ಆಡಬಾರದ ಆಟವಾಡಿ ಕಡೆಗೆ ಎಲ್ಲ ಕುತ್ತಿಗೆಗೆ ಬಂದಾಕ್ಷಣ ದೂರು ಕೊಡೋ ಕಾಯಿಲೆ ಒಂದಷ್ಟು ನಟಿಯರಿಗೆ ಅಂಟಿಕೊಂಡಿದೆ. ಇದೀಗ ಮಂಜಿನಹನಿ ಚಿತ್ರದಲ್ಲಿ ನಟಿಸಿದ್ದ ಚೇತನಾ ಎಂಬಾಕೆ ಕೊಟ್ಟಿರೋ ದೂರಿನಲ್ಲಿಯೂ ಅಂಥಾದ್ದೇ ಖಾಯಿಲೆ ಇದೆಯಾ? ಎಂಬ ಗುಮಾನಿ ಬಹುತೇಕರನ್ನು ಕಾಡುತ್ತಿದೆ. ತಾನೇ ಅದ್ಯಾರೋ ಸಹ ನಿರ್ಮಾಪಕ ನಾಗೇಶನ ಮೇಲೆ ದೂರು ಕೊಟ್ಟು ಆ ಬಗ್ಗೆ ವಿವರ ಕೊಡದೆ ಕೆಕರುಮಕರಾಗೋ ಚೇತನಾಳ ವರಸೆ ಒಂದು ಪ್ರಕರಣದ ಮತ್ತೊಂದು ಮುಖವನ್ನೂ ಜಾಹೀರು ಮಾಡುವಂತಿದೆ!

ಮಂಜಿನಹನಿ ಚಿತ್ರದಲ್ಲಿ ರವಿಚಂದ್ರನ್ ಅವರ ತಂಗಿಯ ಪಾತ್ರ ಮಾಡಿದ್ದಳೆನ್ನಲಾಗಿರೋ ಚೇತನಾ ಈ ಸುದ್ದಿಯ ಕೇಂದ್ರಬಿಂದು. ಈಕೆ ತನ್ನನ್ನು ವಂಚಿಸಿ ಎಂಟೂವರೆ ಲಕ್ಷಕ್ಕೂ ಹೆಚ್ಚು ಕಾಸು ಪೀಕಿದ್ದಾನೆಂದು ಸಹ ನಿರ್ಮಾಪಕ ನಾಗೇಶನ ಮೇಲೆ ಆರೋಪ ಹೊರಿಸಿದ್ದಾಳೆ. ಈ ಬಗ್ಗೆ ನಾಗೇಶನ ವಿರುದ್ಧ ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಯಲ್ಲೊಂದು ದೂರನ್ನೂ ದಾಖಲಿಸಿದ್ದಾಳೆ.

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕನಸಿನಂಥಾ ಮಂಜಿನಹನಿ ಚಿತ್ರಕ್ಕೆ ಆರಂಭದಲ್ಲಿ ನಿರ್ಮಾಪಕರಾಗಿದ್ದವರು ಸಂದೇಶ್ ನಾಗರಾಜ್. ೨೦೧೩ರಲ್ಲಿ ಸೆಟ್ಟೇರಿದ್ದ ಈ ಚಿತ್ರಕ್ಕೆ ಹೆಜ್ಜೆ ಹೆಜ್ಜೆಗೂ ಕಂಟಕಗಳೇ ಕಾಡಿದ್ದವು. ಆರ್ಥಿಕ ಸಂಕಷ್ಟದಿಂದ ಟೇಕಾಫ್ ಆಗದೇ ನಿಂತು ಹೋಗಿತ್ತು. ೨೦೧೫ರಲ್ಲಿ ಸಂದೇಶ್ ನಾಗರಾಜ್ ಅವರಿಂದ ಹಕ್ಕು ಪಡೆದು ರವಿಚಂದ್ರನ್ ಮತ್ತೆ ಮಂಜಿನಹನಿಯನ್ನು ಆರಂಭಿಸಿದ್ದರಲ್ಲಾ? ಆಗ ಈ ಚಿತ್ರಕ್ಕೆ ಸಹ ನಿರ್ದೇಶಕನಾಗಿ ಬಂದವನು ಹೊಸಕೋಟೆ ಮೂಲದ ನಾಗೇಶ.

