One N Only Exclusive Cine Portal

ಸಂಚೊಂದು ಇಲ್ಲಿ ಸಂಚಾರಿಯಾಗಿ ಊರೆಲ್ಲ ಅಲೆದಾಡಿದೆ..

ಮಲೆನಾಡು ಪ್ರದೇಶ, ಅಲ್ಲಿನ ಜನಜೀವನ, ಕಾಡು, ಅದರೊಳಗಿನ ಮರಗಳ್ಳತನದ ಮಾಫಿಯಾ, ಅದರಾಚೆಗೆ ಚಾಚಿದ ದುಷ್ಟ ಕೂಟದ ನಂಟು, ಹಣಕ್ಕಾಗಿ ಏನು ಬೇಕಾದರೂ ಮಾಡೋ ಧೂರ್ತರು, ಅನೈತಿಕ ಸಂಬಂಧ, ಶುದ್ಧ ಪ್ರೀತಿ, ಗೆಳೆತನ, ಪ್ರಾಮಾಣಿಕ ಪೊಲೀಸ್ ಅಧಿಕಾರಿಗೆ ಎದುರಾಗೋ ಸವಾಲುಗಳು, ಕಡುಭ್ರಷ್ಟ ಪೊಲೀಸ್ ಅಧಿಕಾರಿಯೊಬ್ಬನ ವಂಚನೆಗಳು, ಪೊಲೀಸ್ ಆಗಲೇಬೇಕು ಅಂತಾ ಕನಸಿಟ್ಟುಕೊಂಡವನಿಗೆ ಪದೇ ಪದೇ ಎದುರಾಗೋ ಅಡೆತಡೆ, ಸಾವುಗಳು… ಹೀಗೆ ಸಾಕಷ್ಟು ಸರಕುಗಳನ್ನು ಒಳಗೊಂಡು ಗಟ್ಟಿಯಾದ ಕಥೆಯ ಸಮೇತ ತೆರೆಮೇಲೆ ಅರಳಿಕೊಂಡಿರೋ ಸಿನಿಮಾ ಚೂರಿಕಟ್ಟೆ.


“ಯಾರ್ರೀ ಅದು ಕನ್ನಡದಲ್ಲಿ ಕಥೆಯಿಲ್ಲ ಅಂತನ್ನೋದು” ಎಂಬ ಮಾತು ಆಗಾಗ ಕೆಲವರ ಬಾಯಲ್ಲಿ ಕೇಳಿಬರುತ್ತಿರುತ್ತಲ್ಲಾ? ‘ಚೂರಿಕಟ್ಟೆ’ ಸಿನಿಮಾವನ್ನು ನೋಡಿದ ಯಾರೇ ಆದರೂ ಧಾರಾಳವಾಗಿ ಉದ್ಘರಿಸಬಹುದಾದ ಮಾತು ಕೂಡಾ ಇದೇ… ಯಾವುದೋ ಭಾಷೆಯಲ್ಲಿ ಬಂದುಹೋದ ಸಿನಿಮಾವನ್ನು ಕಡ ತಂದು ಸಿನಿಮಾ ಮಾಡೋರ ನಡುವೆ ನಮ್ಮ ನೆಲದ ಸಮಸ್ಯೆಗಳನ್ನೇ ಕಥೆಯನ್ನಾಗಿಸಿ ಕಾಡುವಂತೆ ರೂಪುಗೊಂಡಿರುವ ಸಿನಿಮಾ ಚೂರಿಕಟ್ಟೆ. ಹೌದು, ಸಿನಿಮಾವನ್ನು ತಪಸ್ಸಿನಂತೆ ಸ್ವೀಕರಿಸಿ ‘ನಮ್ಮ ಸಿನಿಮಾ ಹೀಗೇ ಬರಬೇಕು. ಜನರನ್ನು ಇಂಥವೇ ಅಂಶಗಳು ಮೆಚ್ಚಿಸುತ್ತವೆ, ನಾವು ಉತ್ತಮವಾದ್ದನ್ನೇ ಕಟ್ಟಿಕೊಡುತ್ತೇವೆ’ ಎನ್ನುವ ಸ್ಪಷ್ಟವಾದ ಅಂದಾಜಿದ್ದವರಿಗೆ ಮಾತ್ರ ಸುಂದರವಾದ, ಕಾಡುವ ಕಥೆಯ ಸಿನಿಮಾವನ್ನು ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ‘ಚೂರಿಕಟ್ಟೆ’ ನೂರಕ್ಕೆ ನೂರು ಭಾಗ ಗೆದ್ದಿದೆ.


