One N Only Exclusive Cine Portal

ಸಾಕ್ಷ್ಯಚಿತ್ರಗಳ ಸರದಾರ ಚಿಕ್ಕಸುರೇಶ ವಿಧಿವಶ

ರಂಗಭೂಮಿ, ಬೀದಿ ನಾಟಕಗಳು, ಕಿರುತೆರೆ ಮತ್ತು ಸಿನಿಮಾ ಕ್ಷೇತ್ರಗಳಲ್ಲಿ ಕೆಲಸ ಮಾಡಿ ಹೆಸರು ಗಳಿಸಿದ್ದ ಚಿಕ್ಕ ಸುರೇಶ್ ಇಂದು ನಿಧನರಾಗಿದ್ದಾರೆ.

ಬೆಂಗಳೂರಿನ ಹನುಮಂತನಗರದಲ್ಲೇ ಹುಟ್ಟಿಬೆಳೆದ ಚಿಕ್ಕ ಸುರೇಶ, ಅಲ್ಲೇ ಇದ್ದ ಅಭಿನಯತರಂಗದ ತೆಕ್ಕೆಗೆ ಬಿದ್ದವರು. ಹಾಗೆ ರಂಗಭೂಮಿಯಲ್ಲಿ ಸಾಕಷ್ಟು ವರ್ಷಗಳ ದುಡಿದು, ನಂತರ ಕಿರುತೆರೆ, ಸಿನಿಮಾರಂಗಗಳಲ್ಲಿಯೂ ಗುರುತಿಸಿಕೊಂಡಿದ್ದರು. ಖ್ಯಾತ ನಿರ್ದೇಶಕ ಡಿ. ರಾಜೇಂದ್ರ ಬಾಬು ನಿರ್ದೇಶನದ ಅವರ ಧಾರಾವಾಹಿಗಳ ಸಂಚಿಕೆ ನಿರ್ದೇಶಕರಾಗಿಯೂ ಚಿಕ್ಕ ಸುರೇಶ ಕೆಲಸ ಮಾಡಿದ್ದರು. ನಿರ್ದೇಶನದ ಜೊತೆಗೆ ಸಿನಿಮಾ, ಧಾರಾವಾಹಿಗಳಲ್ಲಿ ನಟನೆಯಲ್ಲೂ ತೊಡಗಿಸಿಕೊಂಡ ಸುರೇಶ ಹಾಸ್ಯಪ್ರಜ್ಞೆ ಮತ್ತು ಟೈಮಿಂಗ್ ಹೊಂದಿದ್ದವರು. ಬಣ್ಣದ ಗೆಜ್ಜೆ ಸಿನಿಮಾದಲ್ಲಿ ರವಿಚಂದ್ರನ್ ಅವರ ಸ್ನೇಹಿತನಾಗಿ ಸುರೇಶ್ ನಿಭಾಯಿಸಿದ್ದ ಪಾತ್ರವನ್ನು ಜನ ಇಂದಿಗೂ ಮರೆತಿಲ್ಲ. ಒಂದು ವೇಳೆ ನಟನೆಯಲ್ಲೇ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಿದ್ದರೆ ಈ ಹೊತ್ತಿಗೆ ಚಿಕ್ಕ ಸುರೇಶ ಕನ್ನಡದ ಖ್ಯಾತ ಹಾಸ್ಯ ಕಲಾವಿದರಾಗಿ ಹೊರಹೊಮ್ಮಿರುತ್ತಿದ್ದರು. ಆದರೆ ರಂಗಭೂಮಿ, ಕಿರುತೆರೆ, ಸಿನಿಮಾ ಜೊತೆಗೆ ಸಾಕ್ಷ್ಯಚಿತ್ರಗಳ ನಿರ್ದೇಶನ ಮತ್ತು ನಿರ್ಮಾಣದತ್ತ ಚಿಕ್ಕಸುರೇಶ್ ಹೆಚ್ಚು ಗಮನ ಹರಿಸಿದರು. ಬಹುಶಃ ಅವರು ಸರ್ಕಾರಿ ಡಾಕ್ಯುಮೆಂಟರಿಗಳ ಸರದಾರ ಅನಿಸಿಕೊಳ್ಳದೇ ಹೋಗಿದ್ದರೆ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡುವ ಸಾಧ್ಯತೆಯೂ ಇತ್ತು.

