಸಂಗೀತ ನಿರ್ದೇಶಕನಾಗಿ ಅವಕಾಶ ಗಿಟ್ಟಿಸಿಕೊಂಡಿದ್ದ. ಈಗಂತೂ ಅವಕಾಶಗಳು ಚಂದನ್ ಶೆಟ್ಟಿಯನ್ನೇ ಅರಸಿ ನಿಂತಿವೆ. ಒಟ್ಟಾರೆಯಾಗಿ ಓರ್ವ ಸಾಮಾನ್ಯ ಹುಡುಗನಾಗಿ ಬೆಳೆದು ಬಂದ ಚಂದನ್ ಶೆಟ್ಟಿಯ ಬಿಗ್‌ಬಾಸ್ ಗೆಲುವನ್ನು ಆತ ನಡೆದು ಬಂದ ಕಷ್ಟದ ಹಾದಿಗಳೇ ಎಲ್ಲರೂ ಸಂಭ್ರಮಿಸುವಂತೆ ಮಾಡಿವೆ!

 

Leave a Reply

Your email address will not be published. Required fields are marked *


CAPTCHA Image
Reload Image