ಇದುವರೆಗೂ ನೆನಪಿರಲಿ ಪ್ರೇಮ್ ಅವರನ್ನು ಹೆಚ್ಚಾಗಿ ಲವರ್ ಬಾಯ್ ಆಗಿಯೇ ಬಿಂಬಿಸಲಾಗಿದೆ. ಚೌಕ ಸಿನಿಮಾದ ಹೀರೋಗಳಲ್ಲಿ ಒಬ್ಬರಾಗಿ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದ ಪ್ರೇಮ್ ಪಾಲಿಗೆ ದಳಪತಿ ಸಿನಿಮಾ ಪಕ್ಕಾ ಕಮರ್ಷಿಯಲ್ ಇಮೇಜು ಕೊಡೋದು ಗ್ಯಾರೆಂಟಿ ಎನ್ನುತ್ತಿದ್ದಾರೆ ನಿರ್ದೇಶಕ ಪ್ರಶಾಂತ್ ರಾಜ್!
ಹೌದು, ಸರಿಸುಮಾರು ವರ್ಷದ ಹಿಂದೆ ಪ್ರೇಮ್ ಕೂಡಾ ಒಬ್ಬರಾಗಿ ಅಭಿನಯಿಸಿದ್ದ ಚೌಕ ಚಿತ್ರ ತೆರೆಗೆ ಬಂದಿತ್ತು. ಅದಾದ ನಂತರ ಸೋಲೋ ಹೀರೋ ಆಗಿ ಪ್ರೇಮ್ ಅವರ ಸಿನಿಮಾ ತೆರೆಗೆ ಬಂದಿರಲಿಲ್ಲ. ಬಹುಕಾಲದ ನಂತರ ಪ್ರೇಮ್ ಅವರ ಹೊಸ ಲುಕ್ಕಿನ ಸಮೇತ ದಳಪತಿ ನಾಳೆ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಲವ್ಲಿ ಸ್ಟಾರ್ ಅನ್ನು ಇಷ್ಟ ಪಡೋ ಜನ ಸಹಜವಾಗಿಯೇ ಪ್ರೇಮ್ ಅವರ ಮುಂದಿನ ಚಿತ್ರಕ್ಕಾಗಿ ಕಾಯಲಾರಂಭಿಸಿದ್ದರು. ಆ ಹೊತ್ತಿನಲ್ಲಿ ಎಲ್ಲರ ಗಮನ ಹೊರಳಿಕೊಂಡಿದ್ದದ್ದು ಪ್ರಶಾಂತ್ ರಾಜ್ ನಿರ್ದೇಶನದ ದಳಪತಿ ಚಿತ್ರದ ಮೇಲೆ. ಯಾಕೆಂದರೆ ಆ ಚಿತ್ರ ಶುರುವಾಗಿ ಅದಾಗಲೇ ಎರಡು ವರ್ಷವಾಗುತ್ತಾ ಬಂದಿತ್ತು! ಆದರೆ ಅದಕ್ಕೆ ಕಾರಣ ಪ್ರಶಾಂತ್ ರಾಜ್ ಹಾಗೂ ಪ್ರೇಮ್ ಈ ಚಿತ್ರವನ್ನು ಗಂಭೀರವಾಗಿ ಪರಿಗಣಿಸಿದ್ದ ರೀತಿ. ಇದರಲ್ಲಿನ ಪಾತ್ರದ ಶೇಡ್ಗಳಿಗಾಗಿ ಅಣಿಗೊಂಡು ಇಷ್ಟಪಟ್ಟು ಮಾಡಿದ ಈ ಚಿತ್ರಕ್ಕಾಗಿ ಖುದ್ದು ಪ್ರೇಮ್ ಅವರೇ ಈಗ ಕಾತರದಿಂದ ಕಾಯುತ್ತಿದ್ದಾರಂತೆ. ಹಾಗಂತ ಈ ನಡುವೆ ಪ್ರೇಮ್ ಅವರಿಗೆ ಅವಕಾಶಗಳೇ ಬಂದಿಲ್ಲ ಅಂದುಕೊಳ್ಳಬೇಕಿಲ್ಲ. ಚೌಕ ಚಿತ್ರವಾದ ನಂತರವಂತೂ ಸಾಲು ಸಾಲಾಗಿ ಕಥೆಗಳು ಬಂದಿದ್ದವಂತೆ. ಅಂಥವುಗಳಲ್ಲಿ ಪ್ರೇಮ್ ರಿಜೆಕ್ಟ್ ಮಾಡಿದ ಕಥೆಗಳ ಸಂಖ್ಯೆಯೇ ಎಪ್ಪತ್ತಕ್ಕೂ ಹೆಚ್ಚಿವೆ. ಇಷ್ಟು ದಿನಗಳನ್ನು ವ್ಯಯಿಸಿ ಮಾಡಿರುವ ಈ ಚಿತ್ರ ತಮ್ಮ ವೃತ್ತಿ ಬದುಕಿನ ದಿಕ್ಕು ದೆಸೆಗಳನ್ನು ಬದಲಿಸುತ್ತದೆ ಎಂಬ ಅಚಲ ಭರವಸೆಯಿಂದಿರುವ ಪ್ರೇಮ್ ಅವರ ವೃತ್ತಿ ಬದುಕು ಈಗಾಗಲೇ ವೇಗ ಪಡೆದುಕೊಂಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹೋದರ ದಿನಕರ್ ನಿರ್ದೇಶನದ ಲೈಫ್ ಜೊತೆ ಸೆಲ್ಫಿ ಚಿತ್ರದ ನಾಯಕನಾಗಿಯೂ ಪ್ರೇಮ್ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಬಗೆಗೂ ಪ್ರೇಕ್ಷಕರಲ್ಲೊಂದು ಕುತೂಹಲವಿದೆ.
ಅದಕ್ಕಿಂತಲೂ ಮೊದಲು ತೆರೆ ಕಾಣಲಿರುವ ದಳಪತಿ ಚಿತ್ರವಂತೂ ಪ್ರಶಾಂತ್ ರಾಜ್ ಕೈಚಳಕದಲ್ಲಿ ಡಿಫರೆಂಟಾಗಿ ಮೂಡಿ ಬಂದಿದೆ ಎಂಬ ವಿಚಾರ ಈಗಾಗಲೇ ಚಾಲ್ತಿಯಲ್ಲಿದೆ. ಕೃತಿ ಕರಬಂಧ ಮತ್ತು ಪ್ರೇಮ್ ಜೋಡಿಯ ಪ್ರೀತಿ ಬೆರೆತ ಕಥಾ ಹಂದರ ಯಾವ ಥರದ ಮೂಡಿ ಮಾಡುತ್ತದೆಂಬುದು ದಿನದೊಪ್ಪತ್ತಿನಲ್ಲಿ ಜಾಹೀರುಗೊಳ್ಳಲಿದೆ. ಒಟ್ಟಾರೆಯಾಗಿ ಸಮಯ ತೆಗೆದುಕೊಂಡು ಶ್ರಮವಹಿಸಿದ ಈ ಚಿತ್ರದ ಸುತ್ತ ಪ್ರೇಮ್ ನೂರಾರು ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ಆ ಎಲ್ಲ ಕನಸುಗಳೂ ಈಡೇರಲಿ ಅಂತಾ ಹಾರೈಸೋಣ.