One N Only Exclusive Cine Portal

ನಿರ್ದೇಶಕನಾಗಿ ಮರಳಲಿದ್ದಾರೆ ನಟ ಚರಣ್‌ರಾಜ್!

ಕನ್ನಡದ ಪ್ರೇಕ್ಷಕರಿಗೆಲ್ಲ ನಟನಾಗಿ ಚಿರಪರಿಚಿತರಾಗಿರುವವರು ಚರಣ್‌ರಾಜ್. ಯಾವ ಭಾಷೆಯಲ್ಲೇ ಬ್ಯುಸಿಯಾಗಿದ್ದರೂ ಆಗಾಗ ಕನ್ನಡ ಚಿತ್ರಗಳಲ್ಲಿ ನಟಿಸುತ್ತಾ ಬಂದಿರೋ ಅವರೀಗ ಕನ್ನಡ ಚಿತ್ರವೊಂದನ್ನು ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರ ಏಪ್ರಿಲ್ 27ರಂದು ಚಿತ್ರೀಕರಣ ಪ್ರಾಂಭಿಸಲಿದೆ!

ಚರಣ್ ರಾಜ್ ಅವರನ್ನು ಕನ್ನಡದ ಪ್ರೇಕ್ಷಕರು ಓರ್ವ ಪ್ರತಿಭಾವಂತ ನಟನಾಗಿ ಸದಾ ನೆನಪಲ್ಲಿಟ್ಟುಕೊಳ್ಳುತ್ತಾರೆ. ಬೆಳಗಾವಿ ಮೂಲದ ಚರಣ್ ರಾಜ್ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟ. ಇಲ್ಲಿ ಬಹು ಬೇಡಿಕೆಯಲ್ಲಿರುವಾಗಲೇ ತಮಿಳಿನಲ್ಲಿ ಹೀರೋ ಆಗಿಯೂ ಪ್ರಸಿದ್ಧಿ ಪಡೆದಿದ್ದ ಅವರೀಗ ಈ ಕ್ಷಣಕ್ಕೂ ಬ್ಯುಸಿಯೆಸ್ಟ್ ನಟ.

ಆದರೆ ಚರಣ್ ರಾಜ್ ಅವರಿಗೆ ನಿರ್ದೇಶನ ಎಂಬುದು ಬಹು ಕಾಲದ ಕನಸಂತೆ. ಅದು ತನ್ನ ತಾಯಿಭಾಷೆಯಾದ ಕನ್ನಡದಿಂದಲೇ ಕೈಗೂಡಬೇಕೆಂದು ಕಾಯುತ್ತಿದ್ದ ಅವರೀಗ ಅದನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಈ ಚಿತ್ರ ಚರಣ್ ರಾಜ್ ಅವರ ಹುಟ್ಟಿದ ದಿನವಾದ ಏಪ್ರಿಲ್ ೨೭ರಂದು ಚಿತ್ರೀಕರಣ ಶುರು ಮಾಡಲಿದೆ. ಇದೊಂದು ಪಕ್ಕಾ ಕಾಮಿಡಿ ಟ್ರ್ಯಾಕಿನ ಮರ್ಡರ್ ಮಿಸ್ಟರಿ ಎಂಬ ಸುಳಿವಿನ ಹೊರತಾಗಿ ಮಿಕ್ಕ ಬಹುತೇಕ ವಿವರಗಳು ಚರಣ್ ರಾಜ್ ಹುಟ್ಟುಹಬ್ಬದ ಸಂದರ್ಭದಲ್ಲಿಯೇ ಜಾಹೀರಾಗಲಿವೆ.

ಇನ್ನುಳಿದಂತೆ ಈ ಚಿತ್ರವನ್ನು ಮಂಜುನಾಥ್ ಎಂಆರ್‌ಎಲ್, ಎನ್ ರವಿ ಕುಮಾರ್, ಎಸ್‌ವಿಕೆ ಬ್ರದರ್ಸ್, ಸಿ ದೇವೇಂದ್ರ ರಾಜ್ ಸೇರಿದಂತೆ ಹೊಸೂರು ಸ್ನೇಹಿತರೇ ಸೇರಿಕೊಂಡು ನಿರ್ಮಾಣ ಮಾಡಲಿದ್ದಾರೆ. ಚಿತ್ರಕ್ಕೆ ಕಥೆ ಚಿತ್ರಕಥೆ ಮತ್ತು ನಿರ್ದೇಶನವನ್ನು ಚರಣ್ ರಾಜ್ ಅವರೇ ಮಾಡಲಿದ್ದಾರೆ. ಸಾಯಿಕೃಷ್ಣ ಸಂಭಾಷಣೆ ಬರೆಯಲಿದ್ದಾರೆ. ಈ ಚಿತ್ರದ ನಾಯಕ ಮತ್ತು ನಾಯಕಿಗಾಗಿ ಹುಡುಕಾಟ ಚಾಲ್ತಿಯಲ್ಲಿದೆ. ಕನ್ನಡದ ಖ್ಯಾತ ಕಾಮಿಡಿ ನಟರೋರ್ವರು ಮುಖ್ಯಪಾತ್ರವೊಂದನ್ನು ಮಾಡಲಿದ್ದಾರಂತೆ.

ಚರಣ್ ರಾಜ್ ಅವರ ಪುತ್ರ ತೇಜ್ ಕೂಡಾ ಈ ಚಿತ್ರದ ಭಾಗವಾಗಲಿದ್ದಾರೆಂಬುದು ಅಸಲೀ ವಿಶೇಷ. ತೇಜ್ ಈ ಚಿತ್ರದಲ್ಲಿ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಆ ಹಾಡೂ ಕೂಡಾ ಒಟ್ಟಾರೆ ಕಥೆಯಲ್ಲಿ ಪ್ರಧಾನ ಪಾತ್ರ ಹೊಂದಿರಲಿದೆ. ಅಂದಹಾಗೆ ಚರಣ್ ರಾಜ್ ಪುತ್ರ ತೇಜ್ ಈಗ ತಮಿಳಿನಲ್ಲಿ ಬಹು ಬೇಡಿಕೆಯ ನಾಯಕ ನಟ. ತೇಜ್ ಅಭಿನಯದ ಲಾಲಿ ಎಂಬ ಚಿತ್ರ ಈಗಾಗಲೇ ಬಿಡುಗಡೆಯಾಗಿದೆ. ಇನ್ನೊಂದು ಚಿತ್ರ ತೆರೆಕಾಣುವ ಸನ್ನಾಹದಲ್ಲಿದೆ.
ಒಟ್ಟಾರೆಯಾಗಿ ಚರಣ್ ರಾಜ್ ಇನ್ನೂ ಹೆಸರಿಡದ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಹೊರ ಹೊಮ್ಮುತ್ತಿದ್ದಾರೆ. ಅವರಿಗೆ ಕನ್ನಡ ಪ್ರೇಕ್ಷಕರ ಅಭಿರುಚಿ ಗೊತ್ತಿರೋದರಿಂದ ಅದಕ್ಕೆ ತಕ್ಕುದಾದ ವಿಶೇಷವಾದೊಂದು ಕಥೆಯನ್ನು ರೆಡಿ ಮಾಡಿಕೊಂಡಿದ್ದಾರಂತೆ. ಬಹುಶಃ ಇಷ್ಟರಲ್ಲೇ ಈ ಚಿತ್ರದ ಹೆಸರು ಮತ್ತು ತಾರಾಗಣದ ನಿಖರ ವಿವರವನ್ನು ಚರಣ್ ರಾಜ್ ಜಾಹೀರು ಮಾಡಲಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image