One N Only Exclusive Cine Portal

ಮತ್ತೆ ಶುರುವಾಗಲಿದೆ ಕಾಮಿಡಿ ಕಿಲಾಡಿಗಳು

ಕನ್ನಡ ಕಿರುತೆರೆ ರಿಯಾಲಿಟಿ ಷೋಗಳಿಗೆ ಹೊಸ ಆಯಾಮವನ್ನು ಕೊಟ್ಟ ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮವಾದ ಕಾಮಿಡಿ ಕಿಲಾಡಿಗಳು ಈಗ ಹೊಸ ರೂಪದೊಂದಿಗೆ ಮತ್ತೊಮ್ಮೆ ಮೂಡಿಬರಲಿದೆ. ನೋ ಟೆನ್ಷನ್ ಸ್ಮೈಲ್ ಪ್ಲೀಸ್ ಎನ್ನುವ ಟ್ಯಾಗ್‌ಲೈನ್‌ನೊಂದಿಗೆ ಕಾಮಿಡಿ ಕಿಲಾಡಿಗಳು ಸೀಸನ್-2 ಕಿರುತೆರೆಯ ಹಾಸ್ಯಪ್ರಿಯರನ್ನು ರಂಜಿಸಲು ನವೀನ ಶೈಲಿಯ ಸ್ಕಿಟ್‌ಗಳೊಂದಿಗೆ, ಅನೇಕ ಹೊಸ ಪ್ರತಿಭೆಗಳ ಅಭಿನಯದೊಂದಿಗೆ ಈ ಕಾರ್ಯಕ್ರಮ ಮೂಡಿಬರಲಿದೆ. ಇದೇ ಮೊದಲಬಾರಿಗೆ ಜೀ ಕನ್ನಡ ವಾಹಿನಿ ತಂಡ ಕರ್ನಾಟಕ ರಾಜ್ಯದ 30 ಜಿಲ್ಲೆಗಳಲ್ಲಿಯೂ ಕಾಮಿಡಿ ಕಿಲಾಡಿಗಳು ಸೀಸನ್-2ಗೆ ಆಡಿಷನ್ ನಡೆಸಿ ವೀಕ್ಷಕರನ್ನು ತಮ್ಮ ಅಭಿನಯದಿಂದ ಮನರಂಜಿಸುವಂಥ ಪ್ರತಿಭೆಗಳನ್ನು ಆಯ್ಕೆ ಮಾಡಿದೆ.

ಈವರೆಗೆ ಕೇವಲ ನಾಲ್ಕರಿಂದ ಐದು ಜಿಲ್ಲೆಗಳಲ್ಲಿ ಆಡಿಷನ್ ನಡೆಸಲಾಗುತ್ತಿತ್ತು. ಆಡಿಷನ್ ಕೇಂದ್ರಕ್ಕೆ ಬರಲಾಗದ ಅದೆಷ್ಟೋ ಪ್ರತಿಭೆಗಳು ಅವಕಾಶದಿಂದ ವಂಚಿತರಾಗುತ್ತಿದ್ದರು. ಆದರೆ ಈಬಾರಿ ಕರ್ನಾಟಕದ ಪ್ರತಿಜಿಲ್ಲೆಯ ಮೂಲೆ-ಮೂಲೆಯನ್ನೂ ಜಾಲಾಡಿ, ಈ ಮೂಲಕ ಯಾವ ಪ್ರತಿಭೆಯೂ ಅವಕಾಶದಿಂದ ವಂಚಿತರಾಗದಂತೆ ನೋಡಿಕೊಳ್ಳಲಾಗಿದೆ. ಈ ಆಡಿಷನ್‌ನಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಭಾಗವಹಿಸಿದ್ದರು. ಆ ಸ್ಪರ್ಧಿಗಳನ್ನು ಎಲ್ಲಾ ರೀತಿಯಿಂದಲೂ ಪರೀಕ್ಷೆಗೊಳಪಡಿಸಿ ಅವರಲ್ಲಿ ಅಂತಿಮವಾಗಿ 15 ಜನರನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕದ ಬೇರೆ ಬೇರೆ ಪ್ರದೇಶಗಳಿಂದ ಬರುತ್ತಿರುವ ಈ ಕಲಾವಿದರು ನಾಡಿನ ಜನತೆಯನ್ನು ತಮ್ಮ ಹಾಸ್ಯಪ್ರಜ್ಞೆಯಿಂದ ನಕ್ಕುನಗಿಸಲು ತಯಾರಾಗುತ್ತಿದ್ದಾರೆ. ಸೀಸನ್-2ರಲ್ಲಿ ಮತ್ತಷ್ಟು ವಿಭಿನ್ನ, ವಿಶೇಷವಾದ ಹಾಸ್ಯದ ಹೊನಲನ್ನು ಹರಿಸಲು, ಮನೋರಂಜನೆಯ ಮಹಾಪೂರವನ್ನು ನೀಡಲು ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಎಲ್ಲ ರೀತಿಯಿಂದಲೂ ಸಿದ್ಧಗೊಂಡಿದೆ.