ಜಯ, ಇಂದ್ರ, ಪಾಪಣ್ಣಿ ಎಂಬ ಅಕ್ಕಂದಿರು ಮತ್ತು ಅಣ್ಣ ಮುರಳಿ ಸೇರಿದಂತೆ ನಾಲ್ಕು ಜನ ಸಹೋದರರನ್ನು ಹೊಂದಿದ್ದ ಚಿಕ್ಕ ಸುರೇಶ್ ಅವರದ್ದು ತೀರಾ ಬಡತನದ ಹಿನ್ನೆಲೆಯ ಕುಟುಂಬ. ರಂಗಭೂಮಿಯ ಒಡನಾಟ ಸುರೇಶ್ ಅವರ ಬದುಕನ್ನು ಬದಲಿಸಿತ್ತು. ಎ.ಎಸ್. ಮೂರ್ತಿ, ಡಾ. ವಿಜಯಮ್ಮ, ಬಿ. ಸುರೇಶ, ಇಳಾ ಗುರು, ಪ್ರಕಾಶ್ ರೈ ಮುಂತಾದವರ ಒಡನಾಟದಲ್ಲಿ ಬೆಳೆದ ಚಿಕ್ಕಸುರೇಶ ತನ್ನ ಚುರುಕು ವ್ಯಕ್ತಿತ್ವದಿಂದಲೇ ಎಲ್ಲರ ಗಮನ ಸೆಳೆಯುತ್ತಿದ್ದರು. ಇಂಟರ್‌ನೆಟ್ಟು ಮೊಬೈಲುಗಳು ಹುಟ್ಟಿಕೊಳ್ಳುವ ಮುಂಚೆ ಏನಾದರೂ ಸಭೆ ಸಮಾರಂಭಗಳ ಆಮಂತ್ರಣ ಪತ್ರಿಕೆ ನೀಡೋದು ಬಹಳ ಕಷ್ಟದ ಕೆಲಸವಾಗಿತ್ತು. ಆ ಸಂದರ್ಭದಲ್ಲಿ ಅನೇಕರು ಚಿಕ್ಕ ಸುರೇಶ್ ಮೊರೆ ಹೋಗುತ್ತಿದ್ದರು. ಕಲಾವಿದರು, ತಂತ್ರಜ್ಞರ ಮನೆಗಳ ವಿಳಾಸ ಚಿಕ್ಕ ಸುರೇಶ್ ಅವರ ತಲೆಯಲ್ಲೇ ರೆಕಾರ್ಡ್ ಆಗಿರುತ್ತಿದ್ದವು. ಇನ್ನು ಸರ್ಕಾರಿ ಸಾಕ್ಷ್ಯಚಿತ್ರಗಳನ್ನು ರೂಪಿಸುತ್ತಾ, ಒಂದು ಮಟ್ಟದ ಸಂಪಾದನೆ ಕಂಡರೂ ಸುರೇಶ್ ಚಿಕ್ಕ ಟಿವಿಎಸ್ ಎಕ್ಸೆಲ್ ನಲ್ಲೇ ಓಡಾಡುತ್ತಿದ್ದ ಸಿಂಪಲ್ ವ್ಯಕ್ತಿ.

ಇಂಥ ಚಿಕ್ಕಸುರೇಶ್ ಕಳೆದ ವಾರ ಕುಟುಂಬಸಮೇತ ಗೋವಾ ಪ್ರವಾಸಕ್ಕೆ ಹೋಗಿದ್ದರಂತೆ. ಉಸಿರಾಟದಲ್ಲಿ ಕಾರ್ಬನ್ ಡೈಆಕ್ಸೈಡ್ ಅಂಶ ಹೆಚ್ಚಾಗಿ ಆರೋಗ್ಯ ಕೈಕೊಟ್ಟಿದ್ದರಿಂದ ಅಲ್ಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂಚೂರು ಗುಣವಾಗುತ್ತಿದ್ದಾರೆ ಎನಿಸಿ ಆಂಬ್ಯುಲೆನ್ಸ್ ಮೂಲಕ ಬೆಂಗಳೂರು ಸೇರಿಸುವ ಪ್ರಯತ್ನ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮಾರ್ಗಮಧ್ಯೆಯೇ ಚಿಕ್ಕ ಸುರೇಶ್ ಉಸಿರು ನಿಲ್ಲಿಸಿದ್ದಾರೆ. ಹನುಮಂತಗರದ ಕಲಾಮಂದಿರದಲ್ಲಿ ಅವರನ್ನು ಸ್ವಲ್ಪ ಹೊತ್ತು ಇರಿಸಿ, ನಂತರ ಕೆರೆಕೋಡಿಯಲ್ಲಿರುವ ಅವರ ಮನೆಗೆ ಕರೆದೊಯ್ದು ಆನಂತರ ಅಂತ್ಯ ಸಂಸ್ಕಾರ ನೆಡೆಸಲಾಗುವುದು.

ನೂರಾರು ಜನರ ಬದುಕಿನ ಚಿತ್ರಗಳಿಗೆ ಸಾಕ್ಷಿ ಒದಗಿಸಿದ್ದ ಚಿಕ್ಕ ಸುರೇಶ್ ಇನ್ನು ಎಲ್ಲರ ಮನಸ್ಸಿನಲ್ಲಿ ನೆನಪಾಗಿ ಉಳಿಯಲಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image