ಚೂರಿಕಟ್ಟೆ ಸಿನಿಮಾ ಪೂರ್ತಿಯಾಗಿ ಕಾಡು ಮತ್ತು ಅದಕ್ಕೆ ಹೊಂದಿಕೊಂಡ ಊರೊಂದರಲ್ಲಿ ನಡೆಯುವ ಕತೆ. ಆ ಊರಿನಲ್ಲೊಂದು ಕಾಲೇಜು, ಕಾಲೇಜಿನಲ್ಲಿ ಒಬ್ಬರನ್ನೊಬ್ಬರು ಪ್ರೀತಿಸುವ ಹುಡುಗ-ಹುಡುಗಿ, ಓದಿನೊಂದಿಗೆ ಆಟೋಟಗಳಲ್ಲಿ ಮುಂದಿರುವ ನಾಯಕನಟನಿಗೆ ಪೊಲೀಸ್ ಇಲಾಖೆಗೆ ಸೇರಬೇಕೆಂಬ ತುಡಿತ. ಪಿಯುಸಿ ಮುಗಿಯುತ್ತಿದ್ದಂತೇ ಕಾನ್‌ಸ್ಟೆಬಲ್ ಹುದ್ದೆಗೆ ಅರ್ಜಿ ಹಾಕಿರುತ್ತಾನೆ. ಟ್ರೈನಿಂಗೂ ಶುರುವಾಗುತ್ತದೆ. ಈ ನಡುವೆ ‘ಪ್ರೀತಿಗಾಗಿ ಇಷ್ಟೂ ಮಾಡಕ್ಕಾಗಲ್ವ’ ಅಂದವಳನ್ನು ಮೆಚ್ಚಿಸಲು ಸಣ್ಣದೊಂದು ಯಡವಟ್ಟು ಮಾಡುತ್ತಾನೆ. ಅದು ಎತ್ತೆತ್ತಲೋ ತಿರುಗಿ ಬೃಹದಾಕಾರವಾಗಿ ಬೆಳೆದುನಿಲ್ಲುತ್ತದೆ. ಕ್ಷಣಕ್ಷಣಕ್ಕೂ ಕಗ್ಗಂಟಾಗುವ ಸಮಸ್ಯೆಯಿಂದ ಅದಕ್ಕೆ ಸಂಬಂಧಿಸಿದವರೆಲ್ಲಾ ಮುಕ್ತಿ ಹೊಂದುತ್ತಾರಾ ಅನ್ನೋದು ಚೂರಿಕಟ್ಟೆಯಲ್ಲಿ ಕೊನೆಯತನಕವೂ ಕಾಡುವ ಕುತೂಹಲ.


