One N Only Exclusive Cine Portal

ಹ್ಯಾಟ್ರಿಕ್ ಗೆಲುವಿನ ರೂವಾರಿಯಾಗ್ತಾರಾ ಶ್ರೀನಿವಾಸ ರಾಜು?

ಒಂದುಕಾಲದಲ್ಲಿ ಬೆಂಗಳೂರೂ ಸೇರಿದಂತೆ ಊರಿಗೂರನ್ನೇ ಬೆಚ್ಚಿ ಬೀಳಿಸಿ ನೆತ್ತರೋಕುಳಿಯಾಡಿದ ದಂಡುಪಾಳ್ಯ ಗ್ಯಾಂಗಿನದ್ದು ಕರಾಳ ಕಥೆ. ಅಂಥಾದ್ದೊಂದು ಭೀಕರ ಕ್ರೌರ್ಯಕ್ಕೆ ಸಿನಿಮಾ ಫ್ರೇಮು ಹಾಕಿ ಎರಡೆರಡು ಸಲ ಗೆದ್ದವರು ನಿರ್ದೇಶಕ ಶ್ರೀನಿವಾಸ ರಾಜು. ಶ್ರೀನಿವಾಸ ರಾಜು ಇದೀಗ ಮೂರನೇ ಸಲ ಅದೇ ದಂಡುಪಾಳ್ಯ ಗ್ಯಾಂಗಿನೊಂದಿಗೆ ಮತ್ತೆ ಪ್ರೇಕ್ಷಕರೊಂದಿಗೆ ಮುಖಾಮುಖಿಯಾಗುತ್ತಿದ್ದಾರೆ!

ದಂಡುಪಾಳ್ಯ ಗ್ಯಾಂಗಿನ ಕಥೆಯನ್ನು ಈ ಹಿಂದೆಯೇ ಎರಡು ಚಿತ್ರಗಳ ಮೂಲಕ ಹೇಳಲಾಗಿತ್ತು. ಇದರ ಮೊದಲ ಭಾಗವಂತೂ ನಿರೀಕ್ಷೆಗೂ ಮೀರಿ ಅಚ್ಚರಿದಾಯಕ ಗೆಲುವೊಂದಕ್ಕೆ ರೂವಾರಿಯಾಗಿತ್ತು. ಅದರ ಮುಂದುವರೆದ ಭಾಗವಾಗಿ ಎರಡನೇ ಚಿತ್ರ ಬಿಡುಗಡೆಯಾಗಿ ಇದೀಗ ಇದೇ ಮಾರ್ಚ್ ೨ರಂದು ದಂಡುಪಾಳ್ಯ-೩ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಈ ಮೂಲಕ ಶ್ರೀನಿವಾಸ ರಾಜು ಹೊಸಾ ದಾಖಲೆಯೊಂದಕ್ಕೂ ಕಾರಣವಾಗಿದ್ದಾರೆ. ಬೇರೆ ಬೇರೆ ತೆರನಾದ ರಿಯಲ್ ಕ್ರೌರ್ಯ ಕಥಾನಕಗಳು ಬಾಲಿವುಡ್ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಚಿತ್ರಗಳಾಗಿವೆ. ಆದರೆ ಅದು ಸರಣಿಯಂತೆ ಯಶಸ್ವಿಯಾಗಿ ಮೂರು ಚಿತ್ರಗಳಾಗಿ ತೆರೆ ಕಂಡ ಉದಾಹರಣೆಗಳಿಲ್ಲ. ಆದರೆ ದಂಡುಪಾಳ್ಯ ಸರಣಿ ಯಶಸ್ವಿಯಾಗಿ ಮೂರನೇ ಭಾಗವೂ ತೆರೆ ಕಾಣಲು ಸಜ್ಜಾಗಿದೆ.

ದಂಡುಪಾಳ್ಯದ ಸತ್ಯಕಥೆ ಅಪ್ಪಟ ರಕ್ತಸಿಕ್ತ. ಅದರ ಕಥೆಗೂ ಮನುಷ್ಯತ್ವಕ್ಕೂ ಸಂಬಂಧವೇ ಇಲ್ಲ. ಜೀವಂತವಾಗಿಯೇ ಮನುಷ್ಯರ ಕತ್ತು ಕುಯ್ದು ಆ ಸದ್ದನ್ನು ಸಂಭ್ರಮಿಸುವ, ಹೆಣ್ಣು ಗಂಡೆನ್ನದೆ ಶವವನ್ನೇ ಸಂಭೋಗಿಸುವ ಪರಮ ವಿಕೃತಿ ದಂಡುಪಾಳ್ಯ ಗ್ಯಾಂಗಿನದ್ದು. ಇಂಥಾದ್ದೊಂದು ಹಸೀ ಕ್ರೌರ್ಯದ ಕಥೆಯನ್ನು ಚಿತ್ರವಾಗಿಸೋದು ನಿಜಕ್ಕೂ ಸವಾಲಿನ ಸಂಗತಿ. ಈ ಹಿಂದೆ ಎರಡು ಆವೃತ್ತಿಯ ಮೂಲಕ ಶ್ರೀನಿವಾಸ ರಾಜು ಅದರಲ್ಲಿ ಗೆದ್ದಿದ್ದಾರೆ.

ಮೂರನೇ ಆವೃತ್ತಿಯ ಟ್ರೈಲರ್ ಸಾಮಾಜಿಕ ಜಾಲತಾಣಗಳಲ್ಲಿ ಎಬ್ಬಿಸಿರುವ ಸಂಚಲನ ಗಮನಿಸಿದರೆ ಹ್ಯಾಟ್ರಿಕ್ ಗೆಲುವು ಈ ಚಿತ್ರ ತಂಡಕ್ಕೆ ಸಿಗುವ ಎಲ್ಲ ಲಕ್ಷಣಗಳೂ ಇದ್ದಾವೆ!

Leave a Reply

Your email address will not be published. Required fields are marked *


CAPTCHA Image
Reload Image