One N Only Exclusive Cine Portal

ಜನ ಬಂದಿದ್ದು ದರ್ಶನ್‌ಗಾಗಿ.. ಚಂದನ್‌ನನ್ನು ನೋಡಲು ಅಲ್ಲ!

ಚಂದನ್ ಎನ್ನುವ ಹೀರೋ ಹೆಸರು ಕೇಳಿದ್ದೀರಾ? ಅದೇ ಧಾರಾವಾಹಿಗಳಲ್ಲಿ ನಟಿಸಿತ್ತಾ, ಅದಕ್ಕೆ ಅರ್ಧದಲ್ಲೇ ಕೈ ಕೊಟ್ಟು ಸಿನಿಮಾಗೆ ಬಂದಿದ್ದರಲ್ಲಾ? ಅವರು.

ಲವ್ ಯೂ ಆಲಿಯಾ ಸಿನಿಮಾದಲ್ಲಿ ಹೀರೋ ಮತ್ತು ಹೀರೋಯಿನ್ ಎರಡೂ ಪಾರ್ಟುಗಳಲ್ಲಿ ಕಾಣಿಸಿಕೊಂಡಿದ್ದವರು ಚಂದನ್. ನಂತರ ಪ್ರೇಮಬರಹದಲ್ಲಿ ಕೂಡಾ ಹೀರೋಯಿನ್‌ಗೆ ಹೆಚ್ಚು ಪ್ರಾಧಾನ್ಯತೆಯಿರುವ ಸಿನಿಮಾದಲ್ಲಿ ನಟಿಸಿದ್ದಾರೆ. ಅರ್ಜುನ್ ಸರ್ಜಾ ನಿರ್ದೇಶನದ ಈ ಚಿತ್ರ  ವಾರಕ್ಕೆ ಮುಂಚೆ ರಿಲೀಸಾಗಿತ್ತು. ಬಿಡುಗಡೆಗೂ ಮುನ್ನ ಚಿತ್ರತಂಡ ಸಿನಿಮಾದ ಬಗ್ಗೆ ಭಯಂಕರ ಬಿಲ್ಡಪ್ ನೀಡಿತ್ತು. ಆದರೂ ಜನ ಅದರ ಬಗ್ಗೆ ಕುತೂಹಲ ತೋರದಿದ್ದಾಗ ನಿರ್ದೇಶಕ ಅರ್ಜುನ್ ಸರ್ಜಾ ಹಾಡೊಂದನ್ನು ಸೃಷ್ಟಿಸಿ ದರ್ಶನ್ ಅವರನ್ನು ಆ ಹಾಡಿನಲ್ಲಿ ನಟಿಸುವಂತೆ ವಿನಂತಿಸಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮೊದಲೇ ಉದಾರ ಮನಸ್ಸಿನ ವ್ಯಕ್ತಿ. ಯಾರಾದರೂ ಸಹಾಯ ಅಂತಾ ಕೇಳಿದರೆ `ಇಲ್ಲ’ ಎನ್ನುವ ಅಭ್ಯಾಸವೇ ಅವರಿಗಿಲ್ಲ. ಹೀಗಾಗಿ ಅರ್ಜುನ್ ಸರ್ಜಾಗೆ ಕಾಲ್ ಶೀಟ್ ಕೊಟ್ಟು ಕೈಹಿಡಿದಿದ್ದರು.

ಬಹುಶಃ ಬಾಕ್ಸಾಫೀಸ್ ಸುಲ್ತಾನ್ ದರ್ಶನ್ ಅವರು ಆ ಹಾಡಿನಲ್ಲಿ ಕಾಣಿಸಿಕೊಳ್ಳದಿದ್ದರೆ ಪ್ರೇಮಬರಹ ಎನ್ನುವ ಸಿನಿಮಾ ತೀಯೇಟರಿಗೆ ಬಂದಿದೆ ಎನ್ನುವ ಸುದ್ದಿ ಕೂಡಾ ಜನರಿಗೆ ತಲುಪುತ್ತಿರಲಿಲ್ಲ. ದರ್ಶನ್ ಇದ್ದಾರೆ ಎನ್ನುವ ಕಾರಣಕ್ಕೆ ಮೊದಲ ದಿನದ ಮೊದಲ ಶೋಗೆ ಜನ ನುಗ್ಗಿದ್ದರು. ಚಂದನ್ ನಟಿಸಿದ್ದಾನೆ ಅನ್ನೋ ಕಾರಣಕ್ಕಾಗಲಿ, ಅರ್ಜುನ್ ಸರ್ಜಾ ಮಗಳು ಹೀರೋಯಿನ್ನು, ಸರ್ಜಾ ಡೈರೆಕ್ಟರ್ರು ಅನ್ನೋದಕ್ಕಾಗಲಿ ಜನ ಥಿಯೇಟರಿಗೆ ಬಂದಿರಲಿಲ್ಲ. ಇನ್ನು ಸಿನಿಮಾ ವಿಮರ್ಶಕರೆಲ್ಲಾ ತಮಗನಿಸಿದ್ದನ್ನು ಬರೆದಿದ್ದರು.