ನಿಷ್ಠಾವಂತ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅಚ್ಯುತ್ ಕುಮಾರ್, ಭ್ರಷ್ಟನಾಗಿ ಮಂಜುನಾಥ್ ಹೆಗ್ಡೆ ಕರಾರುವಾಕ್ಕಾಗಿ ಅಭಿನಯಿಸಿದ್ದಾರೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಾಲಾಜಿ ಎನ್ನುವ ಖಡಕ್ಕು ವಿಲನ್ ದೊರೆತಿದ್ದಾರೆ. ಇನ್ನು ಹೀರೋ ಪ್ರವೀಣ್ ನಟನೆ, ಕುಣಿತ, ಹೊಡೆದಾಟ ಎಲ್ಲದರಲ್ಲೂ ಸೈ ಅನ್ನೋದನ್ನು ನಿರೂಪಿಸಿದ್ದಾರೆ. ನಾಯಕಿ ಕೂಡಾ ಚೆಂದಗೆ ನಟಿಸಿದ್ದಾಳೆ. ಸಿನಿಮಾ ನೋಡುತ್ತಾ ಕೂತವರನ್ನು ಮಲೆನಾಡಿಗೇ ಕರೆದೊಯ್ದು ಕೂರಿಸೋದು ಅದ್ವೈತ ಗುರುಮೂರ್ತಿ ಅವರ ನೈಜವಾದ ಛಾಯಾಗ್ರಹಣ ಮತ್ತು ಅಷ್ಟೇ ಪ್ರಭಾವಶಾಲಿಯಾದ ಹಿನ್ನೆಲೆ ಸಂಗೀತ. ಮೂಲ ಕತೆ ಒದಗಿಸಿರುವ ಕೈಲಾಶ್, ರಾಘು ಶಿವಮೊಗ್ಗ ಮತ್ತು ಅರವಿಂದ ಕುಪ್ಳೀಕರ್ ಅವರ ಅದ್ಭುತವೆನಿಸುವ ಚಿತ್ರಕತೆ, ಎಷ್ಟೊಂದು ಒಳಸುಳಿಗಳಿರುವ ಕಥೆಯನ್ನು ಅಷ್ಟೇ ಲೀಲಾಜಾಲವಾಗಿ, ಎಲ್ಲೂ ಬೋರು ಹೊಡೆಸದಂತೆ, ಅಡಿಗಡಿಗೆ ಥ್ರಿಲ್ ನೀಡುತ್ತಾ ಬಿಚ್ಚಿಟ್ಟಿರೋದು ನಿರ್ದೇಶಕ ರಾಘು ಶಿವಮೊಗ್ಗ ಅವರ ಸ್ಟ್ರೆಂತು ಅನ್ನೋದು ಸತ್ಯ. ಶುದ್ಧವಾದ ನೀರಲ್ಲಿ ಸಣ್ಣದೊಂದು ಕಲ್ಲು ಬಿದ್ದಿದ್ದರೂ ಕಾಣುತ್ತದಲ್ಲಾ? ಹಾಗೆ, ಕಣ್ತಪ್ಪಿನಿಂದಲೋ ಅಥವಾ ದೃಷ್ಟಿಬೊಟ್ಟಿನಂತೆ ಇರಲಿ ಅಂತಲೋ ಗೊತ್ತಿಲ್ಲ ತೀರಾ ಸಣ್ಣದಾದ ಒಂದೆರಡು ಮಿಸ್ಟೇಕುಗಳೂ ಇವೆ. ತಪ್ಪುಗಳು ಉಳಿದುಹೋಗೋದರಿಂದ ಜಗತ್ತಿನ ಯಾವ ಸಿನಿಮಾಗಳೂ ಹೊರತಲ್ಲವಾದ್ದರಿಂದ ‘ಚೂರಿಕಟ್ಟೆ’ಯಲ್ಲಿ ಅದಕ್ಕೆ ಧಾರಾಳವಾಗಿ ವಿನಾಯ್ತಿ ನೀಡಬಹುದು!


ಒಟ್ಟಿನಲ್ಲಿ, ಕನ್ನಡದಲ್ಲಿ ಇಂಥ ನೂರಾರು ಸಿನಿಮಾಗಳು ಜನ್ಮಪಡೆಯಲೇಬೇಕಾದ ಜರೂರತ್ತಿರೋದರಿಂದ ‘ಚೂರಿಕಟ್ಟೆ’ ಸಿನಿಮಾವನ್ನು ಜನ ನೋಡಲೇಬೇಕು.

Leave a Reply

Your email address will not be published. Required fields are marked *


CAPTCHA Image
Reload Image