ಪ್ರಮುಖವಾಗಿ ಕಳೆದ ಸೀಸನ್‌ನಲ್ಲಿ ತೀರ್ಪುಗಾರರಾಗಿದ್ದ ಹಿರಿಯನಟ ಜಗ್ಗೇಶ್, ಕ್ರೇಜಿಕ್ವೀನ್ ರಕ್ಷಿತಾ ಮತ್ತು ನಿರ್ದೇಶಕ ಯೋಗರಾಜ್ ಭಟ್ ಈ ಸೀಸನ್‌ನಲ್ಲೂ ತೀರ್ಪುಗಾರರಾಗಿ ಮುಂದುವರೆಯಲಿದ್ದಾರೆ. ಎಂದಿನಂತೆ ಕಾರ್ಯಕ್ರಮಕ್ಕೆ ಮಾಸ್ಟರ್ ಆನಂದ್ ಅವರ ಲವಲವಿಕೆಯ ನಿರೂಪಣೆಯಿರುತ್ತದೆ. ಕಾಮಿಡಿ ಕಿಲಾಡಿಗಳು ಸೀಸನ್-2 ಕೂಡ ಮೊದಲ ಸೀಸನ್‌ನಲ್ಲಿದ್ದ ರೀತಿಯಲ್ಲೇ ಮೂಡಿಬರಲಿದ್ದು ನಗೆಯ ರಸದೌತಣವೇ ಪ್ರಮುಖವಾಗಲಿದೆ.

ಜೀ ವಾಹಿನಿಗೆ ಹೊಸ ಮೆರಗನ್ನು ತಂದುಕೊಟ್ಟಿದ್ದ ಈ ಕಾಮಿಡಿ ರಿಯಾಲಿಟಿ ಶೋ ಇದೇ ಡಿಸೆಂಬರ್ 30ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9.00 ಗಂಟೆಗೆ ವಾರದಲ್ಲಿ ಎರಡು ದಿನ ಪ್ರಸಾರವಾಗಲಿದೆ. ಈ ಬಾರಿಯೂ ಜನಪ್ರಿಯ ಹಾಸ್ಯ ಕಾರ್ಯಕ್ರಮವಾಗಿ ಹೊಸ ಪ್ರತಿಭೆಗಳನ್ನು ಪರಿಚಯಿಸುವ ವೇದಿಕೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ವೀಕ್ಷಕರಿಗೆ ತಮ್ಮ ಒತ್ತಡದ ಜೀವನದ ನಡುವೆ ಎಲ್ಲಾ ಟೆನ್ಷನ್‌ಗಳನ್ನು ಮರೆತು ಮನತುಂಬಿ ನಕ್ಕು ನಗಿಸುವುದೇ ಕಾಮಿಡಿ ಕಿಲಾಡಿಗಳ ಮುಖ್ಯ ಉದ್ದೇಶವಾಗಿದೆ.

Leave a Reply

Your email address will not be published. Required fields are marked *


CAPTCHA Image
Reload Image