ಕನ್ನಡ ಚಿತ್ರರಂಗದಲ್ಲಿ ಸಿನಿಮಾದಾಚೆಗೂ ಜೀವದ ಗೆಳೆತನಕ್ಕೆ ಹೆಸರಾಗಿದ್ದ ಜೋಡಿ ಅಂಬರೀಶ್ ಮತ್ತು ಸಾಹಸಸಿಂಹ ವಿಷ್ಣುವರ್ಧನ್ ಅವರದ್ದು. ಅವರ ನಂತರದ ತಲೆಮಾರಿನಲ್ಲಿ ಅವರಂಥಾದ್ದೇ ಕುಚಿಕ್ಕು ಗೆಳೆಯರಾಗಿದ್ದವರು ಸುದೀಪ್ ಮತ್ತು ದರ್ಶನ್. ಆದರೆ ಅದ್ಯಾವ ಮುನಿಸಿನ ಕಾರಣದಿಂದಲೋ ಇವರಿಬ್ಬರು ವಿರುದ್ಧ ದಿಕ್ಕುಗಳಾಗಿ ವರ್ಷಗಳೇ ಕಳೆಯುತ್ತಾ ಬಂದಿವೆ.
ಆದರೆ ಇವರಿಬ್ಬರ ಅಭಿಮಾನಿಗಳು ಸಹ ಮತ್ತೆ ತಮ್ಮ ಇಷ್ಟದ ನಟರು ಒಂದಾಗೋ ಕಾಲಕ್ಕಾಗಿ ತುದಿಗಾಲಲ್ಲಿ ಕಾದು ಕೂತಿದ್ದಾರೆ. ಕೆಲ ಕಿಡಿಗೇಡಿಗಳ ಕಾರಣದಿಂದ ಒಂದಷ್ಟು ಸಲ ದರ್ಶನ್ ಮತ್ತು ಸುದೀಪ್ ಅಭಿಮಾನಿಗಳೂ ಕಿತ್ತಾಡಿಕೊಂಡಿದ್ದಿದೆ. ಆದರೆ ಬೆಂಕಿ ಹೊತ್ತಿಕೊಂಡ ಹಿಂದಿದ್ದ ಕಾರಣವನ್ನು ತಡವಾಗಿಯಾದರೂ ಅರ್ಥ ಮಾಡಿಕೊಂಡು ಎರಡೂ ಕಡೆಯವರೂ ಸುಮ್ಮನಾಗಿದ್ದೂ ಇದೆ.
ಅಭಿಮಾನಿಯೊಬ್ಬ ಟ್ವಿಟ್ಟರಿನಲ್ಲಿ ಸುದೀಪ್ ಮತ್ತು ದರ್ಶನ್ ಜೊತೆಯಾಗಿದ್ದ ಫೋಟೋ ಹಾಕಿ ಈ ಕಾಲ ಮತ್ತೆ ಬರೋದ್ಯಾವಾಗ ಎಂಬರ್ಥದಲ್ಲಿ ಬರೆದುಕೊಂಡಿದ್ದನಂತೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಜಗ್ಗೇಶ್ `ನಿಮ್ಮೆಲ್ಲರ ಪ್ರೀತಿಯ ಹಾರೈಕೆಗಳಿಂದ ಇವರಿಬ್ಬರು ಮತ್ತೆ ಒಂದಾಗುವ ಕಾಲ ಬರುತ್ತೆ. ಅಣ್ಣ ತಮ್ಮಂದಿರು, ಗಂಡ ಹೆಂಡಿರೇ ಕೆಲ ಸಂದರ್ಭದಲ್ಲಿ ದೂರಾಗೋದಿದೆ. ಆದರೆ ಅದು ಶಾಶ್ವತವಲ್ಲ. ಅದೇ ರೀತಿ ದರ್ಶನ್ ಮತ್ತು ಸುದೀಪ್ ಕೂಡಾ ಒಂದಾಗುತ್ತಾರೆ’ ಎಂಬರ್ಥದಲ್ಲಿ ಸಮಾಧಾನದ ಮಾತುಗಳನ್ನಾಡಿದ್ದಾರೆ.
ಜಗ್ಗೇಶ್ ದರ್ಶನ್ ಮತ್ತು ಸುದೀಪ್ ಅವರುಗಳನ್ನು ಸದಾ ಸಮಾನವಾಗಿ ಮೆಚ್ಚಿಕೊಂಡೇ ಬಂದಿದ್ದಾರೆ. ಇತ್ತೀಚೆಗೂ ಅವರು ಅವರಿಬ್ಬರನ್ನೂ ಮೆಚ್ಚಿಕೊಂಡು ಮಾತಾಡಿದ್ದರು. ಸದ್ಯದ ವಿದ್ಯಮಾನ ಗಮನಿಸಿದರೆ ಜಗ್ಗೇಶ್ ಅವರೇ ರಿಸ್ಕು ತೆಗೆದುಕೊಂಡು ಸುದೀಪ್ ಮತ್ತು ದರ್ಶನ್ ಅವರನ್ನು ಮತ್ತೆ ಒಂದಾಗಿಸೋ ಕೆಲಸದ ಸಾರಥ್ಯ ವಹಿಸಿಕೊಳ್ಳುತ್ತಾರಾ ಅಂತೊಂದು ಕುತೂಹಲವೂ ಹುಟ್ಟಿಕೊಂಡಿದೆ. ದರ್ಶನ್ ಮತ್ತು ಸುದೀಪ್ ಅಭಿಮಾನಿಗಳೂ ಕೂಡಾ ಅಂಥಾದ್ದೊಂದು ಪವಾಡಕ್ಕಾಗಿ ಎದುರು ನೋಡುತ್ತಿದ್ದಾರೆ.