ಸಹ ನಿರ್ಮಾಪಕನಾಗಿ ಬಂದ ನಾಗೇಶ ಈ ಚೇತನಾಗೆ ಬಲು ಕಾಳಜಿಯಿಂದಲೇ ನಾಯಕನ ತಂಗಿಯ ಪಾತ್ರವನ್ನೂ ಕೊಡಿಸಿದ್ದ. ಆದರೆ ಮಂಜಿನ ಹನಿ ಚಿತ್ರೀಕರಣ ಮಾತ್ರ ಕೆಲವೇ ದಿನಗಳಲ್ಲಿ ನಿಂತು ಹೋಗಿತ್ತು. ಆ ನಂತರದಲ್ಲಿ ಮನು ಎಂಬ ಹೆಸರಿನಿಂದ ತನ್ನ ವಾಟ್ಸಪ್ ನಂಬರಿಗೆ ಮೆಸೇಜು ಬಿಡಲಾರಂಭಿಸಿದ್ದ ನಾಗೇಶ ಮಸಲತ್ತು ನಡೆಸಲಾರಂಭಿಸಿದ್ದ ಎಂಬುದು ಚೇತನ ನೀಡಿದ ದೂರಿನ ಪ್ರಧಾನ ಅಂಶ!

ಹೀಗೆ ಮೆಸೇಜು ಮಾಡಲಾರಂಭಿಸಿದ ನಾಗೇಶ ಚಿತ್ರರಂಗದಲ್ಲಿ ಎತ್ತರಕ್ಕೇರುವ ಕನಸನ್ನೆಲ್ಲ ತುಂಬಿ ನಿನಗೆ ಆ ಆಸೆ ಇದ್ದರೆ ಗೌರಿ ಎಂಬಾಕೆಯನ್ನು ಸಂಪರ್ಕಿಸು ಅಂತ ನಂಬರು ನಕಳಿಸಿದ್ದನಂತೆ. ಸಿನಿಮಾ ರಂಗದಲ್ಲಿ ಎತ್ತರಕ್ಕೇರಿ ಕುಣಿದಾಡೋ ಉಮೇದಿನೊಂದಿಗೇ ಚೇತನ ಕರೆ ಮಾಡಿದೇಟಿಗೆ ಗೌರಿ ಪೂಜೆ ಪುನಸ್ಕಾರದ ಗೇರು ಹಾಕಿದ್ದಾಳೆ. ಇದಲ್ಲದೇ ಚೇತನಾಗೇನೋ ದೋಷವಿರೋದಾಗಿ ಹೇಳಿ ಅದನ್ನು ಪರಿಹರಿಸಿ ಒಂದು ಮಗುವನ್ನು ಬಲಿ ಕೊಟ್ಟರೆ ಭಾರೀ ಎತ್ತರಕ್ಕೇರುತ್ತಿ ಅಂತೂ ಗೌರಿ ಹೇಳಿದ್ದಳಂತೆ. ಬಳಿಕ ನಾಗೇಶನೂ ಮೆಸೇಜು ಮಾಡಿ ಗೌರಿ ಹೇಳಿದಂತೆ ನಡೆದುಕೊ ಅಂತ ಪುಸಲಾಯಿಸಿದ್ದನಂತೆ.

ಹೀಗೆ ಪೂಜೆ ಅಂತೆಲ್ಲ ಪದೇ ಪದೆ ಬೇರೆ ಬೇರೆ ಅಕೌಂಟಿಗೆ ಲಕ್ಷ ಲಕ್ಷವನ್ನು ನಾಗೇಶ ಚೇತನಾಳಿಂದ ಹಾಕಿಸಿಕೊಂಡಿದ್ದನಂತೆ. ಇದೇ ಆಗಸ್ಟ್ ತಿಂಗಳಲ್ಲಿಯೂ ವೀಣಾ ಎಂಬಾಕೆಯ ಖಾತೆಗೆ ಮತ್ತೆ ಐವತ್ತು ಸಾವಿರ ಹಾಕಿಸಿಕೊಂಡಿದ್ದಾನೆ ಎಂಬುದು ಚೇತನಾ ಮಾಡಿರೋ ಆರೋಪಗಳ ಸರಮಾಲೆ.

