One N Only Exclusive Cine Portal

ದೇವ್ರಂಥಾ ಮನುಷ್ಯ: ಪಕ್ಕಾ ಪ್ರಥಮ್ ಸಿನಿಮಾ!


ಎಲ್ಲವನ್ನೂ ಖಂಡಿಸುತ್ತಲೇ ಬಿಗ್‌ಬಾಸ್ ಸೀಜನ್ ನಾಲಕ್ಕರ ವಿನ್ನರ್ ಆಗಿ ಹೊರ ಹೊಮ್ಮಿದ್ದ ಪ್ರಥಮ್ ನಟನೆಯ ಮೊದಲ ಚಿತ್ರ ದೇವ್ರಂಥಾ ಮನುಷ್ಯ. ತನ್ನ ಮಾತಿನ ಭರಾಟೆಯಿಂದಲೇ ಅಭಿಮಾನಿಗಳನ್ನೂ, ವಿರೋಧಿಗಳನ್ನೂ ಸೃಷ್ಟಿಸಿಕೊಂಡಿರೋ ಪ್ರಥಮ್ ಅಭಿನಯದ ಈ ಚಿತ್ರವೀಗ ತೆರೆ ಕಂಡಿದೆ. ಸಾಮಾನ್ಯವಾಗಿ ಸಿನಿಮಾ ಅಂದಾಕ್ಷಣ ಫೈಟು, ಡ್ಯಾನ್ಸು ಮುಂತಾದ ಫ್ರೇಮೊಂದು ಪ್ರೇಕ್ಷಕರ ಮನಸಲ್ಲಿ ಅಚ್ಚಾಗುತ್ತೆ. ಆದರೆ ಈ ಚಿತ್ರ ಅದಕ್ಕಿಂಥಾ ಕೊಂಚ ಭಿನ್ನ. ಆ ಭಿನ್ನತೆಯನ್ನು ಯಾರು ಒಪ್ಪಿಕೊಳ್ಳುತ್ತಾರೋ, ಬಿಡುತ್ತಾರೋ ಅದು ಅವರವರ ವಿಚಾರ. ಆದರೆ ನಂಬಿ ಬಂದ ಪ್ರೇಕ್ಷಕನನ್ನು ಬೋರು ಹೊಡೆಸದೆ ದಡ ಸೇರಿಸುತ್ತದೆಂಬುದು ದೇವ್ರಂಥಾ ಮನುಷ್ಯನ ಹೆಚ್ಚುಗಾರಿಕೆ!

ನಿರ್ದೇಶನದಲ್ಲಿ ಒಲವು ಹೊಂದಿ ಆ ಮೂಲಕವೇ ಬಿಗ್‌ಬಾಸ್ ಮನೆ ಸೇರಿಕೊಂಡಿದ್ದವರು ಪ್ರಥಮ್. ಆತ ವೃತ್ತಿಪರ ನಟನಲ್ಲ. ಅಂಥಾ ಪ್ರಥಮ್‌ಗೆ ಸಿದ್ಧ ಸೂತ್ರಗಳ ಹೀರೋಯಿಕ್ ಕಥಾಹಂದರದ ಚಿತ್ರ ಮಾಡಿದ್ದರೆ ಅಭಾಸವಾಗೋ ಸಾಧ್ಯತೆಗಳೂ ಇದ್ದವು. ಈ ವಿಚಾರದಲ್ಲಿ ನಿರ್ದೇಶಕ ಕಿರಣ್ ಶೆಟ್ಟಿ ಜಾಣ್ಮೆಯನ್ನು ಮೆಚ್ಚಿಕೊಳ್ಳಲೇಬೇಕು. ಯಾಕೆಂದರೆ ಅವರು ಪಕ್ಕಾ ಪ್ರಥಮ್‌ಗೆ ಸರಿಹೊಂದುವಂಥಾ ಕಥೆಯೊಂದನ್ನು ಆರಿಸಿಕೊಂಡು ಅದಕ್ಕೆ ನ್ಯಾಯ ಒದಗಿಸುವಲ್ಲಿ ಯಶ ಕಂಡಿದ್ದಾರೆ.

