One N Only Exclusive Cine Portal

ಸಿ 5 ಅಕಾಡೆಮಿಯ ಛಾಯಾಗ್ರಹಣ ತರಬೇತಿ ಶಿಬಿರ

ಸಿನಿಮಾ ಒಂದರ ಜೀವಾಳದಂತಿರೋ ಛಾಯಾಗ್ರಹಣ ಕಲೆ ಪ್ರತೀ ಕ್ಷಣವೂ ಹೊಸತನಕ್ಕೆ ಒಡ್ಡಿಕೊಳ್ಳುತ್ತಿರುತ್ತದೆ. ಅಂಥಾ ಹೊಸತನಕ್ಕೆ ಅಪ್‌ಡೇಟ್ ಆಗದೇ ಹೋದರೆ ಒಂದೆರಡು ವರ್ಷಗಳಲ್ಲಿಯೇ ಚಿತ್ರರಂಗಕ್ಕೆ ಹಳಬರಾಗಿ ಬಿಡುವ ಅಪಾಯಗಳೂ ಇವೆ. ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ಬ್ಯುಸಿ ಛಾಯಾಗ್ರಾಹಕರಾಗಿದ್ದುಕೊಂಡೇ ಹೀಗೆ ಹೊಸತನಕ್ಕೆ ಅಪ್‌ಡೇಟ್ ಆಗಲಾರದೆ, ನವೀನ ತಂತ್ರಜ್ಞಾನಗಳ ತಿಳುವಳಿಕೆ ಇಲ್ಲದೆ ಕಂಗಾಲಾದ ಅದೆಷ್ಟೋ ಜನರಿದ್ದಾರೆ. ಅಂಥವರಿಗೆ ಸುವರ್ಣಾವಕಾಶದಂಥಾ ಛಾಯಾಗ್ರಹಣ ತರಬೇತಿ ಶಿಬಿರವೊಂದನ್ನು ಸಿ ೫ ಫಿಲಂ ಅಕಾಡೆಮಿ ಶುರು ಮಾಡಿದೆ.

ಕನ್ನಡ ಚಿತ್ರರಂಗದಲ್ಲಿ ಸದ್ಯ ಪ್ರಮುಖ ಸಾಲಿನಲ್ಲಿರುವ ಐವರು ಕ್ರಿಯೇಟೀವ್ ಛಾಯಾಗ್ರಾಹಕರು ಸೇರಿಕೊಂಡು ಸಿ ೫ ಫಿಲಂ ಅಕಾಡೆಮಿಯನ್ನು ಹುಟ್ಟು ಹಾಕಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ಛಾಯಾಗ್ರಾಹಕರುಗಳಾದ ಸತ್ಯ ಹೆಗಡೆ, ಶೇಖರ್ ಚಂದ್ರ, ಸುಜ್ಞಾನ್, ರಾಕೇಶ್ ಮತ್ತು ನಂದಕಿಶೋರ್ ಅವರುಗಳು ಸೇರಿ ಒಂದು ಮಹತ್ವದ ಕನಸಿಟ್ಟುಕೊಂಡು ಈ ಅಕಾಡೆಮಿಯನ್ನು ಹುಟ್ಟು ಹಾಕಿದ್ದಾರೆ.

ನಮ್ಮಲ್ಲಿ ಛಾಯಾಗ್ರಹಣದ ಬಗ್ಗೆ ತರಬೇತಿ ನೀಡುವ ಸಂಸ್ಥೆಗಳಿಗೇನೂ ಕೊರತೆಯಿಲ್ಲ. ಆದರೆ ಪ್ರಸ್ತುತದಲ್ಲಿನ ತುರ್ತಿಗನುಗುಣವಾಗಿ, ಏನು ಬೇಕೋ ಅದನ್ನು ಕಲಿಸಿ ತರಬೇತಿ ನೀಡುವ ಮನಸ್ಥಿತಿಯ ತರಬೇತಿ ಸಂಸ್ಥೆಗಳ ಕೊರತೆ ಇದೆ. ಈಗ ಚಾಲ್ತಿಯಲ್ಲಿರುವ ತರಬೇತಿ ಸಂಸ್ಥೆಗಳ ತರಬೇತಿ ಅವಧಿ ಮೂರು ವರ್ಷಗಳಷ್ಟಿದೆ. ಕಡಿಮೆ ಎಂದರೆ ಆರು ತಿಂಗಳಾದರೂ ಬೇಕಾಗುತ್ತದೆ. ಆದರೆ ಅದನ್ನೇ ಶಾರ್ಟ್‌ಟರ್ಮ್‌ನಲ್ಲಿ ಕಲಿಸಲು ಸಿ ೫ ಸಂಸ್ಥೆ ತೆಗೆದುಕೊಳ್ಳೋದು ಕೇವಲ ಮೂರೇ ದಿನ!

