One N Only Exclusive Cine Portal

ಪುಟ್ಟ ಅಭಿಮಾನಿಯ ಚಿಕಿತ್ಸೆಗೆ ನೆರವಾದರು ದರ್ಶನ್!

ಅಭಿಮಾನಿಗಳಿಗೆ ಚಾಲೆಂಜಿಂಗ್ ದರ್ಶನ್ ಅಂದರೆ ಪ್ರಾಣ. ಅದೇ ರೀತಿ ಅಭಿಮಾನಿಗಳ ಮೇಲೂ ದರ್ಶನ್ ಅವರಿಗೆ ಅಪಾರ ಪ್ರೀತಿ ಕಾಳಜಿಗಳಿವೆ. ಅವರದನ್ನು ತೋರಿಸಿಕೊಳ್ಳುವುದು ಕೆಲ ಸಂದರ್ಭಗಳಲ್ಲಿ ಮಾತ್ರ. ಗದರಿಕೆಯ ಮೂಲಕವೇ ಪ್ರೀತಿ ಸೂಸುವ ವಿಶಿಷ್ಟ ವ್ಯಕ್ತಿತ್ವದ ದರ್ಶನ್ ಅವರು ತಮ್ಮ ಅಭಿಮಾನಿಗಳ ಕಷ್ಟಕ್ಕೆ ಕಣ್ಣೀರಾದ, ಅದೆಷ್ಟೇ ಬ್ಯುಸಿಯಾಗಿದ್ದರೂ ಸಹಾಯಕ್ಕೆ ಧಾವಿಸಿದ ಅದೆಷ್ಟೋ ಉದಾಹರಣೆಗಳಿವೆ.

ಸದ್ಯ ಅವರು ತಮ್ಮ ಅಭಿಮಾನಿಯಾದ ಪುಟ್ಟ ಜೀವವೊಂದರ ಸಂಕಟಕ್ಕೆ ಮಿಡಿದಿದ್ದಾರೆ. ಪೂರ್ವೀಕಾ ಎಂಬ ಪುಟ್ಟ ಹುಡುಗಿಯನ್ನು ಮಾರಣಾಂತಿಕವಾದ ಕಾಯಿಲೆಯೊಂದರಿಂದ ಪಾರು ಮಾಡಲು ಸಹಾಯ ಮಾಡಿದ್ದಾರೆ.

ಆಕೆ ಬಸ್ರಳ್ಳಿಯ ಬಡ ದಂಪತಿಯ ಪುಟ್ಟ ಮಗು ಪೂರ್ವಿಕಾ. ಈಕೆಗೆ ದರ್ಶನ್ ಎಂದರೆ ಪ್ರಾಣ. ಎಲ್ಲಾ ಮಕ್ಕಳಂತೆಯೇ ಆಡಿಕೊಂಡು ಚೂಟಿಯಾಗಿದ್ದ ಈ ಹುಡುಗಿಗೆ ಇತ್ತೀಚೆಗೆ ವಿಚಿತ್ರ ಕಾಯಿಲೆಯೊಂದು ಕಾಣಿಸಿಕೊಂಡಿತ್ತು. ಹೊಟ್ಟೆಯೆಲ್ಲ ಊದಿಕೊಂಡ ಮಗು ನಿತ್ತಾಣವಾಗಿತ್ತು. ಈ ಬಗ್ಗೆ ವೈದ್ಯರಿಗೆ ತೋರಿಸಿದಾಗ ಹಾರ್ಟಿನಲ್ಲಿ ಹೋಲ್ ಇರುವ ವಿಚಾರ ತಿಳಿದಿತ್ತು. ಇದಲ್ಲದೆ ಆಕೆಯ ಹೊಟ್ಟೆಯಲ್ಲಿ ಕೆಟ್ಟ ನೀರು ಸೇರಿಕೊಂಡು ಊದಿ ಬಾಧೆ ಕೊಡಲಾರಂಭಿಸಿತ್ತು.

ಈ ಬಡ ದಂಪತಿ ಪೂರ್ವಿಕಾಳಿಗೆ ಈಗ್ಗೆ ಮೂರು ತಿಂಗಳಿನಿಂದ ಚಿಕ್ಕಮಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇನ್ನೂ ಎರಡ್ಮೂರು ತಿಂಗಳು ಆಸ್ಪತ್ರೆಯಲ್ಲಿಯೇ ಇರಬೇಕಾಗುತ್ತದೆಯಂತೆ. ಆರ್ಥಿಕವಾಗಿ ತೀರಾ ದುರ್ಬಲರಾದ ಈ ದಂಪತಿ ಚಿಕಿತ್ಸೆಗೆ ದಾರಿ ಕಾಣದೆ ಕಂಗಾಲಾಗಿರುವಾಗಲೇ, ಚಿಕ್ಕಮಗಳೂರಿನ ಡಿ ಕಂಪೆನಿ ಹುಡುಗರ ಮೂಲಕ ವಿಚಾರ ತಿಳಿದುಕೊಂಡ ದರ್ಶನ್ ಅವರು ಪೂರ್ವಿಕಾಳನ್ನು ಕರೆಸಿಕೊಂಡು ಆರೋಗ್ಯ ವಿಚಾರಿಸಿದ್ದಾರೆ. ಚಿಕಿತ್ಸೆಗೆ ನೆರವು ನೀಡಿ ಭರವಸೆಯನ್ನೂ ತುಂಬಿದ್ದಾರೆ.

ಕಾಯಿಲೆಯ ಬಾಧೆಯ ನಡುವೆಯೂ ಪೂರ್ವಿಕಾ ದರ್ಶನ್ ಅವರ ಜೊತೆ ಸಂತೋಷದಿಂದ ಒಂದಷ್ಟು ಕಾಲ ಕಳೆದಿದ್ದಾಳೆ. ದರ್ಶನ್ ಅವರ ಸಹಾಯದಿಂದಲೇ ಈ ಹುಡುಗಿಯ ಹೆತ್ತವರೂ ನಿರಾಳವಾಗಿದ್ದಾರೆ. ತಾವೆಷ್ಟೇ ಬ್ಯುಸಿಯಾಗಿದ್ದರೂ ಹೀಗೆ ಅಭಿಮಾನಿಗಳ ಸಂಕಟಕ್ಕೆ ಮಿಡಿಯುವ ಮನಸ್ಥಿತಿಯಿಂದಲೇ ದರ್ಶನ್ ಎಲ್ಲರಿಗೂ ಇಷ್ಟವಾಗುತ್ತಾರೆ.

Leave a Reply

Your email address will not be published. Required fields are marked *


CAPTCHA Image
Reload Image