ನಿಖರವಾಗಿ ಹೇಳಬೇಕೆಂದರೆ ಇದು ಪಕ್ಕಾ ಪ್ರಥಮ್ ಶೈಲಿಯ ಸಿನಿಮಾ. ನೀವು ಬಿಗ್‌ಬಾಸ್ ಮನೆಯೊಳಗೆ ಮತ್ತು ಆ ನಂತರದಲ್ಲಿ ಪ್ರಥಮ್‌ನನ್ನು ಯಾವ ರೀತಿಯಲ್ಲಿ ನೋಡಿದ್ದೀರೋ ಅಂಥಾದ್ದೇ ಪಾತ್ರಕ್ಕೆ ಸಿನಿಮಾ ಫ್ರೇಮು ಹಾಕಿದಂತೆ ಭಾಸವಾಗೋ ಚಿತ್ರ ದೇವ್ರಂಥಾ ಮನುಷ್ಯ. ಈ ಪಾತ್ರ ತಮ್ಮ ವರಸೆಗೆ ಒಪ್ಪುವುದರಿಂದ ಆಚೀಚೆ ಕದಲದಂತೆ ಪ್ರಥಮ್ ಸಿನಿಮಾದುದ್ದಕ್ಕೂ ಕಾಣಿಸಿಕೊಂಡಿದ್ದಾರೆ. ಲೀಲಾಜಾಲವಾಗಿ ಮಾತಾಡಿದ್ದಾರೆ. ಅದರ ಜೊತೆಗೇ ಸದರಿ ಕಥೆಗೂ ಒಗ್ಗಿಕೊಂಡಿದ್ದಾರೆ.

ಆತ ದೇವ್ರಂಥಾ ಮನುಷ್ಯನೇ. ಆದರೆ ಅದರ ವ್ಯಾಲಿಡಿಟಿ ಎಂಬುದು ಕತ್ತಲಾವರಿಸುತ್ತಲೇ ಏರಿಯಾದ ಬಾರೊಂದರ ಮಂದ ಬೆಳಕಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತದೆ. ಆತನದ್ದು ಸಂಜೆಮೇಲೆ ಅಕ್ಷರಶಃ ಸಿಗಲೇ ಬಾರದು ಎಂಬಂಥಾ ಮತ್ತೊಂದು ಶೇಡಿನ ವ್ಯಕ್ತಿತ್ವವೇ ಅದಕ್ಕೆ ಕಾರಣ. ಈತನಿಗೊಬ್ಬ ಸ್ನೇಹಿತ. ಹೆಸರು ಮಿಕ್ಸ್. ಈ ಪಾತ್ರವನ್ನು ನಿರ್ವಹಿಸಿರೋದು ಮಜಾ ಟಾಕೀಸ್ ಖ್ಯಾತಿಯ ಪವನ್. ದೇವ್ರಂಥಾ ಮನುಷ್ಯ ಬಾರಿನಲ್ಲಿ ಗೆಳೆಯ ಮಿಕ್ಸ್ ಜೊತೆ ಸೇರಿದನೆಂದರೆ ಅಲ್ಯಾರಿಗೋ ನಾಮ ಬಿತ್ತೆಂದೇ ಅರ್ಥ. ಯಾಕೆಂದರೆ ಇವರಿಬ್ಬರೂ ಕಂಠಮಟ್ಟ ಎಣ್ಣೆ ಬಿಟ್ಟುಕೊಂಡು ಮಾತಲ್ಲೇ ಯಾರನ್ನಾದರೂ ಮರುಳು ಮಾಡಿ ಅವರಿಂದಲೇ ಬಿಲ್ಲು ಕಟ್ಟಿಸಿಕೊಳ್ಳುತ್ತಾರೆ. ಇದೇನು ಒಂದು ದಿನದ ಮಾತಲ್ಲ. ಯಾಮಾರಿಸಿ ಎಣ್ಣೆ ಹೊಡೆಯೋದು ಇವರ ದಿನನಿತ್ಯದ ಕಸುಬು!

