ಇವರು ಪಿ.ಆರ್.ಓ. ವಿಜಯ್ ಕುಮಾರ್. ಸಿನಿಮಾ ಮತ್ತು ಮಾಧ್ಯಮದ ಆತ್ಮೀಯರು ವಿಜಿಯಣ್ಣ ಅಂತಾ ಪ್ರೀತಿಯಿಂದ ಕರೆಯುತ್ತಾರೆ. ನಗುಮುಖ ಇವರ ಟ್ರೇಡ್ ಮಾರ್ಕು. ಸರಿಸುಮಾರು ನಾಲ್ಕು ದಶಕಗಳಿಂದ ಚಿತ್ರರಂಗ ಮತ್ತು ಪತ್ರಕರ್ತರ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತಿರುವ ವಿಜಯ್ ಕುಮಾರ್ ಅವರ ನೆನಪಿನ ಶಕ್ತಿ ಅಪಾರವಾದದ್ದು. ಚಿತ್ರರಂಗಕ್ಕೆ ಸಂಬಂಧಿಸಿದ ಇತಿಹಾಸ, ದಾಖಲೆಗಳೆಲ್ಲಾ ಇವರ ಮಸ್ತಕದಲ್ಲಿ ಮನೆಮಾಡಿ ಅಡಗಿವೆ. ಯಾವುದಾದರೂ ಸಿನಿಮಾ, ಕಲಾವಿದ, ತಂತ್ರಜ್ಞರ ಬಗ್ಗೆ ಮಾಹಿತಿ ಕೇಳಿದರೆ ದಿನಾಂಕ, ಇಸವಿಯ ಸಮೇತ ಹೇಳಬಲ್ಲ ವ್ಯಕ್ತಿ ಇವರು.

ಯಾರಾದರೂ ಸಿನಿಮಾರಂಗದ ಸೀನಿಯರ್‌ಗಳು ಕಾಲವಾದಾಗ ಪತ್ರಕರ್ತರು ಮೊದಲು ಕರೆ ಮಾಡೋದು ವಿಜ್ಯಣ್ಣನಿಗೆ. ಯಾಕೆಂದರೆ ಗೂಗಲ್‌ನಲ್ಲಿ ಕೂಡಾ ಅಷ್ಟು ಸ್ಪೀಡಾಗಿ ಮಾಹಿತಿ ಸಿಗೋದು ಕಷ್ಟ.  ತಾಯಿಯನ್ನು ಅಪಾರವಾಗಿ ಪ್ರೀತಿಸುತ್ತಾ, ಅವರ ದೇಖರೇಖಿಯ ಬಗ್ಗೆ ಹೆಚ್ಚು ಗಮನಹರಿಸುತ್ತಾ, ಸಮಯ ಕಳೆದ ಕಾರಣಕ್ಕೋ ಏನೋ ವಿಜಿಯವರಿಗೆ ಮದುವೆಯಾಗುವ ಮನಸ್ಸಾಗಲಿಲ್ಲ. ಬಂದವಳು ಎಲ್ಲಿ ತನ್ನ ತಾಯಿಯನ್ನು ಕಡೆಗಣಿಸಿಬಿಡುತ್ತಾಳೋ ಎಂಬ ಭಯದಲ್ಲಿ ಮದುವೆಯಾಗದೇ ಬ್ರಹ್ಮಚರ್ಯವನ್ನು ಮುಂದುವರೆಸಿದವರು. ಆದರೆ, ಜೀವಕ್ಕಿಂತಾ ಹೆಚ್ಚು ಪ್ರೀತಿಸುತ್ತಿದ್ದ ಹೆತ್ತವ್ವ ಇಲ್ಲವಾಗಿ ಅದಾಗಲೇ ಆರೇಳು ವರ್ಷವಾಯ್ತು.
ಕನ್ನಡದ ನೂರಾರು ಚಿತ್ರಗಳಿಗೆ ಪತ್ರಿಕಾ ಪ್ರಚಾರಕರ್ತರಾಗಿ ದುಡಿಯುತ್ತಾ, ಚಿತ್ರರಂಗದ ಬಹುಮುಖ್ಯ ಭಾಗವಾಗಿರುವ ವಿಜಯ್ ಕುಮಾರ್ ಇಂದು ಹುಟ್ಟುಹಬ್ಬನ್ನು ಆಚರಿಸಿಕೊಳ್ಳುತ್ತಿದ್ದಾರೆ. ವಿಜಯಣ್ಣನ ವಯಸ್ಸೀಗ ಹತ್ತಿರತ್ತಿರ ಅರವತ್ತು. ಇನ್ನುಮುಂದಾದರೂ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿ, ಎಂದಿನಂತೆ ನಗುನಗುತ್ತಾ ನೂರ‍್ಕಾಲ ಬಾಳಬೇಕೆಂಬುದು ಸಿನಿಬಜ಼್ ತಂಡದ ಆಶಯ.

#

LEAVE A REPLY

Please enter your comment!
Please enter your name here

two × one =