ಕನ್ನಡದ ಘಟಾನುಘಟಿ ನಟರು ಕೂಡಾ ಸಿನಿಮಾ ವಿಮರ್ಶಕರ ಬಗ್ಗೆ ಕೆಟ್ಟದಾಗಿ ಮಾತಾಡಿಲ್ಲ. ಶಿವರಾಜ್ ಕುಮಾರ್, ದರ್ಶನ್, ಪುನೀತ್ ಸೇರಿದಂತೆ ಎಲ್ಲ ನಟರೂ `ನಿಮಗನ್ನಿಸಿದ್ದನ್ನು ಬರೆಯಿರಿ. ನಿಮ್ಮ ವಿಮರ್ಶೆಗೆ ನಾವು ತಲೆ ಬಾಗುತ್ತೇವೆ’ ಎಂದಿದ್ದಿದೆ.

ಆದರೆ ಸಿಕ್ಕಾಪಟ್ಟೆ ತಲೆಭಾರದ ಹುಡುಗ ಚಂದನ್ ಏನನ್ನಬೇಕು?

`ಕಾಸು ಕೊಟ್ಟು ಸಿನಿಮಾ ನೋಡೋ ಜನರ ವಿಮರ್ಶೆ ಕೇಳಿ. ಕಾಸು ಕೇಳಿ ವಿಮರ್ಶೆ ಬರೆಯುವವರ ಮಾತು ಕೇಳಬೇಡಿ. ಅವರು ನನ್ನ ಕೂದಲಿಗೆ ಸಮ’ ಎನ್ನುವಂತೆ ಫೇಸ್ ಬುಕ್ ಲೈವ್ ಒಂದರಲ್ಲಿ ಮಾತಾಡಿಬಿಟ್ಟಿದ್ದಾನೆ.

ಮೀಡಿಯಾಗಳಲ್ಲಿ ಜಾಹೀರಾತು ವಿಭಾಗಗಳಿರುತ್ತವೆ. ಅದರ ಮುಖ್ಯಸ್ಥರು ಮತ್ತು ಸಿನಿಮಾ ತಂಡಗಳ ನಡುವೆ ಪ್ರಚಾರ, ಜಾಹೀರಾತಿಗೆ ಸಂಬಂಧಪಟ್ಟ ವ್ಯವಹಾರಗಳಿರುತ್ತವೆ. ಆದರೆ ಸಿನಿಮಾ ವಿಮರ್ಶಕರು, ವರದಿಗಾರರು ಕಾಸು ಪಡೆಯುತ್ತಾರೆ ಅಂತಾ ಚಂದನ್ ಗೆ ಯಾರು ಹೇಳಿದರು? ಅಥವಾ ಚಂದನ್ ನನ್ನು ಯಾರಾದರೂ ವಿಮರ್ಶಕರು ಹೋಗಿ `ನೀನು ಕಾಸು ಕೊಡದಿದ್ರೆ ನಾವು ಕೆಟ್ಟ ವಿಮರ್ಶೆ ಬರೀತೀವಿ’ ಅಂತಾ ಹೆದರಿಸಿದ್ದರಾ? ಅದ್ಯಾವುದನ್ನೂ ಹೇಳದೆ ಚಂದನ್  ಹಗುರವಾಗಿ ಮಾತಾಡಿದ್ದಾನೆ.

`ಯಾರು ಏನೇ ಬರೀಲಿ ಜನ ಬರುತ್ತಾ ಇದಾರೆ’ ಎಂದೆಲ್ಲಾ ಭಳಾಂಗು ಬಿಡುತ್ತಿದ್ದಾನಲ್ಲ? ಜನ ಬಂದಿದ್ದು ದರ್ಶನ್ ಇದ್ದಾರೆ ಅನ್ನೋ ಕಾರಣಕ್ಕೆ. ಅದರ ಬಗ್ಗೆ ಮಾತೇ ಎತ್ತದ ಚಂದನ್ ತನ್ನ ಸಿನಿಮಾ ನೋಡಲು ಜನ ನೂಕು ನುಗ್ಗಲಿನಲ್ಲಿ ಬಂದರು ಅನ್ನೋ ರೀತಿ ಬಿಲ್ಡಪ್ಪು ಕೊಡೋದು ಸರೀನಾ?

ಇನ್ನೊಂದು ಗಮನಿಸಬೇಕಾದ ಅಂಶವೆಂದರೆ, ಇಲ್ಲಿ ಚಿತ್ರರಂಗದ ಮಂದಿ ಮತ್ತು ಕನ್ನಡ ಪರ ಹೋರಾಟಗಾರರು ಡಬ್ಬಿಂಗ್ ವಿರುದ್ಧ ಸಮರ ಸಾರಿ ಕೂತಿದ್ದಾರೆ. ಪ್ರೇಮಬರಹ ಚಿತ್ರದಲ್ಲಿ ತಮಿಳಿನಲ್ಲಿ ಚಿತ್ರೀಕರಿಸಿರುವ ಸಾಕಷ್ಟು ದೃಶ್ಯಗಳನ್ನು ಕನ್ನಡದಲ್ಲಿ ಡಬ್ಬಿಂಗ್ ಮಾಡಿ ತೂರಿಸಿದ್ದಾರೆ. ಅದನ್ನೆಲ್ಲಾ ಮರೆಮಾಚಿ ವಿಮರ್ಶಕರ ಮೇಲೆ ಗೂಬೆ ಕೂರಿಸುವ ಚಂದನ್ ಮಾತುಗಳು ನಿಜಕ್ಕೂ ಖಂಡನಾರ್ಹ.

Leave a Reply

Your email address will not be published. Required fields are marked *


CAPTCHA Image
Reload Image