ಆದರೆ ಇಂಥಾದ್ದೊಂದು ದೂರು ಕೊಟ್ಟ ಚೇತನಾ ಮಾಧ್ಯಮದವರು ಸಂಪರ್ಕಿಸಿದರೂ ಸರಿಯಾದ ಮಾಹಿತಿ ನೀಡದೆ ದೌಲತ್ತು ತೋರಿಸುತ್ತಾಳೆ. ಈಕೆಯ ಈ ವರ್ತನೆಯಲ್ಲಿ ಮತ್ತು ಕೊಟ್ಟಿರೋ ದೂರಿನಲ್ಲಿಯೇ ಖಂಡಿತವಾಗಿಯೂ ಯಾವುದೋ ಮಸಲತ್ತಿನ ವಾಸನೆ ಹೊಡೆಯುತ್ತಿರೋದು ನಿಜ. ಚಿತ್ರರಂಗದಲ್ಲಿ ಮೇಲೇರಿದವರೆಲ್ಲ ಹೋಮ ಹವನ, ಪೂಜೆ ಮಾಡಿ ಮಗು ಬಲಿಕೊಟ್ಟಿಲ್ಲ ಎಂಬ ಕಾಮನ್ ಸೆನ್ಸ್ ಕೂಡಾ ಈಕೆಗಿರಲಿಲ್ಲವೇ? ಈಕೆ ಸಾಚಾ ಆಗಿದ್ದರೆ ಗೌರಿ ಎಂಬಾಕೆ ಮಗು ಬಲಿ ಕೊಡುವ ಪ್ರಸ್ತಾಪ ಮಾಡಿದಾಗ ಯಾಕೆ ಇವಳು ದೂರು ಕೊಡಲಿಲ್ಲ? ನಾಗೇಶ ಮನು ಎಂಬ ಹೆಸರಿನಿಂದ ಆಟವಾಡಿದ ಅಂತಲೇ ಇಟ್ಟುಕೊಳ್ಳೋಣ. ಆ ಮನು ಇವಳ ಸಂಬಂಧಿಕನಾ? ಓರ್ವ ಅಪರಿಚಿತ ಹೇಳಿದ್ದಕ್ಕೆಲ್ಲ ತಲೆಯಾಡಿಸಿ ಕೇಳಿದಾಗೆಲ್ಲ ಕಾಸು ಹಾಕಲು ಇವಳಿಗೇನು ತಲೆ ಕೆಟ್ಟಿತ್ತಾ? ಇಷ್ಟಕ್ಕೂ ನಾಗೇಶ ಕೇಳಿದಾಗಲೆಲ್ಲಾ ಅನಾಮತ್ತಾಗಿ ಎತ್ತೆತ್ತಿಕೊಡಲು ಈಕೆಗೆ ದುಡ್ಡಾದರೂ ಎಲ್ಲಿಂದ ಬರುತ್ತಿತ್ತು?

ಇಂಥಾ ನಾನಾ ಪ್ರಶ್ನೆಗಳಿವೆ. ಗಿರಿನಗರ ಪೊಲೀಸ್ ಇನ್ಸ್‌ಪೆಕ್ಟರ್ ಕೊಟ್ರೇಶ್ ಸಾಹೇಬ್ರು ಮೊದಲು ಈಕೆಯನ್ನೇ ಒಂದು ರೌಂಡು ತನಿಖೆಗೊಳಪಡಿಸಿದರೆ ಮಾತ್ರ ಅಸಲೀ ಸತ್ಯ ಹೊರಬರ ಬಹುದು. ಮಗು ಬಲಿಕೊಡಬೇಕು ಅನ್ನೋ ನೀಚಾತಿನೀಚ ಉದ್ದೇಶವನ್ನು ನಾಗೇಶ ವ್ಯಕ್ತಪಡಿಸಿದ ಮೇಲೂ ಈಕೆ ಆತನಿಗೆ ಹಣ ನೀಡಿದ್ದಾಳೆಂದಮೇಲೆ ಈಕೆ ಕೂಡಾ ಅಪರಾಧದಲ್ಲಿ ಭಾಗಿಯಾಗಿದ್ದಾಳೆ ಅಂತಾ ತಾನೆ ಅರ್ಥ? ಒಟ್ಟಾರೆ ನಾಗೇಶ ಎಂಬಾತ ವಂಚಕ ಅಂತಿಟ್ಟುಕೊಂಡರೂ ಇಡೀ ಪ್ರಕರಣದಲ್ಲಿ ಚೇತನಾ ಎಂಬಾಕೆಯ ಮೇಲೆಯೇ ಅನುಮಾನ ಹುಟ್ಟಿಸುವ ಸಾಕಷ್ಟು ಅಂಶಗಳಿವೆ. ಅದೇನೆಂಬುದನ್ನು ಜಾಹೀರು ಮಾಡೋ ಛಾತಿ ಇರೋದು ಪೊಲೀಸರ ತನಿಖೆಗೆ ಮಾತ್ರ!

#

LEAVE A REPLY

Please enter your comment!
Please enter your name here

18 + nineteen =