ಈ ಶಿಬಿರದಲ್ಲಿ ಸತ್ಯ ಹೆಗಡೆ, ಶೇಖರ್ ಚಂದ್ರ, ಸುಜ್ಞಾನ್, ರಾಕೇಶ್ ಮತ್ತು ನಂದಕಿಶೋರ್ ಅವರುಗಳು ಸ್ವತಃ ತರಬೇತಿ ನೀಡಲಿದ್ದಾರೆ. ಇಲ್ಲಿ ಅಪ್ಪಿತಪ್ಪಿಯೂ ಥಿಯರಿ ಇರುವುದಿಲ್ಲ. ಏನಿದ್ದರೂ ಪಕ್ಕಾ ಪ್ರಾಕ್ಟಿಕಲ್ ಕಲಿಕೆ. ಕೆಲ ಛಾಯಾಗ್ರಾಹಕರು ದೊಡ್ಡ ದೊಡ್ಡ ಸಿನಿಮಾಗಳನ್ನು ಮಾಡಿರುತ್ತಾರೆ. ಆದರೆ ಅಡ್ವಾನ್ಸ್ಡ್ ಟೆಕ್ನಾಲಜಿಯನ್ನು ಕಲಿಯಲು ಕಾಲಾವಕಾಶದ ಕೊರತೆಯಿಂದ ಕಂಗೆಟ್ಟಿರುತ್ತಾರೆ. ಇಂಥವರ ಪಾಲಿಗೆ ಸದರಿ ಶಿಬಿರ ನಿಜಕ್ಕೂ ವರದಾನವಾಗೋದರಲ್ಲಿ ಯಾವುದೇ ಸಂಶಯಗಳಿಲ್ಲ. ಯಾಕೆಂದರೆ ಪ್ರಸ್ತುತದಲ್ಲಿ ಯಾವ್ಯಾವ ತಂತ್ರಗಾರಿಕೆಗೆ, ಕಸುಬುದಾರಿಕೆಗೆ ಅಪ್‌ಡೇಟ್ ಆಗಬೇಕಿದೆಯೇ ಅದೆಲ್ಲದಕ್ಕೂ ಈ ನುರಿತ ಛಾಯಾಗ್ರಾಹಕರ ತಂಡ ಬೇಕಾದ ರೀತಿಯಲ್ಲಿಯೇ ಪ್ರಾಕ್ಟಿಕಲ್ ತರಬೇತಿ ನೀಡಲಿದೆ.

ಇದು ಅಡ್ವಾನ್ಸ್ಡ್ ಲೆವೆಲ್ ಆಫ್ ವರ್ಕ್‌ಶಾಪ್. ನವೀನ ತಂತ್ರಜ್ಞಾನಗಳ ಮಾಹಿತಿಯ ಜೊತೆಗೇ ಒಂದು ಆಯಾಮವನ್ನು ಹೇಗೆಲ್ಲಾ ಭಿನ್ನವಾಗಿ ಗ್ರಹಿಸಬಹುದೆಂಬ ಸೂಕ್ಷ್ಮ ಪಾಠಗಳನ್ನು ಕಲಿಯೋ ಅವಕಾಶವೂ ಇಲ್ಲಿರಲಿದೆ. ಛಾಯಾಗ್ರಹಣದ ನಡುವೆ ಉಂಟಾಗೋ ಸಣ್ಣ ಪುಟ್ಟ ಸಮಸ್ಯೆಗಳನ್ನು ಪರಿಹರಿಸೋ ವಿಧಾನಗಳನ್ನೂ ಕೂಡಾ ಇಲ್ಲಿ ಪ್ರಾಕ್ಟಿಕಲ್ ಆಗಿಯೇ ಕಲಿಸಲಾಗುತ್ತದೆ. ಒಂದು ದೃಷ್ಯವನ್ನು ಭಿನ್ನ ಭಿನ್ನವಾಗಿ ಹೇಗೆ ಗ್ರಹಿಸಬಹುದೆಂಬ ಪಾಠವನ್ನು ಐವರು ಛಾಯಾಗ್ರಾಹಕರು ತಿಳಿಸಿಕೊಡಲಿದ್ದಾರೆ. ಕತ್ರಿಗುಪ್ಪೆ, ಕೆಫೆಶ್ರೀ ಹೌಸ್ ಮತ್ತು ಮೋಹನ್ ಬಿ.ಕೆರೆ ಸ್ಟುಡಿಯೋ – ಈ ಮೂರು ಜಾಗದಲ್ಲಿ ಕಲಿಕಾ ಶಿಬಿರದ ತರಗತಿಗಳು ನಡೆಯಲಿದ್ದು, ಇನ್ ಡೋರ್, ಔಟ್ ಡೋರ್ ಮತ್ತು ಸೆಟ್‌ನಲ್ಲಿ ಹೇಗೆಲ್ಲಾ ಲೈಟಿಂಗ್ ಮಾಡಬೇಕು ಅನ್ನೋದನ್ನು ಬಹುಮುಖ್ಯವಾಗಿ ಈ ಬಾರಿ ಕಲಿಸಿಕೊಡಲಾಗುತ್ತದೆ.

ಈ ಮೂರು ದಿನಕ್ಕೆ ೧೮ ಸಾವಿರ ರುಪಾಯಿಗಳ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಮೇನ್ನೋಟಕ್ಕೆ ಈ ಶುಲ್ಕ ಹೆಚ್ಚು ಅನಿಸಿದರೂ ಈಗಾಗಲೇ ಇಲ್ಲಿ ಕಲಿತವರು `ಮೂರು ದಿನಗಳಿಗೆ ಇಷ್ಟೊಂದು ಉಪಕರಣಗಳನ್ನೆಲ್ಲಾ ಒದಗಿಸಿ, ಈ ಮಟ್ಟದ ಉಪಯುಕ್ತ ಅಂಶಗಳನ್ನು ನೀಡಿಯೂ ಇಷ್ಟು ಕಡಿಮೆ ಶುಲ್ಕ ಪಡೆಯುತ್ತೀರಲ್ಲ’ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದೂ ಇದೆ.

Leave a Reply

Your email address will not be published. Required fields are marked *


CAPTCHA Image
Reload Image