ನಾಯಕ ಪ್ರಥಮ್ ಯಾಮಾರಿಸಿ ಎಣ್ಣೆ ಹೊಡೆಯೋದರ ಹಿಂದೊಂದು ಸ್ಟೋರಿ ಇದೆ. ಅದನ್ನು ಕಾರಣ ಅಂತಾದರೂ ಅನ್ನಬಹುದು. ಅದು ಏನು, ಅದರಿಂದ ನಾಯಕ ಹೊರ ಬರುತ್ತಾನಾ ಎಂಬುದು ಈ ಚಿತ್ರದ ಅಸಲೀ ಕುತೂಹಲ. ಮಾತಲ್ಲೇ ಮಹಲು ಕಟ್ಟುವ ಟ್ಯಾಲೆಂಟು ಹೊಂದಿರೋ ಪ್ರಥಮ್ ಇಲ್ಲಿನ ಪಾತ್ರವನ್ನು ಲೀಲಾಜಾಲವಾಗಿಯೇ ನಿರ್ವಹಿಸಿದ್ದಾರೆ. ಆದರೆ ನಟನೆ ಮಾತ್ರವೇ ಮುಖ್ಯ ಅನ್ನಿಸೋ ಕಡೆ ಪ್ರಥಮ್ ಕಡೆಯಿಂದ ಕೊರತೆಯೆಂಬುದು ಎದ್ದು ಕಾಣುತ್ತದೆ. ಇನ್ನುಳಿದಂತೆ ಪ್ರಥಮ್ ಹಿಂದೆ ಬಿದ್ದು ಪ್ರೀತಿಸಲು ಪೀಡಿಸೋ ಪಾತ್ರದಲ್ಲಿ ಇಬ್ಬರು ಹುಡುಗೀರೂ ತಂತಮ್ಮ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ. ಸುಚೇಂದ್ರ ಪ್ರಸಾದ್ ಮತ್ತು ತಬಲಾ ನಾಣಿ ಪಾತ್ರಗಳೂ ನೆನಪಿಟ್ಟುಕೊಳ್ಳುವಂತಿವೆ. ಒಂದು ಹಾಡಿನಲ್ಲಿ ಬಂದುಹೋಗಿರುವ ಕಿರಿಕ್ ಕೀರ್ತಿ ಸಖತ್ತಾಗಿ ಕುಣಿದಿದ್ದಾರೆ. ಜೊತೆಗೆ ಅವರ ನಗು, ಕುಣಿಯುವಾಗಿನ ಎಕ್ಸ್‌ಪ್ರೆಷನ್ನು ಇಷ್ಟವಾಗುತ್ತದೆ.

ಪ್ರದ್ಯೋತನ್ ಸಂಗೀತ ನಿರ್ದೇಶನ ಮಾಡಿರೋ ಹಾಡುಗಳು ಕೊಂಚ ರಿಲೀಫು ಕೊಡುತ್ತವೆ. ಒಟ್ಟಾರೆಯಾಗಿ ಇದು ಪ್ರಾಸಬದ್ಧವಾದ ಪಂಚಿಂಗ್ ಡೈಲಾಗುಗಳೇ ಪ್ರಧಾನವಾಗಿರೋ ಚಿತ್ರ. ಅದಕ್ಕೂ ಮೇಲಾಗಿ ಪ್ರಥಮ್ ಶೈಲಿಯ ಚಿತ್ರ!

Leave a Reply

Your email address will not be published. Required fields are marked *


CAPTCHA Image
Reload Image